Advertisement

ಕಾಂಗ್ರೆಸ್ ರಾಜ್ಯದ ಜನರಿಗೆ ಸುಳ್ಳಿನ ಕಾರ್ಡ್ ವಿತರಣೆ ಮಾಡುತ್ತಿದೆ: ಸಿ.ಟಿ.ರವಿ ವಾಗ್ದಾಳಿ

06:16 PM Mar 06, 2023 | Team Udayavani |

ಮಂಡ್ಯ: ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ ಸುಳ್ಳಿನ ಕಾರ್ಡ್ ವಿತರಣೆ ಮಾಡುತ್ತಿದ್ದು, ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಾಗ್ದಾಳಿ ನಡೆಸಿದರು.

Advertisement

ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಶ್ರೀರಂಗಪಟ್ಟಣದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ರಾಹುಲ್‌ಗಾಂಧಿ ಹೇಳಿದ್ದರು. ಸರ್ಕಾರ ಬಂದು 4 ವರ್ಷ ಆದರೂ ಸಾಲ ಅಲ್ಲಾ ಬಡ್ಡಿಯೂ ಮನ್ನಾ ಆಗಿಲ್ಲ. ಕರ್ನಾಟಕದಲ್ಲೂ ಕಾಂಗ್ರೆಸ್ ಸುಳ್ಳಿನ ಕಾರ್ಡ್ ಕೊಡುತ್ತಿದ್ದು, ಜನರು ಅವರಿಗೆ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷ ಪಿಎಫ್‌ಐಗೆ ಬೆಂಬಲ, ಕುಕ್ಕರ್ ಬಾಂಬ್‌ಗೆ ಸಪೋರ್ಟ್, ಶಿವನ ಸ್ಥಳದಲ್ಲಿ ಯೇಸು ಪ್ರತಿಮೆ ನಿರ್ಮಾಣ, ಒಂದು ಕೋಮಿಗೆ ಬೆಂಬಲ ಕೊಡುವುದು. ಭಯೋತ್ಪಾದಕರಿಗೆ ವಿಶ್ವಾಸ ಕೊಡುವುದು ಇವರ ಗ್ಯಾರಂಟಿ ಎಂದು ಲೇವಡಿ ಮಾಡಿದರು.

ಕೆಆರ್‌ಎಸ್ ಡ್ಯಾಂನಲ್ಲಿ ಬಿದ್ದು ಸತ್ತ ವ್ಯಕ್ತಿಗೂ ನನಗೂ ಯಾವ ಸಂಬಂಧ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿ ಅವರೇ ಸತ್ಯವನ್ನ ಮುಚ್ಚಿಡುವುದು ಕಾನೂನಿನ ಪ್ರಕಾರ ಅಪರಾಧ. ಸತ್ಯವನ್ನು ಕುಮಾರಸ್ವಾಮಿ ಬಿಚ್ಚಿಡಲಿ. ಆದರೆ ರಾಜಕೀಯವಾಗಿ ಎದುರಿಸಲಾಗದೆ ಸುಳ್ಳು ಆರೋಪ ಕಲ್ಪಿಸೋಣಾ ಅಂತ ಪ್ರಯತ್ನಪಡುತ್ತಿದ್ದಾರೆ ಎಂದು ಟೀಕಿಸಿದರು.

ಮಂಡ್ಯ ಉಸ್ತುವಾರಿ ಸಚಿವರ ವಿಚಾರದಲ್ಲಿ ಗೊಂದಲ ಬೇಡ. ಚುನಾವಣೆ ಬಳಿಕ ಮಂಡ್ಯದವರೇ ಬಿಜೆಪಿ ಮೂಲಕ ಮತ್ತೆ ಉಸ್ತುವಾರಿ ಸಚಿವರಾಗಲಿದ್ದಾರೆ ಎಂದ ಅವರು, ವಿಜಯಸಂಕಲ್ಪ ಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. ರಾಜ್ಯದ ನಾಲ್ಕು ಕಡೆಗಳಿಂದ ಯಾತ್ರೆ ನಡೆಯುತ್ತಿದ್ದು, ಡಬಲ್ ಎಂಜಿನ್ ಸರ್ಕಾರದ ರಿಪೋರ್ಟ್ ಕಾರ್ಡ್ ಜನರ ಮುಂದಿಡುತ್ತಿದ್ದೇವೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೆಪ ಹೇಳುತ್ತಿದೆ. ದೇಶದ ಕೆಲವೆಡೆ ಕಾಂಗ್ರೆಸ್ ಆಡಳಿತ ಇದೆ. ಅಲ್ಲೆಲ್ಲಾ ನೀವು ಕರ್ನಾಟಕದಲ್ಲಿ ಕೊಡುತ್ತಿರುವ ಭರವಸೆಗಳನ್ನು ಜಾರಿಗೆ ತನ್ನಿ ಎಂದು ಸವಾಲು ಹಾಕಿದರು.

Advertisement

ಕೆಲವರು ಅತಂತ್ರ ವಿಧಾನಸಭೆ ಬರಲಿ ಎಂದು ಪೂಜೆ ಮಾಡಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಪೂಜೆ ಬಗ್ಗೆ ವ್ಯಂಗ್ಯವಾಡಿದ ಅವರು, ನಮಗೆ ಪೂರ್ಣ ಬಹುಮತ ಕೊಡಿ ಯಾವುದೇ ಗೊಂದಲ ಇಲ್ಲದೆ, ಒಳ್ಳೆಯ ಆಡಳಿತ ನೀಡುತ್ತೇವೆ ಎಂದರು.

ಅಮಿತ್ ಶಾಗೆ ಕಪ್ಪ ಕಾಣಿಕೆ ಸಲ್ಲಿಸಲು ಮಾಡಾಳು ವಿರೂಪಾಕ್ಷ ಹಣ ಸಂಗ್ರಹಿಸಲು ಹೋಗಿ ತಗ್ಲಾಕೊಂಡರು ಎಂಬ ಬಿ.ಕೆ.ಹರಿಪ್ರಸಾದ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹರಿಪ್ರಸಾದ್ ಕಪ್ಪ ಕಾಣಿಕೆ ಕಲೆಕ್ಟ್ ಮಾಡುವ ಕೆಲಸದಲ್ಲಿದ್ದರು. ಹಲವು ರಾಜ್ಯಗಳಲ್ಲಿ ಕಪ್ಪ ಕಾಣಿಕೆ ಕಲೆಕ್ಟ್ ಮಾಡಿ ದೆಹಲಿ ನಾಯಕರಿಗೆ ತಲುಪಿಸುತ್ತಿದ್ದರು. ಅದೇ ಮನಸ್ಥಿತಿಯಲ್ಲಿ ಈಗ ಮಾತನಾಡುತ್ತಿದ್ದಾರೆ. ಅವರು ಹೇಳಿಕೆ ಕೊಟ್ಟಿದ್ದು ತಪ್ಪಿಲ್ಲ. ಹರಿಪ್ರಸಾದ್ ತಮ್ಮ ಚಾಕರಿಯ ಅನುಭವದ ಮೇಲೆ ಮಾತನಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಸಚಿವ ಕಿಶನ್‌ಪಾಲ್ ಗುರ್ಜರ್, ಅಬಕಾರಿ ಸಚಿವ ಕೆ.ಗೋಪಾಲಯ್ಯ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ತಾಲೂಕು ಅಧ್ಯಕ್ಷ ಪೀಹಳ್ಳಿ ರಮೇಶ್ ಇದ್ದರು.

ಇದನ್ನೂ ಓದಿ: H3N2 ವೈರಸ್ ಸೋಂಕಿನ ಬಗ್ಗೆ ಭಯಪಡುವ ಅಗತ್ಯವಿಲ್ಲ: ಸಚಿವ ಡಾ. ಸುಧಾಕರ್

Advertisement

Udayavani is now on Telegram. Click here to join our channel and stay updated with the latest news.

Next