Advertisement

ಬಾವಿಗಳ ಉಳಿಸಲು ವಿವಿಧ ಸಂಘಟನೆಗಳ ಅಭಿಯಾನ

10:22 AM Apr 13, 2018 | |

ಸುರತ್ಕಲ್‌ : ಆಧುನಿಕ ಕಾಲದ ಭರಾಟೆಗೆ ಸಿಲುಕಿ ಕೆರೆಗಳಿದ್ದ ಜಾಗದಲ್ಲಿ ಕಟ್ಟಡಗಳು ಎದ್ದರೆ, ಬಾವಿಗಳು ಪಾಳು ಬಿದ್ದ ಕೃಷಿ ಭೂಮಿಯ ಜತೆಗೆ ಮಣ್ಣು ಪಾಲಾಗುತ್ತಿವೆ. ಮನೆ ಮನೆಗೆ ನಳ್ಳಿ ಸಂಪರ್ಕ ಬಂದ ಬಳಿಕ ಯಾರಿಗೂ ಬೇಡವಾದ ಸರಕಾರಿ ಬಾವಿಗಳು ತ್ಯಾಜ್ಯ ಎಸೆಯುವ ತೊಟ್ಟಿಯಾಗಿವೆ. ಇನ್ನು ಕೆಲವೆಡೆ ನೆಲಸಮವಾಗಿವೆ.

Advertisement

ಸುರತ್ಕಲ್‌ ಸುತ್ತಮುತ್ತ ಪಡ್ರೆ ಕೆರೆ ಸುಮಾರು ನಾಲ್ಕು ಎಕ್ರೆ ಪ್ರದೇಶದಲ್ಲಿದ್ದರೆ, ಕೃಷ್ಣಾಪುರ ಸಹಿತ ವಿವಿಧೆಡೆ ಸುಮಾರು 50 ಸೆಂಟ್‌ಗಿಂತಲೂ ಹೆಚ್ಚಿನ ವಿಸ್ತಾರದ ಕೆರೆಗಳು ಕಾಯಕಲ್ಪಕ್ಕೆ ಕಾಯುತ್ತಿವೆ.

ಮಲಿನವಾಗುತ್ತಿರುವ ಬಾವಿಗಳು
ಪಟ್ಟಣದಲ್ಲಿ, ನಗರಗಳಲ್ಲಿ ಇಂದು ತೆರೆದ ಬಾವಿಗಳು ಒಳಚರಂಡಿಯ ಕಳಪೆ ಕಾಮಗಾರಿಗಳಿಂದಾಗಿ ಮಲೀನ ವಾಗುತ್ತಿದೆ. ಸುರತ್ಕಲ್‌, ಗುಡ್ಡಕೊಪ್ಲ, ಹೊಸಬೆಟ್ಟು, ಕುಳಾಯಿ ಮತ್ತಿತರ ಪ್ರದೇಶಗಳಲ್ಲಿ ಇಂದು ತೆರೆದ
ಬಾವಿಗಳು ಉಪಯೋಗಕ್ಕೆ ಬಾರದೆ ನಳ್ಳಿ ನೀರಿಗೆ ಆಶ್ರಯಿಸುವಂತಾಗಿದೆ.

ಬಾವಿ ಉಳಿಸಿ ಹೋರಾಟ
ಅಂತರ್ಜಲ ದಿನದಿಂದ ದಿನಕ್ಕೆ ಕುಸಿತವಾಗುತ್ತಿರುವ ಆತಂಕದ ನಡುವೆ ಇದೀಗ ಸುರತ್ಕಲ್‌ ಆಸು ಪಾಸಿನ ಸರಕಾರಿ ಬಾವಿಗಳ ಜೀರ್ಣೋದ್ಧಾರಕ್ಕೆ ಇಲ್ಲಿನ ಪರಿಸರ ಪ್ರಿಯರು ಹಾಗೂ ವಿವಿಧ ಸಂಘ -ಸಂಸ್ಥೆಗಳು ಒಗ್ಗೂಡಿ ‘ಬಾವಿಗಳ ಸ್ವತ್ಛತೆ ಮಾಡಿ; ಬಾವಿ ಉಳಿಸಿ’ ಹೋರಾಟಕ್ಕೆ ಅಣಿಯಾಗಿದ್ದಾರೆ. ನವೀಕರಿಸಿ ಉಪಯೋಗಿಸಬಹುದಾದ ಬಾವಿಗಳನ್ನು ಈಗಾಗಲೇ ಗುರುತಿಸಲಾಗಿದೆ.

ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಸಹಕಾರದಲ್ಲಿ ಹಂತಹಂತವಾಗಿ ಅಭಿವೃದ್ಧಿಪಡಿಸಲು ರೋಟರಿ ಕ್ಲಬ್‌, ನಾಗರಿಕ ಸಲಹಾ ಸಮಿತಿ, ಆಪತ್ಬಾಂಧವ ಸಮಾಜ ಸೇವಾ ಸಂಸ್ಥೆ, ಹೊಸಬೆಟ್ಟು ನಾಗರಿಕ ಹಿತರಕ್ಷಣಾ ಸಮಿತಿ, ವಿವಿಧ ಸಂಘ -ಸಂಸ್ಥೆಗಳು ಯೋಜನೆ ರೂಪಿಸಿವೆ.

Advertisement

ಸಮಾನ ಮನಸ್ಕರಿಂದ ಅಭಿಯಾನ
ಸಾಕಷ್ಟು ಆಳವಿರುವ ಆ ಬಾವಿಗಳು ಇಂಗುಗುಂಡಿಯಾಗಿ ಮಾತ್ರವಲ್ಲದೆ ಶುದ್ಧ ನೀರನ್ನು ಒದಗಿಸುವುದರಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸಲಿವೆ. ಆ ಬಾವಿಗಳನ್ನು ಶುದ್ಧಗೊಳಿಸಿದರೆ ಸದುಪಯೋಗ ಸಾಧ್ಯ. ಈ ನಿಟ್ಟಿನಲ್ಲಿ ಸುರತ್ಕಲ್‌ ಪರಿಸರದ ಹಲವಾರು ಸೇವಾ ಸಂಸ್ಥೆಗಳ ನೇತೃತ್ವದಲ್ಲಿ ಅಭಿಯಾನಕೈಗೊಳ್ಳಲು ಯೋಜನೆ ರೂಪಿಸುವ ಉದ್ದೇಶದಿಂದ ಸಮಾನ ಮನಸ್ಕರೊಡನೆ ಚರ್ಚಿಸಲಾಗಿದೆ.
– ಉಮೇಶ್‌ ದೇವಾಡಿಗ ಇಡ್ಯಾ, ಅಧ್ಯಕ್ಷ,
ಆಪತ್ಬಾಂಧವ ಸಮಾಜ ಸೇವಾ ಸಂಸ್ಥೆ

ಬೇಸಗೆಯಲ್ಲೂ ನೀರು
ಮಳೆನೀರನ್ನು ತಡೆಹಿಡಿದು ಅಂತರ್ಜಲವಾಗಿ ಪರಿವರ್ತಿಸುವಲ್ಲಿ ಸಾಂಪ್ರದಾಯಿಕ ತೆರೆದ ಬಾವಿಗಳು ಮಹತ್ತರ ಪಾತ್ರವನ್ನು ವಹಿಸುತ್ತವೆ. ಸುರತ್ಕಲ್‌ ಪರಿಸರದ ಹಲವಾರು ಬಾವಿಗಳು ಈ ಹಿಂದೆ ಸಮೃದ್ಧ ನೀರನ್ನು ಹೊಂದಿದ್ದರೂ ಕಾಲಕ್ರಮೇಣ ನಿರುಪಯೋಗಿಯಾಗಿದ್ದು, ಕಸಕೊಚ್ಚೆಗಳಿಂದ ತುಂಬಿಕೊಂಡಿರುವುದನ್ನು ಕಾಣಬಹುದು. ಅವುಗಳನ್ನು ಶುಚಿಗೊಳಿಸಿದರೆ ಸುರತ್ಕಲ್‌ ಪರಿಸರವಿಡೀ ಬೇಸಗೆಯಲ್ಲಿ ನೀರಿನ ಅಭಾವ ಉಂಟಾಗದಂತೆ ಮಾಡಲು ಸಾಧ್ಯ.
– ಪ್ರೊ| ರಾಜ್‌ಮೋಹನ್‌ ರಾವ್‌, ಸಂಚಾಲಕ, ನಾಗರಿಕ ಸಲಹಾ ಸಮಿತಿ

ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next