“ಒಂದು ವಾರದಿಂದ ಎಣ್ಣೆ ಅಂಗಡಿಗಳೆಲ್ಲ ಬಂದ್ ಆಗಿದ್ಯಲ್ಲ ಅಮ್ಮ… ನಮ್ಮನೆಯೋನು ಗಪ್‌ಚುಪ್. ದಿನಾ ಬೆಳಗೆದ್ದು, ಏನೋ ಕಳೆದುಕೊಂಡವನ ಹಾಗೆ ಕೂತಿರ್ತಾನೆ. ಮೊದಲಿನ ಹಾರಾಟ, ತೂರಾಟ ಎಲ್ಲ ಬಂದ್ ಆಗಿದೆ. ಹೆಂಗೂ ಈಗ ಕುಡಿಯೋದು ಬಿಟ್ಟಿದ್ಯಲ್ಲ, ಇನ್ಮುಂದೆ ಪೂರ್ತಿ ಬಿಟ್ಟೇ ಬಿಡು, ಅಂದ್ರೆ ಸಿಟ್ಟು ಮಾಡಿಕೊಳ್ತಾನೆ’- ಕಳೆದ ತಿಂಗಳು, ಸಂಬಳ ತಗೊಂಡು ಹೋಗಲು ಬಂದಿದ್ದ ಸರಸಿ ತನ್ನ ಗಂಡನ ಬಗ್ಗೆ ಹೇಳಿದ್ದು ಹೀಗೆ.
ಸರಸಿಯದ್ದು ಇಬ್ಬರು ಮಕ್ಕಳಿರುವ ಸಂಸಾರ. ಮದುವೆಯಾಗಿ ಹದಿನಾರು ವರ್ಷವಾಗಿದೆಯಂತೆ. ಹದಿನೇಳನೆ ವಯಸ್ಸಿಗೆ ಮದುವೆಯಾಗಿ, ಗಂಡನೊಡನೆ ಬೆಂಗಳೂರಿಗೆ ಬಂದಾಗ, ಅವನು ಕುಡಿಯೋ ವಿಷಯ ಆಕೆಗೆ ಗೊತ್ತಿರಲಿಲ್ಲ. ಆದರೆ, ದಿನ ಕಳೆದಂತೆ ಅವನ ಒಂದೊಂದೇ ದುರ್ಗುಣಗಳು ಬಯಲಾಗತೊಡಗಿದ್ದವು. ದುಡಿದ ಹಣವನ್ನೆಲ್ಲ ಕುಡಿಯುವುದು, ಕುಡಿದು
ಬಂದು ಹೊಡೆಯುವುದು ಮಾಮೂಲಾಯಿತು. ಮೊದಮೊದಲಿಗೆ ಅತ್ತು ಕರೆದು ಮಾಡಿ, ಜಗಳವಾಡಿ, ಗಂಡನನ್ನು ಸರಿಪಡಿಸಲು ಯತ್ನಿಸಿದ್ದಳು ಸರಸಿ. ಆದರೆ, ಅವನು ಬದಲಾಗುವುದು ಸಾಧ್ಯವೇ ಇಲ್ಲ ಅಂತ ಗೊತ್ತಾದಾಗ, ಆ ಪ್ರಯತ್ನ ಕೈ ಬಿಟ್ಟಳು.
ಮಕ್ಕಳು ಸಣ್ಣವಿದ್ದಾಗ ದುಡಿಯಲು ಹೋಗುತ್ತಿದ್ದ ಭೂಪ, ಹೋದಲ್ಲೆಲ್ಲಾ ಸಾಲ ಮಾಡಿಕೊಂಡು, ಸಾಲಗಾರರಿಗೆ ಹೆದರಿ, ಮನೆಯಿಂದ ಹೊರಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟ. ಆಗ, ದುಡಿಯುವುದು ಸರಸಿಗೆ ಅನಿವಾರ್ಯವಾಯ್ತು. ಪ್ರತಿ ದಿನ ನಾಲ್ಕು ಮನೆಯಲ್ಲಿ ಕೆಲಸ ಮಾಡಿ, ಗಂಡ ಮಾಡಿದ ಸಾಲವನ್ನೆಲ್ಲ ತೀರಿಸಿದ್ದಾಳೆ. ಹೇಗೇಗೋ ಮಾಡಿ, ಮಕ್ಕಳನ್ನು ಶಾಲೆಗೂ ಕಳಿಸುತ್ತಿದ್ದಾಳೆ. ಅತ್ತೆಯ (ಗಂಡನ ಅಮ್ಮ) ಔಷಧಿ ಖರ್ಚನ್ನೂ ನಿಭಾಯಿಸುತ್ತಾಳೆ. ಇಷ್ಟೆಲ್ಲ ಕಷ್ಟಪಟ್ಟು ಉಳಿಸಿದ ಹಣ, ಕೆಲವೊಮ್ಮೆ ಗಂಡನ ಕುಡಿತದ ಪಾಲಾಗುತ್ತದಂತೆ. ಹೆಂಡತಿ ದುಡ್ಡಲ್ಲಿ ಕುಡಿದಾಗಲೂ, ಆಕೆಯ ಮೇಲೆ ಕೈ ಎತ್ತಿದ್ದುಂಟಂತೆ! ನಮ್ಮ ಮನೆಗೆ ಕೆಲಸಕ್ಕೆ ಸೇರಿದ ಶುರುವಿನಲ್ಲಿ, ಯಾರದ್ದೋ ಮನೆಯ ಕಥೆ ಅನ್ನುವಷ್ಟು ನಿರ್ಲಿಪ್ತ ವಾಗಿ ಅವಳು ಇದನ್ನೆಲ್ಲ ಹೇಳಿದಾಗ ನಂಗೆ ಅಚ್ಚರಿ.
ಅಲ್ಲಾ, ಒಂದು ಹೆಣ್ಣು ಇಷ್ಟನ್ನೆಲ್ಲ ಹೇಗೆ ಸಹಿಸಿಕೊಳ್ಳಬಲ್ಲಳು ಅಂತ. ಕುಡಿತವೊಂದೇ ಅವನ ದೌರ್ಬಲ್ಯ. ಉಳಿದ ವಿಷಯದಲ್ಲಿ ತನ್ನ ಗಂಡ ಒಳ್ಳೆಯವನೇ, ಅಂತ ಬೇರೆ ಹೇಳುತ್ತಾಳೆ ಸರಸಿ!
ಹೆಣ್ಣು ಸಹನಾಮಯಿ ಅಂತ ಸರಸಿಯನ್ನು ನೋಡಿ ಹೇಳಿದ್ದಿರಬೇಕು… ಈ ನಡುವೆ, ಲಾಕ್‌ಡೌನ್ ಅಂತ ಮದ್ಯದ ಅಂಗಡಿಗಳು ಮುಚ್ಚಲ್ಪಟ್ಟಾಗ, ಮುಂದೆಂದೂ ಅವುಗಳ ಬಾಗಿಲು ತೆಗೆಯದೇ
ಇರಲಿ, ಒಂದು ತಿಂಗಳ ಗ್ಯಾಪ್‌ನಲ್ಲಿ ಕುಡುಕರೆಲ್ಲ ತಮ್ಮ ಚಟ ಮರೆಯಲಿ ಅಂತ ಪ್ರಾರ್ಥಿಸಿದ್ದೆ. ಆದರೆ, ಹಾಗಾಗಲಿಲ್ಲ. ಸರ್ಕಾರ ಮತ್ತೆ ಮದ್ಯದ ಅಂಗಡಿಗಳನ್ನು ತೆಗೆಯಿತು. ಬಾರ್ ಬಾಗಿಲು
ತೆಗೆಯುವುದಕ್ಕೂ ಮೊದಲೇ, ಕುಡುಕರು ಸಾಲುಗಟ್ಟಿ ನಿಂತರು. ಆ ಸಾಲಿನಲ್ಲಿ ಸರಸಿಯ ಗಂಡನೂ ಇದ್ದಾನೇನೋ… ಗಂಡನ ಬೈಗುಳ, ಹೊಡೆತ ಆಕೆಗೆ ತಪ್ಪುವುದೇ ಇಲ್ಲವೇನೋ…
ನಾಗವೇಣಿ ಎಸ್.