ನವದೆಹಲಿ: ನಿಮಗೆ ಪದೇ ಪದೆ ಅನಪೇಕ್ಷಿತ ಕರೆಗಳು ಬರುತ್ತಿವೆಯೇ? ಹಾಗಿದ್ದರೆ ಭಾರತೀಯ ದೂರಸಂಪರ್ಕ ಪ್ರಾಧಿಕಾರ (ಟ್ರಾಯ್) ವತಿಯಿಂದಲೇ ಪರಿಹಾರ ದೊರಕಲಿದೆ. ಅದರ ಅನುಸಾರ ಯಾರು ಕರೆ ಮಾಡುತ್ತಾರೋ ಅವರ ಹೆಸರನ್ನು ಮೊಬೈಲ್ ಸ್ಕ್ರೀನ್ ಮೇಲೆ ಫ್ಲ್ಯಾಶ್ ಆಗುವುದನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆದಿದೆ.
ನಿಮ್ಮ ಗ್ರಾಹಕರನ್ನು ಅರಿಯಿರಿ (ಕೆವೈಸಿ) ದಾಖಲೆಗಳಲ್ಲಿ ನೀಡಲಾಗಿರುವ ಹೆಸರಿನ ಪ್ರಕಾರ ಸ್ಕ್ರೀನ್ ಮೇಲೆ ಮೂಡುವಂತೆ ಮಾಡಲು ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವೇಳೆ, ಮೊಬೈಲ್‌ನಲ್ಲಿ ಸೇವ್ ಆಗಿರುವ ಹೆಸರು ಮತ್ತು ನಂಬರ್ ಸ್ಕ್ರೀನ್ ಮೇಲೆ ಮೂಡದೇ ಇದ್ದರೂ ಹೆಸರು ತಿಳಿಯಲಿದೆ.
ಸದ್ಯ ಖಾಸಗಿ ಕಂಪನಿ ಟ್ರೂಕಾಲರ್ ಆ್ಯಪ್ ಅಳವಡಿಕೆ ಮಾಡಿದವರಿಗೆ ಮಾತ್ರ ಅನಪೇಕ್ಷಿತ ಕರೆಗಳು ಎಂದು ಸ್ಕ್ರೀನ್ ಮೇಲೆ ಖಚಿತವಾಗುತ್ತದೆ. ಇದರಿಂದಾಗಿ ಕೆವೈಸಿ ದಾಖಲೆಗಳಲ್ಲಿನ ಮಾಹಿತಿ ದೃಢಪಡಿಸಲಾಗಿದೆಯೋ ಎಂಬ ಅಂಶವೂ ಗೊತ್ತಾಗಲಿದೆ. ಈ ಅಂಶ ಯಶಸ್ವಿಯಾದರೆ ವಾಟ್ಸ್‌ಆ್ಯಪ್ ಕರೆಗಳಿಗೆ ಕೂಡ ವಿಸ್ತರಿಸಲಾಗುತ್ತದೆ.