Advertisement

ಕೋಟಿ ಕೋಟಿ ಲೆಕ್ಕಗಳಿಗೆ ಸೆಕೆಂಡುಗಳಲ್ಲಿ ಉತ್ತರಿಸುವ ಶ್ರೀನಿಧಿ

10:09 AM Oct 09, 2018 | |

ಉಡುಪಿ: ಈತ ಆರನೆಯ ತರಗತಿ ವಿದ್ಯಾರ್ಥಿ. ವಯಸ್ಸು 11. ಹೆಸರು ಶ್ರೀನಿಧಿ ನೀರಮಾನ್ವಿ. ಹತ್ತು ಅಂಕಿಗಳನ್ನು ಹತ್ತು ಸಾಲುಗಳಲ್ಲಿ ಕೂಡಿಸಲು ಹೇಳಿದರೆ 25 ಸೆಕಂಡುಗಳಲ್ಲಿ ಮುಗಿಸಬಲ್ಲ. ಇದರ ವಿಶ್ವ ದಾಖಲೆ 10 ಸೆಕೆಂಡು. ಎಂಟು ಅಂಕಿಗಳನ್ನು ಎಂಟು ಅಂಕಿಗಳಿಂದ ಗುಣಿಸಲು ಹೇಳಿದರೆ 40 ಸೆಕೆಂಡುಗಳು ಸಾಕು. ಇದರ ವಿಶ್ವ ದಾಖಲೆ 19 ಸೆಕೆಂಡು. ಕ್ಲಿಷ್ಟಕರವಾದ ವರ್ಗಮೂಲವನ್ನು 21 ಸೆಕೆಂಡುಗಳಲ್ಲಿ ಹೇಳಬಲ್ಲ. ಇದರ ವಿಶ್ವದಾಖಲೆ 13 ಸೆಕೆಂಡು. ನಿಮ್ಮ ಹುಟ್ಟಿದ ದಿನಾಂಕವನ್ನು ಹೇಳಿದರೆ ತತ್‌ಕ್ಷಣ ವಾರಗಳನ್ನು ಹೇಳುತ್ತಾನೆ ! 

Advertisement

ಶ್ರೀನಿಧಿ ಅಬಾಕಸ್‌ ಮತ್ತು ವೇದ ಗಣಿತ ಕಲಿತಿದ್ದಾನೆ. ಅಬಾಕಸ್‌ ಉಪ ಕರಣಾಧಾರಿತವಾದರೆ ವೇದ ಗಣಿತದಿಂದ ಕ್ಷಿಪ್ರ ಗತಿಯಲ್ಲಿ ಲೆಕ್ಕ ಹಾಕುವ ಸಾಮರ್ಥ್ಯ ಬೆಳೆಸುತ್ತದೆ. ಈತನ ಗುರಿ ಗಣಿತಜ್ಞನಾಗಿ ಸೂತ್ರಗಳನ್ನು ಕಂಡು ಹಿಡಿಯುವುದು.

ಶ್ರೀನಿಧಿ ಜರ್ಮನಿಯ ವೋಲ್ಟ್ಸ್ ಬರ್ಗ್‌ನಲ್ಲಿ ಇತ್ತೀಚೆಗಷ್ಟೇ ಮುಗಿದ 8 ನೇ ಮೆಂಟಲ್‌ ಕ್ಯಾಲ್ಕುಲೇಶನ್‌ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದ. ಜಗತ್ತಿನ ವಿವಿಧ ದೇಶಗಳ 40 ಮಂದಿ ಭಾಗವಹಿಸಿದ್ದರು. ಜರ್ಮನಿಯ ರೆಕಾರ್ಡ್‌ ಹೋಲ್ಡರ್‌ ಸಂಸ್ಥೆಯೊಂದು ಇದನ್ನು ಆಯೋಜಿಸಿದ್ದು, ಭಾರತದಿಂದ ಪಾಲ್ಗೊಂಡ ನಾಲ್ವರ ಪೈಕಿ ಕರ್ನಾಟಕ
ದಿಂದ ಶ್ರೀನಿಧಿ ಮಾತ್ರ. ಒಟ್ಟೂ 40 ಮಂದಿ ಸ್ಪರ್ಧಿಗಳಲ್ಲಿ ಈತನೇ ಕಿರಿಯ.

ರಾಜ್ಯದಿಂದ ಯಾರೂ ಇದುವರೆಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ ಎನ್ನುತ್ತಾರೆ ಅವನ ತಂದೆ ದುರ್ಗಾಪ್ರಸಾದ್‌. ಅಂಕ ಗಣಿತದ ಪ್ರತಿಭೆಗಳನ್ನು ಪ್ರೋತ್ಸಾಹಿಸಲು 2 ವರ್ಷಗಳಿಗೊಮ್ಮೆ ಈ ಸ್ಪರ್ಧೆ ನಡೆಸಲಾಗುತ್ತದೆ. ಅಂತರ್ಜಾಲದಲ್ಲಿ ಪೂರ್ವ ನಿಗದಿಯಂತೆ ಸ್ಪರ್ಧೆಯ ಪ್ರಕಟನೆ ನೀಡಲಾಗುವುದು. ಇದೊಂದು ಮುಕ್ತ ಸ್ಪರ್ಧೆ ಆಸಕ್ತರು ವಯೋಮಿತಿಯ ಭೇದವಿಲ್ಲದೆ ನೋಂದಣಿ ಮಾಡಿಕೊಳ್ಳಬಹುದು. ಆನ್‌ಲೈನ್‌ ಪರೀಕ್ಷೆಯಲ್ಲಿ ಆಯ್ಕೆ ಮಾಡಲಾಗುತ್ತದೆ. ವಿವರ ವೆಬ್‌ಸೈಟ್‌ www.recordholder.org ಯಲ್ಲಿ ಲಭ್ಯ.

ಶ್ರೀನಿಧಿಯ ತಂದೆ ಮತ್ತು ತಾಯಿ ಮೂಲತಃ ರಾಯಚೂರು ಜಿಲ್ಲೆ ಮಾನ್ವಿ ಸಮೀಪದ ನೀರಮಾನವಿಯವರಾದ ಬಳ್ಳಾರಿ ನಿವಾಸಿ, ಗಣಿ ಎಂಜಿನಿಯರ್‌ ದುರ್ಗಾಪ್ರಸಾದ್‌ ಮತ್ತು ಉಡುಪಿ ಎಲ್ಲೆ„ಸಿ ಸಹಾಯಕ ಆಡಳಿತ ಅಧಿಕಾರಿ ವಿ. ಸರಿತಾ. ಶ್ರೀನಿಧಿ ಬಳ್ಳಾರಿಯಲ್ಲಿ ಅಬಾಕಸ್‌ ಕಲಿತಿದ್ದ. ಮೈಸ್‌ನಲ್ಲಿ ವೇದಗಣಿತ ತಿಳಿದ. ದೊಡ್ಡ ದೊಡ್ಡ ಸಂಖ್ಯೆಗ
ಳನ್ನು ಕೂಡಿಸಿ, ಗುಣಿಸಿ, ಭಾಗಿಸುವ, ವರ್ಗಮೂಲ ಕ್ಯಾಲೆಂಡರ್‌ ದಿನ ಪತ್ತೆ ಹಚ್ಚುವುದನ್ನು ಸ್ವಪ್ರಯತ್ನದಿಂದ ಕಲಿತನಂತೆ. ಈತ ಬ್ರಹ್ಮಾವರದ ಲಿಟ್ಲರಾಕ್‌ ಇಂಡಿಯನ್‌ ಸ್ಕೂಲ್‌ನ ವಿದ್ಯಾರ್ಥಿ. “ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಅವಕಾಶ ಕಲ್ಪಿಸಿದರೆ ಮಾತ್ರ ಬೆಳೆಯಬಲ್ಲದು’ ಎನ್ನುತ್ತಾರೆ ದುರ್ಗಾಪ್ರಸಾದ್‌.

Advertisement

ನಾನು ಜಗತ್ತಿನ ಅತಿ ವೇಗದ ಮಾನವ ಕ್ಯಾಲ್ಕುಲೇಟರ್‌ ಆಗಬೇಕೆಂದಿದ್ದೇನೆ. ಪ್ರಸಿದ್ಧ ಗಣಿತಜ್ಞನಾಗುತ್ತೇನೆ. ಸುಲಭದ ಸೂತ್ರಗಳನ್ನು ಕಂಡು ಹಿಡಿಯುತ್ತೇನೆ.
ಶ್ರೀನಿಧಿ ನೀರಮಾನವಿ

Advertisement

Udayavani is now on Telegram. Click here to join our channel and stay updated with the latest news.

Next