Advertisement

ಅಭಿಯಾನದ ಪ್ರೇರಣೆ: ಹಲವಡೆ ಮಳೆಕೊಯ್ಲು ಅಳವಡಿಕೆ, ಕಾರ್ಯಾಗಾರ

12:17 AM Jul 31, 2019 | Team Udayavani |

ಮಹಾನಗರ: ಉದಯವಾಣಿಯ ಮನೆ ಮನೆಗೆ ಮಳೆಕೊಯ್ಲು ಅಭಿಯಾನವು ಜಿಲ್ಲೆಯಾದ್ಯಂತ ನೀರಿನ ಬಗ್ಗೆ ಜನರಲ್ಲಿ ಸಾಕ್ಷರತೆ ಮೂಡಿಸುತ್ತಿದ್ದು, ಮಳೆ ನೀರನ್ನು ಹಿಡಿದಿಟ್ಟು ಬಳಸುವ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಇದಕ್ಕೆ ಪೂರಕ ಸ್ಪಂದನೆ ನೀಡುತ್ತಿರುವ ವಿವಿಧ ಸಂಘ – ಸಂಸ್ಥೆಗಳು ಪತ್ರಿಕೆಯೊಂದಿಗೆ ಕೈ ಜೋಡಿಸುತ್ತಿದೆ.

Advertisement

ಪತ್ರಿಕೆ ಆರಂಭಿಸಿದ ಅಭಿಯಾನದಿಂದ ಪ್ರೇರಣೆಗೊಂಡು ಹಲವಾರು ಮಂದಿ ಮಳೆಕೊಯ್ಲು ಅಳವಡಿಸಿಕೊಳ್ಳುತ್ತಿದ್ದಾರೆ. ಮಂಗಳವಾರ ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಳೆಕೊಯ್ಲು ಕುರಿತಂತೆ ರಾಜ್ಯಮಟ್ಟದ ಕಾರ್ಯಾಗಾರ ನಡೆಯಿತು. ಕಾರ್ಯಾಗಾರದಲ್ಲಿ ಶಿಕ್ಷಕರು, ನಾಗರಿಕರು ಸಹಿತ ಹಲವಾರು ಮಂದಿ ಮಾಹಿತಿ ಪಡೆದುಕೊಂಡರು.

ಉಪನ್ಯಾಸ
ಬುಧವಾರ ಸಂಜೆ 6 ಗಂಟೆಗೆ ಮಂಗಳೂರು ಮ್ಯಾನೇಜ್‌ಮೆಂಟ್
ಆಸೋಸಿಯೇಶನ್‌ ವತಿಯಿಂದ ಎಸ್‌ಡಿಎಂ ಸ್ನಾತಕೋತ್ತರ ಉದ್ಯಮಾಡಳಿತ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಸಹಯೋಗದೊಂದಿಗೆ ಮಳೆಕೊಯ್ಲು ಉಪನ್ಯಾಸ ಎಸ್‌ಡಿಎಂ ಎಂಬಿಎ ಹಾಲ್ನಲ್ಲಿ ನಡೆಯಲಿದೆ. ಇದರೊಂದಿಗೆ ಸೈಂಟ್ ಆ್ಯಗ್ನೆಸ್‌ ಕಾಲೇಜು ಉದಯವಾಣಿ ಸಹಯೋಗದೊಂದಿಗೆ ಬೆಳಗ್ಗೆ 11.15ಕ್ಕೆ ಕಾಲೇಜಿನಲ್ಲಿ ಮಳೆಕೊಯ್ಲು ಅರಿವು ಕಾರ್ಯಕ್ರಮ ಆಯೋಜಿಸಿದೆ.

ಅಭಿಯಾನದ ಪ್ರೇರಣೆಯಿಂದ ಮಳೆಕೊಯ್ಲು ಅಳವಡಿಕೆ
ಬಿಜೈನ ಕದ್ರಿಕಂಬಳ ರಸ್ತೆಯ ಉಮೇಶ್‌ ಶೆಣೈ ಮತ್ತು ಚಂದ್ರಕಲಾ ಶೆಣೈ ದಂಪತಿ ಕೆಲವು ದಿನಗಳ ಹಿಂದೆ ತಮ್ಮ ಮನೆಯಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಅಳವಡಿಸಿದ್ದಾರೆ.

ಈ ವರ್ಷ ಬೇಸಗೆಯಲ್ಲಿ ಇವರ ಮನೆ ಬಾವಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿತ್ತು. ಇದ್ದ ಸ್ವಲ್ಪ ನೀರು ಕೆಂಬಣ್ಣದಿಂದ ಕೂಡಿ, ಕುಡಿಯುವ ಉದ್ದೇಶಕ್ಕೆ ಬಳಕೆ ಮಾಡಲು ಸಾಧ್ಯವಾಗಲಿಲ್ಲ. ಇದೇ ಸಮಯ ಉದಯವಾಣಿ ಸುದಿನದಲ್ಲಿ ಮನೆಮನೆಗೆ ಮಳೆಕೊಯ್ಲು ಅಭಿಯಾನವನ್ನು ಗಮನಿಸಿ, ತಮ್ಮ ಮನೆಯಲ್ಲಿಯೂ ಈ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಇದೀಗ ಬಾವಿ ತುಂಬಾ ನೀರಿದೆ. ಮನೆಯ ಮೇಲ್ಛಾವಣಿಯಿಂದ ಬಿದ್ದ ನೀರನ್ನು ಪೈಪ್‌ ಮುಖೇನ ಬಾವಿಗೆ ಸಂಪರ್ಕ ಕಲ್ಪಿಸಿದ್ದಾರೆ. ಬಾವಿ ಬಳಿ ಫಿಲ್ಟರ್‌ ಅಳವಡಿಸಿದ್ದು, ಶುದ್ಧ ನೀರು ಬಾವಿಗೆ ಬೀಳುತ್ತಿದೆ.

Advertisement

ಶರವು ದೇವಸ್ಥಾನದ ಬಾವಿಗೂ ಮಳೆಕೊಯ್ಲು

ನಗರದ ಶರವು ಮಹಾಗಣಪತಿ ದೇವಸ್ಥಾನ ರಸ್ತೆಯಲ್ಲಿರುವ ಉಮಾಮಹೇಶ್ವರ ದೇವಸ್ಥಾನದಲ್ಲಿ ಬಾವಿಗೆ ಮಳೆಕೊಯ್ಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಇಲ್ಲಿ ಒಂದು ಸಣ್ಣ ಬಾವಿಯಿಂದ ಮೂರು ಬಾವಿಗೆ ಸಂಪರ್ಕ ಇದೆ. ಛಾವಣಿ ನೀರನ್ನು ಫಿಲ್ಟರ್‌ ವ್ಯವಸ್ಥೆ ಮಾಡಿ ಬಾವಿಗೆ ಬಿಡಲಾಗಿದೆ. ಸುಮಾರು ಒಂದು ತಿಂಗಳ ಹಿಂದೆ ಬಾವಿಯಗೆ ಈ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ದೇವಸ್ಥಾನದಲ್ಲಿ ನೀರಿಗೆ ಸಮಸ್ಯೆ ಇಲ್ಲ. ಆದರೆ, ‘ಉದಯವಾಣಿ’ ಮಳೆಕೊಯ್ಲು ಅಭಿಯಾನ ನೋಡಿದ ಬಳಿಕ ಮಳೆಕೊಯ್ಲು ವ್ಯವಸ್ಥೆ ಮಾಡಬೇಕೆಂಬ ಇಚ್ಛೆಯಾಯಿತು. ಮಳೆಕೊಯ್ಲು ವ್ಯವಸ್ಥೆಯಿಂದ ಹೆಚ್ಚು ನೀರು ಲಾಭವಾಗಲಿದೆ’ ಎನ್ನುತ್ತಾರೆ ಉಮಾಮಹೇಶ್ವರ ದೇವಸ್ಥಾನದ ವ್ಯವಸ್ಥಾಪಕ ನಿರಂಜನ ರಾವ್‌.

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಈಗ ಕಾರ್ಯೋನ್ಮುಖರಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿದ್ದಾರೆ. ‘ಮನೆ ಮನೆಗೆ ಮಳೆಕೊಯ್ಲು’ ಅಭಿಯಾನದಿಂದ ಪ್ರೇರಿತರಾಗಿ ನೀವೂ ನಿಮ್ಮ ಮನೆಗಳಲ್ಲಿ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡಿದ್ದರೆ ಫೋಟೋ ಸಮೇತ ನಮಗೆ ವಿವರವನ್ನು ವಾಟ್ಸಪ್‌ ಮಾಡಿ. ಅವುಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 9900567000

 

Advertisement

Udayavani is now on Telegram. Click here to join our channel and stay updated with the latest news.

Next