Advertisement

ನರೇಂದ್ರ ಮೋದಿ ದೇಶದ್ರೋಹಿಗಳಿಗೆ ಭಸ್ಮಾಸುರ: ಸಿ.ಟಿ.ರವಿ

01:34 PM Dec 03, 2022 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ದೇಶದ್ರೋಹಿಗಳಿಗೆ ಭಸ್ಮಾಸುರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವ್ಯಾಖ್ಯಾನಿಸಿದ್ದಾರೆ.

Advertisement

ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ’’ ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶವನ್ನು ರಕ್ಷಿಸುವ ಹಾಗೂ ಜನರನ್ನು ಬದುಕಿಸಿದ ವಿಚಾರದಲ್ಲಿ ಮೋದಿಜಿ ಅವರು ಶ್ರೀಮನ್ನಾರಾಯಣ ಎಂದು ಪ್ರಶ್ನೆಗೆ ಉತ್ತರಿಸಿದರು. ಜನರ ಪಾಲಿಗೆ ಅವರು ಕಲ್ಪವೃಕ್ಷ, ಕಾಮಧೇನು ಎಂದು ಅವರು ತಿಳಿಸಿದರು.

ದತ್ತಪೀಠದ ವಿಚಾರದಲ್ಲಿ ನಮ್ಮ ಸರಕಾರ- ನಮ್ಮ ಪಕ್ಷ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದೆ. 10 ದಿನಗಳ ಹಿಂದೆ ನ್ಯಾಯಾಲಯದ ಆದೇಶ, ಅದರ ಅನುಗುಣವಾಗಿ ಸಂಪುಟ ಉಪ ಸಮಿತಿ ತೆಗೆದುಕೊಂಡ ನಿರ್ಣಯದ ಶಿಫಾರಸುಗಳನ್ನು ಅಂಗೀಕರಿಸಿ ಸರಕಾರವು ಆಡಳಿತ ಮಂಡಳಿ ರಚಿಸಿದೆ. ಹಿಂದೂ ಅರ್ಚಕರ ನೇಮಕಕ್ಕಿದ್ದ ಅಡೆತಡೆ ಈಗ ನಿವಾರಣೆಯಾಗಿದೆ; ಹಿಂದೂ ಅರ್ಚಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿಯ ದತ್ತ ಜಯಂತಿ 4-5 ದಶಕಗಳ ಹೋರಾಟ ಈಡೇರಿದ ಸಂತೃಪ್ತಿಯ ಜಯಂತಿ ಆಗಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಸಂಪುಟದ ಉಪಸಮಿತಿಗೆ ಧನ್ಯವಾದಗಳು ಎಂದು ತಿಳಿಸಿದರು.

ಸರಕಾರಿ ದಾಖಲೆಗಳ ಪ್ರಕಾರ ಉಳುವವನೇ ಹೊಲದೊಡೆಯ ಮಸೂದೆಗೆ ಮುಂಚೆ ದತ್ತಾತ್ರೇಯ ದೇವರ ಹೆಸರಿನಲ್ಲಿ 1,861 ಎಕರೆ ಜಾಗ ಇತ್ತು. ಕಾಂಗ್ರೆಸ್ ಆಡಳಿತವಿದ್ದಾಗ ದತ್ತಾತ್ರೇಯ ದೇವರ ಹೆಸರಿನ ಜಮೀನನ್ನು ಗೇಣಿದಾರರೂ ಅಲ್ಲದವರಿಗೆ ಕಾಂಗ್ರೆಸ್ ಮುಖಂಡರು ಅಕ್ರಮವಾಗಿ ಮಂಜೂರು ಮಾಡಿದ್ದರೆಂದು ಮಾಹಿತಿ ಮೇಲ್ನೋಟಕ್ಕೆ ಲಭಿಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಅಕ್ರಮ ಮಂಜೂರಾತಿ ರದ್ದು ಮಾಡಲು ಆಗ್ರಹಿಸುತ್ತೇನೆ ಎಂದರು.

ಕಾಂಗ್ರೆಸ್ ವಿರೋಧದ ಹಿಂದೆ ಮತೀಯ ಓಲೈಕೆ ಜೊತೆಗೇ ದತ್ತಾತ್ರೇಯ ದೇವರ ಹೆಸರಿನಲ್ಲಿದ್ದ ಆಸ್ತಿ ಹೊಡೆಯುವ ಸಂಚು ಇತ್ತು. ಮತ್ತೆ ದತ್ತಾತ್ರೇಯ ದೇವರ ಹೆಸರಿಗೆ ಜಮೀನು ಕಾಯ್ದಿರಿಸಲು ಒತ್ತಾಯ ಮಾಡುವುದಾಗಿ ತಿಳಿಸಿದರು. ಈ ಸಮಗ್ರ ತನಿಖೆಗಾಗಿ ರಾಜ್ಯ ಮಟ್ಟದ ಅಧಿಕಾರಿಗಳ ತಂಡ ರಚಿಸಲು ವಿನಂತಿಸಿದರು.

Advertisement

ಹಿಂದೆ ಸುಪ್ರೀಂ ಕೋರ್ಟ್ ದತ್ತ ಪೀಠದ ವಿಚಾರದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳುವ ಜವಾಬ್ದಾರಿಯನ್ನು ಸರಕಾರಕ್ಕೆ ವಹಿಸಿತ್ತು. ಆದರೆ, ಸಿದ್ದರಾಮಯ್ಯ ಸರಕಾರವು ಸುಪ್ರೀಂ ಕೋರ್ಟ್ ಗೆ ಪ್ರಮಾಣಪತ್ರ ಸಲ್ಲಿಸಿ ಇದು ಸೂಕ್ಷ್ಮ ವಿಚಾರ ಎಂದಿದ್ದರು. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ನೀತಿ ಅನುಸರಿಸಿದ್ದರು. ಸತ್ಯಾಸತ್ಯತೆ ಪರಿಶೀಲಿಸದೆ ಕ್ರಮ ಕೈಗೊಂಡಿದ್ದರು. ಹಿಂದೂ ಅರ್ಚಕರ ನೇಮಕಾತಿ ತಿರಸ್ಕರಿಸಿದ ಸಿದ್ದರಾಮಯ್ಯ ಅವರದು ಯಾವ ಸೀಮೆ ಜಸ್ಟಿಸ್, ಇನ್‍ಸಾನಿಯತ್ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಸಾರ್ವಜನಿಕ ಕ್ಷಮೆ ಕೇಳಬೇಕು. ಹಿಂದೂಗಳನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನೋಡುವ ಕಾಲ ಮುಗಿದಿದೆ. ನಿಮ್ಮ ಓಲೈಕೆ ನೀತಿಯ ಪರಮಾವಧಿ ಅದಾಗಿತ್ತು. ಇದಕ್ಕಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಆರ್ಥಿಕ ಬೆಳವಣಿಗೆ, ಮೂಲಸೌಕರ್ಯ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ ಎಂದ ಅವರು, ಕಾಂಗ್ರೆಸ್- ಕಮ್ಯೂನಿಸ್ಟ್ ಪಕ್ಷಗಳು ತಮ್ಮ ನೀತಿಯ ಬಗ್ಗೆ ಅವಲೋಕನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವು: ಗುಜರಾತ್‍ ನಲ್ಲಿ ಒಂದೂವರೆ ತಿಂಗಳ ಕಾಲ ಚುನಾವಣೆ ಕೆಲಸ ಮಾಡಿದ್ದು, ಅಲ್ಲಿ ಬಿಜೆಪಿ ಪರವಾದ ಅಲೆ ಇದೆ. ಮೋದಿಯವರು ಜನರ ಹೃದಯ ಗೆದ್ದಿದ್ದಾರೆ. ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸ್ಸಿದ್ಧ. ಹಿಮಾಚಲ ಪ್ರದೇಶದಲ್ಲೂ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಸರಕಾರಾತ್ಮಕ ಬದಲಾವಣೆ, ಅಭಿವೃದ್ಧಿಯ ವೇಗದ ವಿಚಾರದಲ್ಲಿ ಕಾಂಗ್ರೆಸ್- ಕಮ್ಯೂನಿಸ್ಟ್ ಪಕ್ಷದ ಸರಕಾರಗಳು ಬಿಜೆಪಿ ಸರಕಾರಗಳಿಗೆ ಸರಿಸಾಟಿಯಲ್ಲ ಎಂದು ವಿಶ್ಲೇಷಿಸಿದರು.

ಗುಜರಾತ್ ನಲ್ಲಿ ಟೀಕಿಸುವ ಯಾವುದೇ ಸರಕಿಲ್ಲದೆ ಪ್ರಧಾನಿ ನರೇಂದ್ರ ಮೋದಿಯವರನ್ನು ರಾವಣ ಎಂದಿದ್ದಾರೆ. ರಾಮಮಂದಿರ ನಿರ್ಮಿಸುವವರು ರಾವಣ ಆಗುವುದು ಹೇಗೆ? ದಿನಕ್ಕೊಂದು ಬಣ್ಣ ಬದಲಿಸುವವರು, ರಾಮನನ್ನು ಕಾಲ್ಪನಿಕ ವ್ಯಕ್ತಿ ಎಂದು ಅಫಿದವಿಟ್ ಕೊಟ್ಟ ಕಾಂಗ್ರೆಸ್ ಪಕ್ಷ ರಾವಣ ಮನಸ್ಥಿತಿ ಹೊಂದಿದೆ. ಕರಸೇವಕರ ಮೇಲೆ ಗೋಲಿಬಾರ್ ಮಾಡಿ ಹತ್ಯೆ ಮಾಡಿದವರು, ಗೋದ್ರಾ ಹತ್ಯಾಕಾಂಡ ಮಾಡಿದವರು, ಅದನ್ನು ಬೆಂಬಲಿಸಿದವರು ರಾವಣನ ಬೆಂಬಲಿಗರು ಎಂದು ಆಕ್ಷೇಪಿಸಿದರು.

2022ರ ಗುಜರಾತ್ ಫಲಿತಾಂಶ 2024ರ ಲೋಕಸಭಾ ಚುನಾವಣಾ ಫಲಿತಾಂಶದ ದಿಕ್ಸೂಚಿ ಎಂದು ವಿಶ್ಲೇಷಿಸಿದ ಅವರು, ರಾಜಕೀಯ ನಿಮಿತ್ತಂ ಬಹುಕೃತ ವೇಷಂ ಎಂಬುದು ರಾಹುಲ್ ಗಾಂಧಿ ಅವರಿಗೆ ಸರಿಹೊಂದುತ್ತದೆ. ರಾಹುಲ್ ಅವರು ಕೇಸರಿ ಶಾಲು ಧರಿಸಿದ ವೇಷದ ಬಗ್ಗೆ ಸಿದ್ದರಾಮಯ್ಯರಿಗೆ ಏನೆನಿಸುತ್ತದೆ ಎಂದು ಅಣಿ ಮುತ್ತು ಹೊರಡಿಸಬೇಕಿದೆ ಎಂದು ಪ್ರಶ್ನಿಸಿದರು. ರಾಹುಲ್ ಕೇಸರಿ ಶಾಲು ಧರಿಸಿದ್ದನ್ನು ಗಮನಿಸಿ ಸಿದ್ದರಾಮಯ್ಯರು ಊಸರವಳ್ಳಿ ಎನ್ನುತ್ತೀರಾ? ರಾಜಕೀಯ ನಿಮಿತ್ತಂ ಬಹುಕೃತ ವೇಷಂ ಎನ್ನುವಿರಾ? ಎಂದು ಕೇಳಿದರು.

ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಬೆಂಕಿ ಹಾಕಿದವರು ಇವರ ದೃಷ್ಟಿಯಲ್ಲಿ ಸೆಕ್ಯುಲರ್‍ಗಳು. ದಾವೂದ್ ಇಬ್ರಾಹಿಂ ಕೂಡ ಇವರಿಗೆ ಸೆಕ್ಯುಲರ್ ಆದಾರು. ನಾನು ಹುಟ್ಟಿದ ಮೂಲ ಸನಾತನ ಧರ್ಮದಲ್ಲೇ ಇರುವವ ಎಂದು ನುಡಿದರು.

ಕಮ್ಯುನಲ್ ಯಾರು? ಸೆಕ್ಯುಲರ್ ಯಾರೆಂದು ಗೊತ್ತಾಗಲಿದೆ. ಆರೆಸ್ಸೆಸ್ ನಿಮಗೆ ಕಮ್ಯುನಲ್. ಬಾಂಬ್ ಹಾಕುವವರು ಸೆಕ್ಯುಲರ್‍ಗಳು. ಸಮಾಜವಾದಿ ಮಜಾವಾದಿ ಆದುದನ್ನು ಇಲ್ಲಿನ ಜನತೆ ನೋಡಿದ್ದಾರೆ. ಇವರ ಜಾತ್ಯತೀತತೆ ಜನರಿಗೆ ತಿಳಿದಿದೆ. ಮಜಾವಾದಿ ಕುಟುಂಬ ವ್ಯಾಮೋಹಿ ಎಂದು ಕರೆಸಿಕೊಳ್ಳುವಷ್ಟೇ ಅರ್ಹತೆ ಇವರದು ಎಂದರು.

ಅಹಿಂದ ಇವರಿಗೆ ಇನ್ನೊಬ್ಬರನ್ನು ಮುಗಿಸಲು ಅಸ್ತ್ರವಾಗಿದೆ. ಕಾಂಗ್ರೆಸ್ಸಿಗರ 3 ತಲೆಮಾರು, 4 ತಲೆಮಾರಿಗೆ ಆಗುವಷ್ಟು ಸಂಪತ್ತು ಮಾಡಿಕೊಂಡಿದ್ದಾರೆ ಎಂದು ಅವರದೇ ಪಕ್ಷದ ರಮೇಶ್‍ಕುಮಾರ್ ಹೇಳಿದ್ದಾರೆ. ದಲಿತ ಮುಖ್ಯಮಂತ್ರಿ ಆಗಬೇಕಿದ್ದ ಡಾ. ಪರಮೇಶ್ವರ್ ಅವರನ್ನು ಸೋಲಿಸಿದ್ದು ಎಲ್ಲರಿಗೂ ಗೊತ್ತಿದೆ. ಮೋಟಮ್ಮ ಆತ್ಮಕಥನದಲ್ಲೂ ಸಿದ್ದರಾಮಯ್ಯರ ರಾಜಕೀಯ ತಂತ್ರವನ್ನು ಬಿಡಿಸಿಟ್ಟಿದ್ದಾರೆ. ಹಿಂದೂವಾದವೇ ಕೋಮುವಾದ ಎಂದಾದರೆ ಆ ಸನಾತನ ಧರ್ಮವನ್ನು ಬೆಂಬಲಿಸುವವ ನಾನು ಎಂದು ತಿಳಿಸಿದರು.

ಇದನ್ನೂ ಓದಿ:ಧೋನಿ ಬಳಿಕ ಸಿಎಸ್ ಕೆಗೆ ಯಾರು ನಾಯಕ?: ಗುಟ್ಟು ಬಿಚ್ಚಿಟ್ಟ ಕೋಚ್ ಮೈಕ್ ಹಸ್ಸಿ

ರೌಡಿಲಿಸ್ಟಿನಲ್ಲಿ ಇದ್ದವರೆಲ್ಲ ರೌಡಿ ಎಂದು ಹೇಳಲಾಗದು. ರಾಜಕೀಯ ಕಾರಣಕ್ಕೆ ನನ್ನ ಹೆಸರೂ ರೌಡಿ ಲಿಸ್ಟಿನಲ್ಲಿತ್ತು. ನಮ್ಮ ಪಕ್ಷದ ಕಾರ್ಯಕರ್ತರೂ ರೌಡಿ ಲಿಸ್ಟಿನಲ್ಲಿದ್ದರು. ಹೋರಾಟ ಮಾಡುವುದೇ ರೌಡಿಸಂ ಎಂಬ ಭಾವನೆ ಕಾಂಗ್ರೆಸ್ಸಿನವರದಾಗಿತ್ತು. ರೌಡಿಗಳ ಸೇರ್ಪಡೆ ವಿಚಾರದಲ್ಲಿ ಪಕ್ಷದ ರಾಜ್ಯಾಧ್ಯಕ್ಷರು ತಮ್ಮ ಸ್ಪಷ್ಟನೆ ನೀಡಿದ್ದಾರೆ ಎಂದು ಈ ಕುರಿತ ಪ್ರಶ್ನೆಗೆ ಸಿ.ಟಿ.ರವಿ ಅವರು ಉತ್ತರ ಕೊಟ್ಟರು.

ಸಿಎಂ ಆಗಿದ್ದ ದೇವರಾಜ ಅರಸು ಅವರು ತಮ್ಮ ಚೇಂಬರ್ ನಲ್ಲಿ ನಟೋರಿಯಸ್ ರೌಡಿಗಳ ಜೊತೆ ಸಭೆ ನಡೆಸಿದ್ದರು. ಅಂಥ ಕೆಲಸ ನಾವು ಮಾಡುವುದಿಲ್ಲ. ಸಂಜಯ್ ಬ್ರಿಗೇಡ್ ಸೇರಲು ಗೂಂಡಾಗಿರಿ ಅರ್ಹತೆಯಾಗಿತ್ತು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ನಲಪಾಡ್‍ಗೆ ಇದೇ ಕಾರಣಕ್ಕೇ ನೀಡಿದ್ದಾರೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ನಮ್ಮದು ಮಾಸ್ ಪಾರ್ಟಿ. ನಮ್ಮ ಪಕ್ಷದ ನೀತಿ- ನಿಯತ್ತು ಬದಲಾಗಿಲ್ಲ. ತಂತ್ರಗಾರಿಕೆ ಬದಲಾಗಿದೆ; ಪ್ರವಾಹದಲ್ಲಿ ಕಸಕಡ್ಡಿಯೂ ಬರುತ್ತದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ನಾನು ಡಿ.ಕೆ.ಶಿವಕುಮಾರ್ ಅವರನ್ನು ರೌಡಿ, ಮಾಜಿ ರೌಡಿ ಎನ್ನುವುದಿಲ್ಲ. ‘ಆ ದಿನಗಳು’ ಅದನ್ನು ಹೇಳಿವೆ ಎಂದು ತಿಳಿಸಿದರು.

ಅಭಿವೃದ್ಧಿ, ರಾಷ್ಟ್ರವಾದ ನಮ್ಮ ಅಜೆಂಡ. ಈ ವಿಷಯದಲ್ಲಿ ಹೊಂದಾಣಿಕೆ ಇಲ್ಲ. ಏಕರೂಪ ನಾಗರಿಕ ಸಂಹಿತೆಯ ವಿಚಾರದಲ್ಲಿ ಬೊಮ್ಮಾಯಿಯವರ ನಿಲುವನ್ನು ಸ್ವಾಗತಿಸುತ್ತೇನೆ. ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಲು ಸಂವಿಧಾನಕರ್ತೃ ಹೇಳಿದ್ದಾರೆ. ಈ ವಿಚಾರದಲ್ಲಿ ಕಾಂಗ್ರೆಸ್- ಜೆಡಿಎಸ್ ನಿಲುವೇನು ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಬಿಜೆಪಿ ಯಾವುದೇ ಬಗೆಯ ಅಸ್ಪ್ರಶ್ಯತೆಯನ್ನು ಬೆಂಬಲಿಸುವುದಿಲ್ಲ; ಅಸ್ಪ್ರಶ್ಯತೆಗೆ ನಮ್ಮಲ್ಲಿ ಜಾಗ ಇಲ್ಲ. ಜಾತಿ ರಾಜಕಾರಣ ಇದ್ದಾಗ ದಲಿತ ದೌರ್ಜನ್ಯ ಹೆಚ್ಚಾಗಿರುತ್ತದೆ. ಹಿಂದುತ್ವ ಇದ್ದಲ್ಲಿ ಇದಕ್ಕೆ ತದ್ವಿರುದ್ಧ ಸ್ಥಿತಿ ಇದೆ ಎಂದು ನುಡಿದರು.

ಗಡಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಬೇಕಿದೆ. ಭಾಷೆ ಬೇರೆಬೇರೆ ಇದ್ದರೂ ಭಾಷೆಯ ಒಳಗೂ ಸಂಬಂಧಗಳಿವೆ. ಸಂಬಂಧ ಗಟ್ಟಿ ಮಾಡಬೇಕು; ಸಂಘರ್ಷ ಹುಟ್ಟು ಹಾಕುವುದಲ್ಲ ಎಂದು ತಿಳಿಸಿದರು. ಅವರೂ ಬಹುದೇವತಾರಾಧನೆ, ಪ್ರಕೃತಿ ಆರಾಧಿಸುವವರು. ಆದರೆ, ಗಡಿ ವಿಚಾರವನ್ನು ಕಗ್ಗಂಟಾಗಿ ಪರಿವರ್ತಿಸಿದ್ದಾರೆ. ಆ ಕಗ್ಗಂಟನ್ನು ಒಂದೊಂದಾಗಿ ಬಿಡಿಸಬೇಕಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಜನಸಂಕಲ್ಪ ಯಾತ್ರೆ ಬಳಿಕ ವಿಜಯಸಂಕಲ್ಪ ಯಾತ್ರೆ ನಡೆಸಲಾಗುವುದು. 150 ಪ್ಲಸ್ ಶಾಸಕರ ಸ್ಥಾನ ಗೆಲ್ಲಲು ಎಲ್ಲ ತಂತ್ರಗಾರಿಕೆ ಮತ್ತು ಪ್ರಯತ್ನವನ್ನು ಮಾಡಲಾಗುವುದು ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next