ಕೋಲ್ಕತ್ತಾ: ವಿವಿಗಳ ಉಪಕುಲಪತಿಗಳ ನೇಮಕ ಸಂಬಂಧ ಪಶ್ಚಿಮ ಬಂಗಾಳ ಸರ್ಕಾರ ತೀವ್ರ ಮುಖಭಂಗ ಅನುಭವಿಸಿದೆ.
ವಿಶ್ವವಿದ್ಯಾಲಯಗಳಿಗೆ ಉಪ ಕುಲಪತಿಗಳನ್ನು ನೇಮಿಸುವ, ಮರು ನೇಮಿಸುವ ಅಥವಾ ಅಧಿಕಾರವಧಿ ವಿಸ್ತರಿಸುವ ಯಾವುದೇ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿದೆ. ಅಲ್ಲದೇ, 29 ವಿವಿಗಳ ಉಪಕುಲಪತಿಗಳ ನೇಮಕವನ್ನು ರದ್ದುಗೊಳಿಸಿ ಬುಧವಾರ ಆದೇಶ ಹೊರಡಿಸಿದೆ.
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ ಹಾಗೂ ನ್ಯಾ. ರಾಜಶ್ರೀ ಭಾರದ್ವಾಜ್ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಪಶ್ಚಿಮ ಬಂಗಾಳ ವಿಶ್ವವಿದ್ಯಾನಿಲಯಗಳ ಕಾಯ್ದೆಗೆ 2012 ಹಾಗೂ 2014ರಲ್ಲಿ ತಂದಿರುವ ತಿದ್ದುಪಡಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.
ಪ್ರಕರಣ ಸಂಬಂಧಿಸಿದಂತೆ 46 ಪುಟಗಳ ತೀರ್ಪನ್ನು ಸಂವಿಧಾನ ಪೀಠ ಹೊರಡಿಸಿದೆ. ಅದರಲ್ಲಿ “ವಿವಿಗಳ ಉಪಕುಲಪತಿ ಹುದ್ದೆಯ ಪ್ರಾಮುಖ್ಯತೆಯನ್ನು ನ್ಯಾಯಾಲಯ ಗಮನಿಸಿದೆ. ಈ ಹುದ್ದೆಗಳಿಗೆ ನೇಮಕಾತಿ ರಾಜ್ಯ ಸರ್ಕಾರದಿಂದಲ್ಲ, ಕಾನೂನಿನ ಪ್ರಕಾರ ಕಟ್ಟುನಿಟ್ಟಾಗಿ ನಡೆಯುವುದು ಅಗತ್ಯ.
Related Articles
ನಿಬಂಧನೆಗಳಿಗೆ ವ್ಯತಿರಿಕ್ತವಾಗಿ ನೇಮಕ ನಡೆದಿದೆ ಎಂದು ತಿಳಿದ ಬಳಿಕವೂ ಅದೇ ನೇಮಕಗಳನ್ನು ಮುಂದುವರಿಸುವುದು ವಿದ್ಯಾರ್ಥಿಗಳಿಗೆ ಹಾಗೂ ವಿವಿ ಆಡಳಿತ ಮಂಡಳಿಯ ಹಿತಾಸಕ್ತಿಗೆ ವಿರುದ್ಧವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಎಲ್ಲ ನೇಮಕಗಳನ್ನು ರದ್ದುಗೊಳಿಸುತ್ತಿದ್ದೇವೆ’ ಎಂದು ಉಲ್ಲೇಖೀಸಿದೆ.