ಬೀದರ: ಸ್ಥಗಿತಗೊಂಡಿರುವ ಬೀದರ-ಯಶವಂತಪುರ ರೈಲು (ವಾಯಾ ಕಲಬುರ್ಗಿ) ಪುನರ್ ಸಂಚಾರಕ್ಕೆ ಕ್ರಮ ವಹಿಸುವಂತೆ ಬೀದರ ವಾಣಿಜ್ಯೋದ್ಯಮ ಸಂಸ್ಥೆ ಮನವಿ ಮಾಡಿದೆ.
ಈ ಕುರಿತು ಅಧ್ಯಕ್ಷ ಬಿ.ಜಿ ಶೆಟಕಾರ ಮತ್ತು ಕಾರ್ಯದರ್ಶಿ ಡಾ| ವಿರೇಂದ್ರ ಶಾಸ್ತ್ರಿ ಅವರು ಸಿಎಂಗೆ ಪತ್ರ ಬರೆದಿದ್ದಾರೆ. ಕಲ್ಬುರ್ಗಿ ಭಾಗದ ಕೆಲ ತಾಲೂಕಿನ ಜನರ ವಿರೋಧ ಕಾರಣಕ್ಕೆ ಬೀದರ-ಯಶವಂತಪುರ (ವಾಯಾ ಕಲ್ಬುರ್ಗಿ) ರೈಲು ಸ್ಥಗಿತಗೊಳಿಸುವ ಕ್ರಮ ಖಂಡನೀಯ. ಈ ಮಾರ್ಗದಿಂದ ಯಾವುದೇ ರೀತಿಯ ನಕರಾತ್ಮಕ ಪರಿಣಾಮವು ವಿರೋಧಿಸಿದ ತಾಲೂಕುಗಳ ಮೇಲೆ ಬೀರುವುದಿಲ್ಲ. ಆದರೂ ಸಹ ಇದನ್ನು ವಿರೋಧಿಸಿರುವುದು ನಮ್ಮ ಭಾಗಕ್ಕೆ ಮಾಡುತ್ತಿರುವ ಅನ್ಯಾಯ ಎಂದಿದ್ದಾರೆ.
ಈ ರೈಲ್ವೆಯ ಸಂಚಾರದಿಂದ ನಮ್ಮ ಭಾಗದ ಸಮಗ್ರ ಪ್ರಗತಿಗೆ ಸಹಾಯಕವಾಗುತ್ತದೆ. ಮುಖ್ಯವಾಗಿ ಇಲ್ಲಿಂದ ಬೆಂಗಳೂರಿಗೆ ಪ್ರಯಾಣಿಸಲು ಇರುವ ನಿಗದಿತ ಕಾಲಾವಧಿಗಿಂತಲೂ ಸುಮಾರು ಎರಡ್ಮೂರು ಗಂಟೆಗಳ ಕಾಲ ಸಮಯ, ಜತೆಗೆ ಇಂಧನದ ಉಳಿತಾಯ ಆಗುತ್ತದೆ. ಈ ಭಾಗದ ಜನರಿಗೆ ಎಲ್ಲಾ ರೀತಿಯ ಮೂಲ ಸೌಕರ್ಯಗಳು ಒದಗುತ್ತವೆ. ವಿವಿಧ ಭಾಗಗಳ ಜನರೊಂದಿಗೆ ಸಂಪರ್ಕ ಉಂಟಾಗಿ ಆ ಭಾಗದ ಕೆಲವೊಂದು ಉದ್ಯಮಗಳು ನಮ್ಮ ಭಾಗಕ್ಕೆ ಬರುವುದರ ಮೂಲಕ ಜೀವನ ಶೈಲಿ, ಜೀವನದ ಗುಣಮಟ್ಟ ಅಧಿ ಕವಾಗುತ್ತದೆ ಎಂದು ಹೇಳಿದ್ದಾರೆ.
ಮುಂಬರುವ ದಿನಗಳಲ್ಲಿ ಇನ್ನೂ ಅನೇಕ ರೈಲ್ವೆಗಳ ಸಂಚಾರವು ಆರಂಭವಾಗಿ ಉತ್ತರ ಕರ್ನಾಟಕವನ್ನು ದಕ್ಷಿಣ ಕರ್ನಾಟಕದ ಮೂಲಕ ಎಲ್ಲೆಡೆಗೆ ಸಂಚರಿಸಲು ಅವಕಾಶ ದೊರಕುತ್ತದೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಹಾಗಾಗಿ ಯಾವುದೇ ಭಾಗದ ಸ್ಥಳೀಯರ ವಿರೋಧವನ್ನು ಲೆಕ್ಕಿಸದೆ ಹಾಗೂ ವೈಯಕ್ತಿಕ ಹಿತಾಸಕ್ತಿ ಪರಿಗಣಿಸದೆ ಕಲ್ಯಾಣ ಕರ್ನಾಟಕ ಭಾಗದ ಸವಾಂಗೀಣ ಅಭಿವೃದ್ಧಿಗಾಗಿ ಬೀದರ-ಯಶವಂತಪುರ (ವಾಯಾ ಕಲಬುರಗಿ) ರೈಲ್ವೆ ಸಂಚಾರವನ್ನು ಆರಂಭಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ.