Advertisement

ಒಂಟೆ, ಇಲಿ ಮತ್ತು ಪುಟ್ಟಿ!

07:30 AM Apr 12, 2018 | |

ಪುಟ್ಟಿ ಶಾಲೆಯಿಂದ ಮನೆಗೆ ವಾಪಸ್ಸಾಗುತ್ತಿದ್ದಳು. ದಾರಿ ಮಧ್ಯ ಒಂದು ಕಾಡನ್ನು ದಾಟಿ ಬರಬೇಕಿತ್ತು. ಮಧ್ಯಾಹ್ನ ಊಟ ಮಾಡದೇ ಇದ್ದುದರಿಂದ ಪುಟ್ಟಿ ನಿಶ್ಯಕ್ತಿಯಿಂದ ಬಳಲಿದ್ದಳು. ಕಾಡನ್ನು ಪ್ರವೇಶಿಸುತ್ತಿದ್ದಂತೆ ಅವಳಿಗೆ ತಲೆಸುತ್ತು ಬಂದು ವಿಶ್ರಾಂತಿ ಪಡೆಯಲು ಮರದ ಕೆಳಗೆ ಒರಗಿದಳು. ಅದೇ ದಾರಿಯಲ್ಲಿ ನಡೆದು ಬರುತ್ತಿದ್ದ ನರಿಯಣ್ಣ ಪುಟ್ಟಿಯನ್ನು ನೋಡಿತು. ಬೆಳಗ್ಗಿನಿಂದ ಬೇಟೆ ಸಿಗದೆ ನರಿಯಣ್ಣ ಹಸಿದಿದ್ದ. ಈಗ ಮರದ ಕೆಳಗೆ ಒರಗಿದ್ದ ಪುಟ್ಟಿಯನ್ನು ನೋಡಿ ಅದಕ್ಕೆ ಹೊಟ್ಟೆ ತುಂಬಿದಷ್ಟು ಸಂತಸವಾಯಿತು. ಹೇಗಾದರೂ ಮಾಡಿ ಪುಟ್ಟಿಯನ್ನು ಅಲ್ಲಿಂದ ಹೊತ್ತೂಯ್ಯಲು ಕುತಂತ್ರ ರೂಪಿಸಿತು. ಪುಟ್ಟಿ ನಿದ್ದೆ ಹೋಗುವುದನ್ನೇ ಕಾದು, ನಂತರ ತಳ್ಳು ಗಾಡಿಯೊಂದರಲ್ಲಿ ಪುಟ್ಟಿಗೆ ಎಚ್ಚರವಾಗದಂತೆ ಸಾಗಿಸಿತು. 


ಪುಟ್ಟಿಗೆ ಎಚ್ಚರವಾದಾಗ ಅವಳ ಕೈಗಳು ಹಗ್ಗದಿಂದ ಕಟ್ಟಲ್ಪಟ್ಟಿದ್ದವು. ಸುತ್ತಲೂ ಸೂರ್ಯನ ನೆರಳೇ ಬೀಳದಷ್ಟು ದಟ್ಟವಾದ ಕಾಡು. ಯಾರೂ ಕಾಣಲಿಲ್ಲ. ಎರಡು ದನಿಗಳು ಮಾತ್ರ ಕಿವಿಗೆ ಬೀಳುತ್ತಿದ್ದವು. ಯಾರೆಂದು ನೋಡಿದರೆ ಒಂಟೆ ಮತ್ತು ಇಲಿ ಜಗಳದಲ್ಲಿ ಮುಳುಗಿದ್ದವು. ಅವರ ಜಗಳವನ್ನು ಕೇಳಿ ರೋಸಿ ಹೋದ ಪುಟ್ಟಿ ಅವೆರಡರ ನಡುವೆ ಮಧ್ಯಸ್ತಿಕೆ ವಹಿಸಲು ನಿರ್ಧರಿಸಿದಳು. ಅವೆರಡನ್ನೂ ಹತ್ತಿರಕ್ಕೆ ಕರೆದಳು. 

Advertisement

ಒಂಟೆ ಮತ್ತು ಇಲಿ ನೀರಿಗಾಗಿ ಕಿತ್ತಾಡಿಕೊಳ್ಳು ತ್ತಿದ್ದುದನ್ನು ಕಂಡು ಪುಟ್ಟಿಗೆ ಬೇಸರವಾಯಿತು. ಮನುಷ್ಯರು ಮಾತ್ರ ನೀರಿಗಾಗಿ ಹೊಡೆದಾಡಿಕೊಳ್ಳುತ್ತಾರೆ ಎಂದುಕೊಂಡಿದ್ದಳು ಪುಟ್ಟಿ. ಒಂಟೆ ಮತ್ತು ಇಲಿ ದೂರನ್ನು ಅವಳ ಬಳಿ ಹೇಳಿಕೊಂಡವು. ಆಗಿದ್ದಿಷ್ಟು. ಕಾಡಿನಲ್ಲಿ ಭೀಕರ ಬರಗಾಲ ಬಂದಿತು. ಕೆರೆ ಕೊಳಗಳಲ್ಲಿ ನೀರೇ ಇರಲಿಲ್ಲ. ಇಂಥ ಸಮಯದಲ್ಲಿ ಒಂಟೆಗೆ ಒಂದು ಬಕೆಟ್‌ ಸಿಕ್ಕಿತ್ತು. ಅಕಾಲಿಕ ಮಳೆ ಸುರಿದರೆ ನೀರು ಹಿಡಿದಿಟ್ಟುಕೊಳ್ಳೋಣ ಎಂದು ಗೆಳೆಯನಾಗಿದ್ದ ಇಲಿ ಹೇಳಿತು. ಒಂಟೆಗೆ ಇಲಿಯ ಉಪಾಯ ಇಷ್ಟವಾಯಿತು. ಇಲಿಯ ಮಾತಿನಂತೆ ಒಂದು ರಾತ್ರಿ ಮಳೆ ಸುರಿದೇ ಬಿಟ್ಟಿತು. ಆದರೆ ಬೆಳಗ್ಗೆ ಕಳೆಯುವಷ್ಟರಲ್ಲಿ ನೆಲಕ್ಕೆ ಬಿದ್ದ ನೀರೆಲ್ಲವೂ ಇಂಗಿ ಹೋಗಿದ್ದವು. ಆದರೆ ಒಂಟೆಯ ಬಕೆಟ್‌ ಮಾತ್ರ ತುಂಬಿತ್ತು. ಅವೆರಡರ ಸಂತೋಷಕ್ಕೆ ಪಾರವೇ ಇರಲಿಲ್ಲ. ನೀರನ್ನು ಹಂಚಿಕೊಳ್ಳಲು ನಿರ್ಧರಿಸಿದವು. 

ಮಾರನೇ ದಿನ ಸಂಜೆ ನೋಡಿದಾಗ ಬಕೆಟ್‌ನಲ್ಲಿದ್ದ ನೀರಿನಲ್ಲಿ ಅರ್ಧ ಖಾಲಿಯಾಗಿತ್ತು. ತಾನಿಲ್ಲದ ವೇಳೆ ನೀರನ್ನು ಕುಡಿದಿದ್ದೀಯ ಎಂದು ಇಲಿ ಒಂಟೆಯ ಮೇಲೆ ದೂರು ಹೊರಿಸಿತು. ಆದರೆ ಒಂಟೆ ಇದನ್ನು ನಿರಾಕರಿಸಿತು. ಈ ಕಾರಣಕ್ಕೇ ಜಗಳ ಏರ್ಪಟ್ಟಿತ್ತು. ಪುಟ್ಟಿಗೆ ಎಲ್ಲವೂ ಅರ್ಥವಾಯಿತು. ಅವಳು “ನೀರು ಕುಡಿದಿದ್ದು ಒಂಟೆ ಅಲ್ಲ. ನನಗೆ ಗೊತ್ತಾಯ್ತು ಯಾರು ಅಂತ’ ಎಂದಳು. ಯಾರು ಎಂದು ಅವೆರಡೂ ಆಶ್ಚರ್ಯದಿಂದ ಕೇಳಿದಾಗ “ಸೂರ್ಯನನ್ನು ತೋರಿಸಿದಳು’. ಅವೆರಡಕ್ಕೂ ನಂಬಿಕೆಯೇ ಬರಲಿಲ್ಲ. “ನೀರನ್ನು ಬಿಸಿಲಲ್ಲಿ ಇಟ್ಟಿದ್ದರಿಂದ ಅರ್ಧ ಬಕೆಟ್‌ ನೀರು ಆವಿಯಾಗಿದೆ. ಹೀಗೆಯೇ ನೀವು ಜಗಳ ಮಾಡುತ್ತಿದ್ದರೆ ಉಳಿದ ಅರ್ಧ ಬಕೆಟ್‌ ನೀರು ಕೂಡಾ ಖಾಲಿಯಾಗುತ್ತೆ’ ಎಂದು ಎಚ್ಚರಿಸಿದಳು.  

ಇಲಿ ಮತ್ತು ಒಂಟೆಗೆ ತಮ್ಮ ತಪ್ಪಿನ ಅರಿವಾಯಿತು. ಒಂದನ್ನೊಂದು ಕ್ಷಮೆ ಕೋರಿಕೊಂಡವು. ಪುಟ್ಟಿಯ ಜಾಣ್ಮೆಯನ್ನು ಕೊಂಡಾಡಿದವು. ನರಿ ವಾಪಸ್‌ ಬರುವ ಮುನ್ನ ಪುಟ್ಟಿಯನ್ನು ಹೇಗಾದರೂ ಮಾಡಿ ಬಚಾವ್‌ ಮಾಡಲೇಬೇಕಿತ್ತು. ಇಲಿ ಪುಟ್ಟಿಯನ್ನು ಕಟ್ಟಿ ಹಾಕಿದ್ದ ಹಾಕಿದ್ದ ಹಗ್ಗವನ್ನು ಕಚ್ಚಿ ಕಚ್ಚಿ ತುಂಡರಿಸಿತು. ಒಂಟೆ ಪುಟ್ಟಿಯನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡಿತು. ದಾರಿಯಲ್ಲಿ ನರಿ ಎದುರಾಗಿ ಪ್ರತಿರೋಧ ಒಡ್ಡಿತು. ಆದರೆ ಮೇಲೆ ಕೂತಿದ್ದ ಕಾರಣ ನರಿಗೆ ಏನೂ ಮಾಡಲಾಗಲಿಲ್ಲ. ಒಂಟೆ ಪುಟ್ಟಿಯನ್ನು ಕಾಡಿನ ಅಂಚಿಗೆ ತಲುಪಿಸಿತು. ಇಲಿ ಮತ್ತು ಒಂಟೆ ಇಬ್ಬರಿಗೂ ಧನ್ಯವಾದವನ್ನು ಅರ್ಪಿಸಿ ಪುಟ್ಟಿ ಮನೆಗೆ ವಾಪಸ್ಸಾದಳು.

ಎಂ.ಆರ್‌. ಮನೋಜ್‌ ಗುಪ್ತ, ಚಿಕ್ಕಬಳ್ಳಾಪುರ

Advertisement
Advertisement

Udayavani is now on Telegram. Click here to join our channel and stay updated with the latest news.

Next