Advertisement

ಎನ್‌ಐಎಗೆ ಮತ್ತಷ್ಟು ಬಲ

09:04 AM Jun 27, 2019 | Team Udayavani |

ನವದೆಹಲಿ: ಭಯೋತ್ಪಾದನೆ ಚಟುವಟಿಕೆ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿರುವ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಹೆಚ್ಚಿನ ಅಧಿಕಾರ ನೀಡುವ ಕಾಲ ಕೊನೆಗೂ ಕೂಡಿ ಬರುತ್ತಿದೆ.

Advertisement

ಎನ್‌ಐಎಯನ್ನು ಸಶಕ್ತೀಕರಣಗೊಳಿಸಲು ಸರ್ಕಾರ ಮುಂದಾದಾಗಲೆಲ್ಲ ಒಂದಲ್ಲ ಒಂದು ಅಡೆತಡೆ ಎದುರಾಗುತ್ತಿತ್ತು. ಈಗ ಈ ಬಗ್ಗೆ ಮಹತ್ವದ ಹೆಜ್ಜೆ ಇಟ್ಟಿರುವ ಸರ್ಕಾರ, ಎನ್‌ಐಎಗೆ ಇನ್ನಷ್ಟು ಅಧಿಕಾರ ನೀಡುವುದಕ್ಕೆ ಸಂಬಂಧಿಸಿದಂತೆ ಎರಡು ಕಾನೂನುಗಳಿಗೆ ತಿದ್ದುಪಡಿ ತರಲು ಹೊರಟಿದೆ. ರಾಷ್ಟ್ರೀಯ ತನಿಖಾ ದಳಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಿರುವ ಎನ್‌ಐಎ ಕಾಯ್ದೆ ಹಾಗೂ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎನ್ನಲಾಗಿದೆ.

ಎನ್‌ಐಎ ಸದ್ಯ ಕೇವಲ ದೇಶದಲ್ಲಿನ ಉಗ್ರ ಚಟುವಟಿಕೆಗಳ ತನಿಖೆ ಮಾಡಬಹುದು. ಆದರೆ ಸೈಬರ್‌ ಅಪರಾಧಗಳು ಮತ್ತು ಇತರ ಕೇಸ್‌ಗಳ ತನಿಖೆಯನ್ನು ಮಾಡುವುದಿಲ್ಲ. ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಗೆ ಮಾಡಲು ಸಮ್ಮತಿಸಲಾದ ತಿದ್ದುಪಡಿಯಲ್ಲಿ ಎನ್‌ಐಎಗೆ ಸೈಬರ್‌ ಅಪರಾಧಗಳು ಹಾಗೂ ಮಾನವ ಕಳ್ಳ ಸಾಗಣೆ ಪ್ರಕರಣಗಳ ತನಿಖೆ ಮಾಡಲೂ ಅವಕಾಶ ನೀಡಲಾಗಿದೆ. ಇದರಿಂದಾಗಿ ಎನ್‌ಐಎ ಅಧಿಕಾರ ವ್ಯಾಪ್ತಿ ವಿಸ್ತರಿಸಲಿದ್ದು, ವಿದೇಶಗಳಲ್ಲೂ ಎನ್‌ಐಎ ತನಿಖೆ ನಡೆಸಲು ಸಾಧ್ಯವಾಗಲಿದೆ. ಅಷ್ಟೇ ಅಲ್ಲ, ದೇಶದ ವಿವಿಧೆಡೆ ವ್ಯಾಪಕ ಪ್ರಮಾಣದಲ್ಲಿ ದಾಖಲಾಗುತ್ತಿರುವ ಸೈಬರ್‌ ಅಪರಾಧಗಳ ಪ್ರಕರಣಗಳು ಎನ್‌ಐಎ ವ್ಯಾಪ್ತಿಗೆ ಒಳಪಡುವುದರಿಂದ, ಸೈಬರ್‌ ಅಪರಾಧಗಳೂ ನಿಯಂತ್ರಣಕ್ಕೆ ಬರಲಿವೆ.

ವ್ಯಕ್ತಿಗೂ ಉಗ್ರ ಹಣೆಪಟ್ಟಿ: ಈವರೆಗೆ ಯಾವುದೇ ಸಂಸ್ಥೆಯನ್ನು ಉಗ್ರಗಾಮಿ ಸಂಘಟನೆ ಎಂದು ಗುರುತಿಸಲು ಅವಕಾಶವಿತ್ತು. ಆದರೆ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿಯನ್ನು ಉಗ್ರ ಎಂದು ಘೋಷಿಸುವ ಅವಕಾಶವೇ ಇರಲಿಲ್ಲ. ಅಮೆರಿಕ ಹಾಗೂ ಇತರ ರಾಷ್ಟ್ರಗಳಲ್ಲಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು, ಆತನ ವಿರುದ್ಧದ ಆರೋಪ ಸಾಬೀತಾದರೆ ಉಗ್ರ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಗೆ ತಂದ ತಿದ್ದುಪಡಿಯ ಪ್ರಕಾರ ಈಗ ಎನ್‌ಐಎ ಯಾವುದೇ ಉಗ್ರ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ವ್ಯಕ್ತಿಗೂ ಉಗ್ರ ಎಂಬ ಹಣೆಪಟ್ಟಿ ಕಟ್ಟಬಹುದಾಗಿದೆ.

ಇತ್ತೀಚೆಗೆ ಐಸಿಸ್‌ ಉಗ್ರ ಸಂಘಟನೆಗೆ ಸೇರುತ್ತಿರುವ ಜನರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಮಹತ್ವದ್ದಾಗಿದೆ. ಈಗಾಗಲೇ ಯುಎಪಿಎ ಸೆಕ್ಷನ್‌ 35ರ ಅಡಿಯಲ್ಲಿ 39 ಸಂಸ್ಥೆಗಳನ್ನು ಉಗ್ರ ಸಂಘಟನೆಗಳು ಎಂದು ಘೋಷಿಸಲಾಗಿದೆ.

Advertisement

ಏನು ಬದಲಾವಣೆ

• ಸೈಬರ್‌ ಅಪರಾಧಗಳು, ಮಾನವ ಕಳ್ಳ ಸಾಗಣೆ ತನಿಖೆ ಮಾಡಲು ಅವಕಾಶ
• ವಿದೇಶಗಳಲ್ಲೂ ತನಿಖೆ ನಡೆಸಲು ಸಾಧ್ಯ
• ಉಗ್ರ ಚಟುವಟಿಕೆಯಲ್ಲಿ ಭಾಗಿಯಾದ ವ್ಯಕ್ತಿಗೆ ಉಗ್ರ ಪಟ್ಟ ಘೋಷಿಸುವ ಅಧಿಕಾರ

2 ವರ್ಷಗಳಿಂದ ನಿರೀಕ್ಷೆ

2009ರಲ್ಲಿ ಮುಂಬೈ ದಾಳಿ ನಡೆದ ಹಿನ್ನೆಲೆಯಲ್ಲಿ ಉಗ್ರಗಾಮಿ ಚಟುವಟಿಕೆಗಳ ತನಿಖೆಗೆಂದೇ ಎನ್‌ಐಎ ಅನ್ನು ಸ್ಥಾಪಿಸಲಾಗಿತ್ತು. ಆದರೆ ಕೆಲವೇ ವರ್ಷಗಳಲ್ಲಿ ಈ ಸಂಸ್ಥೆಯ ಅಧಿಕಾರ ವ್ಯಾಪ್ತಿಯನ್ನು ವಿಸ್ತರಿಸುವ ಆಗ್ರಹ ಕೇಳಿಬಂದಿತ್ತು. 2017ರ ವೇಳೆಗೆ ಕೇಂದ್ರ ಗೃಹ ಸಚಿವಾಲಯವು ಈ ಎರಡು ಪ್ರಸ್ತಾವನೆಗಳ ಬಗ್ಗೆ ಚರ್ಚೆ ನಡೆಸಲು ಆರಂಭಿಸಿತ್ತು. ಕೊನೆಗೂ ಈ ತಿದ್ದುಪಡಿಗಳಿಗೆ ಕೇಂದ್ರ ಸಂಪುಟ ಅನುಮತಿ ನೀಡಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಈ ಮಸೂದೆಗಳನ್ನು ಈ ಬಾರಿಯ ಅಧಿವೇಶನದಲ್ಲೇ ಮಂಡಿಸಲಾಗುತ್ತದೆ.
Advertisement

Udayavani is now on Telegram. Click here to join our channel and stay updated with the latest news.

Next