ವಾಡಿ: ಲೋಕಸಭೆ ಚುನಾವಣೆ ಕಾವೇರಿದ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸುಭಾಷ ರಾಠೊಡ ಹಾಗೂ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಅವರ ಮೇಲೆ ತಾಂಡಾ ಜನರು ಹಲ್ಲೆ ನಡೆಸಿರುವ ಘಟನೆ ಚಿತ್ತಾಪುರ ತಾಲೂಕಿನ ಕುಂಬಾರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಸುಭಾಷ ರಾಠೊಡ, ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಜತೆಯಾಗಿ ಕಲಬುರಗಿ-ಯಾದಗಿರಿ ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಸೋಮ್ಲಾ ನಾಯಕ ತಾಂಡಾಕ್ಕೆ ಕಾರಿನಲ್ಲಿ ಹೋಗುತ್ತಿದ್ದರು.
ವಿಷಯ ತಿಳಿದು ಕುಂಬಾರಹಳ್ಳಿ ಹೆದ್ದಾರಿ ಮೇಲೆ ಜಮಾಯಿಸಿದ್ದ ಬಂಜಾರಾ ಸಮುದಾಯದ ಜನರು ಕಾರು ತಡೆದು ಆಕ್ರೋಶ ವ್ಯಕ್ತಪಡಿಸಿದರು. ನಂತರ ಕಾರಿನೊಳಗಿದ್ದ ಸುಭಾಷ ರಾಠೊಡ ಮತ್ತು ಪರಮೇಶ್ವರ ನಾಯ್ಕ ಅವರನ್ನು ಎಳೆದಾಡಿ ಹಲ್ಲೆ ನಡೆಸಿದರು.
ಸುಭಾಷ ರಾಠೊಡ ವಿರುದ್ಧ ಘೊಷಣೆ ಕೂಗುತ್ತಲೇ ಕಾರಿನ ಗಾಜು ಪುಡಿಪುಡಿ ಮಾಡಿ, “ಇಷ್ಟು ದಿನ ಬಿಜೆಪಿಯಲ್ಲಿದ್ದು ಈಗ ಕಾಂಗ್ರೆಸ್ ಪರ ಪ್ರಚಾರಕ್ಕೆ ಬಂದಿದ್ದೀರಿ. ಬಂಜಾರಾ ಸಮಾಜಕ್ಕೆ ಮೋಸ ಮಾಡಿದ್ದೀರಿ. ತಾಂಡಾಗಳಲ್ಲಿ ಕಾಂಗ್ರೆಸ್ ಪ್ರಚಾರ ಮಾಡಲು ಬಿಡುವುದಿಲ್ಲ.
ಬಿಜೆಪಿಯಿಂದ ನಮ್ಮ ಸಮಾಜದ ಉಮೇಶ ಜಾಧವ ನಿಂತಿದ್ದಾರೆ. ಅವರಿಗೆ ವಿರುದ್ಧವಾಗಿ ಬೇರೆ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಗೆದ್ದರೆ ನಾವು ಸುಮ್ಮನಿರಲ್ಲ. ನಿಮಗೆ ಬುದ್ಧಿ ಕಲಿಸಬೇಕಾಗುತ್ತದೆ’ ಎಂದು ಬೆದರಿಕೆ ಹಾಕಿದರು. ಕೆಲಕಾಲ ಉದ್ರಿಕ್ತ ವಾತಾವರಣ ಸೃಷ್ಟಿಯಾಗಿತ್ತು.
ಸ್ಥಳಕ್ಕೆ ಭೇಟಿ ನೀಡಿದ ವಾಡಿ ಠಾಣೆ ಪೊಲೀಸರು, ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಸುಭಾಷ ರಾಠೊಡ ಹಾಗೂ ಶಾಸಕ ಪಿ.ಟಿ.ಪರಮೇಶ್ವರ ಅವರು ಪೊಲೀಸರ ಬೆಂಗಾವಲಿನಲ್ಲಿ ಪೂರ್ವ ನಿಗದಿತ ಸೋಮ್ಲಾ ನಾಯಕ ತಾಂಡಾ ಸೇರಿ ಯಾಗಾಪುರ ವಲಯದ ವಿವಿಧ ತಾಂಡಾಗಳಿಗೆ ತೆರಳಿ ಕಾಂಗ್ರೆಸ್ ಪರ ಚುನಾವಣಾ ಪ್ರಚಾರ ಮುಂದುವರಿಸಿದರು.
ಈ ಕುರಿತು ಮೂವರನ್ನು ವಶಕ್ಕೆ ಪಡೆದಿರುವ ಪಿಎಸ್‌ಐ ವಿಜಯಕುಮಾರ ಭಾವಗಿ, ಡಿವೈಎಸ್‌ಪಿ ಕೆ.ಬಸವರಾಜ ಮಾರ್ಗದರ್ಶನದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.