Advertisement
ನಿಜ. ಆದರೆ, ಅಡಿಗರಲ್ಲಿ ಆಮೇಲೆ ನವ್ಯತೆಯಾಗಿ ಬೆಳೆದ ಅಂಶಗಳು ಮೊದಲೇ ಬೀಜರೂಪವಾಗಿ ಇದ್ದವು. ಅಂದರೆ, ಕಾಲ horizontal ಆಗಿ ಮಾತ್ರ ಅಲ್ಲ vertical ಆಗಿಯೂ ನಮ್ಮೊಳಗೆ ಕೆಲಸಮಾಡುತ್ತಿರುತ್ತದೆ. ನಮ್ಮ ಬಾಲ್ಯ ನಮ್ಮಿಂದ ಎಂದೂ ಕಳೆದುಹೋಗುವುದಿಲ್ಲವಲ್ಲವೆ? ನಮ್ಮ ಬದುಕಿನ ಎಲ್ಲ ಹಂತಗಳೂ ಎಲ್ಲ ಕಾಲದಲ್ಲೂ ನಮ್ಮಲ್ಲಿ ಜೀವಂತವಲ್ಲವೆ? ಕಾಲದ ಪ್ರಭಾವವೆನ್ನುವಾಗ ಈ ಅಂಶವೂ ಗಮನಿಸಬೇಕಾದದ್ದು. ಬಹುವಾಗಿ ಉದ್ಧರಿಸಲ್ಪಡುವ ಅಡಿಗರ ನನ್ನ ನುಡಿಯ ಈ ಸಾಲನ್ನು ಇನ್ನೊಮ್ಮೆ ನೋಡಿ: ಬಗೆಯೊಳಗನೇ ತೆರೆದು ಬಣ್ಣ ಬಣ್ಣದಲಿ ಬಣ್ಣಿಸುವ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ. ಬಗೆಯೊಳಗನೇ ತೆರೆದು ಎನ್ನುವಲ್ಲಿ ಅದು ಹೃದಯವನ್ನು ತೋಡಿಕೊಳ್ಳುವುದು ಎಂದೇ ರಮ್ಯ ಸಂದರ್ಭದ ಅರ್ಥವಾದರೂ, ಇದುವರೆಗೆ ಇಡಿಯಾಗಿ ತೆರೆದುಕೊಂಡಿಲ್ಲ, ಏನನ್ನೋ ಮರೆಮಾಡಿದ್ದೇವೆ, ಮನಬಿಚ್ಚಿ ಹೇಳಬೇಕಾದ್ದು ಇನ್ನೂ ಇದೆ ಎಂಬ ಅಂಶದತ್ತ ಈ ಸಾಲು ಕೈತೋರಿಸುತ್ತದೆ. ಮನಃಶಾಸ್ತ್ರ ಚಿತ್ತದ ಆಳವನ್ನು ಬೆದಕುತ್ತಿದೆ ಎಂಬ ಮುನ್ನುಡಿಯ ಮಾತನ್ನು ಈ ಸಾಲಿನೊಂದಿಗೆ ಪೂರ್ವಾನ್ವಯಗೊಳಿಸಿ ಓದಬೇಕಿದೆ. ಕಟ್ಟುವೆವು ನಾವು ಸಂಕಲನದ ಆ ಮನೋಹಾರಿಯಾದ ಕವಿತೆ “ಅತಿಥಿಗಳ’ನ್ನು ನೋಡಿ. ವಿಜನವಿಜನ ಮನವು-ಶೂನ್ಯ ಶೂನ್ಯ ದಿನವು ಎನ್ನುವ ಖನ್ನತೆಯ, ವಿರಹದ, ಸೃಷ್ಟಿಶೀಲ ಮನಃಸ್ಥಿತಿಯನ್ನು ಸದಾ ಧಾರಣಮಾಡಲು ಏನು ಮಾಡಬೇಕು ಎಂದು ಗೊತ್ತಿರದ, ದಾರ ತುಂಡಾಗಿ ಆಗಸದಲ್ಲಿ ತೇಲುತ್ತಿರುವ ಗಾಳಿಪಟವನ್ನು ನಿರಾಸೆಯಿಂದ ನೋಡುತ್ತಿರುವ ಹುಡುಗನ ಇನ್ನೇನು ಮಾಡಲಿ ಎಂಬ ಮನೋಧರ್ಮದ ಕವಿತೆ ಇದು. ವಿಜನ ವಿಜನ ಮನವು-ಶೂನ್ಯ ಶೂನ್ಯ ದಿನವು ಎನ್ನುವುದು ಇಲ್ಲಿನ ಪಲ್ಲವಿ. ತನ್ನೊಳಗಿನ ಸೃಷ್ಟಿಶೀಲತೆಗೆ ಕಾರಣ ಅತಿಥಿಗಳಂತೆ ಬರುವ ಈ ಹೊಳಹುಗಳು. ಇವರಾದರೋ ಸ್ವತ್ಛಂದರು. ಹೇಳದೇ ಬರುವರು. ಬಂದಂತೆ ತೆರಳುವರು. ಇವರು ಕೊಡುವ ರೋಮಾಂಚನ ಮತ್ತು ವಿರಹದ ಸಂಕಟ ಎರಡೂ ಗಾಢವಾದದ್ದು. ಅಡಿಗರು ಈ ಪದ್ಯದಲ್ಲಿ ಅರ್ಥಪೂರ್ಣವಾಗಿ ಬೇಂದ್ರೆಯವರನ್ನು ನೆನಪು ಮಾಡಿಕೊಂಡಿದ್ದಾರೆ. ನೀವಿದ್ದರೆ ವೃಂದಾವನವಿದೆ, ಕಲ್ಪವೃಕ್ಷವಿದೆ ಎಂಬ ಸಾಲುಗಳಿವೆ ಇಲ್ಲಿ. ಕಲ್ಪವೃಕ್ಷ ವೃಂದಾವನಂಗಳಲಿ ಎನ್ನುವುದು ಬೇಂದ್ರೆಯವರ ಅಮೋಘ ಕವಿತೆಗಳಲ್ಲಿ ಒಂದು. ಬೇಂದ್ರೆಯವರು ಇಳಿದು ಬಾ ತಾಯಿ ಎಂದು ಗಂಗೆಯನ್ನು ಕರೆದುದೂ ನೆನಪಾಗುತ್ತದೆ. ನಾನು ಹೇಳಬೇಕೆಂದಿರುವುದು ಇದು: ತನ್ನೊಳಗಿನ ಸೃಷ್ಟಿಶೀಲತೆಯ ಕುರಿತಾದ ಆತಂಕವೊಂದು ಅಡಿಗರಲ್ಲಿ ಮೊದಲಿಂದಲೇ ಇತ್ತು. ನನ್ನ ನುಡಿಯಲ್ಲೂ ಕಾಣುತ್ತಿರುವುದು ಅದೇ. ಅತಿಥಿಗಳು ಪದ್ಯದಲ್ಲೂ ಕಾಣುತ್ತಿರುವುದು ಅದೇ-ತುಸು ಭಿನ್ನವಾಗಿ. ಇವರು ಅತಿಥಿಗಳು- ತನ್ನನ್ನು ಸೃಷ್ಟಿಶೀಲವಾಗಿಸುವ ಭಾವಗಳು- ಎಂದು ಬಂದಾರೆಂದು ಇವರನ್ನು ಕಾಯುತ್ತ ಕರೆಯುತ್ತ ಇರುವುದರಲ್ಲಿಯೇ ಒಂದು ಉಜ್ಜೀವನವಿದೆ ಎಂಬ ಹೊಳಹು ಕೂಡ ಇಲ್ಲಿದೆ. ಇವೆಲ್ಲ ರಮ್ಯ ಸಂದರ್ಭ.
Related Articles
Advertisement
ತನ್ನ ಸೃಷ್ಟಿಶೀಲ ಸಾಮರ್ಥ್ಯ ಹೊರಟುಹೋಯಿತೆನ್ನುವ ಭಾವ, ಕವಿತೆಯ ವಸ್ತುವಾಗುವ ವಿಶೇಷ; ರಮ್ಯ ಸಂದರ್ಭದಲ್ಲಿ ಕಾಣುವ egotistic sublimeಗಿಂತ ಬೇರೆಯಾದ್ದು. ತಾನು ರಸಋಷಿ, ತಾನು ಮಹಾಕವಿ ಎಂಬ ಪ್ರತ್ಯಯದ ಬಗೆ ಬೇರೆ. Egotistic sublime ಅನ್ನು “ಭವ್ಯ ಸ್ವಪ್ರತಿಷ್ಠೆ’ ಎಂದು ಕೆ.ವಿ. ಅಕ್ಷರ ಕನ್ನಡಿಸಿದ್ದಾರೆ. ಚೆನ್ನಾಗಿದೆ. “ಆತ್ಮ ಪ್ರತ್ಯಯ ವಿಶೇಷ’ ಎನ್ನಬಹುದು. ಆತ್ಮಪ್ರತ್ಯಯ ಶಬ್ದ ಕಾಳಿದಾಸನದು. ಅವನು ಬಳಸಿದ್ದು “ಆತ್ಮನ್ಯಪ್ರತ್ಯಯಂ ಚೇತಃ’ ಎಂದು. ಪ್ರಯೋಗ ಬಲ್ಲವರು ನನ್ನ ನಾಟಕವನ್ನೊಪ್ಪದೆ ನನ್ನ ಹಿಂಜರಿಕೆ ಹೋಗುವುಲ್ಲ ಎಂದಿದ್ದ ಕಾಳಿದಾಸ. ಅಡಿಗರದೂ ಆತ್ಮಪ್ರತ್ಯಯವೇ. ಹಿಂಜರಿಕೆಯದಲ್ಲ. ಹಳಹಳಿಕೆ ಏನೋ ಇದೆ. ನಿಜಕ್ಕೂ ತಾನು ಯಾವುದಕ್ಕೆ ಶರಣಾಗಬೇಕು ಎಂದು ಗೊತ್ತುಮಾಡಿಕೊಳ್ಳುವ ರೀತಿಯದು.
ಹೆಗಲಿಗೆ ಹೆಗಲು ಕೊಟ್ಟವನು ನೀನು-ಸಮಾನಸ್ಕಂಧ (ಸ್ಕಂಧ=ಹೆಗಲು)- ನೀನೆಲ್ಲಿ ಈಗ ಎಂದು ಕೂಪ ಮಂಡೂಕ ಶುರುವಾಗುತ್ತೆ. ಈಗ ನೀನಿಲ್ಲ. ಆದರೆ, ಜೊತೆಗಿದ್ದಾಗಿನದೆಲ್ಲ ನೆನಪಾಗುತ್ತಿದೆ. ಸಂಸ್ಕೃತದಲ್ಲಿರುವಂತೆ ಕನ್ನಡದಲ್ಲೂ ದ್ವಿವಚನ ಬೇಕಿತ್ತು ಎನ್ನಿಸುವಂಥ ಪದ್ಯವಿದು. ಯಾರು ಜೊತೆಗಿದ್ದವರು? ಯಾರು ಅಗಲಿದವರು? ಎಚ್ಚರದ ಪ್ರಜ್ಞೆ ಮತ್ತು ಸುಪ್ತಪ್ರಜ್ಞೆಗಳ ನಡುವಣ ಸಂಬಂಧವಿದು. ಸೃಜನಶಕ್ತಿಯು ಎಚ್ಚರದ ಪ್ರಜ್ಞೆಗೆ ಹೇಗೋ ಅದಕ್ಕಿಂತಲೂ ಹೆಚ್ಚು ಸುಪ್ತಪ್ರಜ್ಞೆಗೆ ಸಂಬಂಧಿಸಿದ್ದು; ಎಚ್ಚರ ಮತ್ತು ಸುಪ್ತಪ್ರಜ್ಞೆಗಳ ಸಂಯೋಗಕ್ಕೆ ಸಂಬಂಧಿಸಿದ್ದು. ಆ ಸಂಯೋಗದಿಂದ ಕೃತಿ ಪ್ರಕಟವಾದಾಗ ಕೃತಿಯಲ್ಲಿ ಸುಪ್ತಪ್ರಜ್ಞೆಯ ಮುದ್ರೆ ಎದ್ದು ಕಾಣುತ್ತದೆ! ಈ ಸಾಲುಗಳನ್ನು ನೋಡಿ:
ಕತ್ತಲ ಕಡಲ ನಡುವೆ ನಡುಗಡ್ಡೆ ಮನೆಯಲ್ಲಿಇರುಳಿಡೀ ತಳಮುಳುಗು ಬತ್ತಲಾಟ;
ನಾನು ನೀನಿಡಿಯಾಗಿ ಹೆತ್ತ ಚಿನ್ನದ ತತ್ತಿ
ತತ್ತಿಗೂ ನಿನ್ನದೇ ಮೊಹರು-ಟಂಕ.
ಈ ಮೊಹರನ್ನು ನೋಡುವುದು ಎಚ್ಚರಕ್ಕೂ ಒಂದು ಆಪ್ಯಾಯನವೇ. ಹೀಗಿತ್ತು ಆಗ. ಈಗ ನೀನು ಬಿಟ್ಟಗಲಿದಲ್ಲಿಂದ ಮೈ ಹೇರಿ ಇಲ್ಲಿ ಬಿದ್ದಿದ್ದೇನೆ ತಬ್ಬಲಿ ಹಾಗೆ, ಈಗ ಬಂದಿದೆ ಹಣ್ಣು ಬಿದ್ದು ಕೊಳೆಯುವ ಕಾಲ, ಹಸುರಿನ ಬುಡಕ್ಕೆ ಒರಲೆ ಹಿಡಿವ ಕಾಲ. ಹಾಗಾದರೆ ಮಾಡಲೇನು? ನನ್ನ ಸ್ವಧರ್ಮವೇನು ಎಂದು ಮತ್ತೆ ಪರಿಕಿಸುವೆ.
“ಯಾವುದು ನನ್ನ ಸ್ವಧರ್ಮ?’ ಈ ಸಾಲುಗಳನ್ನು ನೋಡಿ:
ಏಳು ಹೊಂಡದ ನೀರು ಕುಡಿದ ಮಂಡೂಕಯ್ಯ
ನಾನು; ಕುಪ್ಪಳಿಸುವುದೆ ನನ್ನ ಧರ್ಮ
ನೆಲದಿಂದ ಕೆಳಕೊಳಕ್ಕೆ, ಮತ್ತೆ ಮೇಲು ನೆಲಕ್ಕೆ
ಎರಡಕ್ಕು ತೂಗುವುದು ನನ್ನ ಕೆಲಸ.
ಊದೂದಿ ಏದೇದಿ ನೆಲದೊಳೊದ್ದಾಡಿದೆನು
ಇನ್ನಾದರೂ ಕೂಪಕಿಳಿವುದೆ ಸರಿ.
ನುಣ್ಣನೆಯ ಕೆಸರ ಬಸಿರಲ್ಲಿ ಹೂತಡಗುವೆನು
ಊದಿಳಿದು ಮೈತಿಳಿವುದೊಂದೇ ಗುರಿ
ಒಂದು ಮಾತಿದೆ: ತಳಗೆಸರ ರಾಡಿಯಲ್ಲಿ ಎಷ್ಟೋ ಕಾಲ ಹುದುಗಿದ್ದು ಕಪ್ಪೆ ಮತ್ತೆ ಮಿಂಚುವ ಬಂಗಾರದಂಥ ಹೊಸ ಮೈ-ಪಡೆಯುತ್ತದಂತೆ. ಕೋಶದೊಳಗಿದ್ದು ಹುಳ-ಚಿಟ್ಟೆಯಾದಂತೆ ! ಕೋಶಸ್ಥವಾಗುವುದಲ್ಲದೆ ಬೇರೆ ದಾರಿ ಇಲ್ಲ-ಚಿಟ್ಟೆಯಾಗುವುದಕ್ಕೆ. ಹಾಗೆಯೇ ಕಪ್ಪೆ ಹೊಸ ಹುಟ್ಟು, ಹೊಸ ಮೈ ಪಡೆಯಬೇಕಾದರೆ ಕೆಸರಲ್ಲಿ ಹೂತುಕೊಳ್ಳದೆ ಬೇರೆ ದಾರಿ ಇಲ್ಲ. ಕಲೆಯ ಪ್ರಪಂಚ ಬಹುಬೇಗ ಬಣ್ಣಗೆಡುವುದು. ಕಲೆ ಎಂದರೆ ಬಣ್ಣಗೇಡು. ಸೃಜನಶಕ್ತಿ ಪ್ರಕಟವಾಗುತ್ತ ಆಗುತ್ತ ಇದ್ದಂತೆಯೇ ನಷ್ಟವಾಗು ತ್ತಲೂ ಹೋಗುವುದು. ಅಭಿವ್ಯಕ್ತಿಯು ಅಭಿವ್ಯಕ್ತಿಯ ಕ್ಷಣದಿಂದಲೇ ಕೃತಕವಾಗುತ್ತ ಹೋಗುವುದು. ಪ್ರಜ್ಞಾಪೂರ್ವಕತೆಯ ಅಂದರೆ ಎಚ್ಚರದ ಅನಿವಾರ್ಯ ಪರಿಣಾಮವಿದು. ಹಾಗಾದರೇನು ಮಾಡಬೇಕು? ಮತ್ತೆ ಬದುಕಿಗೆ ಮುಖ. ಮತ್ತೆ ಏಕಾಂತಕ್ಕೆ. ಮತ್ತೆ ವೇಷ ಕಳಚಿದ ಹೊತ್ತಿನಲ್ಲಿ ಸಿಗುವ ನಿರಾಳತೆಯನ್ನು ಅನುಭವಿಸುತ್ತ ಆ ನಿರಾಳತೆಯ ಗುಟ್ಟನ್ನು ತಿಳಿಯುವುದಕ್ಕೆ ಅನುವು ಮಾಡಿಕೊಳ್ಳುತ್ತಲೇ ಇರಬೇಕು. ಈ ಲೇಖನದ ಆರಂಭದಲ್ಲಿ ಕ್ರೌಂಚ ಹಕ್ಕಿಗಳ ದುರಂತವನ್ನು ಕಂಡು ಉದ್ವಿಗ್ನಗೊಂಡ ಕವಿ ವಾಲ್ಮೀಕಿಯ ಬಗೆಗೆ ಕೆಲವು ಮಾತುಗಳನ್ನು ಬರೆದಿದ್ದೆ. (ಅದು ಕಳೆದ ರವಿವಾರ ಪ್ರಕಟವಾಗಿದೆ). ಉದ್ವಿಗ್ನಗೊಂಡ ವಾಲ್ಮೀಕಿ ನುಡಿದ “ಉದ್ಗಾರ’ವೇ ರಾಮಾಯಣಕ್ಕೆ ನಾಂದಿಯಾದ ಕಥೆಯನ್ನು ಎಲ್ಲರೂ ಬಲ್ಲರು. ಆದರೆ, ಈ ದುರಂತ ಘಟನೆಗಿಂತ ತುಸು ಮುನ್ನ, ತನ್ನನ್ನು ಜೀವನವಿಡೀ ಕಾಡುತ್ತಿದ್ದ ಒಂದು ಪ್ರಶ್ನೆಯನ್ನು-ಯಾರು ಈ ಲೋಕದಲ್ಲಿ ನಿಜಕ್ಕೂ ಗುಣಾಡ್ಯ?- ಎನ್ನುವ ಪ್ರಶ್ನೆಯನ್ನು ವಾಲ್ಮೀಕಿ, ತನ್ನಾಶ್ರಮಕ್ಕೆ ಬಂದ ನಾರದನಲ್ಲಿ ಕೇಳಿದ್ದ. ಇದಕ್ಕೆ ಉತ್ತರವೆಂಬಂತೆ ನಾರದ, ರಾಮನ ಕಥೆಯನ್ನು ಹೇಳಿದ್ದ. ಅದಿರಲಿ, ಯಾರು ಈ ಲೋಕದಲ್ಲಿ ನಿಜಕ್ಕೂ ಗುಣಶಾಲಿ ಎನ್ನುವ ಗಾಢವಾದ ಪ್ರಶ್ನೆಯೊಂದು ವಾಲ್ಮೀಕಿಯಲ್ಲಿ ಹುಟ್ಟಿರದಿದ್ದರೆ, ಈ ಪ್ರಶ್ನೆಯ ಹಿನ್ನೆಲೆ ಕವಿಯ ಮನದಲ್ಲಿ ಇದ್ದಿರದಿದ್ದರೆ, ಹಕ್ಕಿಗಳ ದುರಂತವನ್ನು ಕಂಡಾಗ ಅಂಥದೊಂದು ಉದ್ಗಾರ-ಅಪ್ರಯತ್ನದಿಂದೆಂಬಂತೆ- ಹೊಮ್ಮಿ ಬರುತ್ತಿತ್ತೆ? ಒಂದು ಪ್ರಶ್ನೆ-ಒಂದು “ಉದ್ಗಾರ’ ಸದಾ ಜೊತೆಗಿದೆ ಎರಡು ಹಕ್ಕಿಗಳಂತೆ! ಯಾವ ಬೇಡನ ಯಾವ ಬಾಣಕ್ಕೂ ಇವುಗಳನ್ನು ಬೇರ್ಪಡಿಸಲಾಗದು! “ಪ್ರಶ್ನೆ’ ಎಂದರೆ ಬದುಕಿನ ಅನುಭವಗಳಿಂದ ಹುಟ್ಟಿಕೊಂಡದ್ದು. “ಉದ್ಗಾರ’ವೆಂದರೆ ತತ್‌ಕ್ಷಣದ ಮನೋಧರ್ಮ. “ಪ್ರಶ್ನೆ’ಯು ಜೀವನಾನುಭವ, “ಉದ್ಗಾರ’ವು ಕಲೆಯ ಅನುಭವ. ಇವೆರಡಕ್ಕೂ ನಿಕಟ ಸಂಬಂಧ. ಈ ಸಂಬಂಧದ ಗಾಢತೆ ಕಳೆದುಹೋದರೆ, ಸಂಬಂಧವು ತೆಳ್ಳಗಾಗುತ್ತ ಹೋದರೆ, “ಬದುಕು’ ಮತ್ತು “ಕಲೆ’ ಎರಡೂ ಸೊರಗುವುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ದೊಡ್ಡ ಹೋರಾಟವೊಂದು ಹಿನ್ನೆಲೆ ಇರುವ ಬದುಕಿನಿಂದ ಕಲೆಯ ಅನುಭವ ಪಕ್ವವಾಗುವುದು; ಹೊಸಜೀವ ಪಡೆಯುವುದು. ದೊಡ್ಡ ಹೋರಾಟದ ಅಭಾವದಿಂದ ಬದುಕು ಮಾತ್ರವಲ್ಲ ಕಲೆಯೂ ಸೊರಗುವುದು. ಆಲಾಪನೆಯಲ್ಲಿ ರಾಗವನ್ನು ವಿಸ್ತರಿಸುವ ಪ್ರಕ್ರಿಯೆಯನ್ನು ನೋಡಿ. ರಾಗವನ್ನು ದೊಡ್ಡದಾಗಿ ವಿಸ್ತರಿಸಬೇಕಾಗಿದ್ದರೆ ಬದುಕಿನ ಅನುಭವಗಳು ಭಾವಗಳಾಗಿ ಮೂಲದ್ರವ್ಯವಾಗಿ ಒದಗಬೇಕು-ಕಲಾವಿದನ ಅಂತರಂಗಕ್ಕೆ. ಕೇವಲ ರಾಗದ ತಾಂತ್ರಿಕ ಅರಿವಲ್ಲ. ರಾಗ ವಿಸ್ತಾರವೆಂದರೆ ರಾಗದ ಉಬ್ಟಾಳುತನವಲ್ಲ. ಅದು ಒಂದು ಬಿಂದುವನ್ನು ಒಳಗಿನಿಂದಲೇ ಊದಿ ಊದಿ ಬಲೂನು ಮಾಡುವಂತೆ ಅಲ್ಲ. ಬಲೂನು ದೊಡ್ಡದಾಗಿ ಕಾಣಬಹುದು; ಆಕರ್ಷಕವೂ ಆಗಿರಬಹುದು. ಆದರೆ ಬಿಂದುವಿನ ಸಾಂದ್ರತೆ ಬಲೂನಿನಲ್ಲಿ ಇಲ್ಲ. ಕಲೆ ಎಂದರೆ ಬಿಂದು, ಬಲೂನಾಗುವುದಲ್ಲ. ಕಲೆ ಎಂದರೆ ಬಿಂದು ತನ್ನ ಸಾಂದ್ರತೆಯನ್ನು ಕಳೆದುಕೊಳ್ಳದೆ ಎಲ್ಲೆಲ್ಲೂ ಸಂಚರಿಸುವುದು. ಇದನ್ನೇ ಬಿಂದು-ಸಿಂಧುವಾಗುವುದೆನ್ನುವುದು. ಒಂದು ಭಾವವನ್ನೇ ಮತ್ತೆ ಮತ್ತೆ ಮೀಟುತ್ತಿದ್ದರೆ ಅದು ಸ್ವಾನುಕಂಪಕ್ಕಾಗಿ ಉಂಟುಮಾಡುವ ಪ್ರಜ್ಞಾಪೂರ್ವಕ ಪ್ರಯತ್ನವಾಗಿಯೂ ಭಾಸವಾಗ ಬಹುದು. ಇಂಥ ಕಡೆ ಕಲೆ ಸೋಲುತ್ತದೆ. ಸೋತಾಗಲೆಲ್ಲ ಕಲೆ ತನ್ನ ಸೋಲಿನ ಅರಿವಿನಿಂದ ಕಂಗೆಟ್ಟು , ಕಳೆದುಹೋದ ಜೀವಂತಿಕೆಯನ್ನು ಪಡೆಯುವುದಕ್ಕಾಗಿ ಮತ್ತೆ ಬದುಕಿನತ್ತ- ಮತ್ತೆ ಉಲ್ಲೋಲ ಕಲ್ಲೋಲ ಗಳ ಬದುಕಿನತ್ತ- ಸುಪ್ತ ಮನಸ್ಸನ್ನು ಹೊತ್ತಿರುವ ಬದುಕಿನತ್ತ- ನೋಡಲೇಬೇಕಾಗುತ್ತದೆ! ಕಪ್ಪೆ , ಮತ್ತೆ ಬಂಗಾರದ ಹೊಳಪಿನ ಮೈ ಪಡೆಯಲೆಂದು, ತಳಗೆಸರ ರಾಡಿಯಲ್ಲಿ , ತಿಳಿನೀರಿನಲ್ಲಿ ಅಲ್ಲ , ಹುದುಗಲೇ ಬೇಕಾಗುತ್ತದೆ! ಈ ಅರ್ಥದಲ್ಲಿ ಕಲೆ-ಬದುಕಿಗೆ ಅತ್ಯಂತ ಕೃತಜ್ಞವಾಗಿರುತ್ತದೆ ಮತ್ತು ಕಲೆಗೆ ಮಾತ್ರ ಬದುಕಿಗೆ ತಾನೇಕೆ ಕೃತಜ್ಞವಾಗಿರಬೇಕು ಎಂದು ಚೆನ್ನಾಗಿ ತಿಳಿದಿರುತ್ತದೆ. ಲಕ್ಷ್ಮೀಶ ತೋಳ್ಪಾಡಿ