Advertisement

ಬೈಂದೂರು: ಪುಟ್ಟ ಮಕ್ಕಳ ಸುರಕ್ಷತೆಗಾದರೂ ಕಾಲು ಸಂಕ ನಿರ್ಮಿಸಿ

05:14 PM May 31, 2024 | Team Udayavani |

ಬೈಂದೂರು: 2022ರ ಆಗಸ್ಟ್‌ 8ರಂದು ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಪುಟ್ಟ ಬಾಲಕಿ, ಏಳು ವರ್ಷದ ಸನ್ನಿಧಿ ಮರದ ಸಂಕ ದಾಟು ವಾಗ ನದಿಯ ಸೆಳೆತಕ್ಕೆ ಸಿಲುಕಿ ನೀರು ಪಾಲಾದಾಗ ಸರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಸೇರಿ ಎಲ್ಲರೂ ಕಣ್ಣೀರು ಸುರಿಸಿದ್ದರು.

Advertisement

ಸಾಲು ಸಾಲಾಗಿ ಸಾಂತ್ವನದ ಜತೆಗೆ ಶೀಘ್ರ ಬೈಂದೂರಿನ ಗ್ರಾಮೀಣ ಭಾಗದ ಕಾಲು ಸಂಕಗಳ ಬೇಡಿಕೆಯನ್ನು ಈಡೇರಿಸುತ್ತೇವೆ
ಎಂದು ಭರವಸೆ ನೀಡಿದ್ದರು. ಆದರೆ ಕಾಲ್ತೋಡಿನ ಆ ನಿರ್ದಿಷ್ಟ ಪ್ರದೇಶದ ಒಂದು ಕಾಲು ಸಂಕ ಬಿಟ್ಟರೆ ಬೇರೆ ಎಲ್ಲೂ ಕಾಲು ಸಂಕ ನಿರ್ಮಾಣವಾಗಿಲ್ಲ.

ಈಗ ಮಳೆಗಾಲ ಮತ್ತೆ ಬಂದಿದೆ. ಎಂದಿನಂತೆ ನದಿಗಳು ಉಕ್ಕೇರಲಿವೆ. ಸರಕಾರ ಜನಪ್ರತಿನಿಧಿಗಳ ಭರವಸೆ ನಂಬಿ ಕಾಲು ಸಂಕದ ಕನವರಿಕೆಯಲ್ಲೇ ಇದ್ದ ಈ ಭಾಗದ ಜನರಿಗೆ ಮತ್ತೆ ಆತಂಕ ಶುರುವಾಗಿದೆ. ಇಲಾಖೆ, ಜನಪ್ರತಿನಿಧಿಗಳು ಪರಸ್ಪರ ಒಬ್ಬರಿಗೊಬ್ಬರನ್ನು ಬೆರಳು ತೋರಿಸಿ ಕಾಲು ಸಂಕದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಮಕ್ಕಳ ಪಾಲಕರಂತೂ ಈ ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಹೇಗೆ ಎಂದು ಆತಂಕಪಡುತ್ತಿದ್ದಾರೆ.

ಈ ಭಾಗದ ಹಳ್ಳಿಗಳಲ್ಲಿ ಮಳೆಗಾಲದಲ್ಲಿ ತುಂಬಿ ಹರಿಯುವ ನದಿಗಳು ಮರದ ಕೊಂಬೆ ಮೇಲೆ ಮಕ್ಕಳನ್ನು ಕಳುಹಿಸುವ ಸರ್ಕಸ್‌ ಸ್ಥಳೀಯರಿಗೆ ಸರ್ವೇಸಾಮಾನ್ಯವಾಗಿದೆ. ಆದರೆ ಇಲಾಖೆ ಮಾತ್ರ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಸನ್ನಿಧಿ ಮೃತ್ಯು ವಿನ ಅನಂತರ ಕಾಲ್ತೋಡು ಸಮೀಪ ಒಂದು ಕಾಲುಸಂಕ ನಿರ್ಮಾಣಗೊಂಡಿದೆ.ಉಳಿದ ಕಡೆ ಇದುವರೆಗೆ ಕೆಲಸ ನಡೆದಿಲ್ಲ. ಅಪಾಯ ನಡೆದ ಬಳಿಕ ಎಚ್ಚೆತ್ತುಕೊಳ್ಳುವುದಕ್ಕಿಂತ ಮುಂಜಾಗ್ರತೆ ವಹಿಸಿ ಎನ್ನುವುದು ಇಲ್ಲಿನ ಜನರ ಆಗ್ರಹ.

ವರ್ಷಾಂತರಗಳ ಸಮಸ್ಯೆ ಇದು

Advertisement

ಬೈಂದೂರು ಭಾಗದಲ್ಲಿ ಕಾಲುಸಂಕದ ಸಮಸ್ಯೆ ಇಂದು ನಿನ್ನೆಯದಲ್ಲ.ಹತ್ತಾರು ವರ್ಷಗಳಿಂದ ಬಹುತೇಕ ಕಡೆ ಇದರ ಬೇಡಿಕೆಯಿದೆ. ಯಡ್ತರೆ ಗ್ರಾಮದ ಗಂಗನಾಡು, ನಿರೋಡಿ, ಕಾಲ್ತೋಡು ಭಾಗದ ಹೊಸೇರಿ, ಸಾಂತೇರಿ, ವಸ್ರೆ, ಬ್ಯಾಟಿಯಾಣಿ, ಮಧು ಕೊಡ್ಲು, ಚಪ್ಪರಕಿ, ಕಪ್ಪಾಡಿ, ಮುರೂರು, ಗುಂಡುಬಾಣ ಮುಂತಾದ ಕಡೆ ಬಹುತೇಕ ಮನೆಗಳಿಂದ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದರೆ ನದಿದಾಟಿ ಬರಬೇಕು.ಇಲ್ಲವಾದರೆ ಹತ್ತಾರು ಕಿ.ಮೀ ಸುತ್ತು ಬಳಸಿ ಬರಬೇಕಾಗಿದೆ. ಒಂದೆಡೆ ಕೃಷಿ ಚಟುವಟಿಕೆ ಇದರ ನಡುವೆ ನಿಗದಿ ಸಮಯಕ್ಕೆ ಮಕ್ಕಳನ್ನು ಶಾಲೆಗೆ ಕರೆತರಬೇಕಾದ ಜವಾಬ್ದಾರಿ ನಿಭಾಯಿ ಸುವುದು ಭಾರಿ ಕಷ್ಟ. ಹೀಗಾಗಿ ಮಕ್ಕಳು ಮನೆಗೆ ಬರುವವರೆಗೆ ಪಾಲಕರ ಆತಂಕದಿಂದ ದಿನ
ಕಳೆಯಬೇಕಾಗಿದೆ.

ಸ್ಥಳೀಯರಿಂದ ಕಾಲುಸಂಕದ ಕಾಮಗಾರಿ
ಇಲ್ಲಿನ ಸಾತೇರಿ, ಹೊಸೇರಿ ಭಾಗದಲ್ಲಿ ಸರಕಾರದ ಸ್ಪಂದನೆಗೆ ಕಾದು ಬೇಸತ್ತು ಸ್ಥಳೀಯರೇ ಶ್ರಮದಾನದ ಮೂಲಕ ಕಾಲುಸಂಕ ನಿರ್ಮಿಸಿ ಕೊಂಡಿದ್ದಾರೆ. ಮರದ ದಿಮ್ಮಿ ಗಳಿಂದ ನಿರ್ಮಿಸಿದ ಈ ತಾತ್ಕಾಲಿಕ ಕಾಲು ಸಂಕ ಸುರಕ್ಷಿತ ವೇನೂ ಅಲ್ಲ. ಆದರೆ ಬೇರೆ ದಾರಿ ಇಲ್ಲ

ಜನ ಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಕೆ ಕಾಲುಸಂಕ ನಿರ್ಮಿಸಲು ಕಳೆದ ಹಲವು ವರ್ಷಗಳಿಂದ ಶಾಸಕರಿಗೆ,
ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ನೀಡಲಾಗಿತ್ತು.ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಸಮಸ್ಯೆಯಾಗುತ್ತಿದೆ. ಸರಕಾರ ಇಲ್ಲಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
*ಆನಂದ ಪೂಜಾರಿ, ಗ್ರಾಮಸ್ಥರು

*ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next