ಬೆಂಗಳೂರು: ಚನ್ನಪಟ್ಟಣದಲ್ಲಿ ಬಿಜೆಪಿ ಟಿಕೆಟ್ ಗಾಗಿ ಪಟ್ಟು ಹಿಡಿದಿದ್ದ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರು ಇದೀಗ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಂಡಾಯದ ಬಾವುಟ ಹಾರಿಸಿದ್ದಾರೆ.
ಸೋಮವಾರ (ಅ.21) ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಯೋಗೇಶ್ವರ್ ಅವರು ಬಿಜೆಪಿಯಿಂದ ನಾಮ ನಿರ್ದೇಶಿತ ಸದಸ್ಯರಾಗಿ ಆಯ್ಕೆಯಾಗಿದ್ದರು.
ಪಕ್ಷೇತರ ಸ್ಪರ್ಧೆ
ಎಚ್ ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಚನ್ನಪಟ್ಟಣ ವಿಧಾನಸಭೆಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿಂದ ಸ್ಪರ್ಧಿಸಲು ಸಿ.ಪಿ ಯೋಗೇಶ್ವರ್ ಬಯಸಿದ್ದರು. ಆದರೆ ಜೆಡಿಎಸ್ ಜೊತೆಯ ಮೈತ್ರಿಯ ಕಾರಣದಿಂದ ಚನ್ನಪಟ್ಟಣ ಕ್ಷೇತ್ರವನ್ನು ಬಿಜೆಪಿಯು ತೆನೆ ಪಕ್ಷಕ್ಕೆ ಬಿಟ್ಟುಕೊಟ್ಟಿದೆ. ಇದರಿಂದ ಸಿಪಿವೈ ಕೆರಳಿದ್ದಾರೆ.
ಸಿ ಪಿ ಯೋಗೇಶ್ವರ್ ಅವರಿಗೆ ಜೆಡಿಎಸ್ ಟಿಕೆಟ್ ನಿಂದ ಸ್ಪರ್ಧೆಗೆ ಸೂಚಿಸಲಾಗಿತ್ತು. ಆದರೆ ಇದನ್ನು ಸಿಪಿವೈ ತಿರಸ್ಕರಿಸಿದ್ದಾರೆ ಎಂದು ವರದಿ ಹೇಳಿದೆ.
ರಾಜೀನಾಮೆ ಬಳಿಕ ಮಾತನಾಡಿದ ಸಿಪಿ ಯೋಗೇಶ್ವರ್ ಅವರು “ತಾನು ಪಕ್ಷೇತರನಾಗಿ ಸ್ಪರ್ಧೆ ಮಾಡಲಿದ್ದೇನೆ” ಎಂದು ಹೇಳಿದ್ದಾರೆ. ಇದರೊಂದಿಗೆ ಮೊದಲೇ ಗಮನಸೆಳೆದಿರುವ ಚನ್ನಪಟ್ಟಣ ಉಪಚುನಾವಣೆ ಕದನವು ಇದೀಗ ತ್ರಿಕೋನ ಸ್ಪರ್ಧೆಗೆ ವೇದಿಕೆಯಾಗಿದೆ.