Advertisement

Cabinet Meeting: ಕೇಂದ್ರ ಅಂಗಾಗ ಕಸಿ ಕಾಯ್ದೆಗೆ ನಾಳೆ ರಾಜ್ಯ ಸಚಿವ ಸಂಪುಟದಲ್ಲಿ ಒಪ್ಪಿಗೆ?

01:23 AM Jan 15, 2025 | Team Udayavani |

ಬೆಂಗಳೂರು: ಆಸ್ಪತ್ರೆಯಲ್ಲಿ ನಿಧನ ಹೊಂದಿದ ನೇತ್ರದಾನಿಗಳ ಕಾರ್ನಿಯಾ ತೆಗೆಯಲು ವಾರಸುದಾರರ ಅನುಮತಿ ಅಗತ್ಯವಿಲ್ಲ ಎಂಬ ಕೇಂದ್ರ ಸರಕಾರದ ಕಾನೂನನ್ನು ರಾಜ್ಯದಲ್ಲೂ ಜಾರಿಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ.

Advertisement

ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದ್ದು, ಕೇಂದ್ರ ಸರಕಾರದ ತಿದ್ದುಪಡಿ ಅಧಿನಿಯಮ ಮಾನವ ಅಂಗಾಂಗಗಳ ಕಸಿ (ತಿದ್ದುಪಡಿ) ಕಾಯ್ದೆಯನ್ನು ಭಾರತ ಸಂವಿಧಾನ ಅನುಚ್ಛೇದ 252 (1) ರ ಅನ್ವಯ ರಾಜ್ಯದಲ್ಲೂ ಅಳವಡಿಸಿಕೊಳ್ಳಲು ವಿಧಾನಮಂಡಲದಲ್ಲಿ ಮಂಡಿಸುವ ಅಧಿಕೃತ ನಿರ್ಣಯಕ್ಕೆ ಅನುಮೋದನೆ ದೊರಕುವ ಸಂಭವವಿದೆ. ಇದರ ಅನ್ವಯ ಆಸ್ಪತ್ರೆಯಲ್ಲಿ ಮೃತಪಟ್ಟ ನೇತ್ರದಾನಿಗಳ ಕಾರ್ನಿಯಾ ತೆಗೆಯಲು ಕುಟುಂಬದವರ ಅನುಮತಿ ಪಡೆಯಲೇಬೇಕೆಂಬ ನಿಯಮ ಇರುವುದಿಲ್ಲ.

ಇದರೊಂದಿಗೆ ಅಸ್ತಿತ್ವದಲ್ಲಿರುವ ಅಂಗ ಕಸಿ (ಜೀವನ ಸಾರ್ಥಕ್ಯ) ಯೋಜನೆಗೆ ಶ್ವಾಸಕೋಶ, ಹೃದಯ ಮತ್ತು ಮೂಳೆಮಜ್ಜೆಯ ಕಸಿ ಸೇರಿಸಿ ಯೋಜನೆ ವಿಸ್ತರಣೆ ಮಾಡುವ ನಿರ್ಣಯವೂ ಹೊರಬೀಳಲಿದ್ದು, ಅಂತೆಯೇ 2024-25ನೇ ಸಾಲಿನಲ್ಲಿ 3ನೇ ಹಂತದಲ್ಲಿ ನಾಗರಿಕರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಕನ್ನಡಕ ವಿತರಿಸುವ ಆಶಾಕಿರಣ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 13.30 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ಸಿಗುವ ಸಂಭವವಿದೆ.

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಹೊರಗುತ್ತಿಗೆ ಆಧಾರದ ಮೇಲೆ ಆರೋಗ್ಯ ಮಿತ್ರರು ಮತ್ತು ಸಿಬಂದಿಯನ್ನು 53.18 ಕೋಟಿ ರೂ. ಅಂದಾಜು ವೆಚ್ಚದಲ್ಲಿ 2 ವರ್ಷಗಳ ಅವಧಿಗೆ ನೇಮಕ ಮಾಡಿಕೊಳ್ಳಲು ಹೊಸದಾಗಿ ಟೆಂಡರ್‌ ಪ್ರಕ್ರಿಯೆ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ದೊರಕಬಹುದು.

Advertisement

Udayavani is now on Telegram. Click here to join our channel and stay updated with the latest news.