ಮಂಗಳೂರು: ಪ್ರಸ್ತುತ ಕಾಸರಗೋಡು ಮತ್ತು ಉಡುಪಿ ಜಿಲ್ಲೆಗಳಲ್ಲಿ ಡೆಂಗ್ಯೂ ತೀವ್ರಗತಿಯಲ್ಲಿ ಹರಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹಲವೆಡೆ ವರದಿಯಾಗುತ್ತಿದೆ.
ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳ ನಿಯಂತ್ರಣದ ಮೂಲಕ ಡೆಂಗ್ಯೂ ನಿಯಂತ್ರಿ ಸುವಲ್ಲಿ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯ. ಡೆಂಗ್ಯೂ ನಿಯಂತ್ರಿಸಲು ಮೇ 16ರಂದು ಜಿಲ್ಲಾದ್ಯಂತ ಒಂದು ತಾಸು ಸೊಳ್ಳೆ ಉತ್ಪತ್ತಿ ತಾಣ ನಾಶಪಡಿಸುವ ಅಭಿಯಾನ ನಡೆಸುವಂತೆ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಜಿಲ್ಲೆಯ ಕೆಲವೆಡೆ ಮಳೆಯಾಗಿದ್ದು, ಡೆಂಗ್ಯೂ ರೋಗವಾಹಕ ಉತ್ಪತ್ತಿಗೆ ಪೂರಕ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಮೇ 16ರ ಬೆಳಗ್ಗೆ 10ರಿಂದ 11ರ ವರೆಗೆ ಒಂದು ತಾಸು ಕಾಲ ಎಲ್ಲ ಸಾರ್ವಜನಿಕರು ತಮ್ಮ ಮನೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣ ನಾಶಪಡಿಸಬೇಕು.
ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳು, ಖಾಸಗಿ ಕಚೇರಿಗಳು, ಉದ್ಯಮಗಳು, ಬ್ಯಾಂಕ್‌ಗಳು, ಶಿಕ್ಷಣ ಸಂಸ್ಥೆಗಳು, ಅಂಗನವಾಡಿಗಳು, ಸಿಬಂದಿ ತಮ್ಮ ಕಚೇರಿಯ ಸುತ್ತಮುತ್ತಲ ಪ್ರದೇಶಗಳ ಒಳಾಂಗಣಗಳಾದ ಹೂವಿನ ಕುಂಡ, ಅದರಡಿಯ ಪ್ಲೇಟ್, ಏರ್ ಕೂಲರ್ ಹಾಗೂ ಹೊರಾಂಗಣದ ಖಾಲಿ ಬಾಟಲಿಗಳು, ಸೀಯಾಳದ ಚಿಪ್ಪು, ಟಯರ್‌ಗಳು ಮತ್ತಿತರ ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸಿ ಸೊಳ್ಳೆ ಉತ್ಪತ್ತಿ ಕಂಡು ಬಂದಲ್ಲಿ ನಾಶಪಡಿಸಬೇಕು ಎಂದು ತಿಳಿಸಿದ್ದಾರೆ.
Related Articles
ಜನರು ವಾರಕ್ಕೊಮ್ಮೆಯಾದರೂ ಮನೆ, ಕಟ್ಟಡಗಳ ಸುತ್ತಮುತ್ತ ಪರಿಶೀಲಿಸಿ ವಿವಿಧ ಪರಿಕರಗಳಲ್ಲಿ ನೀರು ನಿಂತಿದ್ದಲ್ಲಿ ಸೊಳ್ಳೆ ಉತ್ಪತ್ತಿ ಯಾಗದಂತೆ ಜಾಗ್ರತೆ ವಹಿಸಬೇಕು. ಜ್ವರ ಪ್ರಕರಣಗಳು ಕಂಡುಬಂದ ತತ್‌ಕ್ಷಣ ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿಕೊಳುವಂತೆ ಸೂಚಿಸಿದ್ದಾರೆ.