ಬೆಳಗಾವಿ: ಯತ್ನಾಳ್ ತಂಡದ ವಿರುದ್ಧ ದಾವಣಗೆರೆಯಲ್ಲಿ ಬೃಹತ್ ಸಮಾವೇಶ ನಡೆಸು ವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣದ ಘೋಷಣೆಯ ಬೆನ್ನಲ್ಲೇ ಯತ್ನಾಳ್ ಬಣ ಕೂಡ ದಾವಣಗೆರೆಯಲ್ಲಿ 5ರಿಂದ 10 ಲಕ್ಷ ಜನರನ್ನು ಸೇರಿಸಿ ಸಮಾವೇಶ ನಡೆಸುವುದಾಗಿ ಘೋಷಿಸಿದೆ. ಇದ ರೊಂದಿಗೆ ಬಣ ಸಂಘರ್ಷ ತೀವ್ರಗೊಳ್ಳುವ ಸಾಧ್ಯತೆಗಳು ಗೋಚರಿಸಿವೆ.
ಗೋಕಾಕ್ ತಾಲೂಕಿನ ಮಾಲದಿನ್ನಿ ಕ್ರಾಸ್ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಯತ್ನಾಳ್ ಸಿಎಂ ಆಗುತ್ತಾರೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಹಿಂದುಳಿದ ಸಮುದಾಯಗಳ ಶೇ. 74 ಜನರಿಗೆ ನ್ಯಾಯ ಸಿಗಬೇಕು. ಇಲ್ಲದಿದ್ದರೆ 2028ರ ಚುನಾವಣೆ ಸಮಯದಲ್ಲಿ ಬಂಡಾಯ ಏಳುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಒಡೆದು ಆಳುವ ನೀತಿಯಿಂದ ಹಿಂದುಳಿದ ಸಮುದಾಯಗಳಿಗೆ ಅನ್ಯಾಯ ವಾಗಿದೆ. ಕುರುಬರು, ಉಪ್ಪಾರ ಮತ್ತು ಸುಣಗಾರರು ಅಧಿಕಾರಕ್ಕೆ ಬರಬೇಕು. ಒಬಿಸಿಗಿಂತ ಎಸ್‌ಟಿ ಸಮುದಾಯಕ್ಕೆ ಹೆಚ್ಚಿನ ಪ್ರಮಾಣದ ಅಧಿಕಾರ ಹಾಗೂ ಸೌಲಭ್ಯ ಸಿಗಬೇಕು ಎಂಬುದು ನನ್ನ ಬೇಡಿಕೆ. ಇದಕ್ಕಾಗಿ ನನ್ನ ಜತೆ ಕೈಜೋಡಿಸಿ ಎಂದು ಸ್ವಾಮೀಜಿಗಳಿಗೂ ಮನವಿ ಮಾಡಿದ್ದೇನೆ ಎಂದರು.
ಬಿಜೆಪಿಯಲ್ಲೂ ಷಡ್ಯಂತ್ರ
ನಾನು ಅನಿವಾರ್ಯವಾಗಿ ಬಿಜೆಪಿಗೆ ಬಂದಿ ದ್ದೇನೆ. ಹಿಂದೆ ಕಾಂಗ್ರೆಸ್‌ನಿಂದ ಐದು ಬಾರಿ ಶಾಸಕನಾಗಿದ್ದೆ. ಈಗ ಎರಡು ಬಾರಿ ಬಿಜೆಪಿಯಿಂದ ಶಾಸಕನಾಗಿದ್ದೇನೆ. ನನಗೆ ಕಾಂಗ್ರೆಸ್ ಪಕ್ಷ ಕೆಟ್ಟದ್ದು ಮಾಡಿರಲಿಲ್ಲ. ಆದರೆ ನಾನು ಕಾಂಗ್ರೆಸ್ ಬಿಡಲು ಒಬ್ಬ ಮನುಷ್ಯ ಕಾರಣ ಎಂದು ಪರೋಕ್ಷವಾಗಿ ಡಿಕೆಶಿಗೆ ವಿರುದ್ಧ ವಾಗ್ಧಾಳಿ ನಡೆಸಿದರು.
ನಾನು ಜನರಿಗೆ ಮೋಸ ಮಾಡಿದ್ದರೆ ಹೆದರುತ್ತಿದ್ದೆ. ಸಿ.ಡಿ.ಗೆ ಹೆದರಲಿಲ್ಲ. ಇಂತಹ ನೂರು ಸಿ.ಡಿ. ಬಂದರೂ ಅಂಜುವುದಿಲ್ಲ ಎಂದು ಹಿಂದೆಯೇ ಹೇಳಿದ್ದೆ. ವೈಯಕ್ತಿಕ ಷಡ್ಯಂತ್ರ ಮಾಡಿದರೆ ಹೆದರುವುದಿಲ್ಲ. ಜನರ ಆಶೀರ್ವಾದವಿದೆ ಎಂದರು.