Advertisement

ನಿಂಜೊತೆ ಅಪ್ಪನನ್ನೂ ಕರೆದುಕೊಂಡು ಬಾ!

06:51 PM Mar 25, 2019 | mahesh |

ನಿನ್ನ ಅಪ್ಪ ಪೊಲೀಸ್‌ ಇನ್ಸ್‌ಪೆಕ್ಟರ್‌ ಅಂತ ಮೊನ್ನೆಯಷ್ಟೇ ಗೊತ್ತಾಗಿ, ಒಳಗೊಳಗೆ ಹೆದರಿಕೆಯಾಯ್ತು. ನಿನ್ನ ಸುದ್ದಿಯೇ ಬೇಡಪ್ಪಾ ಅಂದುಕೊಂಡೆ. ಆದರೆ, ಪ್ರತಿದಿನವೂ ನೀನು ಕಣ್ಣೆದುರೇ ಸುಳಿಯುವಾಗ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ನನ್ನಿಂದಾಗುತ್ತಿರಲಿಲ್ಲ. ನಿನ್ನ ಮೇಲೆ ಪ್ರೀತಿಯಾಗಿದೆ ಅಂತ ಹೇಳದೇ ಇದ್ದರೆ ತಪ್ಪಾದೀತು.

Advertisement

ಹಾಯ್‌ ಮಧು,
ಈ ಪತ್ರವನ್ನು ನಿನ್ನ ಕೈಗೆ ಕೊಟ್ಟ ತಕ್ಷಣ ನೀನು ಖಂಡಿತ ಹೆದರಿಕೊಳ್ತೀಯ ಮತ್ತು ಈ ವಿಚಾರವನ್ನು ನಿನ್ನ ಪೊಲೀಸ್‌ ಅಪ್ಪನಿಗೆ ಹೇಳೇ ಹೇಳ್ತೀಯ ಅಂತ ನಂಗೆ ಚೆನ್ನಾಗಿ ಗೊತ್ತು. ನಾಳೆ ನಿಮ್ಮಪ್ಪ ಬಂದು ನನ್ನನ್ನು ತರಾಟೆಗೆ ತೆಗೆದುಕೊಳ್ಳಲೂಬಹುದು. ಪೊಲೀಸ್‌ ಮಗಳಿಗೇ ಲೆಟರ್‌ ಕೊಡುವಷ್ಟು ಧೈರ್ಯವಂತನಾ ನೀನು ಅಂತ ಕೇಳಬೇಡ. ನಿಜ ಹೇಳಬೇಕೆಂದರೆ, ನನಗೂ ತುಂಬಾನೇ ಭಯವಾಗ್ತಿದೆ. ಆದರೂ ಧೈರ್ಯ ಮಾಡಿ ಪತ್ರ ಬರೆದು, ನಿನ್ನ ಕೈಗಿಟ್ಟಿದ್ದೇನೆ. ಯಾಕೆ ಗೊತ್ತಾ? ನೀನಂದ್ರೆ ನನಗೆ ತುಂಬಾ ತುಂಬಾ ಇಷ್ಟ, ಅದಕ್ಕೆ.

ನೀನು ಪ್ರತಿ ದಿನ ಆಫೀಸಿಗೆ ಹೋಗುವ ದಾರಿಯಲ್ಲೇ ನಾನೂ ಆಫೀಸಿಗೆ ಹೋಗೋದು. ನೀನು ಕೆಲಸಕ್ಕೆ ಸೇರಿ ಇವತ್ತಿಗೆ ಸರಿಯಾಗಿ ನಾಲ್ಕು ತಿಂಗಳಾಗಿದೆ ಅಲ್ವಾ? ಯಾಕಂದ್ರೆ, ನಿನ್ನನ್ನು ಭೇಟಿಯಾದ ಆ ದಿನ ನನಗಿನ್ನೂ ಚೆನ್ನಾಗಿ ನೆನಪಿದೆ. ಆವತ್ತು ತನ್ನಷ್ಟಕ್ಕೆ ತಾನು ಹೋಗುತ್ತಿದ್ದವನನ್ನು “ಎಕ್ಸ್‌ಕ್ಯೂಸ್‌ ಮಿ ಸರ್‌’ ಎಂಬ ಇಂಪಾದ ಧ್ವನಿ ತಡೆದು ನಿಲ್ಲಿಸಿ, ಹಿಂತಿರುಗಿ ನೋಡುವಂತೆ ಮಾಡಿತ್ತು. ನೋಡಿದರೆ ಗಾಢ ನೀಲಿ ಬಣ್ಣದ, ಪೀಚ್‌ ಕಲರ್‌ನ ಬಾರ್ಡರ್‌ ಇರುವ ಚೂಡಿದಾರ ಧರಿಸಿದ್ದ ನೀನು ಅಳುಕುತ್ತಲೇ ನನ್ನತ್ತ ನಡೆದು ಬಂದು- “ಸರ್‌, ಹೇಮಂತಪುರಕ್ಕೆ ಹೋಗುವ ಬಸ್‌ ಎಷ್ಟು ಹೊತ್ತಿಗೆ ಬರುತ್ತೆ?’ ಅಂತ ಕೇಳಿದ್ದೆ.

ನಾನೂ ನಿತ್ತ ಅಲ್ಲಿಗೆ ಹೋಗುವವನೇ ಆದ್ದರಿಂದ, ವಾಚ್‌ ನೋಡಿಕೊಂಡು, “ಐದು ನಿಮಿಷದಲ್ಲಿ ಬಸ್ಸು ಬರುತ್ತೆ’ ಅಂತ ಉತ್ತರಿಸಿದ್ದೆ. ಮೆಲುದನಿಯಲ್ಲಿ “ಥ್ಯಾಂಕ್ಯೂ ಸರ್‌’ ಅಂದವಳ ಅಂದಕ್ಕೆ ಮಾರು ಹೋಗಿದ್ದೆ. ಅದೇನು ಅದೃಷ್ಟವೋ, ಬಸ್‌ನಲ್ಲಿ ನೀನು ನನ್ನ ಪಕ್ಕವೇ ಬಂದು ಕುಳಿತಿದ್ದೆ. ಕಣ್ಣಿಗೆ ಕಣ್ಣು ಸೇರಿದ್ದವು. ನೀನು ಪರಿಚಯದ ನಗು ನಕ್ಕಿದ್ದೆ. ನಾನೂ ನಕ್ಕೆ. ಮತ್ತೆ ಮಾತನಾಡಿಸುವ ಧೈರ್ಯವಾಗಲಿಲ್ಲ.

ಅಂದಿನಿಂದ ನಿನ್ನೆಡೆಗೆ ಅದೇನೋ ಹೇಳಲಾಗದ ಸೆಳೆತ. ದಿನವೂ ನೀನು ಬಸ್‌ನಲ್ಲಿ ಸಿಗಬೇಕು, ನನ್ನ ಪಕ್ಕದಲ್ಲೇ ಕುಳಿತುಕೊಳ್ಳಬೇಕು ಎಂಬ ಆಸೆ. ನಾಲ್ಕು ತಿಂಗಳಿನಿಂದ ನೀನು ದಿನವೂ ಸಿಗುತ್ತಿದ್ದೀಯಾ. ಆದರೆ, ಪರಿಚಯದ ನಗು ನಕ್ಕಿದ್ದು ಲೆಕ್ಕ ಮಾಡಿ 17 ಬಾರಿ ಮಾತ್ರ. ಅವತ್ತೆಲ್ಲಾ ಎಷ್ಟು ಖುಷಿಯಾಗಿರಿ¤àನಿ ಅಂತ ನನಗೆ ಮಾತ್ರ ಗೊತ್ತು. ನೀನು ಒಂದು ಸಲ ನೋಡಿ ನಗಬೇಕು, ಹೇಗಿದ್ದೀರಿ ಅಂತ ಕೇಳಬೇಕು ಅಂತೆಲ್ಲಾ ಮನಸ್ಸು ಕನವರಿಸುತ್ತದೆ. ನನ್ನ ಆಫೀಸು ಐದೂವರೆಗೆ ಮುಗಿದರೂ, ಐದೂ ಮುಕ್ಕಾಲಿಗೆ ನೀನು ಆಫೀಸು ಮುಗಿಸಿ ಬರುವವರೆಗೂ ಬಸ್‌ ಸ್ಟಾಂಡ್‌ನ‌ಲ್ಲಿ ಕಾಯುತ್ತೇನೆ. ಆದರೆ ನೀನು ಮಾತ್ರ ಅದಾವುದೂ ಗೊತ್ತೇ ಇಲ್ಲವೇನೋ ಎಂಬಂತೆ ಇರುತ್ತೀಯ. ಅದೆಂಥ ಗಾಂಭೀರ್ಯ ನಿನ್ನದು? ನಿಜ ಹೇಳಲಾ, ನಾನು ಸೋತಿದ್ದು ನಿನ್ನ ಅದೇ ಗಾಂಭೀರ್ಯಕ್ಕೆ.

Advertisement

ನಿನ್ನ ಅಪ್ಪ ಪೊಲೀಸ್‌ ಇನ್ಸ್‌ಪೆಕ್ಟರ್‌ ಅಂತ ಮೊನ್ನೆಯಷ್ಟೇ ಗೊತ್ತಾಗಿ, ಒಳಗೊಳಗೆ ಹೆದರಿಕೆಯಾಯ್ತು. ನಿನ್ನ ಸುದ್ದಿಯೇ ಬೇಡಪ್ಪಾ ಅಂದುಕೊಂಡೆ. ಆದರೆ, ಪ್ರತಿದಿನವೂ ನೀನು ಕಣ್ಣೆದುರೇ ಸುಳಿಯುವಾಗ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲು ನನ್ನಿಂದಾಗುತ್ತಿರಲಿಲ್ಲ. ನಿನ್ನ ಮೇಲೆ ಪ್ರೀತಿಯಾಗಿದೆ ಅಂತ ಹೇಳದೇ ಇದ್ದರೆ ತಪ್ಪಾದೀತು.

ಹಾಗಾಗಿ, ನೇರವಾಗಿ ನಿನ್ನ ಅಪ್ಪನ ಎದುರು ನಿಂತು, “ನಿಮ್ಮ ಮಗಳನ್ನು ಪ್ರೀತಿಸುತ್ತಿದ್ದೇನೆ. ಧಾರೆ ಎರೆದು ಕೊಡುವಿರಾ?’ ಅಂತ ಕೇಳಬೇಕು ಅಂದುಕೊಂಡಿದ್ದೇನೆ. ನೀನಂತೂ ಖಂಡಿತಾ ಒಪ್ಪಿಕೊಳ್ಳುತ್ತೀಯ ಅನ್ನೋ ಹುಚ್ಚು ಧೈರ್ಯ ನನ್ನಲ್ಲಿದೆ. ಪ್ಲೀಸ್‌, ದಯವಿಟ್ಟು ಈ ಭಾನುವಾರ ಹತ್ತು ಗಂಟೆಗೆ ಹೇಮಂತಪುರದ ಮುಖ್ಯರಸ್ತೆಯಲ್ಲಿರುವ ಜಾಹ್ನವಿ ಹೋಟೆಲ್‌ ಹತ್ತಿರ ನೀವಿಬ್ಬರೂ ಬನ್ನಿ. ಯಾವುದೇ ವಿಚಾರವಾದರೂ ನೇರವಾಗಿ ಮಾತನಾಡಿ ಪರಿಹರಿಸಿಕೊಳ್ಳುವುದು ಉತ್ತಮ ಎಂದು ನಂಬಿದವನು ನಾನು. ನಿನಗಾಗಿ ಕಾಯುತ್ತಿರುತ್ತೇನೆ. ತಪ್ಪದೇ ಅಪ್ಪನನ್ನು ಜೊತೆಯಲ್ಲಿ ಕರೆದುಕೊಂಡು ಬಾ.

ಇಂತಿ ನಿಮಗಾಗಿ ಕಾಯುತ್ತಿರುವ

ನರೇಂದ್ರ ಗಂಗೊಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next