Advertisement

ಸಂಪುಟ ವಿಸ್ತರಣೆ ಸದ್ಯಕ್ಕೆ ಡೌಟ್, ಪಂಚರಾಜ್ಯ ಚುನಾವಣೆ ಬ್ರೇಕ್

05:24 PM Jan 22, 2022 | Team Udayavani |

ಬೆಂಗಳೂರು : ಸಂಕ್ರಾತಿ ಬಳಿಕ ಸಂಪುಟ ಸೇರುವ ಕನಸು ಕಟ್ಟಿದ್ದ ಬಿಜೆಪಿಯ ಘಟಾನುಘಟಿ ನಾಯಕರಿಗೆ ಈಗ ತಾತ್ಕಾಲಿಕ ನಿರಾಸೆ ಆವರಿಸಿದ್ದು, ರಾಜ್ಯ ಸರಕಾರದ ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ಪ್ರಕ್ರಿಯೆ ಪಂಚರಾಜ್ಯಗಳ ಚುನಾವಣೆ ಬಳಿಕ ನಡೆಯಲಿದೆ.

Advertisement

ಸಂಪುಟ ವಿಸ್ತರಣೆಗೆ ಹಸಿರು ನಿಶಾನೆ ತೋರಬೇಕಿದ್ದ ಬಿಜೆಪಿ ವರಿಷ್ಠರು ಈಗ ಉತ್ತರ ಪ್ರದೇಶ, ಉತ್ತರ ಖಂಡ,ಮಣಿಪುರ, ಪಂಜಾಬ್ ಹಾಗೂ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಮಗ್ನರಾಗಿದ್ದಾರೆ. ಫೆಬ್ರವರಿ ಮೊದಲ ವಾರದಿಂದ ಚುನಾವಣಾ ಕಸರತ್ತು ತಾರಕಕ್ಕೆ ಏರುತ್ತದೆ. ಹೀಗಾಗಿ ಸಹಜ ಸ್ಥತಿಯಲ್ಲಿರುವ ರಾಜ್ಯದಲ್ಲಿ ಸಂಪುಟ ವಿಸ್ತರಣೆಯ ಕೊಸರಾಟಕ್ಕೆ ಇಂಬು ನೀಡದೇ ಇರಲು ವರಿಷ್ಠರು ನಿರ್ಧರಿಸಿದ್ದಾರೆ.

ಹೀಗಾಗಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಪ್ರಕ್ರಿಯೆ ಏಪ್ರೀಲ್ ಮೊದಲವಾರ ನಡೆಯಬಹುದು ಎಂದು ಬಿಜೆಪಿಯ ಉ‌ನ್ನತ ಮೂಲಗಳಿಂದ ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಆಡಳಿತಾತ್ಮಕ ವಿಚಾರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಸದ್ಯಕ್ಕೆ ದಿಲ್ಲಿ ಪ್ರವಾಸ ಇಲ್ಲ ಎಂದು ಸಿಎಂ‌ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ. ಅಲ್ಲಿಗೆ ಸಂಪುಟ ವಿಸ್ತರಣೆ ಪ್ರಕ್ರಿಯೆ ಸದ್ಯಕ್ಕೆ ನನೆಗುದಿಗೆ ಬಿದ್ದಂತಾಗಿದೆ.

ಉತ್ಸಾಹವಿಲ್ಲ

Advertisement

ಕುತೂಹಲಕಾರಿ ಸಂಗತಿ ಎಂದರೆ ಸಂಪುಟ ಸೇರ್ಪಡೆ‌ ವಿಚಾರಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ಆಕಾಂಕ್ಷಿಗಳಿಗೆ ಈಗ ಮೊದಲಿನ ಉತ್ಸಾಹ ಉಳಿದಿಲ್ಲ. ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್ ಶ್ರೀಮಂತರಾವ್ ಪಾಟೀಲ್ ಹೊರತುಪಡಿಸಿ ಹಳೆಯ ಆಕಾಂಕ್ಷಿಗಳು ಈಗ ಹೊಸ ಬೇಡಿಕೆ ಇಟ್ಟಿಲ್ಲ. ಚುನಾವಣಾ ವರ್ಷ ನಿಧಾನಕ್ಕೆ ಪ್ರವೇಶವಾಗುತ್ತಿದೆ. ಹೀಗಾಗಿ ಕ್ಷೇತ್ರ ಗಟ್ಟಿ ಮಾಡಿಕೊಳ್ಳುವುದಕ್ಕೆ ಎಲ್ಲರೂ ಗಮನ ನೀಡುತ್ತಿದ್ದಾರೆ. ಸಂಪುಟಕ್ಕೆ ಸೇರ್ಪಡೆ  ಅವಕಾಶ ಅದಾಗಿಯೇ ಸಿಕ್ಕರೆ ನೋಡೋಣ. ಇಲ್ಲವಾದರೆ ಲಾಬಿ ಮಾಡುವುದು ಬೇಡ ಎಂಬ ಮನಸ್ಥಿತಿಗೆ ಹೆಚ್ಚಿನ ಶಾಸಕರು ಬಂದಿದ್ದಾರೆ.

ಹೀಗಾಗಿ ಸಂಪುಟ ವಿಸ್ತರಣೆಗೆ ನೀಡಿದ್ದ ಸಂಕ್ರಾತಿಯ ಗಡುವು, ಯುಗಾದಿ ಮುಗಿದರೂ ಈಡೇರುವ ಸಾಧ್ಯತೆ ಕಡಿಮೆ. ಖಾಲಿ ಇರುವ ಸ್ಥಾನಗಳ ಭರ್ತಿ ಬಿಟ್ಟರೆ ಪುನರ್ ರಚನೆ ಸಹವಾಸಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶಿಫಾರಸು ಮಾಡದೇ ಇರುವ ಸಾಧ್ಯತೆ ಹೆಚ್ಚಿದ್ದು, ವರಿಷ್ಠರ ಚಿತ್ತ ಸಂಘಟನೆಯತ್ತ ನೆಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next