ಕಲಬುರಗಿ: ವಿಧಾನಸಭಾ ಅಧಿವೇಶನಕ್ಕೆ ಮೊದಲೇ ಸಂಪುಟ ವಿಸ್ತರಣೆ ಬಯಕೆ ಹೊಂದಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.
ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಂಡು ನವದೆಹಲಿಗೆ ತೆರಳುವ ಮೊದಲು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ತೆರಳಿದ ನಂತರ ಸಂಪುಟ ವಿಸ್ತರಣೆ ಕುರಿತಾಗಿ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡಲಾಗುವುದು ಎಂದರು.
ಅತಿವೃಷ್ಟಿ ಹಾನಿಗೆ ಪರಿಹಾರ ಕೋರುವ, ಕೋವಿಡ್, ಪ್ರವಾಹ ಪರಿಸ್ಥಿತಿ ಸೇರಿದಂತೆ ರಾಜ್ಯದ ವಿವಿಧ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಲು ದೆಹಲಿಗೆ ತೆರಳಿ ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಲಾಗುವುದು. ಶುಕ್ರವಾರದಂದು ಪ್ರಧಾನಿಯವರನ್ನು ಭೇಟಿಯಾಗುವ ಸಮಯ ನಿಗದಿಯಾಗಿದೆ ಎಂದರು.
ಇದನ್ನೂ ಓದಿ: ಬೆಳಗ್ಗೆ 4 ಗಂಟೆಯವರೆಗೆ ಡ್ಯಾನ್ಸ್ ಬಾರ್ ನಡೆಸುವವರೆ ಡ್ರಗ್ಸ್ ದಂಧೆಯ ಮೂಲ: ಕುಮಾರಸ್ವಾಮಿ
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅನುದಾನ ನೀಡಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಹಿಂದೆ ಬೀಳುವ ಪ್ರಶ್ನೆಯೇ ಇಲ್ಲ. ಸಮರ್ಪಕ ಅನುದಾನ ನೀಡಲಾಗುವುದು ಎಂದರಲ್ಲದೇ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬದ್ದ ಎಂದು ಪುನರುಚ್ಚರಿಸಿದರು.