ನವದೆಹಲಿ: ಅಂದು ಎ .3, 1973. ಮೊಟೊರೋಲಾ ಕಂಪನಿಯ ಎಂಜಿನಿಯರ್ ಮಾರ್ಟಿನ್ ಕೂಪರ್ ಮ್ಯಾನ್‌ಹ್ಯಾಟನ್‌ನ ಬೀದಿಯಲ್ಲಿ ಅಲೆಯುತ್ತಿರುತ್ತಾರೆ. ತಲೆ ಗೊಂದಲದ ಗೂಡಾಗಿರುತ್ತದೆ. ಮನಸ್ಸಲ್ಲಿ ಮೂಡಿದ್ದ ಒಂದು ಪ್ರಶ್ನೆಗೆ ಉತ್ತರ ಸಿಗದೇ ಪೇಚಾಡುತ್ತಿರುತ್ತಾರೆ. ಅಂದ ಹಾಗೆ ಆ ಪ್ರಶ್ನೆ ಏನು ಗೊತ್ತಾ?
ಜಗತ್ತಿನ ಮೊದಲನೇ ವೈರ್‌ಲೆಸ್ ಸೆಲ್ ಫೋನ್ ಕರೆಯನ್ನು ಯಾರಿಗೆ ಮಾಡುವುದು ಎಂದು! ಗೆಳೆಯನಿಗೋ? ಕುಟುಂಬ ಸದಸ್ಯರಿಗೋ? ಸಹೋದ್ಯೋಗಿಗೋ? ಅವರು ಆಯ್ಕೆ ಮಾಡಿದ್ದು ತನ್ನ ಶತ್ರುವನ್ನು ಅಂದರೆ ಪ್ರತಿಸ್ಪರ್ಧಿಯನ್ನು!
ಹೌದು, ಕೂಪರ್ ಅವರ ಪ್ರತಿಸ್ಪರ್ಧಿ ನ್ಯೂಜೆರ್ಸಿಯ ಡಾ. ಜೋಯೆಲ್ ಎಸ್.ಎಂಜೆಲ್ ಅವರಿಗೆ ಜಗತ್ತಿನ ಮೊದಲ ಮೊಬೈಲ್ ಕರೆ ಹೋಗುತ್ತದೆ. ಈ ಘಟನೆ ನಡೆದು ಸೋಮವಾರಕ್ಕೆ ಸರಿಯಾಗಿ 50 ವರ್ಷಗಳು.
ಅಂದರೆ, ವಿಶ್ವಕ್ಕೆ ವೈರ್‌ಲೆಸ್ ಫೋನ್ ಪರಿಚಯವಾಗಿ 50 ವರ್ಷಗಳು ಪೂರ್ಣಗೊಂಡಿವೆ. ಇಂಥದ್ದೊಂದು ಮಹಾನ್ ಸಾಧನೆ ಮಾಡಿದ ಮಾರ್ಟಿನ್ ಕೂಪರ್ ಅವರು ತಮ್ಮ ಅನುಭವ ಹಾಗೂ ಮೊಬೈಲ್ ತಂತ್ರಜ್ಞಾನದಲ್ಲಾದ ಪ್ರಗತಿಯನ್ನು ಬಿಚ್ಚಿಟ್ಟಿದ್ದಾರೆ.
1983ರಲ್ಲಿ ಅಮೆರಿಕದಲ್ಲಿ 1ಜಿ ನೆಟ್‌ವರ್ಕ್‌ನೊಂದಿಗೆ 3,995 ಡಾಲರ್(ಇಂದಿನ 12 ಸಾವಿರ ಡಾಲರ್) ಮೊತ್ತದಲ್ಲಿ ಲಭ್ಯವಾಗಿದ್ದ ಮೊಬೈಲ್, 10 ಗಂಟೆಗಳ ಕಾಲ ಚಾರ್ಜ್ ಮಾಡಿದರೆ ಕೇವಲ 30 ನಿಮಿಷಗಳ ಕಾಲ ಮಾತನಾಡಬಹುದಿತ್ತು. ಈಗ ಕ್ವಿಕ್ ಚಾರ್ಜಿಂಗ್ ವ್ಯವಸ್ಥೆ ಕೂಡ ಇದೆ.
ಇದಾದ 10 ವರ್ಷಗಳ ಬಳಿಕ ಅಂದರೆ 1991ರಲ್ಲಿ 2ಜಿ ನೆಟ್‌ವರ್ಕ್ ಬಂದು, 1995ರಲ್ಲಿ ವಾಯ್ಸ ಓವರ್ ಇಂಟರ್ನೆಟ್ ಪ್ರೊಟೊಕಾಲ್ ಪರಿಚಯಿಸಲ್ಪಟ್ಟಿತು. ನಂತರ, ಮೊಬೈಲ್ ಫೋನ್ ತಿರುಗಿ ನೋಡಿದ್ದೇ ಇಲ್ಲ.
ಆಧುನಿಕ ಸ್ಮಾರ್ಟ್‌ಫೋನ್ ಎನ್ನುವುದು ನಾಸಾ 1969ರ ಅಪೋಲೋ 11 ಯೋಜನೆಗೆ(ಮಂಗಳ ಗ್ರಹಕ್ಕೆ ಮಾನವನನ್ನು ಕಳುಹಿಸಿದ್ದು) ಬಳಸಿದ ಒಟ್ಟಾರೆ ಕಂಪ್ಯೂಟಿಂಗ್ ಪವರ್‌ಗಿಂತಲೂ ಲಕ್ಷಪಟ್ಟು ಹೆಚ್ಚು ಬಲಿಷ್ಠವಾಗಿದೆ. ಇದು ಹೀಗೆಯೇ ಮುಂದುವರಿಯುತ್ತಾ ಇರುತ್ತದೆ. ಮುಂದಿನ ಮೊಬೈಲ್ ಕ್ರಾಂತಿ ಬಹಳ ದೂರವೇನಿಲ್ಲ ಎನ್ನುತ್ತಾರೆ ಮಾರ್ಟಿನ್ ಕೂಪರ್.