Advertisement

ತಾಲೂಕು ಅಸ್ಪತ್ರೆಗಳಿಗೆ ಮೇಜರ್‌ ಸರ್ಜರಿ ಸಾಧ್ಯವೇ?

06:19 PM May 25, 2022 | Team Udayavani |

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಹಾಗೂ ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗಳಿಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಹೈಕೋರ್ಟ್‌ನ ನ್ಯಾ. ಬಿ.ವೀರಪ್ಪ ನೇತೃತ್ವದ ತಂಡ ಭೇಟಿ ನೀಡಿ ಎರಡು ಆಸ್ಪತ್ರೆಗಳ ಅವ್ಯವಸ್ಥೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

Advertisement

ರಾಜ್ಯ ಸರ್ಕಾರದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರ ತವರು ಜಿಲ್ಲೆಯಲ್ಲಿ ಆಸ್ಪತ್ರೆಗಳ ಅವ್ಯ ವಸ್ಥೆಗಳ ವಿಚಾರವನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿಗಳು ಸರ್ಕಾರಿ ಆಸ್ಪತ್ರೆಗಳನ್ನು ಸುಧಾರಿಸಲು ಆ ದೇವರೇ ಮತ್ತೂಮ್ಮೆ ಅವತರಿಸಬೇಕೆಂದು ತಮ್ಮ ಅಸಮಾಧಾನವನ್ನು ಹೊರಹಾಕಿ, ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಒಂದು ವರದಿಯೂ ಸಹ ಸಲ್ಲಿಸುವುದಾಗಿ ಹೇಳಿದರು.

ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳನ್ನು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ಆಸ್ಪತ್ರೆಗಳಲ್ಲಿ ಇರುವ ವ್ಯವಸ್ಥೆಗಳ ಕುರಿತು ಸಮಗ್ರವಾಗಿ ತನಿಖೆ ನಡೆಸಲು ನೋಡಲ್‌ ಅಧಿಕಾರಿಗಳ ನೇತೃತ್ವದಲ್ಲಿ ಒಂದು ತನಿಖಾ ತಂಡವನ್ನು ಸಹ ರಚನೆ ಮಾಡಿ ಆದೇಶವನ್ನು ಹೊರಡಿಸಿದ್ದರು.

ತನಿಖಾ ತಂಡದ ಸದಸ್ಯರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮತ್ತು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ತ್ವರಿತವಾಗಿ ವರದಿ ಸಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು ಮತ್ತು ಹೈಕೋರ್ಟ್‌ನ ನ್ಯಾ. ಬಿ.ವೀರಪ್ಪ ಅವರು ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ಕೇವಲ ತನಿಖಾ ತಂಡ ರಚನೆಗೆ ಸೀಮಿತಗೊಂಡಿದ್ದಾರೆ ಎಂಬ ದೂರುಗಳು ಕೇಳಿ ಬಂದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರೋಗ್ಯವಂತ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ಜನ ಸಾಮಾನ್ಯರಿಗೂ ಸಹ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ದೃಢಸಂಕಲ್ಪ ಮಾಡಿ ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿ ರುವ ಎಸ್‌ಜೆಸಿಐಟಿ ಕಾಲೇಜಿನ ಆವರಣದಲ್ಲಿ ಬೃಹತ್‌ ಆರೋಗ್ಯ ಮೇಳವನ್ನು ಸಚಿವ ಡಾ.ಕೆ.ಸುಧಾಕರ್‌ ಅವರು ಸಂಘಟನೆ ಮಾಡಿ ಗಿನ್ನಿಸ್‌ ಬುಕ್‌ ಆಫ್‌ ವಲ್ಡ್‌ ರೆಕಾರ್ಡ್‌ನಲ್ಲಿ ದಾಖಲಿಸುವಂತೆ ಮಾಡಿದರು. ಆದರೆ.ಜಿಲ್ಲೆಯ ಅನೇಕ ಆಸ್ಪತ್ರೆಗಳಲ್ಲಿ ಅವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಆರೋಗ್ಯ ಸಚಿವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ವ್ಯವಸ್ಥೆಗಳನ್ನು ಸುಧಾರಿಸಲು ಮೇಜರ್‌
ಸರ್ಜರಿ ಮಾಡಲು ಮುಂದಾಗಬೇಕಿದೆ.

Advertisement

ಆರೋಗ್ಯ ಕೇಂದ್ರಗಳಲ್ಲಿ ಅತೃಪ್ತಿದಾಯಕ ಸೇವೆ
ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಮಾದರಿ ಮಾಡಲು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರು ಜಿಲ್ಲೆಯ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಮತ್ತೂಂದೆಡೆ ತಾಲೂಕು ಮತ್ತು ಜಿಲ್ಲಾಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರೂ ಸಹ ಜಿಲ್ಲೆಯ ಚಿಂತಾಮಣಿ ಮತ್ತು ಶಿಡ್ಲಘಟ್ಟ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆಗಳ ದರ್ಶನ ಮಾಡಿ ಹೈಕೋರ್ಟ್‌ನ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವುದು ನೋಡಿದರೆ ಅಧಿಕಾರಿಗಳ ಕಾರ್ಯವೈಖರಿ ತೃಪ್ತಿದಾಯಕವಾಗಿಲ್ಲ ಎಂಬ ಸಂಶಯ ಮೂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಅನೇಕ ಆಸ್ಪತ್ರೆಯಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಕೆಲವರು ಸಮವಸ್ತ್ರವನ್ನು ಸಹ ಧರಿಸುವುದಿಲ್ಲ ಇದರಿಂದ ಯಾರು ವೈದ್ಯರು ಎಂದು ಗೊತ್ತಾಗುವುದಿಲ್ಲ ಎಂದು ಸಾರ್ವಜನಿಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಗಳ ಬಗ್ಗೆ ನ್ಯಾ. ಅವರು ಅಸಮಾಧಾನ ವ್ಯಕ್ತಪಡಿಸಿರುವುದನ್ನು ರಾಜ್ಯ ಆರೋಗ್ಯ ಸಚಿವರು ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆಗಳನ್ನು ಸುಧಾರಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು.
●ಎನ್‌.ಎಚ್‌.ಶಿವಶಂಕರ್‌ರೆಡ್ಡಿ,
ಗೌರಿಬಿದನೂರು ಶಾಸಕ

ಜಿಲ್ಲೆಯ ಎರಡು ಆಸ್ಪತ್ರೆಗಳಿಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರು
ಭೇಟಿ ನೀಡಿರುವ ಕುರಿತು ರಾಜ್ಯ ಆರೋಗ್ಯ ಇಲಾಖೆಯ ಆಯುಕ್ತರು ಕೇಳಿರುವ ವರದಿಯನ್ನು
ತನಿಖಾ ತಂಡವನ್ನು ರಚಿಸಿ ಸಲ್ಲಿಸಿದ್ದೇವೆ. ಶಿಡ್ಲಘಟ್ಟದ ಸಾರ್ವಜನಿಕ ಆಸ್ಪತ್ರೆಯಲ್ಲಿ
ಅವಧಿ ಮೀರಿದ ಗುಳಿಗೆಗಳನ್ನು ವಿತರಿಸಿಲ್ಲ. ವೈದ್ಯರ ಸಂಖ್ಯೆ ಕಡಿಮೆಯಿತ್ತು ಆಸ್ಪತ್ರೆಗಳ ವ್ಯವಸ್ಥೆಗಳ ಕುರಿತು ವರದಿ ಮಂಡಿಸಿದ್ದೇವೆ.
●ಡಾ.ಇಂದಿರಾ ಆರ್‌.ಕಬಾಡೆ, ಜಿಲ್ಲಾ
ಆರೋಗ್ಯಾಧಿಕಾರಿ ಚಿಕ್ಕಬಳ್ಳಾಪುರ

ಎಂ.ಎ. ತಮೀಮ್‌ ಪಾಷ

Advertisement

Udayavani is now on Telegram. Click here to join our channel and stay updated with the latest news.

Next