Advertisement

“ಸಂಪುಟ ವಿಸ್ತರಣೆ’: ಪಕ್ಷದ ವರಿಷ್ಠರಿಂದ ಸಿಗದ ಅನುಮತಿ

12:52 AM Sep 20, 2020 | mahesh |

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ದಿಲ್ಲಿ ಯಾತ್ರೆ ಕೈಗೊಂಡು ಸಂಪುಟ ವಿಸ್ತರಣೆ ಇಲ್ಲವೇ ಪುನಾಚರನೆಗೆ ಕಸರತ್ತು ಕೈಗೊಂಡರೂ ವರಿಷ್ಠರಿಂದ ಯಾವುದಕ್ಕೂ ಹಸುರು ನಿಶಾನೆ ಸಿಗದ ಹಿನ್ನೆಲೆಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭಕ್ಕೂ ಮೊದಲೇ ಸಂಪುಟ ಸೇರಬೇಕೆಂಬ ಆಕಾಂಕ್ಷಿಗಳ ಕನಸು ಭಗ್ನಗೊಂಡಿದೆ. ಶನಿವಾರ ಇಡೀ ದಿನ ಕಾದರೂ ವರಿಷ್ಠರಿಂದ ಹಸುರು ನಿಶಾನೆ ಸಿಗದ ಕಾರಣ ಅಧಿವೇಶನದ ಬಳಿಕವಷ್ಟೇ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಎಂಬಂತಾಗಿದೆ. ಇದರಿಂದ ಸಚಿವಾಕಾಂಕ್ಷಿಗಳಾಗಿದ್ದ ಮೂಲ ಮತ್ತು ವಲಸಿಗ ಶಾಸಕರು ಇನ್ನಷ್ಟು ದಿನ ಕಾಯುವುದು ಅನಿವಾರ್ಯವಾಗಿದೆ.

Advertisement

ಒಂದೆಡೆ ಸಂಸತ್‌ ಅಧಿವೇಶನ ನಡೆಯುತ್ತಿದ್ದರೆ ಮತ್ತೂಂದೆಡೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದಾರೆ. ಕೋವಿಡ್‌- 19ರ ಸಂದರ್ಭದಲ್ಲಿ ಸದನ ನಡೆಸುತ್ತಿರುವ ಹಿನ್ನೆಲೆಯಲ್ಲಿ ವರಿಷ್ಠರು ಸಾಕಷ್ಟು ಒತ್ತಡದಲ್ಲಿದ್ದಾರೆ. ಇತ್ತ ರಾಜ್ಯ ವಿಧಾನಮಂಡಲ ಅಧಿವೇಶನವೂ ಸೋಮವಾರದಿಂದ ಆರಂಭವಾಗಲಿದ್ದು, ಈ ಹೊತ್ತಿನಲ್ಲಿ ಸಂಪುಟ ಪುನಾರಚನೆ ಇಲ್ಲವೇ ವಿಸ್ತರಣೆಯ ಅನಿವಾರ್ಯತೆ ಬಗ್ಗೆ ಪರಿಶೀಲಿಸಿರುವ ವರಿಷ್ಠರು ಸದ್ಯದ ಪರಿಸ್ಥಿತಿಯಲ್ಲಿ ಯಾವುದೂ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಂತಿದೆ. ಎಂದು ಮೂಲಗಳು ತಿಳಿಸಿವೆ.

ದಿಲ್ಲಿ ಪ್ರವಾಸ ಯಶಸ್ವಿಯಾಗಿದೆ. ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಿಸಬೇಕೆಂಬುದು ನಮ್ಮ ಅಪೇಕ್ಷೆ ಎಂದು ಯಡಿಯೂರಪ್ಪ ಅವರು ಶನಿವಾರವೂ ಪುನರುಚ್ಚರಿಸಿದರಾದರೂ ವರಿಷ್ಠರ ಒಪ್ಪಿಗೆ ಸಿಗದ ಕಾರಣ ಸದ್ಯ ಸಂಪುಟ ವಿಸ್ತರಣೆಯ ಲೆಕ್ಕಾಚಾರ ಹುಸಿಯಾಗಿದೆ.
ಗುರುವಾರ ದಿಲ್ಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ಅವರು ಶುಕ್ರವಾರ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಕುರಿತಂತೆ ಪ್ರಸ್ತಾವಿಸಿದ್ದರು. ಬಳಿಕ ಅವರ ಸೂಚನೆಯಂತೆ ಶುಕ್ರವಾರ ರಾತ್ರಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಸಂಪುಟ ಪುನಾರಚನೆ ಬಗ್ಗೆ ಪ್ರಸ್ತಾಪಿಸಿದ್ದರು.

ಇದಕ್ಕೆ ಸ್ಪಂದನೆ ಸಿಗುವ ಲಕ್ಷಣ ಕಾಣದ ಕಾರಣ ಆರ್‌. ಶಂಕರ್‌, ಎಂ.ಟಿ.ಬಿ. ನಾಗರಾಜ್‌ ಸೇರಿದಂತೆ ಐದು ಮಂದಿ ಸಂಭಾವ್ಯ ಸಚಿವರ ಪಟ್ಟಿಯನ್ನು ಜೆ.ಪಿ. ನಡ್ಡಾ ಅವರಿಗೆ ನೀಡಿ ವಿಸ್ತರಣೆಗಾದರೂ ಅವಕಾಶ ನೀಡುವಂತೆ ಕೋರಿದರು. ಈ ಬಗ್ಗೆ ಪ್ರಧಾನಿಯವರೊಂದಿಗೆ ಚರ್ಚಿಸಿ ಮಾಹಿತಿ ನೀಡುವುದಾಗಿ ಜೆ.ಪಿ.ನಡ್ಡಾ ಹೇಳಿ ಕಳುಹಿಸಿದ್ದರು ಎಂದು ಮೂಲಗಳು ಹೇಳಿವೆ.

ಬಿಎಸ್‌ವೈ ಮನವಿ
ಬಿಜೆಪಿ ಸರಕಾರ ರಚನೆಗೆ ಕಾರಣರಾದವರ ಜತೆಗೆ ನಮ್ಮನ್ನು ನೆಚ್ಚಿಕೊಂಡಿರುವ ಕೆಲವು ಆಪ್ತರಿಗೆ ಸಚಿವ ಸ್ಥಾನ ಕೊಡಿಸಲು ಯಡಿಯೂರಪ್ಪ ಅವರು ಇನ್ನಿಲ್ಲದ ಪ್ರಯತ್ನ ನಡೆಸಿದರು. ನಾಲ್ಕು ಮಂದಿ ಸಚಿವರನ್ನು ಕೈಬಿಟ್ಟು ಒಟ್ಟು ಎಂಟು ಮಂದಿಯನ್ನು ಸೇರ್ಪಡೆ ಮಾಡಿಕೊಂಡು ಸಂಪುಟದ ಬಲ ಹೆಚ್ಚಿಸಿಕೊಳ್ಳಲು ಚಿಂತಿಸಿದ್ದರು. ಈ ಕಾರ್ಯಸಾಧನೆಗಾಗಿ ತಮ್ಮ ಆಪ್ತರಾದ ರಕ್ಷಣ ಸಚಿವ ರಾಜನಾಥ ಸಿಂಗ್‌ ಅವರನ್ನು ಗುರುವಾರವೇ ಭೇಟಿಯಾಗಿ ಸಂಪುಟ ಪುನಾರಚನೆ ಇಲ್ಲವೇ ವಿಸ್ತರಣೆಗೆ ನೆರವಾಗುವಂತೆ ಮಧ್ಯಸ್ಥಿಕೆ ವಹಿಸಬೇಕೆಂಬ ಮನವಿಯನ್ನೂ ಯಡಿಯೂರಪ್ಪ ಮಾಡಿದ್ದರು.

Advertisement

ಆ ಬಳಿಕವಷ್ಟೇ ಸಂಪುಟ ಪುನಾರಚನೆಯ ಪ್ರಸ್ತಾವವನ್ನು ಪ್ರಧಾನಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಬಳಿ ಮಂಡಿಸಿದ್ದರು. ಆದರೆ ಎರಡಕ್ಕೂ ವರಿಷ್ಠರು ಸ್ಪಂದಿಸಿದಂತಿಲ್ಲ. ವಿಧಾನಮಂಡಲ ಆರಂಭಕ್ಕೆ ಒಂದೆರಡು ದಿನ ಬಾಕಿ ಇರುವಾಗ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆಗೆ ಮುಂದಾದರೆ ಅವಕಾಶವಂಚಿತರು, ಸಚಿವಾಕಾಂಕ್ಷಿಗಳು ಅಸಮಾಧಾನ ಹೊರಹಾಕಿ ಗೊಂದಲ ಸೃಷ್ಟಿಗೆ ಕಾರಣವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ವರಿಷ್ಠರು ತರಾತುರಿಯ ನಿರ್ಧಾರ ಕೈಗೊಂಡಂತಿಲ್ಲ.

ಆಹ್ವಾನ ನೀಡಿರಲಿಲ್ಲ?
ಸಂಸತ್‌ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ದಿಲ್ಲಿ ಭೇಟಿಗೆ ಯಡಿಯೂರಪ್ಪ ಅವರಿಗೆ ವರಿಷ್ಠರು ಆಹ್ವಾನವನ್ನೇ ನೀಡಿದಂತಿಲ್ಲ. ಕೇಂದ್ರ ಸಚಿವರು ಕಲಾಪಗಳಲ್ಲಿ ನಿರತರಾಗಿದ್ದರೆ, ಹಿರಿಯ ನಾಯಕರು ಬಿಹಾರ ವಿಧಾನಸಭೆ ಚುನಾವಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಪ್ರಮುಖವಾಗಿ ಅಮಿತ್‌ ಶಾ ಅವರು ಅನಾರೋಗ್ಯಕ್ಕೆ ಒಳಗಾಗಿದ್ದ ಕಾರಣ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಸ್ಥಿತಿಯಲ್ಲಿ ರಾಷ್ಟ್ರೀಯ ನಾಯಕರು ಇಲ್ಲ. ಹಾಗಾಗಿ ಯಡಿಯೂರಪ್ಪ ಅವರು ಭೇಟಿಗೆ ಅವಕಾಶ ಕೋರಿದ್ದರೂ ಅವರಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿರಲಿಲ್ಲ ಎಂಬ ಮಾತುಗಳಿವೆ.

ದಿಲ್ಲಿ ಪ್ರವಾಸ ಯಶಸ್ವಿ
ದಿಲ್ಲಿಯಲ್ಲಿ ಶನಿವಾರ ಬೆಳಗ್ಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು. ಬಳಿಕ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಹಿಂದಿರುಗಿದರು. ದಿಲ್ಲಿ ಮತ್ತು ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಈ ಬಾರಿಯ ದಿಲ್ಲಿ ಪ್ರವಾಸ ಅತ್ಯಂತ ಯಶಸ್ವಿಯಾಗಿದೆ ಎಂದು ಭಾವಿಸಿದ್ದೇನೆ. ಪ್ರಧಾನಿ ಸಹಿತ ಏಳು ಮಂದಿ ಸಚಿವರನ್ನು ಭೇಟಿಯಾಗಿ ರಾಜ್ಯದ ಅಭಿವೃದ್ಧಿಯ ಬಗ್ಗೆ ಬೇಡಿಕೆಗಳನ್ನು ಸಲ್ಲಿಸಿದ್ದೇನೆ. ರಾಜ್ಯದ ಅಭಿವೃದ್ಧಿ ಬಗ್ಗೆ ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಆ ಬಗ್ಗೆ ಗಮನ ನೀಡುವ ಜತೆಗೆ ಸೂಕ್ತ ನಿರ್ಧಾರ ಕೈಗೊಂಡು ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭಕ್ಕೂ ಮೊದಲು ಸಂಪುಟ ವಿಸ್ತರಣೆಯಾಗಬೇಕು ಎಂಬುದು ನಮ್ಮ ಅಪೇಕ್ಷೆ. ಅದರಂತೆ ಪ್ರಧಾನಿ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ ಸಮಾಲೋಚಿಸಲಾಗಿದೆ. ಸದ್ಯದಲ್ಲೇ ಸೂಚನೆ ಸಿಗುವ ಸಾಧ್ಯತೆ ಇದೆ. ವರಿಷ್ಠರ ಒಪ್ಪಿಗೆ ಸಿಕ್ಕ ಕೂಡಲೇ ಸಂಪುಟ ವಿಸ್ತರಿಸಲಾಗುವುದು.
– ಬಿ.ಎಸ್‌. ಯಡಿಯೂರಪ್ಪ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next