ರಾಯಚೂರು : ಕೋವಿಡ್-19 ಸೋಂಕಿನ 2ನೇ ಅಲೆ ಹರಡದಂತೆ ತಡೆಯಲು ಜಿಲ್ಲಾಡಳಿತ ಸನ್ನದ್ಧವಾಗಿದ್ದು, ರೋಗಿಗಳಿಗೆ ವೈದ್ಯಕೀಯ ಸೇವೆಯಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ್ ತಿಳಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೋವಿಡ್-19 2ನೇ ಅಲೆ ನಿಯಂತ್ರಣ ಕುರಿತು ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂಖ್ಯೆಗಳಲ್ಲಿ ದ್ವಿಗುಣವಾದಲ್ಲಿ ರಿಮ್ಸ್ ಹಾಗೂ ಒಪೆಕ್ ಆಸ್ಪತ್ರೆಗಳಲ್ಲಿ ಮತ್ತಷ್ಟು ಹಾಸಿಗೆ ಸಿದ್ಧಪಡಿಸಬೇಕು. ಒಪೆಕ್‌ನಲ್ಲಿ ಈಗಾಗಲೇ 150 ಆಕ್ಸಿಜನ್ ಹಾಸಿಗೆಗಳು ಲಭ್ಯವಿದೆ. ಅದರಂತೆ ಅಲ್ಲಿನ ಎರಡನೇ ಮಹಡಿಯಲ್ಲಿ 75 ಹಾಸಿಗೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಒಪೆಕ್ ಆಸ್ಪತ್ರೆ ಮುಖ್ಯಸ್ಥ ಡಾ|ನಾಗರಾಜ ಗದ್ವಾಲ್ ರಿಗೆ ಸೂಚಿಸಿದರು.
ಇನ್ನೂ ರಿಮ್ಸ್‌ನ 3ನೇ ಮಹಡಿಯಲ್ಲಿ 150 ಹಾಗೂ ಐದನೇ ಮಹಡಿಯಲ್ಲಿ 120 ಹಾಸಿಗೆಗಳ ಸೌಲಭ್ಯ ಕಲ್ಪಿಸಲು ಸಾಧ್ಯತೆಗಳಿವೆ. ಅದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ರಿಮ್ಸ್ ನಿರ್ದೇಶಕ ಡಾ|ಬಸವರಾಜ ಪೀರಾಪುರ ಅವರಿಗೆ ನಿರ್ದೇಶನ ನೀಡಿದರು. ಕೋವಿಡ್ ಸೋಂಕಿನ ಗಂಭೀರ ಪ್ರಕರಣಗಳಿದ್ದಲ್ಲಿ ಮಾತ್ರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಒಪೆಕ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಲಾಗುತ್ತಿದೆ.
ಖಾಸಗಿ ಆಸ್ಪತ್ರೆಗಳಲ್ಲೂ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡುವಂತೆ ಸೂಚಿಸಲಾಗುವುದು ಎಂದರು. ಲಿಂಗಸೂಗೂರು ತಾಲೂಕಿನಲ್ಲಿ ಬಾಕಿಯಿರುವ ಆಂಬ್ಯುಲೆನ್ಸ್ ದುರಸ್ತಿ ಕೂಡಲೇ ಆಗಬೇಕು. ಯರಮರಸ್ ಕೋವಿಡ್ ಕೇರ್ ಕೇಂದ್ರಗಳಲ್ಲಿ ದಿನಕ್ಕೆ 10ರಿಂದ 13 ಜನ ದಾಖಲಾಗುತ್ತಿದ್ದಾರೆ. ಅಲ್ಲಿ ನಗರಸಭೆಯಿಂದ ಸ್ಪತ್ಛತಾ ಕಾರ್ಯ ನಿರ್ವಹಿಸಬೇಕು. ಮನೋರಂಜನೆಗಾಗಿ ಟಿವಿ, ಚೆಸ್ ಬೋರ್ಡ್ ಸೇರಿ ಇತರೆ ಸೌಲಭ್ಯ ಒದಗಿಸಿ ಎಂದರು. ಇದೇ ವೇಳೆ ಕೋವಿಡ್ ಲ್ಯಾಬ್ ಸಿದ್ಧತೆ, ಹೋಮ್ ಐಸೋಲೇಶನ್ ಮತ್ತು ಕೋವಿಡ್ ದಂಡ ವಿ ಸಿದ ಪ್ರಗತಿ ಕುರಿತು ಡಿಸಿ ಮಾಹಿತಿ ಪಡೆದರು. ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಎಡಿಸಿ ಕೆ.ಎಚ್.ದುರಗೇಶ್, ಲಿಂಗಸೂಗೂರು ಸಹಾಯಕ ಆಯುಕ್ತ ರಾಜಶೇಖರ ಡಂಬಳ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ, ರಿಮ್ಸ್ ನಿರ್ದೇಶಕ ಡಾ| ಬಸವರಾಜ ಪೀರಾಪುರ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ| ಸುರೇಂದ್ರ ಬಾಬು, ಆರ್.ಸಿ.ಎಚ್ ಅಧಿಕಾರಿ ಡಾ| ವಿಜಯ ಇದ್ದರು.