Advertisement
ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಚಂದಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಗೆಲುವಿಗೆ ಪ್ರಚಾರ ಕೈಗೊಂಡು ಮಾತನಾಡಿದರು.
Related Articles
Advertisement
40 ವರ್ಷಗಳಿಂದ ನಾನು ಮಂತ್ರಿಯಾಗಿದ್ದೇನೆ. ಮುಖ್ಯಮಂತ್ರಿಯಾಗಿದ್ದೇನೆ. ಸಣ್ಣ ಕಪ್ಪು ಚುಕ್ಕೆ ಕೂಡ ನನ್ನ ಮೇಲಿಲ್ಲ. ಆದರೂ ನನ್ನ ಪತ್ನಿ ಮೇಲೆ ಸುಳ್ಳು ಆರೋಪ ಮಾಡಿ ನನ್ನನ್ನು ತೇಜೋವಧೆ ಮಾಡುತ್ತಿದ್ದಾರೆ. ಕೇವಲ 14 ಸೈಟುಗಳಿಗಾಗಿ ನಾನು ತಪ್ಪು ಮಾಡುತ್ತೇನಾ? ದುಡ್ಡು ಮಾಡಬೇಕು ಎಂದಿದ್ದರೆ ಬೇಕಾದಷ್ಟು ಮಾಡಬಹುದಿತ್ತು. ಆದರೆ ನನ್ನ ತಪ್ಪುಗಳು ಏನೇನೂ ಇಲ್ಲದ ಕಾರಣದಿಂದ ಸುಳ್ಳು ಆರೋಪ ಹೊರಿಸಿ ಷಡ್ಯಂತ್ರ ಹೆಣೆದು ನನ್ನನ್ನು ಕೆಳಗಿಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ನಾಡಿನ ಜನತೆ ಅವಕಾಶ ಕೊಡುವುದಿಲ್ಲ ಎನ್ನುವ ಗ್ಯಾರಂಟಿ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚೆಕ್ ನಲ್ಲಿ ಲಂಚ ಪಡೆದ ವಿಜಯೇಂದ್ರ ಈಗ ನನ್ನ ಬಗ್ಗೆ ಮಾತಾಡುತ್ತಿದ್ದಾರೆ. ವಿಜಯೇಂದ್ರ ಹೇಗೆ ದುಡ್ಡು ಹೊಡ್ಕಂಡು ಕೂತಿದ್ದ ಎನ್ನುವುದನ್ನು ಅವರದೇ ಪಕ್ಷದ ಯತ್ನಾಳ್, ರಮೇಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ. ಚೆಕ್ ನಲ್ಲಿ ಲಂಚ ಪಡೆದ ವಿಜಯೇಂದ್ರ ಒಂದು ಕಡೆ, ಲೂಟಿ ರವಿ ಮತ್ತೊಂದು ಕಡೆ ನಮ್ಮ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಇವರ ಯೋಗ್ಯತೆ ನಾಡಿನ ಜನತೆಗೆ ಗೊತ್ತಿದೆ. ಅಧಿಕಾರ ಇದ್ದಾಗ ಕೇವಲ ಭ್ರಷ್ಟಾಚಾರ ಆಚರಿಸಿ, ಹಣ ಲೂಟಿ ಮಾಡಿ ಮನೆಗೆ ಹೋದರು. ಈಗ ಜಾತಿ-ಧರ್ಮದ ಹೆಸರಿನಲ್ಲಿ ಬಡವರನ್ನು ಪರಸ್ಪರ ಎತ್ತಿ ಕಟ್ಟಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಸಿಎಂ ಟೀಕಿಸಿದರು.
ನಾವು ನುಡಿದಂತೆ ನಡೆದಿದ್ದೇವೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ. ನುಡಿದಂತೆ ನಡೆದ ನೈತಿಕತೆ ಆಧಾರದಲ್ಲಿ ಮತ್ತೆ ಜನರ ಬಳಿಗೆ ಬಂದು ಮತ ಕೇಳುತ್ತಿದ್ದೇವೆ. ಬಸವರಾಜ ಬೊಮ್ಮಾಯಿ ಅವರು ಅವರ ಮಗನಿಗೆ ಓಟು ಕೇಳಲು ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು
ಮಾತೆತ್ತಿದರೆ ದಮ್ಮು, ತಾಖತ್ತು ಎನ್ನುವ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ರಾಜ್ಯಕ್ಕಾಗಲಿ, ಕ್ಷೇತ್ರಕ್ಕಾಗಲಿ ಏನು ಕೊಟ್ಟಿದ್ದಾರೆ ಹೇಳಿ ಎಂದರು.
ನಮ್ಮ ಸರ್ಕಾರ ಐದು ಗ್ಯಾರಂಟಿಗಳ ಮೂಲಕ ಇಡೀ ರಾಜ್ಯದ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಿದ್ದೇವೆ. ಎಲ್ಲಾ ಜಾತಿಯ, ಎಲ್ಲಾ ಧರ್ಮದ ಬಡವರ ಖಾತೆಗಳಿಗೆ ನೇರವಾಗಿ 56 ಸಾವಿರ ಕೋಟಿ ರೂಪಾಯಿಯನ್ನು ಹಾಕಿದ್ದೇವೆ. ಬಸವರಾಜ ಬೊಮ್ಮಾಯಿಯನ್ನು ಶಕುನಿ ಎಂದು ಈಗಷ್ಟೆ ಎಲ್ಲಾ ಹೇಳಿದರು. ಒಳ ಒಪ್ಪಂದ ಮಾಡಿಕೊಂಡು ರಾಜಕಾರಣ ಮಾಡುವ ಬೊಮ್ಮಾಯಿ ಅಂತವರು ರಾಜಕಾರಣದಲ್ಲಿ ಇರಬಾರದು. ಆದ್ದರಿಂದ ಪಠಾಣ್ ಅವರನ್ನು ಗೆಲ್ಲಿಸಿ ಕಳುಹಿಸಿ. ಅಜ್ಜಂಪೀರ್ ಖಾದ್ರಿ ಅವರಿಗೂ ಒಳ್ಳೆಯ ಅವಕಾಶ ಕಲ್ಪಿಸುತ್ತೇನೆ ಎಂದರು.
ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ, ಈ ಬಾರಿ ಶಿಗ್ಗಾವಿಯಲ್ಲಿ ಕಾಂಗ್ರೆಸ್ ಗೆಲ್ಲುವುದು ಅಷ್ಟೇ ಸತ್ಯ. ಇಲ್ಲಿ ಕಾಂಗ್ರೆಸ್ ಗೆದ್ದರೆ ನನಗೆ, ನನ್ನ ಸರ್ಕಾರಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ ಎಂದರು.
ಸಮಾವೇಶದಲ್ಲಿ ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ ಪಾಟೀಲ, ಕೆ.ಜೆ.ಜಾರ್ಜ್, ರಹೀಂ ಖಾನ್, ವಿಪಕ್ಷ ಮುಖ್ಯ ಸಚೇತಕ ಸಲೀಂ ಅಹ್ಮದ್, ಮಾಜಿ ಸಚಿವರಾದ ಎಚ್.ಆಂಜನೇಯ, ಆರ್.ಶಂಕರ್, ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ, ಪ್ರಸಾದ ಅಬ್ಬಯ್ಯ, ವಿಪ ಸದಸ್ಯರಾದ ಪ್ರಕಾಶ ರಾಠೋಡ, ನಾರಾಯಣ ಸ್ವಾಮಿ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮಾಜಿ ಶಾಸಕರಾದ ಅಜ್ಜಂಫೀರ್ ಖಾದ್ರಿ, ಅಶೋಕ ಮನಗೂಳಿ, ಕಾಂಗ್ರೆಸ್ ಅಭ್ಯರ್ಥಿ ಯಾಸೀರಖಾನ್ ಪಠಾಣ, ಸೋಮಣ್ಣ ಬೇವಿನಮರದ, ಸಂಜೀವಕುಮಾರ ನೀರಲಗಿ, ಬಿ.ಆರ್.ಯಾವಗಲ್ಲ, ವಿ.ಎಸ್.ಪಾಟೀಲ ಇತರರು ಇದ್ದರು.