Advertisement

ಸದನದಲ್ಲಿ ಸಿ.ಡಿ. ಪ್ರಕರಣ ಪ್ರಸ್ತಾಪಿಸಲು ಅವಕಾಶ ಕೋರಿದ ಕಾಂಗ್ರೆಸ್‌

07:57 PM Mar 18, 2021 | Team Udayavani |

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಸಿ.ಡಿ. ಪ್ರಕರಣ ಹಾಗೂ ಆರು ಸಚಿವರು ಹೈಕೋರ್ಟ್‌ ಮೊರೆ ಹೋಗಿರುವುದನ್ನು ವಿಧಾನಸಭೆಯಲ್ಲಿ ಪ್ರಸ್ತಾವಿಸಲು ಕಾಂಗ್ರೆಸ್‌ ಮುಂದಾಗಿದೆ.

Advertisement

ಪ್ರಶ್ನೋತ್ತರ ಹಾಗೂ ಶೂನ್ಯ ವೇಳೆ ತರುವಾಯ ಈ ವಿಷಯದಲ್ಲಿ ನಿಲುವಳಿ ಸೂಚನೆ ಮಂಡಿಸಲು ಅವಕಾಶ ಕೋರಿ ವಿಧಾನಸಭೆ ಕಾರ್ಯದರ್ಶಿಯವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ನೀಡಿದ್ದಾರೆ.

ರಮೇಶ್‌ ಜಾರಕಿಹೊಳಿ ಅವರ ಲೈಂಗಿಕ ಸಿ.ಡಿ. ಪ್ರಕರಣ ಹಾಗೂ ಇಂಥದ್ದೇ ಭೀತಿಯಿಂದ ಆರು ಮಂದಿ ಸಚಿವರು ಕೋರ್ಟಿಗೆ ಹೋಗಿ 67 ಮಾಧ್ಯಮಗಳು ಹಾಗೂ ಇತರರ ವಿರುದ್ಧ ನಿರ್ಬಂಧಕಾಜ್ಞೆಯನ್ನು ತಂದಿದ್ದು, ರಾಜ್ಯದ ಮರ್ಯಾದೆ ಹರಾಜಾಗುತ್ತಿದೆ. ಇದರ ಬಗ್ಗೆ ಎಫ್ಐಆರ್‌ ದಾಖಲಾಗುವ ಮೊದಲೇ ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಲಾಗಿದೆ.

ಅನಂತರ ಮಾಜಿ ಸಚಿವರು ವ್ಯಕ್ತಿಯೊಬ್ಬರ ಮೂಲಕ ಕಳುಹಿಸಿದ ದೂರನ್ನು ಆಧರಿಸಿ ಎಫ್ಐಆರ್‌ ದಾಖಲಿಸಲಾಗಿದೆ. ಆದರೆ, ಸಾಮಾಜಿಕ ಕಾರ್ಯಕರ್ತನೆಂಬ ಹೆಸರಿನಲ್ಲಿ ವ್ಯಕ್ತಿಯೊಬ್ಬರು ನೀಡಿದ ದೂರು ಹಾಗೂ ಸಂತ್ರಸ್ತೆಯೆಂದು ಹೇಳಿ ಗೃಹ ಸಚಿವರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡಿಕೊಂಡ ಮನವಿಗಳನ್ನು ಆಧರಿಸಿ ಯಾವುದೇ ಎಫ್ಐಆರ್‌ ದಾಖಲಾಗಿಲ್ಲ.

ಇದನ್ನೂ ಓದಿ : ಸಿಂಧನೂರು ನಗರಸಭೆಯಲ್ಲಿ ಬಿಲ್‌ ಕಲೆಕ್ಟರ್‌ ಕೈ ಚಳಕ ಬಯಲು ­

Advertisement

ಸಂತ್ರಸ್ತೆಯ ಪೋಷಕರು ಸಹ ಬೆಳಗಾವಿಯ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿರುತ್ತಾರೆ. ಮಹಿಳಾ ಆಯೋಗವು ಸಂತ್ರಸ್ತೆಗೆ ರಕ್ಷಣೆ ನೀಡಲು ಆದೇಶಿಸಿದ್ದರೂ ಸಂತ್ರಸ್ತೆಯನ್ನು ಹುಡುಕಿ ರಕ್ಷಣೆ ನೀಡಿದಂತೆ ಕಾಣುತ್ತಿಲ್ಲ. ಎಸ್‌ಐಟಿಯ ಇದುವರೆಗಿನ ತನಿಖೆಯನ್ನು ನೋಡಿದರೆ ಸಿ.ಡಿ.ಪ್ರಚಾರವಾಗಲು ಕಾರಣಕರ್ತರು ಯಾರು ಎಂಬುದನ್ನು ಹುಡುಕುವ ಕಡೆಗೆ ತನಿಖೆ ಸಾಗುತ್ತಿದೆ ಎಂಬ ಅನುಮಾನ ಬರುತ್ತಿದೆ. ಸರಕಾರದ ವರ್ತನೆ ಪಾರದರ್ಶಕವಾಗಿಲ್ಲ ಮತ್ತು ನ್ಯಾಯಸಮ್ಮತವಾಗಿಲ್ಲ. ಸರಕಾರದ ನಿಲುವುಗಳ ವಿರುದ್ಧ ಮಾ. 19ರಂದು ಸದನದಲ್ಲಿ ಪ್ರಸ್ತಾವಿಸಲು ನಿಯಮ 60ರ ಮೇರೆಗೆ ನಿಲುವಳಿ ಸೂಚನೆ ಕೊಡುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಪ್ರತಿಯನ್ನು ಸ್ಪೀಕರ್‌, ಸದನದ ನಾಯಕರಾದ ಮುಖ್ಯಮಂತ್ರಿಯವರು ಹಾಗೂ ಸಂಬಂಧಪಟ್ಟ ಸಚಿವರಿಗೂ ಕಳುಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next