Advertisement
ಈ ಕಾರ್ಯಕ್ರಮದಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದ ನಾಲ್ಕು ಕನ್ನಡ ಶಾಲೆಯ ಮಕ್ಕಳು ಬಹಳ ಹುರುಪಿನಿಂದ ಭಾಗವಹಿಸಿ ನಾಡೋತ್ಸವವನ್ನು ಯಶಸ್ವಿಯಾಗಿಸಿದರು. ನಾಡೋತ್ಸವಕ್ಕೆ ಸೋಹನಿ ಪವನ್ ಅವರ ಸುಶ್ರಾವ್ಯ ಕಂಠದಿಂದ ಮೂಡಿಬಂದ ಗಾಯನ ಹಾಗೂ ಅನುಷ್ಕಾ ರಾಜೀವ್ ಅವರ ಭರತನಾಟ್ಯದ ಮೂಲಕ ಗಣೇಶನಿಗೆ ವಂದನೆ ಸಲ್ಲಿಸುವುದರೊಂದಿಗೆ ಚಾಲನೆ ಮಾಡಲಾಯಿತು.
ವ್ಯಾಲಿ ಕನ್ನಡ ಶಾಲೆಯ ಪುಟಾಣಿಗಳು ಕಿತ್ತೂರು ಚೆನ್ನಮ್ಮ, ಓಬವ್ವ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕರ ವೇಷಭೂಷಣಗಳೊಡನೆಯೂ ಹಾಗೂ ತಮ್ಮ ಮುದ್ದು ಮಾತುಗಳಿಂದ ಎಲ್ಲರನ್ನು ರಂಜಿಸಿದರು. ವೀಣೆ, ಗಿಟಾರ್, ಡ್ರಮ್ಸ್, ವಾದ್ಯಗಳಿಂದ ವರಾಹ ರೂಪಂ, ಹ್ಯಾಪಿ ಆಗಿದೆ, ಹಾಡುಗಳ ವಾದ್ಯಗೋಷ್ಠಿ ನಡೆಸಿದ ಚಿಣ್ಣರು ಡಾ| ಪುನೀತ್ ರಾಜಕುಮಾರ್ ಅವರಿಗೆ “ನೀನೆ ರಾಜಕುಮಾರ’ ಹಾಡಿನ ಮೂಲಕ ತಮ್ಮ ಗೌರವ ಸಲ್ಲಿಸಿದಿರರು. ನಾಡಪ್ರೇಮವನ್ನು ಸಾರುವ ಕನ್ನಡ ಚಿತ್ರಗೀತೆಗಳಿಗೆ ಚೆಂದದ ನೃತ್ಯ ಮಾಡಿ ಕುಣಿದ ವ್ಯಾಲಿ ಶಾಲೆಯ ಹೆಣ್ಣುಮಕ್ಕಳು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಈ ಎಲ್ಲ ಕಾರ್ಯಕ್ರಮಗಳನ್ನು ಅತೀ ಸುಂದರವಾಗಿ ಸಂಯೋಜಿಸಿ, ಮಕ್ಕಳನ್ನು ಚೆನ್ನಾಗಿ ತಯಾರು ಮಾಡಿದ ಪೂರ್ಣಿಮಾ ಸಂಡೂರ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿ ಮನ ಗೆದ್ದರು.
Related Articles
ಪ್ರಸ್ತುತ ಕಾಲಮಾನದಲ್ಲಿ ಪ್ರತೀ ಮನೆಯಲ್ಲೂ ಅತ್ಯಂತ ಚರ್ಚೆಯ ವಿಷಯವೆಂದರೆ ಮಕ್ಕಳಿಗೆ ಟಿವಿ, ಮೊಬೈಲ್, ಸಾಮಾಜಿಕ ಜಾಲತಾಣಗಳು ಮುಖ್ಯವೋ ಅಥವಾ ಸಾಕು ಪ್ರಾಣಿ ಇದ್ದರೆ ಒಳ್ಳೆಯದೋ ಎಂಬ ವಿಷಯವನ್ನು ಆಧಾರವಾಗಿಟ್ಟುಕೊಂಡು ರಚಿಸಿದ OCKS ಶಾಲೆಯ ಮಕ್ಕಳ ಕಿರು ನಾಟಕ ಎಲ್ಲರ ಮೆಚ್ಚುಗೆ ಗಳಿಸಿತು. ತಮ್ಮ ಮುದ್ದಾದ ಸಾಕು ಪ್ರಾಣಿಗಳ ವೇಷಭೂಷಣಗಳಿಂದಲೂ ಹಾಗೂ ನಾಯಿ ಮರಿ ತಿಂಡಿಬೇಕೇ, ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ, ಪುಟಾಣಿ ನೀಲಿ ಹಕ್ಕಿ ಪದ್ಯಗಳನ್ನು ಅಚ್ಚುಕಟ್ಟಾಗಿ ಹೇಳಿ ರಂಜಿಸಿದರು. ಈ ವಿಭಿನ್ನ ನಾಟಕವನ್ನು ನಿರ್ದೇಶಿಸಿದವರು ರೂಪ ಸುಭಾಷ್ ಅವರು.
Advertisement
ಮಹಾಭಾರತದ ಪೌರಾಣಿಕ ನಾಟಕವನ್ನು ನಮ್ಮ ಸೆರಿಟೋಜ್ ಶಾಲೆಯ ಮಕ್ಕಳು ಅತ್ಯದ್ಭುತವಾಗಿ ಪ್ರದರ್ಶಿಸಿದರು. ಕನ್ನಡ ಭಾಷೆಯ ಸ್ಫುಟವಾದ ಸಂಭಾಷಣೆ, ಸುಂದರ ಪೌರಾಣಿಕ ಪೋಷಾಕುಗಳು, ಅರಮನೆ, ಯುದ್ಧಭೂಮಿಯ ಸನ್ನಿವೇಶಗಳು ಬಹಳ ನೈಜತೆಯಿಂದ ತುಂಬಿದ್ದು ನಮ್ಮ ಕಣ್ಣ ಮುಂದೆಯೇ ನಡೆದಂತೆ ಭಾಸವಾಯಿತು. ಈ ನಾಟಕದಲ್ಲಿನ ಗೀತೋಪದೇಶ ದೃಶ್ಯ ಹಾಗೂ ಅರ್ಜುನನ ರಥ ಅತ್ಯಂತ ಅವರ್ಣೀಯವಾಗಿತ್ತು. ಮಕ್ಕಳಿಗೆ ಇಷ್ಟು ಚೆನ್ನಾಗಿ ತಾಲೀಮು ನೀಡಿ, ನಾಟಕವನ್ನು ಜಯಶಾಲಿಯಾಗಿ ಪ್ರದರ್ಶಿಸುವುದರಲ್ಲಿ ಯಶಸ್ವಿಯಾದ ಮೋಹನ ಚಂದ್ರರವರ ಶ್ರಮ ಅತ್ಯಂತ ಅಭಿನಂದನೀಯ. ಕನ್ನಡನಾಡಿನಲ್ಲಿ ಆಚರಿಸಲಾಗುವ ಗಣೇಶ ಹಬ್ಬ, ದಸರಾ, ದೀಪಾವಳಿ, ಶಿವರಾತ್ರಿ, ಯುಗಾದಿ ಹಬ್ಬಗಳ ಆಚರಣೆಯನ್ನು ಬಹಳ ವಿಜೃಂಭಣೆಯಿಂದ ನುಡಿ ಶಾಲೆಯ ಮಕ್ಕಳು ತಮ್ಮ ಗಾಯನ ಹಾಗೂ ನೃತ್ಯಗಳ ರೂಪದಲ್ಲಿ ಅದ್ದೂರಿಯಾಗಿ ಪ್ರದರ್ಶಿಸಿದರು. ಗಣೇಶನಿಂದ ಕುಬೇರನ ಗರ್ವಭಂಗವನ್ನು ತಮ್ಮ ನಾಟಕದ ಅತ್ಯಂತ ಉತ್ತಮವಾಗಿ ಪ್ರದರ್ಶಿಸಿದ ಪುಟಾಣಿಗಳು, ದಸರೆಯ ವಿಜೃಂಭಣೆಯ ಮೆರವಣಿಗೆ, ಚಾಮುಂಡೇಶ್ವರಿಯ ಅದ್ದೂರಿ ಅಂಬಾರಿ ಉತ್ಸವದ ಗಾನ, ನಾಟ್ಯಗಳ ಸಮ್ಮೇಳನಗಳು ಎಲ್ಲವೂ ಸಭಿಕರನ್ನು ರಂಜಿಸುವುದರಲ್ಲಿ ಜಯಶಾಲಿಯಾಯಿತು. ಕಾರ್ಯಕ್ರಮದ ಕೊನೆಯಲ್ಲಿ “ಕನ್ನಡದ ಮಕ್ಕಳೆಲ್ಲ ಒಟ್ಟಾಗಿ ಬನ್ನಿ’ ಹಾಡನ್ನು ಸುಶ್ರಾವ್ಯವಾಗಿ ಈ ಮಕ್ಕಳು ಹಾಡಿ ತಮ್ಮ ಕನ್ನಡ ಪ್ರೇಮವನ್ನು ಮೆರೆದರು. ಇಂತಹ ವಿಭಿನ್ನ ಕಾರ್ಯಕ್ರಮವನ್ನು ಮಕ್ಕಳಿಂದ ಅದ್ಭುತವಾಗಿ ತಯಾರಿ ನಡೆಸಿ ಪ್ರದರ್ಶಿಸಿದ ಸುಷ್ಮಾ ಚಾರ್ ಅವರ ಶ್ರಮ ಪ್ರಶಂಸನೀಯ. ನಾಡೋತ್ಸವದ ಕಾರ್ಯಕ್ರಮದ ಸಂಪೂರ್ಣ ನಿರೂಪಣೆಯನ್ನು ಉಮಾ ಹುಕ್ಕೇರಿ, ಕೆಸಿಎ ಯುವ ಸಮಿತಿಯ ಸದಸ್ಯರಾದ
ರಕ್ಷಾ ಕೌಶಿಕ್, ಸಮನ ನಾಡಿಗ್ ಮತ್ತು ಅನುಷ್ಕಾ ರಾಜೀವ್ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡ ಶಾಲೆಗಳ ಪ್ರಾಂಶುಪಾಲರಾದ ಗುರುಪ್ರಸಾದ ರಾವ್, ದೀಪ ಶ್ರೀನಿವಾಸ, ರೂಪ ಸುಭಾಷ್ , ಪ್ರಮೀಳಾ ನಾಯಕ್ ಮತ್ತು ಸ್ಮಿತಾ ರಂಗಸ್ವಾಮಿ ಅವರುಗಳನ್ನು ವೇದಿಕೆಯ ಮೇಲೆ ಸಮ್ಮಾನಿಸಿ ಗೌರ ವಿಸಲಾಯಿತು. ಅಂದಿನ ದಿನದ ರಂಗಸಜ್ಜಿಕೆ, ಫೋಟೋ ಬೂತ್‌ಗಳನ್ನು ಬಹಳ ಕ್ರಿಯಾಶೀಲತೆಯಿಂದ ಸುಷ್ಮಾ ಚಾರ್ ಮತ್ತು ಪೂರ್ಣಿಮಾ ಸಂಡೂರ್ ಅವರು ತಯಾರಿಸಿದರೆ, ಅಂದಿನ ಊಟೋಪಚಾರ ಮತ್ತು ಇತರ ಕಾರ್ಯಗಳನ್ನು ಸಂಘದ ಎಲ್ಲ ಪದಾಧಿಕಾರಿಗಳು ತಮ್ಮ ಅವಿರತ ಶ್ರಮದಿಂದ ನಿರ್ವಹಿಸಿ ನಾಡೋತ್ಸವದ ಯಶಸ್ಸಿಗೆ ಕಾರಣರಾದರು. *ವರದಿ – ರಾಜೇಶ್ವರಿ ಎಚ್.ರಾವ್