Advertisement

ಸಿಎ ಪರೀಕ್ಷೆ- ತ್ರಿಶಾದಲ್ಲಿ ತರಬೇತಿ: ಮಂಗಳೂರಿನ ರಮ್ಯಶ್ರೀ ದೇಶಕ್ಕೆ ದ್ವಿತೀಯ

01:26 PM Jan 11, 2023 | Team Udayavani |

ಮಂಗಳೂರು: ಅಖಿಲ ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆಯು 2022ರ ನವೆಂಬರ್‌ನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಹೊಸಬೆಟ್ಟಿನ ರಮ್ಯಶ್ರೀ ಅವರು ದೇಶದಲ್ಲಿ ದ್ವಿತೀಯ ರ್‍ಯಾಂಕ್‌ ಪಡೆದುಕೊಂಡಿದ್ದಾರೆ.

Advertisement

ಎಲ್‌ಐಸಿ ಉದ್ಯೋಗಿ ರಮೇಶ್‌ ರಾವ್‌ ಮತ್ತು ನ್ಯಾಶನಲ್‌ ಇನ್ಸೂರೆನ್ಸ್‌ ಉದ್ಯೋಗಿ ಮೀರಾ ದಂಪತಿಯ ಪುತ್ರಿ. ಕಾಮತ್‌ ಆ್ಯಂಡ್‌ ರಾವ್‌ ಹಾಗೂ ಎಂ.ಆರ್‌. ಪಿ.ಎಲ್‌. ಸಂಸ್ಥೆಯ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿದ್ದಾರೆ. ಸಿಎ ಇಂಟರ್‌ ಪರೀಕ್ಷೆಗೆ ತ್ರಿಶಾ ದಲ್ಲಿ ತರಬೇತಿ ಪಡೆದುಕೊಂಡಿದ್ದರು. ಅಂತಿಮ ಪರೀಕ್ಷೆಗೆ ಸ್ವಯಂ ಅಧ್ಯಯನ ನಡೆಸಿದ್ದರು.

ನಿರೀಕ್ಷಿಸದೇ ಬಂದ ಭಾಗ್ಯ: ರಮ್ಯಶ್ರೀ
ಸಿಎ ಅಂತಿಮ ಪರೀಕ್ಷೆಯಲ್ಲಿ ದೇಶದಲ್ಲಿ ದ್ವಿತೀಯ ರ್‍ಯಾಂಕ್‌ ಪಡೆದಿರುವ ರಮ್ಯಶ್ರೀ ಈ ಸಾಧನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು “ಉದಯವಾಣಿ’ಗೆ ಪ್ರತಿಕ್ರಿಯಿಸಿದ ಅವರು, ರ್‍ಯಾಂಕ್‌ ನಿರೀಕ್ಷೆ ಇರಲಿಲ್ಲ. ಆದರೆ ದೇಶದಲ್ಲೇ ಎರಡನೇ ರ್‍ಯಾಂಕ್‌ ಲಭಿಸಿರುವುದು ನನ್ನ ಭಾಗ್ಯ.

ಪ್ರತೀ ದಿನ 12 ಗಂಟೆಗಳ ಕಾಲ ಸಿಎ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೆ. ಈ ಹಿಂದೆ ಎಸೆಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ರ್‍ಯಾಂಕ್‌, ಪಿಯುಸಿಯಲ್ಲಿ 5ನೇ ರ್‍ಯಾಂಕ್‌ ಮತ್ತು ಸಿಎ ಇಂಟರ್‌ ಪರೀಕ್ಷೆಯಲ್ಲಿ ದೇಶದಲ್ಲಿ 16 ನೇ ರ್‍ಯಾಂಕ್‌ ಪಡೆದುಕೊಂಡಿದ್ದೆ. ಇದೇ ಕಾರಣಕ್ಕೆ ನನ್ನ ಮೇಲೆ ಪೋಷಕರಿಗೆ ನಿರೀಕ್ಷೆ ಹೆಚ್ಚಿತ್ತು. ಈಗಿನ ಸಾಧನೆ ಅತ್ಯಂತ ಸಂತೋಷ ತಂದಿದೆ ಎನ್ನುತ್ತಾರೆ.

ಭವಿಷ್ಯದ ಬಗ್ಗೆ ಸದ್ಯ ಯಾವುದೇ ಯೋಚನೆ ಮಾಡಿಲ್ಲ. ಈಗಾಗಲೇ ಒಂದೆರಡು ಕಂಪೆನಿಗಳಿಂದ ಆಫರ್‌ ಬಂದಿದೆ. ಯೋಚಿಸಿ ನಿರ್ಧಾರ ಕೈಗೊಳ್ಳುತ್ತೇನೆ. ನನ್ನ ಈ ಸಾಧನೆಗೆ ಪೋಷಕರ ಸಹಕಾರವೂ ಮುಖ್ಯ ಕಾರಣ ಎನ್ನುತ್ತಾರೆ ರಮ್ಯಶ್ರೀ.

Advertisement
Advertisement

Udayavani is now on Telegram. Click here to join our channel and stay updated with the latest news.

Next