Advertisement

ಬೈಪಾಸ್‌ ರಸ್ತೆ ನಿರ್ಮಾಣ: ಸುಗಮ ಸಂಚಾರಕ್ಕೆ ಕ್ಷಣಗಣನೆ

02:49 PM Oct 27, 2021 | Team Udayavani |

ಮುಧೋಳ: ಪ್ರತಿವರ್ಷ ಕಬ್ಬು ಹಂಗಾಮಿನಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ನಗರದಲ್ಲಿ ಸಂಚರಿಸುವುದು ಸವಾಲಿನ ಕೆಲಸವಾಗಿತ್ತು. ಸದ್ಯ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡಿರುವ ಸರ್ಕಾರ ನಗರಕ್ಕೆ ಬೈಪಾಸ್‌ ರಸ್ತೆ ನಿರ್ಮಿಸುವುದರ ಮೂಲಕ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.

Advertisement

ಬಹುದಿನದ ಕನಸು ನನಸು

ನಾಗಾಲೋಟದಲ್ಲಿ ಬೆಳೆಯುತ್ತಿರುವ ಮುಧೋಳ ನಗರಕ್ಕೆ ಬೈಪಾಸ್‌ ರಸ್ತೆ ನಿರ್ಮಾಣದ ಅಗತ್ಯತೆ ಇತ್ತು. ಇದೀಗ ಬೈಪಾಸ್‌ ರಸ್ತೆ ನಿರ್ಮಾಣದ ಕನಸು ನನಸಾಗುತ್ತಿದ್ದು, ಸಾರ್ವಜನಿಕರ ಓಡಾಡಕ್ಕೆ ಹೆಚ್ಚಿನ ಅನುಕೂಲವಾಗಲಿದೆ.

ಬಹುತೇಕ ಪೂರ್ಣ

ಜೀರಗಾಳದಿಂದ ಮಾಲಾಪುರದವರೆಗಿನ ಅಂದಾಜು 10.2 ಕಿ.ಮೀ.ರಸ್ತೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕಾಮಗಾರಿ ಮಾತ್ರ ಬಾಕಿ ಇದೆ. ಸದ್ಯ ಪೂರ್ಣಗೊಂಡಿರುವ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿದ್ದು, ಕಬ್ಬು ಹಂಗಾಮಿನಲ್ಲಿ ಕಬ್ಬಿನ ಟ್ರ್ಯಾಕ್ಟರ್‌ಗಳು ಇದೇ ಮಾರ್ಗದಲ್ಲಿ ಓಡಾಡಬಹುದು. ಇದರಿಂದ ನಗರದಲ್ಲಿ ಸಂಚಾರದಟ್ಟಣೆ ಸಂಪೂರ್ಣ ಕಡಿಮೆಯಾಗಲಿದೆ.

Advertisement

ಸಂಚಾರ ದಟ್ಟಣೆ ಹತೋಟಿಗೆ

ಪ್ರತಿವರ್ಷ ಕಬ್ಬು ಹಂಗಾಮು ವೇಳೆಯಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್‌ ಗಳು ನಗರದಲ್ಲಿ ಸಂಚರಿಸುವುದರಿಂದ ನಗರದಲ್ಲಿ ಸಂಚಾರ ದಟ್ಟಣೆ ಹೇಳತೀರದಾಗಿತ್ತು. ಸಾಲು ಸಾಲು ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳ ಓಡಾಟದಿಂದ ಚಿಕ್ಕಪುಟ್ಟ ವಾಹನ ಸವಾರರು ಆತಂಕದಿಂದಲೇ ಸಂಚರಿಸುವಂತಹ ವಾತಾವರಣ ಸೃಷ್ಟಿಯಾಗಿತ್ತು. ಇದೀಗ ನಗರದ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಬೈಪಾಸ್‌ ರಸ್ತೆಯಿಂದ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳೂ ಸೇರಿದಂತೆ ಭಾರಿ ಗಾತ್ರದ ವಾಹನಗಳು ಸಹ ಅದೇ ಮಾರ್ಗವಾಗಿ ಸಂಚರಿಸುವುದರಿಂದ ನಗರದಲ್ಲಿ ವಾಹನ ಸಂಚಾರ ದಟ್ಟಣೆ ಸಂಪೂರ್ಣವಾಗಿ ಕಡಿಮೆಯಾಗಿ ಸಾರ್ವಜನಿಕರು ಮುಕ್ತವಾಗಿ ಓಡಾಡುವಂತಾಗುತ್ತದೆ.

ತಟ್ಟದ ಪ್ರತಿಭಟನೆ ಬಿಸಿ

ನಗರದಲ್ಲಿ ಕಬ್ಬು ಹಂಗಾಮು ಸೇರಿದಂತೆ ನಾನಾ ವಿಷಯಕ್ಕೆ ಮೇಲಿಂದ ಮೇಲೆ ಪ್ರತಿಭಟನೆಯಾಗುವುದು ಸಹಜ. ಅಂತಹ ಸಂದರ್ಭದಲ್ಲಿ ನಗರದಲ್ಲಿ ಹಾದುಹೋಗಿರುವ ಬೆಳಗಾವಿ-ವಿಜಯಪುರ ರಾಜ್ಯ ಹೆದ್ದಾರಿ ಸಂಚಾರ ಬಂದ್‌ ಮಾಡುತ್ತಿದ್ದರಿಂದ ಪ್ರಯಾಣಿಕರಿಗೆ ತೀವ್ರಮಟ್ಟದ ತೊಂದರೆಯಾಗುತ್ತಿತ್ತು. ಆದರೆ, ಇದೀಗ ಬೈಪಾಸ್‌ ರಸ್ತೆ ನಿರ್ಮಾಣದಿಂದಾಗಿ ನಗರದಲ್ಲಿ ನಡೆಯುವ ಪ್ರತಿಭಟನೆಯಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ತೊಂದರೆಯುಂಟಾಗುವುದು ತೀರಾ ವಿರಳ.

ಇದನ್ನೂ ಓದಿ: ಫಲಿತಾಂಶ ಸುಧಾರಣೆಗೆ ಹೊಸ ಯೋಜನೆ

ಕಾಯುವಿಕೆಗೆ ಕಡಿವಾಣ

ನಗರದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳ ಓಡಾಟದಿಂದ ಸಂಭವಿಸುವ ಅವಘಡ ತಡೆಗಟ್ಟಲು ಪೊಲೀಸ್‌ ಇಲಾಖೆ ಪ್ರತಿವರ್ಷ ತನ್ನದೇಯಾದ ರೂಪುರೇಷೆ ಹಾಕಿಕೊಳ್ಳುತ್ತಿತ್ತು. ನಗರದಲ್ಲಿ ಸಂಚಾರದಟ್ಟಣೆ ಕಡಿಮೆ ಮಾಡಲು ಗ್ರಾಮೀಣ ಪ್ರದೇಶದಿಂದ ನಗರ ಮೂಲಕ ಹಾದುಹೋಗುವ ಕಬ್ಬಿನ ಟ್ರ್ಯಾಕ್ಟರ್‌ಗಳನ್ನು ಬೆಳಗ್ಗೆ 10ರಿಂದ ಮಧ್ಯಾಹ್ನ 3ಗಂಟೆಯವರೆಗೆ ನಗರ ಹೊರವಲಯದಲ್ಲಿ ತಡೆಯಲಾಗುತ್ತಿತ್ತು. ಅದಕ್ಕಾಗಿಯೇ ಮಂಟೂರ, ವಜ್ಜರಮಟ್ಟಿ, ಚಿಚಖಂಡಿ ಸೇರಿದಂತೆ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಪೊಲೀಸ್‌ ಸಿಬ್ಬಂದಿ ನೇಮಿಸಲಾಗುತ್ತಿತ್ತು. ಆದರೆ, ಈ ಬಾರಿ ಬೈಪಾಸ್‌ ರಸ್ತೆ ನಿರ್ಮಾಣದಿಂದ ಮೇಲಿನ ಎಲ್ಲ ಸಮಸ್ಯೆಗಳು ಸರಾಗವಾಗಿ ಬಗೆಹರಿದಂತಾಗುತ್ತದೆ.

ಯಾದವಾಡ-ಮಹಾಲಿಂಗಪುರ ರಸ್ತೆಯಲ್ಲಿ ಓಡಾಡುವ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳ ಪ್ರಯಾಣಕ್ಕೆ ಸಂಬಂಧಿಸಿದಂತೆ ಕೊಂಚಮಟ್ಟಿಗಿನ ಸಮಸ್ಯೆಯಾಗಲಿದೆಯಾದರೂ ಪ್ರತಿವರ್ಷಕ್ಕಿಂತ ಈ ಬಾರಿ ವಾಹನ ಸಂಚಾರ ದಟ್ಟಣೆ ಕಡಿಮೆಯಾಗುವುದಂತು ಸತ್ಯ.

ಅಂದಾಜು 75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬೈಪಾಸ್‌ ರಸ್ತೆಯಿಂದಾಗಿ ನಗರದಲ್ಲಿನ ಸಂಚಾರದಟ್ಟಣೆ ಬಹುತೇಕವಾಗಿ ಕಡಿಮೆಯಾಗಲಿದೆ. 10.2 ಕಿ.ಮೀ ವರೆಗಿನ ಬೈಪಾಸ್‌ ರಸ್ತೆ ಬಹುಪಾಲು ಪೂರ್ಣಗೊಂಡಿದ್ದು, ಸಾರ್ವಜನಿಕ ಓಡಾಟಕ್ಕೆ ಮುಕ್ತವಾಗಿದೆ. ಜೀರಗಾಳ-ಮಾಲಾಪುರವರೆಗೆ ನಿರ್ಮಾಣಗೊಂಡಿರುವ ರಸ್ತೆಯಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳೂ ಸೇರಿದಂತೆ ಭಾರಿ ಗಾತ್ರದ ವಾಹನಗಳು ಮುಕ್ತವಾಗಿ ಓಡಾಡಬಹುದು. -ಸೋಮಶೇಖರ ಸಾವನ್‌,ಲೋಕೋಪಯೋಗಿ ಎಇಇ ಮುಧೋಳ

ಮುಧೋಳ ನಗರ ಹೊರವಲಯದಲ್ಲಿ ನಿರ್ಮಾಣವಾಗಿರುವ ಬೈಪಾಸ್‌ನಿಂದಾಗಿ ನಗರವಾಸಿಗಳು ವ್ಯಾಪಾರ ವಹಿವಾಟಿಗಾಗಿ ನಗರಕ್ಕೆ ಆಗಮಿಸುವ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಮುಧೋಳ ನಗರದ ಬಹುದಿನದ ಬೇಡಿಕೆ ಇದೀಗ ಈಡೇರುತ್ತಿದೆ. ಬೈಪಾಸ್‌ ರಸ್ತೆಯಿಂದ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. -ಮಲ್ಲು ಕಾಬಿ, ಮುಧೋಳ ನಿವಾಸಿ

ಬೈಪಾಸ್‌ ರಸ್ತೆಯಿಂದ ಕಬ್ಬಿನ ಟ್ರ್ಯಾಕ್ಟರ್‌ಮಾಲೀಕರಿಗೆ ಹೆಚ್ಚಿನಮಟ್ಟದ ಅನುಕೂಲವಾಗಿದೆ. ನಗರದಲ್ಲಿ ಸಂಚರಿಸುವುದಕ್ಕಿಂತ ಬೈಪಾಸ್‌ ರಸ್ತೆಯಲ್ಲಿ ಯಾವುದೇ ಕಿರಿಕಿರಿಯಿಲ್ಲದೆ ಸಂಚರಿಸುವುದರಿಂದ ಸಮಯದ ಉಳಿತಾಯವಾಗಲಿದೆ. -ಲಕ್ಷ್ಮಣ ಜಡಗನ್ನವರ ಕಬ್ಬು ಟ್ರ್ಯಾಕ್ಟರ್‌ ಚಾಲಕ

-ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next