Advertisement

ಪ್ಲಾಸ್ಮಾ ದಾನದಿಂದ ಜೀವವನ್ನು ಉಳಿಸಬಹುದೇ?

11:51 PM May 04, 2021 | Team Udayavani |

ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರು ವುದರ ಜತೆಗೆ ವೈದ್ಯಕೀಯ ಸಂಪನ್ಮೂಲಗಳ ಬೇಡಿಕೆಯೂ ಏರಿಕೆಯಾಗಿದೆ. ಈ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ಲಾಸ್ಮಾ ದಾನದ ಕುರಿತಾಗಿ ಹೆಚ್ಚಿನ ಸಂದೇಶಗಳು ಹರಿದಾಡುತ್ತಿವೆ. ಇದಕ್ಕಾಗಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರೇ ಮುಂದೆ ಬಂದಿದ್ದು, ಕೋವಿಡ್ ನಿಂದ ಚೇತರಿಸಿಕೊಂಡವರು ಪ್ಲಾಸ್ಮಾವನ್ನು ದಾನ ಮಾಡಬೇಕೆಂದು ಜನರಲ್ಲಿ ಮನವಿ ಮಾಡಿದ್ದಾರೆ.

Advertisement

ಪ್ಲಾಸ್ಮಾ ದಾನದಿಂದ ಪ್ರಾಣಾಪಾಯದ ಭೀತಿ ಎದುರಿಸುತ್ತಿರುವ ಕೊರೊನಾ ರೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉಳಿಸಬಹುದು ಎಂದು ವರದಿಗಳು ಹೇಳಿವೆ. ಆದರೆ ಪ್ಲಾಸ್ಮಾ ಚಿಕಿತ್ಸೆಯು ನಿಜವಾಗಿಯೂ ಪರಿಣಾಮಕಾರಿಯೇ? ಗಂಭೀರ ಕೊರೊನಾ ರೋಗಿಗಳ ಜೀವ ಉಳಿಸಲು ಈ ಚಿಕಿತ್ಸೆಯು ಸಹಕಾರಿ ಯಾಗಿದೆಯೇ? ಈ ಎಲ್ಲ ಪ್ರಶ್ನೆಗಳು ಜನರನ್ನು ಕಾಡತೊಡಗಿವೆ. ಪ್ಲಾಸ್ಮಾ ಚಿಕಿತ್ಸೆಯ ಕುರಿತು ಕೆಲವೊಂದು ಮಾಹಿತಿಗಳು ಇಲ್ಲಿವೆ.

ಕಾನ್ವಲ್ಸೆಂಟ್‌ ಪ್ಲಾಸ್ಮಾ ಥೆರಪಿ ಎನ್ನುವುದು ಸೋಂಕಿನಿಂದ ಚೇತರಿಸಿಕೊಳ್ಳುವ ವ್ಯಕ್ತಿಯ ದೇಹದಿಂದ ರಕ್ತವನ್ನು ತೆಗೆದುಕೊಳ್ಳುವ ಒಂದು ವಿಧಾನವಾಗಿದೆ. ರಕ್ತದ ಹಳದಿ ದ್ರವದ ಭಾಗವನ್ನು ಹೊರ ತೆಗೆಯಲಾಗುತ್ತದೆ. ಇದನ್ನು ಸೋಂಕಿತ ರೋಗಿಯ ದೇಹಕ್ಕೆ ನೀಡಲಾಗುತ್ತದೆ. ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಯ ದೇಹದಲ್ಲಿ  ಸೋಂಕಿಗೆ ಪ್ರತೀಕಾಯಗಳು ಸೃಷ್ಟಿಯಾಗಿರುವುದರಿಂದ ಆತ ಗುಣಮುಖನಾಗಿರುತ್ತಾನೆ. ಆ ಪ್ರತೀಕಾಯಗಳನ್ನು ಇನ್ನೊಬ್ಬ ಸೋಂಕಿತನ ದೇಹಕ್ಕೆ ವರ್ಗಾವಣೆ ಮಾಡುವ  ಮೂಲಕ ಆತನನ್ನೂ ಸೋಂಕುಮುಕ್ತನನ್ನಾಗಿಸುವುದೇ ಈ ಚಿಕಿತ್ಸೆಯ ಮರ್ಮ. ಈ ಪ್ರತೀಕಾಯಗಳು ರಕ್ತದೊಂದಿಗೆ ಸೇರಿಕೊಂಡು ಸೋಂಕಿತ ವ್ಯಕ್ತಿಯ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ಸೋಂಕಿತ ವ್ಯಕ್ತಿಯ ಗಂಭೀರ ರೋಗಲಕ್ಷಣಗಳನ್ನು ದುರ್ಬಲಗೊಳಿಸುತ್ತದೆ ಮತ್ತು ರೋಗಿಯ ಜೀವವನ್ನು ಉಳಿಸಲು ನೆರವಾಗುತ್ತದೆ.

ಪ್ಲಾಸ್ಮಾ ಚಿಕಿತ್ಸೆಯಿಂದ ಮರಣ ದರ ಕಡಿಮೆ ಮಾಡಬಹುದೇ? :ವೈದ್ಯಕೀಯ ಅಧ್ಯಯನಗಳ ಪ್ರಕಾರ ಇದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲವಾದರೂ ಕೊರೊನಾ ರೋಗಿಯನ್ನು ಪ್ರಾಣಾ ಪಾಯದಿಂದ ಪಾರು ಮಾಡಬಹುದು ಎಂದು ಕೆಲವೊಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸದ್ಯ ತುರ್ತು ಚಿಕಿತ್ಸೆಯಾಗಿ ಪ್ಲಾಸ್ಮಾ ಚಿಕಿತ್ಸೆಯನ್ನು ಬಳಸಲಾಗುತ್ತಿದೆ. ಮಧ್ಯಮದಿಂದ ತೀವ್ರವಾದ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಲ್ಲಿ ಉತ್ತಮ ಪರಿಣಾಮವನ್ನು ಈ ಚಿಕಿತ್ಸೆ ತೋರಿಸಿದೆ. ಈ ಕಾರಣಕ್ಕಾಗಿ ಇದನ್ನು ದೇಶದ ಅನೇಕ ಆಸ್ಪತ್ರೆಗಳಲ್ಲಿ ಬಳಸಲಾಗುತ್ತಿದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಲಾಗಿದ್ದು ಬಹಳಷ್ಟು ಪರಿಣಾಮಕಾರಿಯಾಗಿದೆ ಮಾತ್ರವಲ್ಲದೆ ಮರಣಾಂತಿಕ ಸ್ಥಿತಿಯಲ್ಲಿದ್ದವರ ಜೀವ ಉಳಿಸುವಲ್ಲಿ ಈ ಚಿಕಿತ್ಸೆ ನೆರವಾಗಿದೆ. ಈ ಕಾರಣದಿಂದಾಗಿ ಪ್ಲಾಸ್ಮಾ ಚಿಕಿತ್ಸೆಗೆ ಬೇಡಿಕೆ ಹೆಚ್ಚಾಗಿದೆ. ಕೊರೊನಾ ಸಂಬಂಧಿತ ಸಾವುಗಳನ್ನು ಕಡಿಮೆ ಮಾಡಲು ಪ್ಲಾಸ್ಮಾ ಚಿಕಿತ್ಸೆಯು ಸಹಾಯ ಮಾಡಿಲ್ಲ ಎಂದು ಈ ಹಿಂದೆ ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ ತಿಳಿಸಿತ್ತು. ಆದಾಗ್ಯೂ ಪ್ಲಾಸ್ಮಾ ಚಿಕಿತ್ಸೆಯ ಮಹತ್ವದ  ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕಾದ ಅಗತ್ಯವಿದೆ.

ಏನು ಮಾಡಬೇಕು ಮತ್ತು ಏನು ಮಾಡಬಾರದು? :

Advertisement

ಪ್ಲಾಸ್ಮಾ ದಾನ ಮಾಡುವವರಿಗೆ ಅವರು ಏನು ಮಾಡಬೇಕು ಮತ್ತು ಏನು ಮಾಡ ಬಾರದು ಎಂದು ಕೇಂದ್ರ ಸರಕಾರ ನಿಯಮಾವಳಿಯನ್ನು ರೂಪಿಸಿದೆ.

ದಾನ ಮಾಡಿದ ನಾಲ್ಕು ತಿಂಗಳವರೆಗೆ ಕೋವಿಡ್ ನೆಗೆಟಿವ್‌ ಪತ್ರ (ಆರ್‌ಟಿ -ಪಿಸಿಆರ್‌ ಪರೀಕ್ಷೆ) ಮತ್ತು ನಿಮ್ಮ ಆಧಾರ್‌ ಕಾರ್ಡ್‌ ಜೆರಾಕ್ಸ್‌ ಪ್ರತೀಯನ್ನು ಇರಿಸಿಕೊಳ್ಳಬೇಕು.

ನೀವು ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲದಿದ್ದರೆ ಮಾತ್ರ ದಾನ ಮಾಡಿ. ನೀವು ರೋಗಲಕ್ಷಣಗಳನ್ನು ಹೊಂದಿದ್ದರೆ ಇವುಗಳಿಂದ ಗುಣಮುಖರಾದ 14 ದಿನಗಳ ಅನಂತರ ನೀವು ದಾನ ಮಾಡಬಹುದು.

ಕೋವಿಡ್  ಲಸಿಕೆ ಪಡೆದ ವ್ಯಕ್ತಿ 28 ದಿನ ಗಳ ವರೆಗೆ ಪ್ಲಾಸ್ಮಾ ದಾನ ಮಾಡಲು ಸಾಧ್ಯವಿಲ್ಲ.

ರಕ್ತದಲ್ಲಿ ಸಾಕಷ್ಟು ಪ್ರತೀಕಾಯಗಳು ಇಲ್ಲದೇ ಇರುವ ವ್ಯಕ್ತಿ ಪ್ಲಾಸ್ಮಾವನ್ನು ದಾನ ಮಾಡಲು ಸಾಧ್ಯವಿಲ್ಲ.

ಅಪಾಯವಿದೆಯೇ?:  ಈವರೆಗೆ ಯಾವುದೇ ಗಂಭೀರ ತೆರನಾದ ಅಪಾಯ ಕಂಡುಬಂದಿಲ್ಲ. ರಿಸೀವರ್‌ ಮತ್ತು ದಾನಿಗಳನ್ನು ಸರಿಯಾಗಿ ಮೌಲ್ಯಮಾಪನ ಮಾಡದಿ ದ್ದರೆ ಕೆಲವು ಅಪಾಯಗಳು ಸಂಭವಿಸುವ ಸಾಧ್ಯತೆಗಳು ಇಲ್ಲದಿಲ್ಲ. ಪ್ಲಾಸ್ಮಾ ಚಿಕಿತ್ಸೆಯ ಅನಂತರ ಅಲರ್ಜಿ ಕಾಣಿಸಿ ಕೊಳ್ಳುವ ಅಪಾಯವಿದೆ. ದಾನಿಯ ದೇಹವನ್ನು ಸರಿಯಾಗಿ ಮೌಲ್ಯಮಾಪನ ಮಾಡಿದರೆ ಇದನ್ನು ತಪ್ಪಿಸ‌ಬಹುದು.

ಯಾರು ದಾನ ಮಾಡಬಹುದು? :

ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರ ಪ್ಲಾಸ್ಮಾ ಚಿಕಿತ್ಸೆಗೆ ಅವಕಾಶ ನೀಡಿದೆ. ಸೋಂಕಿನಿಂದ ಚೇತರಿಸಿಕೊಂಡ 28-30 ದಿನಗಳ ಅನಂತರ ತಮ್ಮ ಪ್ಲಾಸ್ಮಾ ವನ್ನು ದಾನ ಮಾಡಬಹುದು. ಅವರು 18-60 ವರ್ಷ ದವರಾಗಿರಬೇಕು. ಅವರ ದೇಹ ತೂಕವು 50 ಕೆ.ಜಿ. ಅಥವಾ ಹೆಚ್ಚಿನದಾಗಿರಬೇಕು. ಈ ಹಿಂದೆ ಸೋಂಕಿನ ಸಮಯದಲ್ಲಿ ರೋಗಲಕ್ಷಣಗಳನ್ನು ಅನುಭವಿಸಿದವರಿಗೆ ಆದ್ಯತೆ ನೀಡಲಾಗುತ್ತದೆ. ಇವರಲ್ಲಿ ಹೆಚ್ಚಿನ ಪ್ರಮಾಣದ ಆ್ಯಂಟಿ-ಕೊರೊನಾ ಐಜಿಜಿ ಪ್ರತೀಕಾಯಗಳು ಇರುತ್ತವೆ.

ಪರಿಣಾಮಕಾರಿಯೇ? :ಈ ಚಿಕಿತ್ಸೆಯು ಬಹುತೇಕ ಸಂದರ್ಭದಲ್ಲಿ ಕೊರೊನಾ ಸೋಂಕಿತರ ಪ್ರಾಣವನ್ನು ರಕ್ಷಿಸಿದೆ. ಆದರೆ ವೈದ್ಯಕೀಯ ಸಂಶೋಧನೆ ಮತ್ತು ಅಧ್ಯಯನಗಳು ಈ ವಿಚಾರದಲ್ಲಿ ಇನ್ನೂ ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ.  ಪ್ಲಾಸ್ಮಾ ಚಿಕಿತ್ಸೆಯು ವೈದ್ಯಕೀಯವಾಗಿ ಮಾನ್ಯವಾದ ಕಾರ್ಯವಿಧಾನವಾಗಿದೆ. ಆದರೆ ಕೋವಿಡ್  ರೋಗಿಗಳಲ್ಲಿ ಇದು ಎಷ್ಟು ಪರಿಣಾಮಕಾರಿ ಎಂಬ ಬಗ್ಗೆ ಇನ್ನೂ ಗೊಂದಲಗಳಿರುವುದಂತೂ ಸಹಜ. ಸೆಬೊಹೆìಕ್‌ ನ್ಯುಮೋನಿಯಾದ ಆರಂಭಿಕ ಹಂತದಲ್ಲಿ ಪ್ಲಾಸ್ಮಾ ಚಿಕಿತ್ಸೆಯನ್ನು ನೀಡಿದರೆ ಅದು ರೋಗಿಯ ಜೀವ ಉಳಿಸಲು ನೆರವಾಗುತ್ತದೆ ಆರೋಗ್ಯ ತಜ್ಞರು ತಿಳಿಸಿದ್ದಾರೆ. ಅಂದಹಾಗೆ, ವಿಶ್ವ ಆರೋಗ್ಯ ಸಂಸ್ಥೆಯ ಯಾವುದೇ ಅಂತಾರಾಷ್ಟ್ರೀಯ ಸಂಸ್ಥೆ ಈ ಚಿಕಿತ್ಸೆಯನ್ನು ದೃಢೀಕರಿಸಿಲ್ಲ. ಅಮೆರಿಕದಲ್ಲಿ ಅಲ್ಲಿನ ಯುಎಸ್‌-ಎಫ್ಡಿಎ ನಿಯಂತ್ರಕವು ತುರ್ತು ಬಳಕೆಗಾಗಿ ಇದನ್ನು ಅನುಮೋದಿಸಿದೆ. ಆದರೆ ಅದರ ಫ‌ಲಿತಾಂಶಗಳು ಮಾತ್ರ ದೃಢೀಕರಿಸಲ್ಪಟ್ಟಿಲ್ಲ. ಅಂದರೆ ಕೊರೊನಾ ರೋಗಿಗಳ ಮೇಲೆ ಈ ಚಿಕಿತ್ಸೆಯು ಯಶಸ್ವಿಯಾಗುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಆದರೆ ಪ್ಲಾಸ್ಮಾ ಚಿಕಿತ್ಸೆ ತ್ವರಿತ ಚೇತರಿಕೆಗೆ ನೆರವಾಗುತ್ತದೆ ಎಂದು ಅನೇಕ ಅಧ್ಯಯನಗಳು ದೃಢಪಡಿಸಿವೆ.

ವೈದ್ಯರ ಸಲಹೆ ಅಗತ್ಯ :

ಕೋವಿಡ್ ಸೋಂಕು ಪೀಡಿತರು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ತಜ್ಞರು ಮತ್ತು ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆಯಂತೆ ಪ್ಲಾಸ್ಮಾ ಚಿಕಿತ್ಸೆ ಪಡೆಯುವ ಬಗ್ಗೆ  ನಿರ್ಧಾರ ಕೈಗೊಳ್ಳುವುದು ಸೂಕ್ತ. ಇನ್ನು ಪ್ಲಾಸ್ಮಾ ದಾನ ಮಾಡಲಿಚ್ಛಿಸು ವವರು ಕೂಡ ಈ ಬಗ್ಗೆ ಚಿಕಿತ್ಸೆ ಪಡೆದುಕೊಂಡ ವೈದ್ಯರಿಂದ ಸಲಹೆ ಪಡೆದೇ ಮುಂದುವರಿಯುವುದು ಒಳಿತು.

 

Advertisement

Udayavani is now on Telegram. Click here to join our channel and stay updated with the latest news.

Next