ಶಿರ್ವ: ದೇಶದ ಪ್ರತಿಷ್ಠಿತ ಸೆಂಟರ್ ಫಾರ್ ಅಡ್ವಾನ್ಸ್ ಕಂಪ್ಯೂಟಿಂಗ್ ಸಂಸ್ಥೆಯ (ಸಿ-ಡಾಕ್) ಉನ್ನತ ಆಧಿಕಾರಿಗಳು ಬಂಟಕಲ್ಲು ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯಕ್ಕೆ ನ.16ರಂದು ಭೇಟಿ ನೀಡಿದರು.
ಸಿ-ಡಾಕ್‌ನ ಹಿರಿಯ ಅಧಿಕಾರಿಗಳಾದ ಡಾ| ಮಹಮ್ಮದ್ ಮುಸಾಹುದ್ದೀನ್, ಇಂದ್ರಾಣಿ ಹಂದೆ ಹಾಗೂ ಸೂರ್ಯಾಂಶ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಹಿರಿಯ ಉಪನ್ಯಾಸಕರೊಂದಿಗೆ ಸಂವಾದ ನಡೆಸಿ ಸಿ-ಡಾಕ್‌ನ ಸಾಧನೆಗಳು ಮತ್ತು ಯುವ ಪೀಳೀಗೆಯ ತಂತ್ರಜ್ಞಾನದ ಕೌಶಲ ಅಭಿವೃದ್ಧಿಗೆ ಬೇಕಾದ ಹತ್ತು ಹಲವು ಯೋಜನೆಗಳ ಬಗ್ಗೆ ಹಾಗೂ ವಿದ್ಯಾಲಯವು ಯಾವ ರೀತಿ ಸಿ-ಡಾಕ್‌ನೊಂದಿಗೆ ಈ ಯೋಜನೆಗಳಲ್ಲಿ ತೊಡಗಿಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗಾಗಿ ಡಾ|ಮುಸಾಹುದ್ದೀನ್ ಉಪನ್ಯಾಸ ನೀಡಿ ಆಧುನಿಕ ಪೇಮೆಂಟ್ ವ್ಯವಸ್ಥೆಯಾದ ಯುಪಿಐ ತಂತ್ರಜ್ಞಾನದ ಬಗ್ಗೆ ತಿಳಿಸಿ, ಯಾವ ರೀತಿ ಆರ್ಥಿಕ ಮೋಸಗಳು ಜಾಲತಾಣದಲ್ಲಿ ನಡೆಯುತ್ತಿರುತ್ತದೆ ಹಾಗೂ ನಾವು ಅದರಿಂದ ಯಾವ ರೀತಿ ನಮ್ಮ ಸಂಪತ್ತನ್ನು ರಕ್ಷಿಸಿಕೊಳ್ಳಬಹುದು ಎಂಬ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ಸಂಸ್ಥೆಯು ಪೂರಕವಾದ ಹೆಜ್ಜೆಗಳನ್ನು ಇಡುತ್ತಿರುವುದನ್ನು ಮನವರಿಕೆ ಮಾಡಿಕೊಂಡ ಅಧಿಕಾರಿಗಳು ಮತ್ತು ವಿದ್ಯಾಸಂಸ್ಥೆಯ ಪ್ರಾಂಶುಪಾಲರು ಬಂಟಕಲ್ಲು ತಾಂತ್ರಿಕ ಮಹಾ ವಿದ್ಯಾಲಯ ಹಾಗೂ ಸಿ- ಡಾಕ್ ಜಂಟಿಯಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತಿರ್ಮಾನಿಸಲಾಯಿತು.
ಪ್ರಾಂಶುಪಾಲ ಡಾ|ತಿರುಮಲೇಶ್ವರ ಭಟ್ ಅಧಿಕಾರಿಗಳನ್ನು ಸ್ವಾಗತಿಸಿ, ವಂದಿಸಿದರು.