Advertisement

ಬಿಜೆಪಿಗೆ ಬಂದ್‌ ಸಿಟ್ಟು; ಸರ್ಕಾರಕ್ಕೆ ಈಗ ಇಕ್ಕಟ್ಟು

06:00 AM Jan 23, 2018 | Team Udayavani |

ಬೆಂಗಳೂರು/ಮೈಸೂರು/ಹುಬ್ಬಳ್ಳಿ: ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಜ. 25ರ ರಾಜ್ಯ ಬಂದ್‌ ಮತ್ತು ಫೆ. 4ರ ಬೆಂಗಳೂರು ಬಂದ್‌ ಕರೆ ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಬಿಜೆಪಿ ಪರಿವರ್ತನಾ ಯಾತ್ರೆಗೆ ಅಡ್ಡಿಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಮ್ಮಕ್ಕಿನಂತೆ ಬಂದ್‌ಗೆ ಕರೆ ನೀಡಲಾಗಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

Advertisement

ಪರಿವರ್ತನಾ ಯಾತ್ರೆಯ ಕೊನೆಯ ಸಮಾವೇಶ ಜ. 25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಪಾಲ್ಗೊಳ್ಳುವರು. ಅದೇ ರೀತಿ, ಫೆ. 4ರಂದು ಬೆಂಗಳೂರಿನಲ್ಲಿ ಯಾತ್ರೆಯ ಸಮಾರೋಪ ಸಮಾವೇಶ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಇದರಿಂದ ಆತಂಕಕ್ಕೊಳಗಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌, ಕನ್ನಡಪರ ಸಂಘಟನೆಗಳು ಮತ್ತು ಮಹದಾಯಿ ಹೋರಾಟಗಾರರಿಗೆ ಕುಮ್ಮಕ್ಕು ನೀಡಿ ಬಂದ್‌ಗೆ ಕರೆನೀಡುವಂತೆ ಮಾಡಿದ್ದಾರೆ. ಆ ಮೂಲಕ ಕಾಂಗ್ರೆಸ್‌ನವರು ಹೇಡಿತನದ ರಾಜಕಾರಣ ಮಾಡುತ್ತಿದ್ದಾರೆ ಎಂದು ಪಕ್ಷ ಆಪಾದಿಸಿದೆ.

ಬಂದ್‌ ಮಾಡಿಸುತ್ತಿರುವುದು ಸಿಎಂ:
ಮೈಸೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿಯ ಪರಿವರ್ತನಾ ಯಾತ್ರೆಗೆ ಅಡ್ಡಿಪಡಿಸಲು ಮಹದಾಯಿ ವಿಚಾರವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದ್‌ ಮಾಡಿಸುತ್ತಿದ್ದಾರೆ. ಪ್ರಧಾನಿ ಮೋದಿ ಹಾಗೂ ಪಕ್ಷದ ರಾಷ್ಟ್ರಾ ಧ್ಯಕ್ಷ ಅಮಿತ್‌ ಶಾ ಕಾರ್ಯ ಕ್ರ ಮಕ್ಕೆ ಅಡ್ಡಿಪಡಿ ಸಲು ಬೆಂಗಳೂರು ಬಂದ್‌ಗೆ ಕರೆ ನೀಡುವಂತೆ ಪ್ರೇರೇಪಿಸಿದ್ದಾರೆ ಎಂದು ಕಿಡಿ ಕಾರಿದರು.

ಮಹಾದಾಯಿ ನದಿ ನೀರಿಗೂ ಮೈಸೂರು ಭಾಗಕ್ಕೂ ಏನು ಸಂಬಂಧ? ಎಂದು ಬಂದ್‌ಗೆ ಕರೆ ನೀಡಿರುವವರನ್ನು ಪ್ರಶ್ನಿಸಿದ ಅವರು, ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ವಯಂಪ್ರೇರಿತರಾಗಿ ನಡೆಸುತ್ತಿರುವ ಬಂದ್‌. ಅವರಾಗಿಯೇ ಬಸ್‌ಗಳನ್ನು ನಿಲ್ಲಿಸಿ ಕಿತಾಪತಿ ಮಾಡಿಸಲು ಮುಂದಾಗಿದ್ದಾರೆ. ಆದರೂ ಅಂದು ಮೈಸೂರಿನ ಸಮಾವೇಶ ನಡೆದೇ ನಡೆಯುತ್ತದೆ ಎಂದು ತಿಳಿಸಿದರು.

ಹೇಸಿಗೆ ರಾಜಕಾರಣ:
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ನಾಡು, ನುಡಿಯ ಹೋರಾಟ ಮಾಡಬೇಕಿರುವ ಕನ್ನಡಪರ ಸಂಘಟನೆಗಳನ್ನು ತಮ್ಮ ರಾಜಕೀಯ ಬೇಳೆ ಬೇಯಿಸಲು ಬಳಸಿಕೊಂಡು ಅವಮಾನ ಮಾಡುತ್ತಿದ್ದಾರೆ. ಈ ರೀತಿಯ ಹೇಸಿಗೆ ರಾಜಕಾರಣ ಮಾಡುತ್ತಿರುವುದು ದುರದೃಷ್ಟಕರ ಎಂದರು.

Advertisement

ಇಕ್ಕಟ್ಟಿನಲ್ಲಿ ಸರ್ಕಾರ
ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿಯ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದ ದಿನ (ಫೆ. 4) ಬಂದ್‌ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ.

ಒಂದೆಡೆ ಪ್ರಧಾನಿ ಕಾರ್ಯಕ್ರಮಕ್ಕೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಾಗಿರುವುದು ರಾಜ್ಯ ಸರ್ಕಾರದ ಕರ್ತವ್ಯ. ಇನ್ನೊಂದೆಡೆ ಚುನಾವಣೆ ಸಮೀಪಿಸುತ್ತಿರುವುದರಿಂದ ಬಂದ್‌ ಕರೆ ನೀಡಿದ ಕನ್ನಡಪರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಪರಿಸ್ಥಿತಿಯಲ್ಲೂ ಸರ್ಕಾರ ಇಲ್ಲ. ಹೀಗಾಗಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆಗೆ ಒಳಗಾಗಿರುವ ರಾಜ್ಯ ಸರ್ಕಾರ, ಫೆ. 4ರ ಬಂದ್‌ ಮುಂದೂಡುವಂತೆ ಕನ್ನಡಪರ ಸಂಘಟನೆಗಳ ಮನವೊಲಿಸುವ ಪ್ರಯತ್ನ ಮಾಡಲು ನಿರ್ಧರಿಸಿದೆ.

ಪ್ರಧಾನಿ ಆಗಮನದ ವೇಳೆ ಭದ್ರತಾ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಸಾಕಷ್ಟು ಶಿಷ್ಟಾಚಾರಗಳನ್ನು ಪಾಲಿಸಬೇಕಾಗುತ್ತದೆ. ಕಾನೂನು ಸುವ್ಯವಸ್ಥೆ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಚಾರವಾಗಿದ್ದರಿಂದ ಪ್ರಧಾನಿ ಕಾರ್ಯಕ್ರಮಕ್ಕೆ (ಅದು ರಾಜಕೀಯ ಕಾರ್ಯಕ್ರಮವಾದರೂ) ಸೂಕ್ತ ಭದ್ರತೆ ಒದಗಿಸುವುದರ ಜತೆಗೆ ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಇದರಲ್ಲಿ ಸ್ವಲ್ಪ ಹೆಚ್ಚುಕಮ್ಮಿಯಾದರೂ ರಾಜ್ಯ ಸರ್ಕಾರದ ಮೇಲೆ ಅಳಿಸಲಾಗದ ಕಪ್ಪುಚುಕ್ಕೆ ಉಳಿಯುತ್ತದೆ. ಅಲ್ಲದೆ, ಇದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಸಂಘರ್ಷಕ್ಕೂ ಕಾರಣವಾಗಬಹುದು  ಎಂಬ ಆತಂಕ ಕಾಣಿಸಿಕೊಂಡಿದೆ.

ಕರ್ನಾಟಕ ಬಂದ್‌ ಕಾಂಗ್ರೆಸ್‌ ಪ್ರೇರಿತ ಎನ್ನುವುದು ಆಧಾರರಹಿತ. ಬಂದ್‌ ಮಾಡಿದರೆ ಸರ್ಕಾರಕ್ಕೇ ತೊಂದರೆ. ಶಾಲಾ-ಕಾಲೇಜುಗಳು, ಬಸ್‌ ಮತ್ತಿತರ ಸೇವೆ ಸ್ಥಗಿತಗೊಳ್ಳುತ್ತವೆ. ಕಾನೂನು-ಸುವ್ಯವಸ್ಥೆ ಕಾಪಾಡಬೇಕಾಗುತ್ತದೆ. ಹೀಗಿರುವಾಗ, ಸರ್ಕಾರವೇ ಯಾಕೆ ಬಂದ್‌ಗೆ ಪ್ರೇರಣೆ ನೀಡುತ್ತದೆ? ಹೀಗೆ ಆರೋಪಿಸುವವರಿಗೆ ಬುದ್ಧಿ ಅಥವಾ ಸಾಮಾನ್ಯಜ್ಞಾನ ಇದೆಯೋ-ಇಲ್ಲವೋ ಎಂಬ ಬಗ್ಗೆಯೇ ನನಗೆ ಅನುಮಾನ
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುವ ಎಲ್ಲ ರೀತಿಯ ಹೋರಾಟಕ್ಕೂ ಬಿಜೆಪಿಯ ಬೆಂಬಲವಿದೆ. ಆದರೆ, ನಿಜವಾಗಿಯೂ ಹೋರಾಟ ನಡೆಸಬೇಕಿರುವುದು ಕಾಂಗ್ರೆಸ್‌ ಪಕ್ಷದ ವಿರುದ್ಧ. ಕರ್ನಾಟಕಕ್ಕೆ ನೀರು ಕೊಡುವುದಾಗಿ ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಈಗಾಗಲೇ ಭರವಸೆ ನೀಡಿದ್ದಾರೆ.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next