ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯಿಂದ ಶ್ರೀಲಂಕೆಯ ತಮಿಳು ನಿರಾಶ್ರಿತರರನ್ನು ಹೊರಗೆ ಇರಿಸಿರುವುದು ಸರಿಯಲ್ಲ. ಕೇಂದ್ರದ ಈ ಧೋರಣೆ ತಾರತಮ್ಯದಿಂದ ಕೂಡಿದೆ ಎಂದು ಡಿಎಂಕೆ ಸುಪ್ರೀಂಕೋರ್ಟ್‌ಗೆ ಅರಿಕೆ ಮಾಡಿಕೊಂಡಿದೆ.
ಹೀಗಾಗಿ, ಕಾಯ್ದೆಯನ್ನು ಅಸಿಂಧು ಎಂದು ಘೋಷಿಸಬೇಕು. ಸರ್ಕಾರ ಹೊಂದಿರುವ ನಿಲುವು ದೇಶದ ಜಾತ್ಯತೀತ ವ್ಯವಸ್ಥೆಗೇ ಮಾರಕವಾಗಿ ಪರಿಣಮಿಸಲಿದೆ ಎಂದು ಪಕ್ಷದ ಪರ ವಕೀಲರು ವಾದಿಸಿದ್ದಾರೆ.
ಸಿಎಎ ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆಯಾಗುತ್ತದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಸೀಮಿತವಾಗಿರುವುದರಿಂದ ಕಾನೂನುಬದ್ಧವಾಗಿಲ್ಲ. ಮೂರು ದೇಶಗಳಲ್ಲಿ ಇರುವ ಮುಸ್ಲಿಮರನ್ನು ಕಾಯ್ದೆಯಿಂದ ಹೊರಗಿಟ್ಟಿರುವುದು ತಾರತಮ್ಯ ಧೋರಣೆಯಾಗಿದೆ ಎಂದು ಪಕ್ಷದ ತನ್ನ ಅಫಿಡವಿಟ್‌ನಲ್ಲಿ ಪ್ರತಿಪಾದಿಸಿದೆ.