Advertisement
ಬೆಟ್ಟದ ನೆಲ್ಲಿಯ ಮರದಲ್ಲಿ ವಿಷ್ಣುವಿದ್ದಾನೆಂಬ ನಂಬಿಕೆಯಿದೆ. ತುಳಸಿ ಮದುವೆಗೆ ಕಾಡಿನ ನೆಲ್ಲಿಟೊಂಗೆ ತರುವುದು ಮಲೆನಾಡಿನಲ್ಲಿ ಹಬ್ಬದ ಆಚರಣೆಯ ಒಂದು ಭಾಗ. ತುಳಸಿ- ವಿಷ್ಣುವನ್ನು ಒಂದಾಗಿಸುವ ಸಸ್ಯ ನಂಬಿಕೆ ವಿಶೇಷವಾಗಿದೆ. ಅಂತರ್ಜಲ ಶೋಧಕ್ಕೆ ಟೊಂಗೆ ಹಿಡಿದು ನೀರು ಹುಡುಕುವ ಜನಪದ ವಿದ್ಯೆಯಲ್ಲೂ ನೆಲ್ಲಿ ನುಸುಳಿದ್ದು, ಟೊಂಗೆ ಬಾಗಿದಲ್ಲಿ ನೀರಿರುತ್ತದೆಂಬ ಮಾತಿದೆ. ಬೆಟ್ಟದ ನೆಲ್ಲಿ ಸಸಿಯಾಗಲು ಜಿಂಕೆಯ ಸಹಾಯ ಬೇಕು. ಜಿಂಕೆಗಳು ನೆಲ್ಲಿಕಾಯಿ ತಿಂದ ಬಳಿಕ ಹಿಕ್ಕೆಯಲ್ಲಿನ ಬೀಜ ಸಸಿಯಾಗುವ ಸಂಬಂಧವಿದೆ. ಜೀವಸರಪಳಿಯಲ್ಲಿ ಜಿಂಕೆಯ ಮೇಲ್ಗಡೆ ನಿಲ್ಲುವವ ಹುಲಿರಾಯ. ಹುಲಿ ಇದ್ದಲ್ಲಿ ನೀರಿರುತ್ತದೆಂದು ನಮಗೆಲ್ಲ ಗೊತ್ತಿದೆ. ಒಟ್ಟಿನಲ್ಲಿ ನೀರಿನ ಹಿಂದೆ ಹುಲ್ಲು, ಪೊದೆ, ಮರ, ಬಳ್ಳಿ, ಜಿಂಕೆಗಳ ಜೀವಸರಪಳಿಯಿದೆ. ಅಚ್ಚರಿಯ ಸಂಗತಿಯೆಂದರೆ ಕೊಡಗಿನ ತಲಕಾವೇರಿಯಲ್ಲಿ ನದಿ ಮಾತು ನೆಲ್ಲಿ ಮರದಿಂದ ಶುರುವಾಗುತ್ತದೆ. ಅಗ್ನಿಪುರಾಣದ ಪ್ರಕಾರ ರಾಜರ್ಷಿ ಕವೇರನು ತಪಸ್ಸನ್ನಾಚರಿಸಿ ಬ್ರಹ್ಮನನ್ನು ಮೆಚ್ಚಿಸಿದನು. ಅವನ ಮಾನಸ ಪುತ್ರಿಯಾದ ವಿಷ್ಣುಮಾಯೆಯನ್ನು ಪಡೆದನು. ಕವೇರನ ಸಾಕುಮಗಳು ಕಾವೇರಿಯಾದಳು. ಹಿಮಾಲಯದಲ್ಲಿ ತಪಸ್ಸು ಮಾಡಿ ವಿಷ್ಣುವನ್ನು ಸಾಕ್ಷಾತ್ಕರಿಸಿಕೊಂಡಳು. ಲೋಕ ಕಲ್ಯಾಣಾರ್ಥವಾಗಿ ಆಕೆಯ ಒಂದಂಶ ಜಲದ ರೂಪದಲ್ಲಿರಬೇಕೆಂಬುದು ವಿಷ್ಣುವಿನ ಮಹದಾಸೆ. ಇವಳು “ಲೋಪಮುದ್ರೆ’ ಎಂಬ ಕುವರಿಯಾಗಿ ಅಗಸ್ತÂರನ್ನು ವರಿಸಿದಳು.
Related Articles
Advertisement
ನಂಜನಗೂಡಿನ ಆಚೆ ತಿರಮುಕ್ಕೊಡಲಿನಲ್ಲಿ ಅಗಸ್ತೇಶ್ವರ ದೇಗುಲ, ಗಂಗಾತೀರ್ಥವಿದೆ. ಇಲ್ಲಿ ಲಿಂಗಸ್ಥಾಪನೆಗೆ ಆಸೆಪಟ್ಟ ಅಗಸ್ತÂರು ನರ್ಮದಾ ನದಿಯಿಂದ ಲಿಂಗ ತರುವಂತೆ ಹನುಮಂತನಿಗೆ ಸೂಚಿಸಿದರು. ಲಿಂಗ ತರಲು ಹೋದ ಹನುಮಂತ ಎಷ್ಟು ಹೊತ್ತಾದರೂ ಬರದಿದ್ದಾಗ ಮರಳಿನಲ್ಲಿ ಲಿಂಗ ರೂಪಿಸಿ ಪೂಜಿಸಿದರು. ಪೂಜೆಯ ಬಳಿಕ ಲಿಂಗ ಹೊತ್ತು ತಂದ ಹನುಮಂತ ಮರಳಿನ ಲಿಂಗಕ್ಕೆ ಪೂಜೆ ಸಲ್ಲಿಸಿದ್ದನ್ನು ಗಮನಿಸಿ, ಅದನ್ನು ಕಿತ್ತೆಸೆಯಲು ಪ್ರಯತ್ನಿಸಿದ. ಹೀಗಾಗಿ ಈ ದೇಗುಲದ ಲಿಂಗದ ನೆತ್ತಿಯಲ್ಲಿ ಕುಳಿಯಿದೆಯೆಂಬ ಮಾತಿದೆ. ರಾಮನಾಥಪುರದ ಕಾವೇರಿ ಸೇತುವೆಗಿಂತ ಮುಂದೆ ನದಿಯಲ್ಲಿ ಗೋಗರ್ಭವೆಂಬ ಕಲ್ಲಿನ ದಿಣ್ಣೆಯಿದೆ. ಶ್ರೀರಾಮನು ಯುದ್ಧದಲ್ಲಿ ರಾವಣನನ್ನು ಕೊಂದಿದ್ದಕ್ಕೆ ಪ್ರಾಯಶ್ಚಿತವಾಗಿ ಇಲ್ಲಿ ಲಿಂಗಾರ್ಚನೆ ಮಾಡಿದನೆಂಬ ಕತೆಯಿದೆ.
ಹೊಗೆಯಾಡುವ ಕಲ್ಲು, ಹೊಗೇನ್‌ಕಲ್‌ನಿಂದ ಕಾವೇರಿ ತಮಿಳುನಾಡು ಪ್ರವೇಶಿಸುತ್ತಾಳೆ. ಇಲ್ಲಿ ನೀರು ಬೀಳುವ ಜಾಗಕ್ಕೆ “ಬ್ರಹ್ಮನ ಯಾಗಕುಂಡ’ ಎಂಬ ಹೆಸರಿದೆ. ಒಬ್ಬ ಚೋಳ ಅರಸನು ಅಲ್ಲಿಗೆ ಬೇಟೆಗೆ ಹೋದಾಗ, ನದಿ ಕಾವೇರಿ ಆಳದ ಪ್ರಪಾತಕ್ಕೆ ಬಿದ್ದು ಕಣ್ಮರೆಯಾಗಿದ್ದು ನೋಡುತ್ತಾನೆ. ಆಳದ ಹಳ್ಳ ಕಾವೇರಿಯನ್ನು ನುಂಗಿದ್ದರಿಂದ ಜನ ಸಂಕಷ್ಟಕ್ಕೆ ಸಿಲುಕುತ್ತಾರೆ. ಹೇಗಾದರೂ ಮಾಡಿ ನದಿಯನ್ನು ಉದ್ಧರಿಸಲು ರಾಜನು ಪ್ರಯತ್ನಿಸಿ, ಸೋಲುತ್ತಾನೆ. ಅಲ್ಲಿಗೆ ಬಂದ ಮುನಿಯೊಬ್ಬರು ಮಹಾವಿಷ್ಣುವಿನ ಚಕ್ರ ಭೂಮಿಯಲ್ಲಿ ಹೊಕ್ಕಿರುವುದರಿಂದ ಆಳವಾದ ಹಳ್ಳಕ್ಕೆ ಬಿದ್ದು ನದಿ ಕಳೆದು ಹೋಗಿದೆ, ಪುಣ್ಯಶಾಲಿಯಾದ ಅರಸು ನೀರಿನಲ್ಲಿ ಮುಳುಗಿ ದೇಹತ್ಯಾಗ ಮಾಡದ ಹೊರತು ಹಳ್ಳ ಮುಚ್ಚಲಾಗದು ಎನ್ನುತ್ತಾರೆ. ತಕ್ಷಣ ಚೋಳ ಅರಸನು ಪ್ರಪಾತಕ್ಕೆ ಬಿದ್ದು ದೇಹತ್ಯಾಗ ಮಾಡಿ ನದಿಗೆ ಮರುಜೀವ ನೀಡಿದನಂತೆ! ನ್ಯಗ್ರೋಧ ತೀರ್ಥ, ಚಕ್ರತೀರ್ಥ, ನಾರದತೀರ್ಥ, ಗೌತಮ ತೀರ್ಥ, ಬ್ರಹ್ಮತೀರ್ಥಗಳು ಹೊಗೆನ್‌ಕಲ್‌ನಲ್ಲಿವೆ. ಈ ಕತೆ ಕೇಳಿದ ಬಳಿಕ ಇಂದಿಗೂ ರಾಜಕಾರಣಿಗಳನ್ನು ಮುಳುಗಿಸುತ್ತ, ಎಬ್ಬಿಸುತ್ತಿರುವ ಕಾವೇರಮ್ಮನ ಗುಣ ನೋಡಿದರೆ ಚೋಳರಸನ ದೇಹತ್ಯಾಗ ವಿಶೇಷವೆನಿಸುವುದಿಲ್ಲ. ಚರಿತ್ರೆ, ಜನಪದಗಳಲ್ಲಿರುವ ಇಂಥ ವಿಷಯ ಓದುತ್ತಾ ಹೋದರೆ ನದಿ ವರ್ತನೆಯ ಅರ್ಥ ಇನ್ನಷ್ಟು ವಿಸ್ತಾರಗೊಳ್ಳುತ್ತದೆ.
ರಾಮಾಯಣದಲ್ಲಿ ಉಲ್ಲೇಖ: ಕಿಷ್ಕಿಂದೆಯ ಕಾಂಡದಲ್ಲಿ ಕಾವೇರಿಯ ಉಲ್ಲೇಖವಿದೆ. ಸೀತೆಯನ್ನು ಹುಡುಕುವುದಕ್ಕೆ ಸುಗ್ರೀವನು ವಾನರ ಸೇನೆಯನ್ನು ದಕ್ಷಿಣಾಭಿಮುಖವಾಗಿ ಕಳಿಸುವಾಗ ನದಿಯ ಪ್ರಸ್ತಾಪವಿದೆ. ಶಿಂಷಾ ನದಿ ಮೈಸೂರು ಭಾಗದಲ್ಲಿ ಕಾವೇರಿಯನ್ನು ಸೇರಿ ಏಳು ಮೈಲಿ ಸಂಚರಿಸಿದ ಬಳಿಕ ಮುತ್ತತ್ತಿ ಊರು ತಲುಪುತ್ತದೆ. ಇಲ್ಲಿ ಸೀತೆಯ ಮೂಗುತಿ ನದಿಯಲ್ಲಿ ಜಾರಿ ಬಿತ್ತಂತೆ! ಹನುಮಂತ ಆಳದ ನದಿಯಲ್ಲಿ ಮುಳುಗಿ ಮೂಗುತಿ ಎತ್ತಿ ತಂದನೆಂಬ ಐತಿಹ್ಯವಿದೆ. ವಿಶೇಷವೆಂದರೆ ತಲಕಾಡಿನ ಮರಳು ದಿಬ್ಬದಲ್ಲಿಯೂ ಮೂಗುತಿ ಕತೆಯಿದೆ. ವಿಜಯನಗರ ಸಾಮ್ರಾಜ್ಯದ ಪ್ರತಿನಿಧಿ ತಿರುಮಲರಾಜ ಅನಾರೋಗ್ಯದಿಂದ ಬಳಲಿದನು. ವೈದೀಶ್ವರ ದೇಗುಲಕ್ಕೆ ಹರಕೆ ಸಲ್ಲಿಸಲು ತಲಕಾಡಿಗೆ ಬಂದನು. ಪತಿಯನ್ನು ಅನುಸರಿಸಿ ಪತ್ನಿ ರಂಗಮ್ಮನೂ ಬಂದಳು. ಮೈಸೂರು ಅರಸರು ಇವಳ ಬೆಲೆಬಾಳುವ ಮೂಗುತಿ ಅಪಹರಿಸಲು ಪ್ರಯತ್ನಿಸಿ, ತಲಕಾಡಿನ ಮೇಲೆ ದಂಡೆತ್ತಿ ಬಂದರು. ಆಗ ತಿರುಮಲರಾಜ ಯುದ್ಧದಲ್ಲಿ ಸಾವನ್ನಪ್ಪಿದನು. ತಕ್ಷಣ ಕಾವೇರಿ ನದಿಗೆ ಓಡಿ ಬಂದ ರಂಗಮ್ಮ, ಮೂಗುತಿಯನ್ನು ತಲಕಾಡಿನ ಮಾಲಂಗಿ ಮಡುವಿಗೆ ಎಸೆದು ನದಿಗೆ ಧುಮುಕಿ ಪ್ರಾಣ ಬಿಟ್ಟಳೆಂಬ ಮಾತಿದೆ. ಸಾಯುವಾಗ, “ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ಅರಸರಿಗೆ ಮಕ್ಕಳಾಗದೇ ಹೋಗಲಿ’ ಎಂದು ಶಾಪ ಹಾಕಿದಳಂತೆ! ಹೀಗಾಗಿ ತಲಕಾಡು ಮರಳು ದಿಬ್ಬವಾಗಿದೆಯೆಂಬ ನಂಬಿಕೆಯಿದೆ.
ಕೀಳ್‌ಮಂಜೇರಿಯಲ್ಲಿ ಆಮೆಯೊಂದು ತಪಸ್ಸು ಮಾಡಿದ ಕತೆಯಿದೆ. ಇಬ್ಬರು ಮಹಿಳೆಯರು ತಮಗೆ ಜನಿಸುವ ಮಕ್ಕಳನ್ನು ಸತಿಪತಿಯರನ್ನಾಗಿಸುವ ಒಪ್ಪಂದ ಮಾಡಿಕೊಂಡರು. ಒಬ್ಬಳಿಗೆ ಹೆಣ್ಣು ಜನಿಸಿತು, ಮತ್ತೂಬ್ಬಳಿಗೆ ಆಮೆ ಹುಟ್ಟಿತು. ಆಮೆಯನ್ನು ಹೆಣ್ಣು ಮದುವೆಯಾಗುತ್ತಾಳೆಯೇ? ಹೀಗಾಗಿ ಆಮೆ ದೇವರನ್ನು, ಸ್ತುತಿಸಿ ಮನುಷ್ಯರೂಪ ಪಡೆದು ಆಕೆಯನ್ನು ಮದುವೆಯಾಯಿತಂತೆ! ರಾಮಾಯಣ, ಮಹಾಭಾರತದ ಕತೆಗಳು ನದಿಯ ಉದ್ದಕ್ಕೂ ಸಿಗುತ್ತವೆ. ರಾಮ, ಸೀತೆ, ಲಕ್ಷ್ಮಣ, ಹನುಮಂತ, ಸುಗ್ರೀವ, ಪಾಂಡವರೆಲ್ಲ ಅಲ್ಲಲ್ಲಿ ಕತೆಗಳ ರೂಪದಲ್ಲಿ ನದಿಯಲ್ಲಿ ಕಾಣಿಸುತ್ತಾರೆ. ಭೂಮಿಯ ಜೀವಲೋಕದ ಯಾತ್ರೆಯ ಉದ್ದಕ್ಕೂ ನದಿದಂಡೆಯಲ್ಲಿರುವಷ್ಟು ಕತೆಗಳು ಬೇರೆಲ್ಲಿಯೂ ಸಿಗುವುದಿಲ್ಲ. ಆಧಾರ, ದಾಖಲೆಗಳನ್ನು ಹಿಡಿದು ಇವುಗಳ ಸತ್ಯಾಸತ್ಯತೆ ಚರ್ಚೆಗೆ ನಿಲ್ಲುವುದಕ್ಕಿಂತ, ನದಿ ಸ್ಥಳದ ಮಹಾತ್ಮೆ ವಿವರಿಸಲು ಕತೆ ಹೆಣೆದ ಅನಕ್ಷರಸ್ಥ ಜನಪದರ ಜಾಣ್ಮೆ ಮೆಚ್ಚಬೇಕು. ತಪೋಭೂಮಿಯಾಗಿ, ಪುರಾಣ ಪ್ರವಚನದ ನೆಲೆಯಾಗಿ, ಕಲೆ ಸಂಸ್ಕೃತಿಗೆ ನೆರವಾಗಿ ನದಿ ಪ್ರವಹಿಸಿದ್ದು ಕೃತಕ ಟಿಎಂಸಿ ಲೆಕ್ಕದಲ್ಲಿ ಸಿಗುವುದಿಲ್ಲ, ಬೆಲೆ ಕಟ್ಟಲಾಗುವುದಿಲ್ಲ.
ಒಬ್ಬ ಮನುಷ್ಯನನ್ನು ಅರ್ಥ ಮಾಡಿಕೊಳ್ಳಲು ಮಾತಾಡಬೇಕು. ಜೊತೆಗಿನ ಒಡನಾಟ, ಊಟ, ವ್ಯವಹಾರಗಳಿಂದ ಒಂದಷ್ಟು ಒಳನೋಟ ದೊರೆಯುತ್ತದೆ. ನದಿಮಾತೆ ಮಾತಿಗೆ ಸಿಲುಕುವವಳಲ್ಲ, ಹರಟೆಗೆ ಕೂರುವವಳಲ್ಲ. ಅರ್ಥ ಮಾಡಿಕೊಳ್ಳಲು ಕಾಡು ಸುತ್ತುವುದು, ದಂಡೆಗುಂಟ ನಡೆಯುವುದು, ವನವಾಸಿಗರು, ಕೃಷಿಕರ ಜೊತೆ ಮಾತಾಡುವುದು, ಚರಿತ್ರೆಯ ಪುಟ ತೆಗೆಯುವ ವಿಧಾನವಿದೆ. ದೇಗುಲದ ಉತ್ಸವ ನೋಡುವುದು ಅರಿವಿನ ಭಾಗ, ಕಾವೇರಿ ತೀಥೋìದ್ಭವದ ಜನಜಾತ್ರೆ ಇನ್ನಷ್ಟು ಸಂಗತಿ ತಿಳಿಸಬಹುದು. ದಂಡೆಯ ಸಂತೆಯಲ್ಲಿ ನದಿಯ ಬಣ್ಣ ಕಾಣಿಸುತ್ತದೆ. ದನಕರುಗಳ ಕೊಂಬಿನಲ್ಲಿ ಕಣಿವೆಯ ಹಸಿರಿನ ಶಕ್ತಿ ರಾರಾಜಿಸುತ್ತದೆ. ಜನಪದ ಜ್ಞಾನ ಹೀರದೇ ನದಿಯ ಇತಿಹಾಸ ಅರಿಯಲಾಗದು. ನದಿಯಿಂದ ನದಿಗೆ ನೀರಿನ ಗುಣಗಳಲ್ಲಿ ವ್ಯತ್ಯಾಸಗಳಿವೆ. “ಹತ್ತು ಕೆರೆಗಳ ನೀರು ಕುಡಿದವರು’ ಮಾತನ್ನು ಹಿರಿಯರು ವಾಡಿಕೆಯಲ್ಲಿ ಬಳಸುತ್ತಾರೆ. ಅಂದರೆ ಹೇರಳ ಜೀವನಾನುಭವ ಪಡೆದ ಚಾಣಾಕ್ಷನೆಂದು ಅರ್ಥವಿದೆ… ಆದರೆ ನಾವು ತಾಂತ್ರಿಕ ನೈಪುಣ್ಯತೆಯಲ್ಲಿ ಬೆಳೆದವರು, ಕಟ್ಟಕಡೆಗೆ ಗಂಗೆಯ ನೀರು ಬಾಯಿಗೆ ಬೀಳುವುದರೊಳಗೆ ನೂರು ನದಿಗಳ ನೀರು ಕುಡಿಯುವಷ್ಟು ವಿಶ್ವವ್ಯಾಪಿಯಾಗಿದ್ದೇವೆ. ಇಷ್ಟಾಗಿಯೂ ಏನೆಲ್ಲ ಓದಿದರೂ ಒಂದು ಕೆರೆ, ಬಾವಿಯನ್ನೂ ಅರ್ಥಮಾಡಿಕೊಳ್ಳದಷ್ಟು ದಡ್ಡರಾಗಿದ್ದೇವೆ.
ಭೂಗರ್ಭ ಶಾಸ್ತ್ರಜ್ಞರ ಜೊತೆ ಕುಳಿತು ಶಿಲಾಪದರದ ರಹಸ್ಯ ನೋಡುವುದು, ಅರಣ್ಯದ ಇತಿಹಾಸ ಹುಡುಕುತ್ತ ಹೊರಟರೂ ಅರಿವು ಸಾಧ್ಯ. ಮರಗಳ ಮಾತು, ನದಿ ಆಳದ ಜಲಚರದ ನೋಟಕ್ಕೆ ನಮಗಿರುವ ಕಣ್ಣಿನ ಸಾಮರ್ಥ್ಯ ಚಿಕ್ಕದು. ಮನುಷ್ಯನಿಗೆ ಮೆದುಳು ಬೆಳೆದು, ಬದುಕು ಕಟ್ಟುವ ಪೂರ್ವದಲ್ಲಿಯೂ ಬೆಟ್ಟದಿಂದ ಧುಮ್ಮಿಕ್ಕುವ ನದಿಯಿತ್ತು, ಜಲಪಾತವಿತ್ತು, ಕಾಡಿತ್ತು, ವನ್ಯ ಸಂಕುಲವಿತ್ತು. ನಮ್ಮೆದುರು ಹಾರಾಡುವ ಪುಟ್ಟ ಪಕ್ಷಿಯ ಕಣ್ಣಿಗೆ ನಮಗಿಂತ ಇನ್ನೂರು ಪಟ್ಟು ದೂರದಲ್ಲಿರುವ ವಸ್ತು ನೋಡುವ ತಾಕತ್ತಿದೆ! ಅಂದರೆ ನಾವೆಷ್ಟು ದಡ್ಡರಲ್ಲವೆ? ಆದರೂ, ಕಣಿವೆಗೆ ಮೊನ್ನೆ ಮೊನ್ನೆ ಬಂದ ನಾವು ನದಿ ಹರಿವಿನ ತೀರ್ಮಾನ ಕೈಗೊಳ್ಳುವಷ್ಟು ದೊಡ್ಡವರಾಗಿದ್ದೇವೆ. ಇಂದಿಗೆ 4,000 ವರ್ಷಗಳ ಹಿಂದೆ ಕಾವೇರಿ ನದಿ ಕಣಿವೆಯ “ಪಾಯಂಪಲ್ಲಿ’ ಹಳ್ಳಿಯ ಸುತ್ತಮುತ್ತಲಲ್ಲಿ ವ್ಯವಸಾಯ ನಡೆದಿದೆ, ಉತನನದಲ್ಲಿ ದಾಖಲೆಗಳು ದೊರಕಿವೆ. ಕ್ರಿ. ಪೂ 1500ರಿಂದ ಕ್ರಿ.ಪೂ 300ರ ಕಾಲಘಟ್ಟದಲ್ಲಿ ಶಿಲಾಯುಗದ ಜನ ಕಾವೇರಮ್ಮನ ತೀರದಲ್ಲಿ ಬಳಸಿದ ಕಲ್ಗೊಡಲಿ, ಬಿಲ್ಲು ಹೊಸ ಶಿಲಾಯುಗದ ಸಾಮಗ್ರಿಗಳವು. ನದಿ- ಮಾನವನ ಮಾತು ನಿಜವಾಗಿ ಇಲ್ಲಿಂದ ಶುರುವಾಗುತ್ತದೆ.-ಮುಂದಿನ ಭಾಗಃ ಕರಿಕಾಲನ ಕಲ್ಲಣೆ ಹಾಗೂ ಕೆರೆಕಟ್ಟೆಯ ಕತೆಗಳು ಶಿವಾನಂದ ಕಳವೆ