Advertisement

ಬೈಂದೂರು ಕ್ಷೇತ್ರದ 53 ಸಾವಿರ ಮನೆಗಳಿಗೆ “ಗಂಗೆ’

02:25 PM Nov 06, 2022 | Team Udayavani |

ಕುಂದಾಪುರ: ಉಡುಪಿ ಜಿಲ್ಲೆಯಲ್ಲಿಯೇ ಬೇಸಗೆಯಲ್ಲಿ ಅತೀ ಹೆಚ್ಚು ನೀರಿನ ಸಮಸ್ಯೆ ಎದುರಿಸುತ್ತಿ ರುವ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಶ್ವತ ಪರಿಹಾರ ಸಿಗುವ ಕಾಲ ಸನ್ನಿಹಿತವಾಗಿದೆ. ಪ್ರತಿ ಮನೆ- ಮನೆಗಳಿಗೆ ನೀರು ಪೂರೈಸುವ 784.60 ಕೋ.ರೂ. ವೆಚ್ಚದ ಮಹತ್ವಾಕಾಂಕ್ಷಿ ಯೋಜನೆಯ ಕಾಮಗಾರಿಗೆ ನ.7 ರಂದು ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

Advertisement

ನಬಾರ್ಡ್‌ ಹಾಗೂ ಜಲಜೀವನ್‌ ಮಿಷನ್‌ನಡಿ ಜಂಟಿಯಾಗಿ ಬೈಂದೂರು ಕ್ಷೇತ್ರದ 53,425 ಮನೆಗಳಿಗೆ ಪ್ರತಿ ನಿತ್ಯ ನಳ್ಳಿ ಮೂಲಕ ಗಂಗೆ (ನೀರು) ಪೂರೈಸುವ ಯೋಜನೆ ಇದಾಗಿದೆ. ಕ್ಷೇತ್ರದಲ್ಲಿ ಉಪ್ಪು ನೀರಿನಿಂದಾಗಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟರ ಮುತುವರ್ಜಿಯಲ್ಲಿ ಈ ಯೋಜನೆ ಅವರ ಸಾಕಾರಗೊಳ್ಳುತ್ತಿದೆ.

ಏನಿದು ಯೋಜನೆ? ವಾರಾಹಿ ನದಿಯಿಂದ ನೀರು ಸಂಗ್ರಹಿಸಿ, ಅದನ್ನು ಹೊಸಂಗಡಿಯ ಕೋಟೆಕೆರೆ ಸಮೀಪದ 4 ಎಕರೆ ಸರಕಾರಿ ಜಾಗದಲ್ಲಿ ನಿರ್ಮಾಣವಾಗಲಿರುವ ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸ ಲಾಗುತ್ತದೆ. ಅದನ್ನು ಪ್ರತಿ ಗ್ರಾಮಗಳ ವ್ಯಾಪ್ತಿಯಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ ಗಳಿಗೆ, ಟ್ಯಾಂಕ್‌ ಇಲ್ಲದ ಕಡೆಗಳಲ್ಲಿ ಹೊಸ ಟ್ಯಾಂಕ್‌ ನಿರ್ಮಿಸಿ, ಬೈಂದೂರಿನ ಎಲ್ಲ ಮನೆಗಳಿಗೆ ನಳ್ಳಿ ಮೂಲಕ ನೀರು (ಜೀವಜಲ) ಪೂರೈಸುವ ಯೋಜನೆ ಇದಾಗಿದೆ. 2024ರ ಜೂ.30 ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.

25 ದಶಲಕ್ಷ ಲೀ. ನೀರು ಪ್ರತಿ ನಿತ್ಯ ವಾರಾಹಿ ನದಿಯಿಂದ 25 ಎಂಎಲ್‌ಡಿ (ದಶಲಕ್ಷ ಲೀ.) ನೀರು ಸಂಗ್ರಹಿಸಿ, ಶುದ್ಧೀಕರಿಸಿ ಪೂರೈಸಲಾಗುತ್ತದೆ. 585 ಕೋ.ರೂ. ನಬಾರ್ಡ್‌ ಯೋಜನೆಯಡಿ ಶುದ್ಧೀಕರಣ ಘಟಕ, ಪ್ರತಿ ಗ್ರಾ.ಪಂ.ಗಳಿಗೆ ಪೈಪ್‌ಲೈನ್‌, ಅಗತ್ಯ ವಿರುವ ಕಡೆಗಳಲ್ಲಿ ಓವರ್‌ ಹೆಡ್‌ ಟ್ಯಾಂಕ್‌, ಇನ್ನಿತರ ಕಾಮಗಾರಿಯಾದರೆ, ಜಲಜೀವನ್‌ ಮಿಷನ್‌ನಡಿ 199.6 ಕೋ. ರೂ. ವೆಚ್ಚದಲ್ಲಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಪೈಪ್‌ಲೈನ್‌, ನಳ್ಳಿ, ಇನ್ನಿತರ ಕಾಮಗಾರಿಗೆ ವಿನಿಯೋಗವಾಗಲಿದೆ ಎಂದು ಬೈಂದೂರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಜ್‌ಕುಮಾರ್‌ ಮಾಹಿತಿ ನೀಡಿದ್ದಾರೆ.

3 ಲಕ್ಷ ಜನರಿಗೆ ನೀರು ಪೂರೈಕೆ

Advertisement

ಬೈಂದೂರು ವಿಧಾನಸಭಾ ಕ್ಷೇತ್ರದ 59 ಗ್ರಾಮಗಳ (39 ಗ್ರಾ.ಪಂ.) ಹಾಗೂ ಬೈಂದೂರು ಪಟ್ಟಣ ಪಂಚಾಯತ್‌ (3 ಗ್ರಾಮ)ಯ 53,425 ಮನೆಗಳಿಗೆ ಈ ಯೋಜನೆ ಮೂಲಕ ನೀರು ಪೂರೈಸಲಾಗುತ್ತದೆ. ಇದರಲ್ಲಿ ಗ್ರಾಮೀಣ ಭಾಗದ 788 ಜನವಸತಿ ಪ್ರದೇಶ ಹಾಗೂ ಪಟ್ಟಣ ಪಂಚಾಯತ್‌ ವ್ಯಾಪ್ತಿಯ 60 ಸೇರಿದಂತೆ ಒಟ್ಟು 848 ಜನವಸತಿ ಪ್ರದೇಶಗಳಿಗೆ ನೀರು ಸರಬರಾಜು ಆಗಲಿದೆ. ಇದರಲ್ಲಿ ಪ್ರತಿ ಗ್ರಾಮಗಳ ವ್ಯಾಪ್ತಿಯಲ್ಲಿ ಈಗಿರುವ 220 ಟ್ಯಾಂಕ್‌ಗಳು ಹಾಗೂ ಹೊಸದಾಗಿ ನಿರ್ಮಾಣವಾಗಲಿರುವ 128 ಟ್ಯಾಂಕ್‌ ಸೇರಿ ಒಟ್ಟು 348 ಟ್ಯಾಂಕ್‌ಗಳಿಗೆ ನೀರು ಪೂರೈಕೆಯಾಗಲಿದೆ.

ನೀರಿನ ಸಮಸ್ಯೆಗೆ ಮುಕ್ತಿ: ಬೈಂದೂರಿನ ಜನ ಬೇಸಗೆಯಲ್ಲಿ ಪ್ರತಿ ವರ್ಷ ನೀರಿನ ಸಮಸ್ಯೆ ಎದುರಿಸುತ್ತಿದ್ದು, ಆದ್ದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ನಿಟ್ಟಿನಲ್ಲಿ ಈ ದೊಡ್ಡ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಇದರಿಂದ ಪ್ರತಿ ಮನೆಗಳಿಗೂ ವರದಾನವಾಗಲಿದೆ. –ಬಿ.ವೈ. ರಾಘವೇಂದ್ರ, ಸಂಸದರು

ಕೊಟ್ಟ ಮಾತಿನಂತೆ ಈಡೇರಿಕೆ: ಚುನಾವಣೆ ಸಂದರ್ಭದಲ್ಲಿ ಜನರಿಗೆ ಪ್ರತಿ ಮನೆ-ಮನೆಗೆ ನೀರು ಕೊಡುವ ಭರವಸೆಯನ್ನು ನೀಡಿದ್ದೆ. ಅದನ್ನು ಈಗ ಈಡೇರಿಸುವ ನಿಟ್ಟಿನಲ್ಲಿ ಈ ಮಹತ್ವದ ಯೋಜನೆಗೆ ಮುಖ್ಯಮಂತ್ರಿಗಳೇ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. –ಬಿ.ಎಂ. ಸುಕುಮಾರ್‌ ಶೆಟ್ಟಿ ಬೈಂದೂರು ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next