Advertisement
ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಈ ಹಿಂದೆ ಸಿ.ಡಿ ಪ್ರಕರಣಗಳು ಅನೇಕ ಬಾರಿ ಕೇಳಿಬಂದಿದೆ. ಅನೇಕ ರಾಜಕೀಯ ನಾಯಕರ ವೈಯಕ್ತಿಕ ವರ್ಚಸ್ಸಿಗೆ ಕುತ್ತುಂಟು ಮಾಡಿದ್ದಲ್ಲದೇ, ರಾಜಕೀಯ ಭವಿಷ್ಯವನ್ನೇ ಕಿತ್ತುಕೊಂಡಿದೆ.
Related Articles
Advertisement
ಯಾವಾಗಲೂ ವಿವಾದದಲ್ಲೆ ಇರುವ ಬಿಜೆಪಿ ಪಕ್ಷದ ಹಿರಿಯ ನಾಯಕ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರೇ ನೇರವಾಗಿ ಸಿ.ಡಿ ಬಗ್ಗೆ ಆರೋಪಿಸಿದ್ದು, ಈಗ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಮಹಿಳೆಯೊಂದಿಗಿನ ಅಶ್ಲೀಲ ಸಿ.ಡಿ ಬಿಡುಗಡೆ ಮತ್ತು ಪ್ರಕರಣಕ್ಕೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಸಿಲುಕಿದ್ದು, ನೈತಿಕ ಹೊಣೆಹೊತ್ತು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದರಾದರೂ ರಾಜಕೀಯ ವಲಯದಲ್ಲಿ ಬಹುದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ರಾಜಕೀಯ ರಂಗದಲ್ಲಿ ಸಿಡಿದ ಸಿ.ಡಿಗಳು..!
ಸಿ.ಡಿ ವಿಚಾರ 2006ರಿಂದಲೂ ರಾಜಕೀಯದಲ್ಲಿ ಒಂದು ಅಸ್ತ್ರವಾಗಿ ಬಳಕೆಯಾಗುತ್ತಿದೆ. ವಿರೋಧಿಗಳು ಎದುರಾಳಿಗಳ ವಿರುದ್ಧ ಪ್ರಯೋಗಿಸುವ ದೊಡ್ಡ ಅಸ್ತ್ರ ಸಿ.ಡಿ.
2006ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮೊಟ್ಟಮೊದಲ ಬಾರಿಗೆ ರಾಜ್ಯದಲ್ಲಿ ಅಕ್ರಮ ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದರು. ಆ ಸಿ.ಡಿಯ ವಿಚಾರ ರಾಜ್ಯ ರಾಜಕೀಯ ವಲಯದಲ್ಲಿ ಅನೇಕ ಬೆಳವಣಿಗೆಗೆ ಕಾರಣವಾಗಿದೆ.
ಮಾಜಿ ಸಚಿವ ಚನ್ನಿಗಪ್ಪ ಗಣಿ ಸಚಿವರಾಗಿದ್ದ ಸಂದರ್ಭದಲ್ಲಿ ಗಣಿ ಉದ್ಯಮಿಗಳಿಂದ ₹150 ಕೋಟಿ ರೂ.ಪಡೆದು ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ನೀಡಿದ್ದಾರೆ ಎಂಬ ಆರೋಪದ ಸಿ.ಡಿ ಬಿಡುಗಡೆ ಮಾಡಿದ್ದರು. ನಂತರದ ಕೆಲ ತಿಂಗಳು ಇದು ರಾಜ್ಯ ರಾಜಕೀಯದಲ್ಲಿ ಅನೇಕ ತಿರುವುಗಳಿಗೆ ಕಾರಣವಾಗಿತ್ತು. ಚೆನ್ನಿಗಪ್ಪ ಗಣಿ ಉದ್ಯಮಿಗಳ ಜೊತೆ ಕುಳಿತಿರುವ ಒಂದು ಫೋಟೋ ಬಿಡುಗಡೆ ಮಾಡಲಾಗಿತ್ತು. ಇದು ಇಂದಿಗೂ ಕುಮಾರಸ್ವಾಮಿ ಹಾಗೂ ಜನಾರ್ದನರೆಡ್ಡಿ ನಡುವೆ ದೊಡ್ಡ ಬಿರುಕು ಹಾಗೆಯೇ ಉಳಿಯುವ ಹಾಗೆ ಮಾಡಿದೆ.
ಓದಿ : ರಮೇಶ್ ಜಾರಕಿಹೊಳಿ ರಾಜಿನಾಮೆ ಕೊಟ್ಟಾಗ ಕಣ್ಣೀರು ಹಾಕಿದ್ದೆ : ರೇಣುಕಾಚಾರ್ಯ
2008 ರಲ್ಲಿ ಮೊದಲ ಬಾರಿ ಬಿಜೆಪಿ ರಾಜ್ಯದ ಅಧಿಕಾರವನ್ನು ಹಿಡಿದಾಗ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭ ತಮ್ಮ ತವರು ಜಿಲ್ಲೆಯ ಸಂಪುಟದ ಸಹೋದ್ಯೋಗಿ ಹರತಾಳು ಹಾಲಪ್ಪ ರಾಸಲೀಲೆ ಆರೋಪಕ್ಕೆ ಸಿಲುಕಿದ ಪ್ರಕರಣ ರಾಜಕೀಯದಲ್ಲಿ ಯಡಿಯೂರಪ್ಪನವರ ವರ್ಚಸ್ಸಿಗೆ ಧಕ್ಕೆ ತಂದಿತ್ತು. ಹಾಲಪ್ಪ ತಮ್ಮ ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಿಲುಕಿಕೊಂಡಿದ್ದರು. ಇಲ್ಲಿಂದ ಯಡಿಯೂರಪ್ಪನವರನ್ನು ಅಂಟಿಕೊಂಡ ಸಿ.ಡಿ ರಗಳೆ ಇಂದಿನ ತನಕವೂ ಹೋಗಿಲ್ಲ.
2009 ರ ನವೆಂಬರ್ ನಲ್ಲಿ ತಮ್ಮ ಪತ್ನಿಯ ಮೇಲೆ ಸಚಿವ ಹಾಲಪ್ಪ ಅತ್ಯಾಚಾರ ಮಾಡಿದ್ದಾರೆ ಎಂದು ಹಾಲಪ್ಪರ ಸ್ನೇಹಿತ ವೆಂಕಟೇಶ ಮೂರ್ತಿ 2010 ರ ಮೇ ತಿಂಗಳಿನಲ್ಲಿ ದೂರು ಸಲ್ಲಿಕೆ ಮಾಡಿದ್ದರು. ಆದರೆ 2017ರಲ್ಲಿ ಹಾಲಪ್ಪಗೆ ಈ ಕೇಸ್ನಲ್ಲಿ ಕ್ಲೀನ್ ಚಿಟ್ ಸಿಕ್ಕಿತ್ತು. ಈ ಆರೋಪದಿಂದಾಗಿ ಯಡಿಯೂರಪ್ಪನವರ ತವರೂರಿನ ಸಂಪುಟ ಸದಸ್ಯರಾಗಿದ್ದ ಹಾಲಪ್ಪ ಸ್ವಲ್ಪ ಸಮಯದ ತನಕ ರಾಜಕೀಯದಿಂದ ಹೊರಗುಳಿಯಬೇಕಾದ ಪರಿಸ್ಥಿತಿ ಬರುತ್ತದೆ.ರಾಜ್ಯ ರಾಜಕಾರಣದ ಆಡಳಿತ ವ್ಯವಸ್ಥೆಯಲ್ಲಿ ಮುನ್ನೆಲೆಯಲ್ಲಿರಬೇಕಾಗಿದ್ದ ಹಾಲಪ್ಪ ಈಗ ಹಿಂದೆ ಸರಿದಿದ್ದಾರೆ.
ಸದನದಲ್ಲಿ ಸವದಿ ನೀಲಿ ಚಿತ್ರ ವಿಕ್ಷಣೆ :
2012ರಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸದನದಲ್ಲಿ ನೀಲಿಚಿತ್ರ ವೀಕ್ಷಿಸಿ ಹಾಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿವಾದಕ್ಕೊಳಗಾಗಿದ್ದರು. ಈ ವಿಚಾರವೂ ಕೂಡ ಬಿಜೆಪಿಗೆ ರಾಜಕೀಯವಾಗಿ ಧಕ್ಕೆ ತಂದಿತ್ತು. ಈಗ ರಾಜ್ಯ ರಾಜಕೀಯದ ಆಡಳಿತದಲ್ಲಿ ಉಪ ಮುಖ್ಯ ಮಂತ್ರಿ ಸ್ಥಾನವನ್ನು ಅಲಂಕರಿಸಿದ್ದಾರೆ. ಸಚಿವನಲ್ಲದವನೊಬ್ಬನನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಂಡಿದ್ದಕ್ಕಾಗಿಯೂ ರಾಜ್ಯ ಬಿಜೆಪಿ ಪ್ರತಿಪಕ್ಷಗಳ ಟೀಕೆಗೂ ಮೂಲ ವಸ್ತುವಾಯಿತು.
ಓದಿ : ಭಾರತದಲ್ಲಿ ಡಿಜಿಟಲ್ ಹೆಜ್ಜೆಗುರುತನ್ನು ಇನ್ನಷ್ಟು ವಿಸ್ತರಿಸಲು ಸಿದ್ಧರಿದ್ದೇವೆ : ಅಂಬಾನಿ
2014 ರಲ್ಲಿ ಮೈಸೂರು ಭಾಗದಲ್ಲಿ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಎಸ್ ಎ ರಾಮದಾಸ್ ಹಾಘೂ ಪ್ರೇಮ ಕುಮಾರಿ ಎಂಬವರ ನಡುವೆ ನಡೆದ ಸಂಭಾಷಣೆಯೊಂದರ ಸಿ.ಡಿ ಬಿಡುಗಡೆಯಾಗಿತ್ತು. ಈ ಸಿ.ಡಿ ಪ್ರಕರಣ ರಾಮದಾಸ್ ಅವರ ರಾಜಕೀಯ ವರ್ಚಸ್ಸಿಗೆ ಮುಳುವಾಗಬಹುದು ಎಂದು ಹಲವರು ನಿರಿಕ್ಷಿಸಿದ್ದರು. ಆದರೇ, ರಾಮ್ ದಾಸ್ ಗೆ ಅಷ್ಟೊಂದು ಮಟ್ಟದಲ್ಲಿ ಈ ಪ್ರಕರಣ ಅವರಿಗೆ ಮುಳುವಾಗಿರಲಿಲ್ಲ.
ಸಿದ್ದರಾಮಯ್ಯ ಸರ್ಕಾರವನ್ನೂ ಕಾಡಿದ ಕಾ’ಮೇಟಿ’ ರಾಸಲೀಲೆ:
ಈ ಹಿಂದೆ ಐದು ವರ್ಷದ ಆಡಳಿತ ಪೂರ್ಣಗೊಳಿಸಿದ್ದ ಸಿದ್ದರಾಮಯ್ಯ ಸಂಪುಟದಲ್ಲೂ ಇಂತಹದ್ದೇ ರಾಸಲೀಲೆ ವೀಡಿಯೊ ಬಹಿರಂಗವಾಗಿತ್ತು, ವರ್ಗಾವಣೆ ಬೇಡಿಕೆ ಇಟ್ಟುಕೊಂಡು ಬಂದಿದ್ದ ಮಹಿಳೆಯೊಬ್ಬರನ್ನು ಸಚಿವ ಹೆಚ್.ವೈ ಮೇಟಿ ಲೈಂಗಿಕವಾಗಿ ಬಳಸಿಕೊಂಡಿದ್ದರು ಎಂದು ಹೇಳಲಾದ ಅಶ್ಲೀಲ ವೀಡಿಯೋವನ್ನು ಸಚಿವರ ಗನ್ ಮ್ಯಾನ್ ಸೆರೆ ಹಿಡಿದಿದ್ದರು. ನಂತರ ಆ ರಾಸಲೀಲೆ ವೀಡಿಯೊ ಬಹಿರಂಗವಾಗುತ್ತಿದ್ದಂತೆ ಸಚಿವ ಸ್ಥಾನಕ್ಕೆ ಮೇಟಿ ರಾಜೀನಾಮೆ ನೀಡುವಂತಾಯ್ತು. ಕಾಂಗ್ರೆಸ್ ನ ಮಾಜಿ ಸಚಿವ ಎಚ್ ವೈ ಮೇಟಿ ಅವರ ಭವಿಷ್ಯವನ್ನು ಸಿ.ಡಿ ನುಂಗಿ ಹಾಕಿದೆ. 2016ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಸಿ.ಡಿಯಲ್ಲಿ ಮಹಿಳೆಯೊಂದಿಗೆ ಅಶ್ಲೀಲವಾಗಿ ಮಾಜಿ ಸಚಿವರಿದ್ದ ದೃಶ್ಯ ದೊಡ್ಡ ಸಂಚಲನ ಮೂಡಿಸಿತ್ತು. ಇದರಿಂದಾಗಿ ಸಚಿವ ಸ್ಥಾನ ಕಳೆದುಕೊಂಡ ಮೇಟಿ 2018ರ ವಿಧಾನಸಭೆ ಚುನಾವಣೆಯಲ್ಲಿ ಕೂಡ ಸೋಲುಂಡರು. ಈ ಸಿ.ಡಿ ಬಹುತೇಕ ಇವರ ರಾಜಕೀಯ ಬದುಕನ್ನು ಅಂತ್ಯಗೊಳಿಸಿದೆ.
ಓದಿ : ತಾಯಿಯಾಗುವ ಖುಷಿಯಲ್ಲಿ ಗಾಯಕಿ ಶ್ರೇಯಾ ಘೋಷಾಲ್
2018 ರಲ್ಲಿ ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅವರನ್ನು ಯಡಿಯೂರಪ್ಪ ಆಪ್ತ ಸಹಾಯಕ ಎಂ.ಆರ್.ಸಂತೋಷ್ ಅಪಹರಣ ಮಾಡಿದ್ದರು. ಈ ಸಂಬಂಧ ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಬಳಿ ಇರುವ ಮಾಹಿತಿಯನ್ನು ಕಾಂಗ್ರೆಸ್ ಹಿರಿಯ ನಾಯಕ, ಈಗಿನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಡೆದುಕೊಂಡಿದ್ದರು. ಸಿ.ಡಿ ವಿಚಾರಕ್ಕಾಗಿ ಅಪಹರಣ ನಡೆದಿದೆ ಎಂದು ಸಹ ಅವರು ಆರೋಪಿಸಿದ್ದರು.
2019ರಲ್ಲಿ ಆಪರೇಷನ್ ಕಮಲಕ್ಕೆ ಮುಂದಾದ ಬಿ.ಎಸ್.ಯಡಿಯೂರಪ್ಪ ಗುರುಮಿಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ನಾಗನಗೌಡ ಪುತ್ರ ಶರಣಗೌಡಗೆ ಆಮೀಷವೊಡ್ಡಿದ ಎರಡು ಕ್ಲಿಪ್ ಬಿಡುಗಡೆಯಾಗಿತ್ತು. ಮುಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲಹೆ ಮೇರೆಗೆ ಶರಣಗೌಡ ಅವರೇ ₹25 ಕೋಟಿ ನೀಡುವ ಆಮೀಷದ ಆಡಿಯೋ ಬಿಡುಗಡೆ ಮಾಡಿದ್ದರು.
ಅರವಿಂದ ಲಿಂಬಾವಳಿ ವಿರುದ್ಧವೂ ದೊಡ್ಡ ಆರೋಪ ಕೇಳಿಬಂದಿತ್ತು. ಮಹದೇವಪುರ ಶಾಸಕರಾಗಿದ್ದ ಹಾಲಿ ಸಚಿವ ಅರವಿಂದ ಲಿಂಬಾವಳಿ ವಿರುದ್ಧ ಕೂಡ ಒಂದು ಅಶ್ಲೀಲ ಸಿ.ಡಿ ಬಿಡುಗಡೆಯಾಗಿತ್ತು. ಈ ಸಿ.ಡಿ ಪ್ರಕರಣ ಲಿಂಬಾವಳಿಯ ರಾಜಕೀಯ ಓಟಕ್ಕೆ ಬ್ರೇಕ್ ಹಾಕಿತ್ತು, ಒಂದಿಷ್ಟು ತಿಂಗಳು ಸಚಿವ ಸ್ಥಾನ ಸಿಗದಂತೆ ತಡೆದಿತ್ತು. ಅರವಿಂದ ಲಿಂಬಾವಳಿ ರಾಜಕೀಯ ಬದುಕಿಗೆ ಇದು ದೊಡ್ಡ ಧಕ್ಕೆ ಉಂಟು ಮಾಡದಿದ್ದರೂ ಅವರ ರಾಜಕೀಯ ವರ್ಚಸ್ಸಿಗೆ ತೀರ್ವ ಮುಜುಗರವನ್ನುಂಟುಮಾಡಿತ್ತು.
ಓದಿ : ವಿಧಾನಮಂಡಲ ಅಧಿವೇಶನದಲ್ಲಿ ಅಂಗಿ ಬಿಚ್ಚಿದ ಶಾಸಕ ಸಂಗಮೇಶ್! ಕಿಡಿಕಾರಿದ ಸ್ಪೀಕರ್
ಈಗ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎಂದು ಹೇಳಲಾಗುತ್ತಿರುವ ಅಶ್ಲೀಲ ರಾಜ್ಯ ರಾಜಕೀಯದಲ್ಲಿ ಸದ್ದು ಮಾಡುತ್ತಿದೆ. ಇದು ಬರುವ ಬಜೆಟ್ ಗೂ ಕೂಡ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಬಹುದು ಎಂದು ಹೇಳಲಾಗುತ್ತಿದೆ. ಕ್ಷಣ ಕ್ಷಣಕ್ಕೂ ಹೊಸ ತಿರುವು ಕಂಡುಕೊಳ್ಳುತ್ತಿರುವ ಸಚಿವ ಜಾರಕಿಹೊಳಿ ಅವರ ಪ್ರಕರಣ ಯಾವ ಮಟ್ಟಕ್ಕೆ ಹೋಗಿ ತಲುಪುತ್ತದೆ ಎಂದು ಕಾದುನೋಡಬೇಕಾಗಿದೆ.