Advertisement

ಎಲ್ಲರಿಗೂ ಉದ್ಯೋಗ ಸಾಧ್ಯವೇ?

05:33 PM Jun 06, 2018 | Sharanya Alva |

ಎಲ್ಲರಿಗೂ ಉದ್ಯೋಗ, ವರ್ತಮಾನ ಭಾರತದಲ್ಲಿ ಕೇಂದ್ರ- ರಾಜ್ಯಗಳ ಸರಕಾರಗಳ ಮುಂದಿರುವ ದೊಡ್ಡ ಸವಾಲು. ರಾಜಕೀಯ ಪಕ್ಷಗಳು ಚುನಾವಣೆಯ ಹೊತ್ತಿನಲ್ಲಿ ದುಡಿಯುವ ಎಲ್ಲಾ ಕೈಗಳಿಗೆ ಉದ್ಯೋಗ ಕೊಡುವ ದೊಡ್ಡ ದೊಡ್ಡ ಆಶ್ವಾಸನೆಯನ್ನು ಕೊಡುತ್ತವೆ. ಅಧಿಕಾರ ಕೈಗೆ ಸಿಕ್ಕಾಗ ಈ ನಿಟ್ಟಿನಲ್ಲಿ ತಮ್ಮದೇ ಯೋಜನೆಗಳನ್ನು ರೂಪಿಸುತ್ತವೆ. ಮಾಮೂಲಿಯಂತೆ ವಿಪಕ್ಷಗಳು ಸರಕಾರ ಉದ್ಯೋಗ ಸೃಷ್ಟಿಯಲ್ಲಿ ವಿಫ‌ಲವಾಗಿದೆ ಎಂದು ಕಟುವಾಗಿ ಟೀಕಿಸುತ್ತವೆ. ಮನರೆಗಾ, ಉದ್ಯೋಗ ಖಾತರಿ, ಕೌಶಲ್ಯ ವಿಕಾಸದಂತಹ ಯೋಜನೆಗಳು ಈ ನಿಟ್ಟಿನಲ್ಲಿ ತಕ್ಕಮಟ್ಟಿಗೆ ಪರಿಣಾಮಕಾರಿಯೆನಿಸಿದರೂ ಪೂರ್ಣ ಪ್ರಮಾಣದಲ್ಲಿ ಯಶಸ್ಸು ಕಂಡಿಲ್ಲ. ಅಮೆರಿಕದಂತಹ ವಿಕಸಿತ ದೇಶದಲ್ಲೇ ಆಗಾಗ್ಗ ನಿರುದ್ಯೋಗ ಸಮಸ್ಯೆ ದೊಡ್ಡ ಸದ್ದು ಮಾಡುತ್ತದೆ. ಅಧ್ಯಕ್ಷೀಯ ಚುನಾವಣಾ ವಿಷಯವೂ ಆಗುತ್ತದೆ ಎಂದ ಮೇಲೆ ಇನ್ನೂ ವಿಕಾಸದ ಪಥದಲ್ಲಿ ಕ್ರಮಿಸುತ್ತಿರುವ ಭಾರೀ ಜನಸಂಖ್ಯೆಯ ಭಾರತ  ದಂತಹ ದೇಶದಲ್ಲಿ ಎಷ್ಟೇ ಯಶಸ್ವೀ ಯೋಜನೆ ರೂಪುಗೊಂಡರೂ ಇನ್ನೂ ಹಲವು ದಶಕಗಳ ಕಾಲ ನಿರುದ್ಯೋಗ ಜ್ವಲಂತ ಸಮಸ್ಯೆಯಾಗಿ ಸರಕಾರಗಳನ್ನು ಕಾಡುವುದರಲ್ಲಿ ಸಂದೇಹವಿಲ್ಲ.

Advertisement

ಮೂಲ ಸೌಕರ್ಯದ ಸಮಸ್ಯೆ 
ಉದ್ಯೋಗ ಅರಸುವರಾಗದಿರಿ, ಉದ್ಯೋಗ ನೀಡುವವರಾಗಿ ಎಂದು ಸರಕಾರದಲ್ಲಿ ಕುಳಿತ ಗಣ್ಯರು ಯುವ ಪೀಳಿಗೆಗೆ ಕರೆ ನೀಡುತ್ತಾರೆ. ಆದರೆ ಅದಕ್ಕೆ ಅಗತ್ಯವಿರುವ ಯೋಗ್ಯ ವಾತಾವರಣ ನಿರ್ಮಿಸುವಲ್ಲಿ ಸರಕಾರಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಗಿವೆ ಎನ್ನುವುದು ಚರ್ಚಾರ್ಹ. ಮೂಲಸೌಕರ್ಯ ಕ್ಷೇತ್ರ ಎಷ್ಟರವರೆಗೆ ನಿರ್ಲಕ್ಷಿತವಾಗಿರುತ್ತದೋ ಅಲ್ಲಿಯವರೆಗೆ ಉದ್ಯೋಗ ಸೃಷ್ಟಿ ಸಾಧ್ಯವೇ? ನಗರ ಜೀವನದಿಂದ ಬೇಸತ್ತ ಎಷ್ಟೋ ಶಿಕ್ಷಿತರು, ಸಾಫ್ಟ್  ವೇರ್‌ ಎಂಜಿನಿಯರುಗಳು, ಉನ್ನತ ಉದ್ಯೊಗದಲ್ಲಿರುವವರು ಇಂದು ಹಳ್ಳಿಗಳ ಕಡೆಗೆ ಮುಖ ಮಾಡಿದ್ದಾರೆ ನಿಜ.

ಕೃಷಿ, ಹೈನುಗಾರಿಕೆ, ಗ್ರಾಮೀಣ ಅರ್ಥ ವ್ಯವಸ್ಥೆಗೆ ಪೂರಕ ಉದ್ದಿಮೆಗಳನ್ನು ಸ್ಥಾಪಿಸುವತ್ತ ಗಮನ ಹರಿಸಿದ್ದಾರೆ. ಅವರಿಗೆ ಹಳ್ಳಿಗಳಲ್ಲಿ ಬೇಕಾದ ವಿದ್ಯುತ್‌, ಹೆಚ್ಚುವರಿ ಕೃಷಿ ಉತ್ಪನ್ನಗಳ ಸಂಗ್ರಹಣೆ ವ್ಯವಸ್ಥೆ ((warehousing), ಸಂಸ್ಕರಣಾ ತಂತ್ರಜ್ಞಾನ, ಮಾರುಕಟ್ಟೆ ಸೌಲಭ್ಯ ದೊರೆಯದಿದ್ದರೆ ಅಷ್ಟೇ ಬೇಗ ನಿರಾಸೆಗೊಳ್ಳುವುದಿಲ್ಲವೇ? ಸರಕಾರದ ಆಕರ್ಷಕ ಆಹ್ವಾನವನ್ನು ಸ್ವೀಕರಿಸಿ ಮೈಸೂರಿನ ಹಳ್ಳಿಯೊಂದರಲ್ಲಿ ನೆಲೆಸಲು ಬಂದಿದ್ದ ಅನಿವಾಸಿ ಭಾರತೀಯ ದಂಪತಿಗಳಿಗೆ ತಾವಿರುವ ಹಳ್ಳಿಯಲ್ಲಿ ಕನಿಷ್ಟ ಇಂಟರ್‌ನೆಟ್‌ ಸೌಲಭ್ಯಕ್ಕಾಗಿ ಅಲೆದಾಡಬೇಕಾದ ಸಂದರ್ಭ ಬಂದಾಗ ಅವರು ಘೋರ ನಿರಾಸೆಗೊಳಗಾಗಬೇಕಾಯ್ತು. ನಿರುಪಾಯರಾಗಿ ಅವರು ಪ್ರಧಾನಮಂತ್ರಿ ಕಾರ್ಯಾಲಯವನ್ನು ಸಂಪರ್ಕಿಸ ಬೇಕಾಯಿತು. ಅವರಿಗೇನೋ ಪ್ರಧಾನಮಂತ್ರಿ ಕಾರ್ಯಾಲಯ ದಿಂದ ತತ್‌ಕ್ಷಣ ನೆರವು ದೊರೆಯಿತಾದರೂ ಎಲ್ಲರೂ ಅವರಷ್ಟು ಭಾಗ್ಯಶಾಲಿಗಳಾಗಿರಲು ಸಾಧ್ಯವಿಲ್ಲ.

ರೈತರು ತಾವು ಬೆಳೆದ ಟೊಮೆಟೋ, ಆಲೂಗಡ್ಡೆ, ಈರುಳ್ಳಿ ಮುಂತಾದ ಉತ್ಪನ್ನಗಳಿಗೆ ಯೋಗ್ಯ ಬೆಲೆ ದೊರೆಯಲಿಲ್ಲ ಎಂದು ನೊಂದು ಮಾರುಕಟ್ಟೆಯಲ್ಲೇ ಎಸೆದು ಹೋಗುವ, ರಸ್ತೆಗೆ ಸುರಿಯುವ ಸುದ್ದಿ ಮಾಧ್ಯಮಗಳಲ್ಲಿ ಆಗಾಗ್ಗೆ ಪ್ರಕಟಗೊಳ್ಳುತ್ತಿರುತ್ತದೆ. ಮಾರುಕಟ್ಟೆಯಲ್ಲಿ ತರಕಾರಿಗಳು ಕೆಜಿ ಒಂದಕ್ಕೆ 20-30 ರೂ.ಗೆ ವಿಕ್ರಯವಾಗುತ್ತಿದ್ದರೂ ರೈತನಿಗೆ ಅದರ ಅರ್ಧದಷ್ಟು ಮೌಲ್ಯವೂ ದೊರಕುವುದಿಲ್ಲ ಎನ್ನುವುದು ವಾಸ್ತವ. ಆಗಾಗ್ಗೆ ರೈತರ ಸಾಲ ಮನ್ನಾದಂತಹ ಪ್ರಹಸನ ನಡೆಯುತ್ತಾದರೂ ಅದು ರೈತರ ನೆರವಿಗೆ ಬರುವುದಿಲ್ಲ. ರೈತರ ಉತ್ಪನ್ನಗಳನ್ನು
ಸಂಗ್ರಹಿಸುವ, ಬೇಡಿಕೆಯಿದ್ದೆಡೆಗೆ ಕೊಂಡೊಯ್ಯುವ ಸಾಗಾಟ ವ್ಯವಸ್ಥೆಯಂತಹ ಮೂಲ ಸೌಲಭ್ಯಗಳತ್ತ ನಮ್ಮ ಸರಕಾರಗಳು ಚಿಂತಿಸುತ್ತಿಲ್ಲ.

ರೈತರಿಗೆ ಬೇಕಾದ ಉತ್ತಮ ಗುಣಮಟ್ಟದ ಬೀಜ, ರಾಸಾಯನಿಕ ಗೊಬ್ಬರ, ಕೃಷಿ ಉಪಕರಣ ನೀಡುವುದರ ಬದಲು ಸರಕಾರಗಳು ಓಟು ಗಿಟ್ಟಿಸುವ ಪುಕ್ಕಟೆ ಅಕ್ಕಿಯಂತಹ ಜನಮರಳು ದುಬಾರಿ ವೆಚ್ಚದ ಯೋಜನೆಗಳ ಮೂಲಕ ಖಜಾನೆಯನ್ನು ಬರಿದು ಮಾಡುತ್ತಿವೆ. ಗ್ರಾಮೀಣ ಭಾರತದ ಕೃಷಿ ಕ್ಷೇತ್ರ ಇಂದಿಗೂ ಸಾಕಷ್ಟು ಉದ್ಯೋ ಗಾವಕಾಶಗಳನ್ನು ನೀಡುವ ಕ್ಷಮತೆಯನ್ನು ಹೊಂದಿದೆಯಾದರೂ ಸರಕಾರಗಳು
ಈ ದಿಸೆಯಲ್ಲಿ ಕಾರ್ಯಪ್ರವೃತ್ತವಾಗಿಲ್ಲ ಎನ್ನುವುದು ಕಠೊರ ಸತ್ಯ. ಪಂಜಾಬ…-ಹರ್ಯಾಣದಂತಹ ಅಕ್ಕಿ, ಗೋಧಿಗಳ ಕಣಜವೆನಿಸಿದ ಹಾಗೂ ಪ್ರಗತಿಪರ ಮತ್ತು ಸಿರಿವಂತ ಕೃಷಿಕ ರಿರುವ ರಾಜ್ಯಗಳಲ್ಲೂ ಇತ್ತೀಚಿನ ವರ್ಷಗಳಲ್ಲಿ ಕೃಷಿ ಕ್ಷೇತ್ರ ನಿರ್ಲಕ್ಷ್ಯಕ್ಕೊಳಗಾಗಿದೆ. ಕೃಷಿಯಲ್ಲಿ ಸಂಪದ್ಭರಿತವಾಗಿದ್ದ ಪಂಜಾಬಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಸರಕಾರಗಳ ನಿರ್ಲಕ್ಷ್ಯದಿಂದಾಗಿ ಯುವಕರು ಕೆನಡ, ಅಮೆರಿಕ, ಆಫ್ರಿಕಾ ಖಂಡದ ರಾಷ್ಟ್ರಗಳತ್ತ ವಲಸೆ ಹೋಗುತ್ತಿದ್ದಾರೆ. ಈ ರಾಜ್ಯಗಳಲ್ಲಿ ಇಂದು ಬಿಹಾರ-ಜಾರ್ಖಂಡ್‌ಗಳಿಂದ ಬಂದ ಕೂಲಿಯವರಿಂದ ಕೃಷಿ ಕಾರ್ಯಗಳು ನಡೆಯುತ್ತಿವೆ.

Advertisement

ಶಿಕ್ಷಿತರ ನಿರುದ್ಯೋಗ
ಹಳ್ಳಿಗಳಲ್ಲಿ ಕೃಷಿ ಕೆಲಸಗಳಿಗೆ ಶ್ರಮಿಕರು ಸಿಗುತ್ತಿಲ್ಲ. ತೆಂಗಿನ ಕಾಯಿ ಕೀಳಲು 50 ರೂ. ಕೊಡುತ್ತೇನೆಂದರೂ ಯಾರೂ ಬಾರದಿರುವಂತಹ ಪರಿಸ್ಥಿತಿಯಲ್ಲಿ ಅನೇಕರು ಜನನಿಬಿಡ ಪ್ರದೇಶಗಳಲ್ಲಿರುವ ಫ‌ಲಭರಿತ ತೆಂಗಿನ ಮರಗಳನ್ನೇ ಕಡಿದು ಹಾಕಲು ಮುಂದಾಗುತ್ತಿದ್ದಾರೆ. ನಿಮ್ಮ ಮನೆಯಲ್ಲಿರುವ ಫ್ರಿಜ್‌, ಟಿವಿ ಮುಂತಾದ ಎಲೆಕ್ಟ್ರಾನಿಕ್‌ ಉಪಕರಣಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲವೇ? ಇಲೆಕ್ಟ್ರಿಕಲ್ ಪ್ಲಂಬಿಂಗ್‌ ಮುಂತಾದ ಸಣ್ಣ ಪುಟ್ಟ ತಾಂತ್ರಿಕ ದೋಷವಿದೆಯೇ? ನಿಮಗೆ ಸರಿಪಡಿಸುವ ತಂತ್ರಜ್ಞರು ಸುಲಭದಲ್ಲಿ ಸಿಗಲಾರರು. ವಾಹನಗಳ ರಿಪೇರಿ, ಗೃಹ ನಿರ್ಮಾಣ ದಲ್ಲಿ ನಿರತ ಕುಶಲ ಕೆಲಸಗಾರರ ಅಭಾವ ಎದ್ದು ಕಾಣುತ್ತದೆ.

ಗ್ರಾಮೀಣ ಭಾಗದಲ್ಲೂ ತಿಂಗಳಿಗೆ ಸುಲಭವಾಗಿ 20-25 ಸಾವಿರ ರೂ. ಸಂಪಾದಿಸಬಹುದಾದ ಇಂತಹ ನೌಕರಿಗಳಿಗೆ ನಮ್ಮ ಗ್ರಾಮೀಣ ಯುವಕರ ಮನವೊಪ್ಪುವುದಿಲ್ಲವೆಂದಾದರೆ ಅದಕ್ಕೆ ಕೊಂಚ ಮಟ್ಟಿಗೆ ನಮ್ಮ ಶಿಕ್ಷಣ ವ್ಯವಸ್ಥೆಯೂ ಕಾರಣ ಎಂದರೆ ತಪ್ಪಾಗದು. ಕರ್ನಾಟಕದಲ್ಲಿ ಕೆಲವು ವರ್ಷಗಳ ಹಿಂದೆ ಕೆಲವೇ ಕೆಲವಿದ್ದ ಅಂಚೆಯ ಮೂಲಕವೂ ಪಡೆಯಬಹುದಾದ ಸಾಮಾನ್ಯ ಪದವಿ ನೀಡುವ ಸರಕಾರಿ ಕಾಲೇಜುಗಳು ಇಂದು ರಾಜಕಾರಣಿಗಳ ಒತ್ತಡಕ್ಕೆ ಸಿಲುಕಿ ಎಲ್ಲೆಡೆ ಕಾಣಬಹುದಾಗಿದೆ.

ಸರಕಾರದ ಕೋಟ್ಯಂತರ ರೂಪಾಯಿ ಖರ್ಚಿನಲ್ಲಿ ನಡೆಯುವ ಬಿಳಿಯಾನೆಯಂತಿರುವ ಈ ಕಾಲೇಜುಗಳ ಪದವಿ ಪಡೆದ ಯುವಕರ ಬಳಿ ಯಾವುದೇ ತಾಂತ್ರಿಕ ಜ್ಞಾನವಿಲ್ಲ ಮತ್ತು ಸ್ವಂತ ಉದ್ಯೋಗ ನಡೆಸುವತ್ತ ನಿರಾಸಕ್ತಿಯಿಂದಾಗಿ ಒಂದೆಡೆ ಗ್ರಾಮೀಣ ಭಾರತದಲ್ಲಿ ಶಿಕ್ಷಿತರಲ್ಲಿ ನಿರುದ್ಯೋಗ ಹೆಚ್ಚುತ್ತಿದೆ ಮತ್ತು ಇನ್ನೊಂದೆಡೆ ಕುಶಲ ಕೆಲಸಗಾರರ ತೀವ್ರ ಅಭಾವ ಹೆಚ್ಚಾಗುತ್ತಿದೆ. ಈ ಅಸಮ  ತೋಲನಕ್ಕೆ ಸರಕಾರದ ನೀತಿಯೇ ಕಾರಣವಲ್ಲವೇ?

ಬೇಕಿದೆ ಉದ್ಯಮ ಸ್ನೇಹಿ ನೀತಿ
ಬೆಂಗಳೂರು, ಹುಬ್ಬಳ್ಳಿ, ಮೈಸೂರಿನಂತಹ ಪಟ್ಟಣಗಳಲ್ಲಿ ಖಾಸಗಿ ಕ್ಷೇತ್ರದ ಬಂಡವಾಳವನ್ನು ಹೆಚ್ಚಿಸಲು ಆಗಾಗ್ಗೆ ಸರಕಾರ ಗ್ಲೋಬಲ್‌ ಇನ್ವೆಸ್ಟ್‌ಮೆಂಟ್‌ ಮೀಟ್‌ನಂತಹ ಕಾರ್ಯಕ್ರಮ  ಗಳನ್ನು ಹಮ್ಮಿಕೊಳ್ಳುತ್ತದೆ. ಮಂತ್ರಿ-ಮುಖ್ಯಮಂತ್ರಿಗಳು ವಿದೇಶ  ಗಳಿಗೆ ತೆರಳಿ ರಾಜ್ಯದಲ್ಲಿ ಬಂಡವಾಳ ಹೂಡುವಂತೆ ಆಹ್ವಾನಿಸುತ್ತಾರೆ. ಆದರೆ ಇಲ್ಲಿ ಬರುವ ಉದ್ಯಮಿಗಳಿಗೆ ಜಮೀನು ವಶ ಪಡಿಸಿಕೊಳ್ಳುವುದು, ನಿರಂತರ ವಿದ್ಯುತ್‌ ಪಡೆಯುವಿಕೆ ಹದಗೆಟ್ಟ ರಸ್ತೆಗಳು, ಸದಾ ಟ್ರಾಫಿಕ್‌ ಜಾಮ್‌ನಂತಹ ಸಮಸ್ಯೆಗಳು ಕಾಡುತ್ತವೆ. ಸರಕಾರ ಲಕ್ಷಾಂತರ ಕೋಟಿ ರೂ.ಗಳ ಹೂಡಿಕೆಗೆ ಆಶ್ವಾಸನೆ ಸಿಕ್ಕಿದೆ ಎಂದು ಅಬ್ಬರದ ಪ್ರಚಾರ ಮಾಡಿಕೊಳ್ಳುತ್ತದೆ.

ಅವುಗಳು ವಾಸ್ತವದಲ್ಲಿ ಕಾಣಸಿಗುತ್ತಿದೆಯೋ ಎನ್ನುವ ಸತ್ಯವನ್ನು ಮರೆಮಾಚುತ್ತದೆ. ಇನ್ನು ಉದ್ಯಮಿಗಳ ಸಮಸ್ಯೆಗಳಿಗೆ ಸ್ಪಂದಿಸು ವುದಂತೂ ಬಲು ದೂರದ ಮಾತು. ಸರಕಾರದ ಈ ರೀತಿಯ ನೀತಿಯಿಂದ ಉದ್ಯೋಗವಕಾಶ ಹೆಚ್ಚುವುದಾದರೂ ಹೇಗೆ? ಐಟಿ-ಬಿಟಿ ಸಿಟಿಯೆಂದು ಮಾನ್ಯತೆ ಗಳಿಸಿದ ಬೆಂಗಳೂರಿನ ದಿಗ್ಗಜ ಉದ್ಯಮಿ ಕಂಪೆನಿಗಳು ಸರಕಾರದ ನಿರಾಸಕ್ತಿ, ಅಸಹಕಾರದ ನಡುವೆಯೇ ತಮ್ಮ ಸ್ವಂತ ಪರಿಶ್ರಮದಿಂದ ಸಾಕಷ್ಟು ಶ್ಲಾಘನೀಯ ಸಾಧನೆ ಮಾಡಿವೆ. ಬೆಂಗಳೂರನ್ನು ಪ್ರಪಂಚ ಗುರುತಿಸಬಹು  ದಾದ ಸಾಫ್ಟ್ವೇರ್‌ ಸಿಟಿಯನ್ನಾಗಿಸುವಲ್ಲಿ ಅನೇಕ ಕಠಿಣ ಪರಿಶ್ರಮದ ಮತ್ತು ಪ್ರತಿಭಾನ್ವಿತ ಉದ್ಯಮಿಗಳ ಪಾತ್ರವಿದೆ.

ಆದರೂ ರಾಜಕಾರಣಿಗಳು ತಮ್ಮಿಂದಾಗಿಯೇ ಇವೆಲ್ಲಾ ಸಾಧ್ಯವಾಯ್ತು ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿರುವುದು, ತಮ್ಮ ಶಾಸನ ಕಾಲದಲ್ಲಿ ಕರ್ನಾಟಕ ಉದ್ಯಮರಂಗದಲ್ಲಿ ಮೇಲಕ್ಕೇರಿದೆ ಎನ್ನುವುದು ತಮಾಷೆಯೇ ಸರಿ. ಇತ್ತೀಚಿನ ವರ್ಷಗಳಲ್ಲಂತೂ ಸರಕಾರ ಬೆಂಗಳೂರಿನಲ್ಲಿ ಹೊಸ ಉದ್ಯಮಿಗಳನ್ನು ಆಕರ್ಷಿಸುವತ್ತ ದಿವ್ಯ ನಿರ್ಲಕ್ಷ ವಹಿಸಿತು ಎನ್ನುವುದು ಜಗಜ್ಜಾಹೀರಾದ ವಿಷಯ.

ಮೇಕ್‌ ಇನ್‌ ಇಂಡಿಯಾ ಯಶಸ್ಸು
ಉದ್ದಿಮೆಗಳನ್ನು ಮತ್ತು ಹೂಡಿಕೆದಾರರನ್ನು ತನ್ನ ಉದ್ಯಮ ಸ್ನೇಹಿ ನೀತಿಯ ಮೂಲಕ ಉತ್ತೇಜಿಸುವುದು ಸರಕಾರಗಳ
ಆದ್ಯತೆಯಾಗಬೇಕಿದೆ. ಆ ನಿಟ್ಟಿನಲ್ಲಿ ಕೇಂದ್ರ ಸರಕಾರ ರಕ್ಷಣಾ ಕ್ಷೇತ್ರದಲ್ಲಿ ಮೇಕ್‌ ಇನ್‌ ಇಂಡಿಯಾ ಮೂಲಕ ಕೊಂಚ ಯಶಸ್ಸನ್ನು ಕಂಡಿದೆ. ಖಾಸಗಿ ರಂಗದ  L & T (ಲಾರ್ಸನ್‌ ಅಂಡ್‌ ಟ್ಯೂಬ್ರೋ) ಯೊಂದಿಗೆ ಮೇ 2017ರಲ್ಲಿ ಮಾಡಿಕೊಂಡ ಒಪ್ಪಂದದಂತೆ ಮೊದಲ ಕಂತಿನ  K9 VAJRA&T ಹೆಸರಿನ 25 ಗನ್‌ಗಳನ್ನು ಸದ್ಯದಲ್ಲೇ ಸೇನಾಪಡೆಗಳು ಪಡೆಯಲಿವೆ ಎಂದು ವರದಿಯಾ ಗಿದೆ. 4,500 ಕೋಟಿ ರೂ.ಗಳ ಈ ಯೋಜನೆಯಂತೆ ಕಂಪೆನಿ 100 ಗನ್‌ಗಳನ್ನು ನಿರ್ಮಿಸುವ ಕಾಂಟ್ರಾಕ್ಟ್ ಪಡೆದಿತ್ತು. ಹಾಗೆಯೇ ಸ್ವದೇಶಿ ನಿರ್ಮಿತ ಆಕಾಶ್‌, ಭಾರತ ಮತ್ತು ರಶ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್‌ ಪ್ರಕ್ಷೇಪಾಸ್ತ್ರಗಳನ್ನು ಖರೀದಿ ಸಲು ವಿಶ್ವದ ಅನೇಕ ದೇಶಗಳು ಆಸಕ್ತಿ ತೋರಿವೆ. ಸರಕಾರ ರಕ್ಷಣಾ ವೆಚ್ಚಕ್ಕಾಗಿ ಖರ್ಚು ಮಾಡುತ್ತಿರುವ (ಈ ಬಾರಿಯ ರಕ್ಷಣಾ ಬಜೆಟ್‌ 2,79,305ಕೋಟಿ ರೂ.) ಹಣದಲ್ಲಿ ದೊಡ್ಡ ಭಾಗವನ್ನು
ಶಸ್ತ್ರಾಸ್ತ್ರಗಳಿಗಾಗಿ ಖರ್ಚು ಮಾಡುತ್ತಿದೆ. ಇದುವರೆಗೆ ರಕ್ಷಣೋಪ ಕರಣಗಳಿಗಾಗಿ ವಿದೇಶಗಳ ಮೇಲೆ ಇರುವ ಅತಿಯಾದ ಅವಲಂಬನೆಯನ್ನು ಕಡಿಮೆಗೊಳಿಸುವ ಮತ್ತು ಖಾಸಗಿ ರಂಗಕ್ಕೆ ಪ್ರೋತ್ಸಾಹಿಸುವ ಸರಕಾರದ ನೀತಿಯಿಂದ ರಕ್ಷಣಾ ಕ್ಷೇತ್ರದಲ್ಲಿ ಹೊಸ ಉದ್ಯೋಗ ಸೃಷ್ಟಿಯ ಆಶಾಕಿರಣವೊಂದು ಮೂಡುತ್ತಿದೆ.

ವಿದೇಶಿ ಕಂಪೆನಿಗಳಿಗೆ ರಕ್ಷಣೋಪಕರಣಗಳಿಗೆ ಆರ್ಡರ್‌ ನೀಡುವ ಮೊದಲು ಅವುಗಳನ್ನು ಸಾಧ್ಯವಾದಷ್ಟು ದೇಶದೊಳಗೇ ನಿರ್ಮಿಸಬೇಕೆಂಬ ಸರಕಾರದ ನಿಲುವು ಇನ್ನಷ್ಟು ಕಠಿಣವಾದರೆ ಮುಂದಿನ ವರ್ಷಗಳಲ್ಲಿ ರಕ್ಷಣೋತ್ಪನ್ನ ಕ್ಷೇತ್ರದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಹೆಚ್ಚಳ ಕಾಣಬಹುದು.
ಸರಕಾರಗಳು ಕೃಷಿ ಮತ್ತು ಕೈಗಾರಿಕೆಗಳಿಗೆ ಅಗತ್ಯವಾದ ಪೂರಕ ವಾತಾವರಣ ನಿರ್ಮಿಸುವ ಮೂಲಕ ಉದ್ಯೋಗ ಸೃಷ್ಟಿಸು ವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಬಹುದೇ ಹೊರತು ಸ್ವತಹ ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸುವುದು ಕಷ್ಟಸಾಧ್ಯ. ನೀತಿ ನಿರ್ಮಾತೃಗಳು ಈ ಕುರಿತು ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ನಿರುದ್ಯೋಗ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಸರಕಾರ ಸಾಮಾಜಿಕ ಕಲ್ಯಾಣಕ್ಕಾಗಿ ಮಾಡುವ ವೆಚ್ಚ ದುಂದುವೆಚ್ಚವೆಂದು ಪರಿಗಣಿಸುವುದು ಸರಿಯಲ್ಲವಾದರೂ ಆ ವಿಷಯದಲ್ಲಿ ಸಂತುಲಿತ ದೃಷ್ಟಿಕೋನವನ್ನು ಹೊಂದಬೇಕು ಮತ್ತು ಸೀಮಿತ ಸಂಪನ್ಮೂಲವನ್ನು ದುಡಿಯುವ ಕೈಗಳಿಗೆ ಕೆಲಸ ಕೊಡುವ ಸದುದ್ದೇಶದ ಯೋಜನೆಗಳಿಗೆ ವ್ಯಯಿಸುವಂತಾಗ
ಬೇಕೇ ವಿನಹ ಜನರನ್ನು ಸೋಮಾರಿಯನ್ನಾಗಿಸುವ ಅಗ್ಗದ ವೋಟ್‌ ಬ್ಯಾಂಕ್‌ ಯೋಜನೆಗಳಿಗೆ ವ್ಯಯವಾಗಬಾರದು.

*ಬೈಂದೂರು ಚಂದ್ರಶೇಖರ ನಾವಡ
 

Advertisement

Udayavani is now on Telegram. Click here to join our channel and stay updated with the latest news.

Next