Advertisement

ಹೋರಾಟಕ್ಕೆ ಸಿದ್ಧತೆ, ಹಳ್ಳಿಗರ ಬದುಕಿಗೆ ಬೇಕಿದೆ ಆಡಳಿತಾತ್ಮಕ ಭರವಸೆ

07:51 PM Oct 12, 2021 | Team Udayavani |

ಬೈಂದೂರು: ಉಡುಪಿ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ ಎನ್ನುವ ಹೆಗ್ಗಳಿಕೆ ಬೈಂದೂರಿನದ್ದಾಗಿದೆ. ಶೈಕ್ಷಣಿಕ, ರಾಜಕೀಯ, ಸಾಂಸ್ಕೃತಿಕ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ.

Advertisement

ಬೈಂದೂರಿನ ಅಭಿವೃದ್ಧಿ ಹಿತದೃಷ್ಟಿ ಮತ್ತು ಆಡಳಿತ ಸರಳೀಕರಣಗೊಳಿಸುವ ಉದ್ದೇಶದಿಂದ ಆಗಸ್ಟ್‌ 14, 2020ನೇ ಸಾಲಿನಲ್ಲಿ ಬೈಂದೂರು, ಯಡ್ತರೆ, ಪಡುವರಿ ಸೇರ್ಪಡೆಗೊಳಿಸಿ ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಲಾಯಿತು. ಆರಂಭದಲ್ಲಿ ಹೆಚ್ಚಿನ ಅನುದಾನದ ನಿರೀಕ್ಷಿಸ ಲಾಗಿತ್ತು. ರಾಜ್ಯ ಸರಕಾರದ ಅಂಗೀಕಾರದ ಮೊಹರು ಬೀಳುವ ಮೂಲಕ ಗ್ರಾಮೀಣ ಭಾಗಗಳು ಸೇರ್ಪಡೆಗೊಂಡು ಆದೇಶ ಅಂತಿಮಗೊಂಡಿದೆ. ಆದರೆ ಈಗ ಆಗುತ್ತಿರುವ ಆಡಳಿತಾತ್ಮಕ ಸಮಸ್ಯೆಯ ಬಿಸಿ ಗ್ರಾಮೀಣ ಭಾಗದ ಜನರ ಉಸಿರುಗಟ್ಟಿಸುತ್ತಿದೆ.

ಹೈರಾಣಾದ ಹಳ್ಳಿ ಜನರು,
112 ಚದರ ಕಿ.ಮೀ. ಪ.ಪಂ. ವ್ಯಾಪ್ತಿ
ಬೈಂದೂರು ಪಟ್ಟಣ ಪಂಚಾಯತ್‌ ಗೊಂದಲ ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರ ಹಾಗೂ ಸೂಕ್ತ ಮುಂದಾಲೋಚನೆಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ. ಈಗಿರುವ ಪ್ರಕಾರ ಬೈಂದೂರು ದೊಡ್ಡ ವ್ಯಾಪ್ತಿ ಅಂದರೆ 112 ಚ.ಕಿ.ಮೀ. ವ್ಯಾಪ್ತಿ ಹೊಂದಿದೆ. ಇದು
ಮಂಗಳೂರಿಗಿಂತ ಹೆಚ್ಚಿನ ವಿಸ್ತೀರ್ಣವಾಗಿದೆ.

ಅರಣ್ಯ ವ್ಯಾಪ್ತಿ ಹೊರತುಪಡಿಸಿ ಸರಕಾರ 52.24 ಚ.ಕಿ.ಮೀ. ನೋಟಿಫಿಕೇಶನ್‌ ಮಾಡಿದೆ. ಯಡ್ತರೆ, ಬೈಂದೂರು, ಯಡ್ತರೆ ಗ್ರಾಮದ ಗಂಗನಾಡು, ಕಲ್ಮಕ್ಕಿ, ಎತ್ತಬೇರು, ಕ್ಯಾರ್ತೂರು, ನಾಗರಮಕ್ಕಿ, ಮಧ್ದೋಡಿ, ಕುಂಜಳ್ಳಿ,ಗೋಳಿಬೇರು, ಊದೂರು, ತೂದಳ್ಳಿ, ಹೊಸೂರು, ಕುಳ್ಳಂಕಿ, ಅಂಬಿಕಾನ್‌, ಕೊಸಳ್ಳಿ, ಅತ್ಯಾಡಿ, ಚಕತ್ಕಲ್‌, ತಗ್ಗರ್ಸೆ ಭಾಗದ ಕೆಲವು ಭಾಗಗಳು ಕೇಂದ್ರ ಪ್ರದೇಶದಿಂದ 15ರಿಂದ 20 ಕಿ.ಮೀ ದೂರದಲ್ಲಿದೆ.ಅತ್ಯಂತ ಹಿಂದುಳಿದ ಗ್ರಾಮೀಣ ಪ್ರದೇಶವಾದ ಈ ಭಾಗದ ಜನರು ಕೂಲಿ ಮತ್ತು ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಗ್ರಾ.ಪಂ.ನಲ್ಲಿ ಸಿಗುತ್ತಿರುವ ಸೌಲಭ್ಯಗಳು ಪಟ್ಟಣ ಪಂಚಾಯತ್‌ ಆದ ಬಳಿಕ ಸವಲತ್ತು ದೊರೆಯದೆ ತೆರಿಗೆಯು ಪಾವತಿಸಲಾಗದೆ ಅತಂತ್ರವಾಗಿ ಬಿಟ್ಟಿದೆ. ಸಣ್ಣ ಕೆಲಸಕ್ಕೂ ಕೂಡ 100 ಕಿ.ಮೀ ದೂರದ ಮಣಿಪಾಲ ಜಿಲ್ಲಾಧಿಕಾರಿ ಕಚೇರಿಗೆ ಅಲೆಯಬೇಕಾಗಿದೆ. ಮಾತ್ರವಲ್ಲದೆ 94 ಸಿ, ಆಕ್ರಮ -ಸಕ್ರಮ, ಗ್ರಾಮೀಣ ಕೃಪಾಂಕ, ಕೃಷಿ ಇಲಾಖೆ ಸವಲತ್ತು ದೊರೆಯುತ್ತಿಲ್ಲ. ಹೊಸ ಮನೆ ನಿರ್ಮಾಣ ಮಾಡುವಾಗ ಹತ್ತಾರು ಸಮಸ್ಯೆ ಎದುರಾಗುತ್ತಿದೆ. ಭೂ ಪರಿವರ್ತನೆ ಕನಸಿನ ಮಾತಾಗಿದೆ. ಒಟ್ಟಾರೆ ಗ್ರಾಮೀಣ ಭಾಗದ ಜನರ ಬದುಕು ಹೊಸ ಬದಲಾವಣೆಯಿಂದ ಅತಂತ್ರವಾಗಿ ಬಿಟ್ಟಿದೆ. ಹೀಗಾಗಿ ಹಳ್ಳಿ ಭಾಗಗಳನ್ನು ಪಟ್ಟಣ ಪಂಚಾಯತ್‌ನಿಂದ ಬೇರ್ಪಡಿಸಿ ಎನ್ನುವುದು ಇಲ್ಲಿನ ಜನರ ಆಗ್ರಹವಾಗಿದೆ.

Advertisement

ಇದನ್ನೂ ಓದಿ:ಬಿಜೆಪಿ ಮೀಸಲಾತಿ ವಿರೋಧಿ ಪಕ್ಷ : ಸಿದ್ದರಾಮಯ್ಯ

ಬದಲಿ ವ್ಯವಸ್ಥೆಗಳೇನು?
ಸರಕಾರದ ಅಧಿಕೃತ ಅನುಮೋದನೆಯಾದ ಬಳಿಕ ತಿದ್ದುಪಡಿ ಮಾಡುವುದು ಸುಲಭದ ಮಾತಲ್ಲ. ಪ್ರಸ್ತುತ ಶಿರೂರು ಬಲಭಾಗವಾದ ಆಲಂದೂರು, ಜೋಗೂರು, ಹೊಸೂರು, ಊದೂರು, ನಾಗರಮಕ್ಕಿ, ಗಂಗನಾಡು, ನಿರೋಡಿ ವರೆಗಿನ ಭಾಗಗಳನ್ನು ಒಗ್ಗೂಡಿಸಿ ಹೊಸ ಗ್ರಾ.ಪಂ. ಮಾಡಿದಲ್ಲಿ ಒಂದಷ್ಟು ಪರಿಹಾರ ದೊರೆಯಬಹುದಾಗಿದೆ. ಹೀಗಾಗಿ ಜನಪ್ರತಿನಿಧಿಗಳು, ಸಾಮಾಜಿಕ ಮುಖಂಡರು ವೈಯಕ್ತಿಕ ಹೊರತುಪಡಿಸಿ ಗ್ರಾಮೀಣ ಭಾಗದ ಜನರ ಭವಿಷ್ಯದ ಹಿತದೃಷ್ಟಿಯಿಂದ ಒಂದು ಉತ್ತಮ ನಿರ್ಧಾರ ಕೈಗೊಳ್ಳಬೇಕಾಗಿದೆ.

ಹೋರಾಟಕ್ಕೆ ಸಿದ್ಧತೆ
ಪ.ಪಂ.ನಿಂದ ಆಗುತ್ತಿರುವ ಅವ್ಯವಸ್ಥೆ ಕುರಿತು ಗ್ರಾಮೀಣ ಭಾಗದ ಜನರು ಸಂಘಟಿತರಾಗಿ ಶಾಸಕರಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿದ್ದಾರೆ. ಸದ್ಯದಲ್ಲೇ ಬೃಹತ್‌ ಹೋರಾಟ ನಡೆಸುವ ಸಿದ್ಧತೆ ನಡೆಯು ತ್ತಿದೆ. ಬೈಂದೂರು ಪಟ್ಟಣ ಪಂಚಾಯತ್‌ ವಿಸ್ತೀರ್ಣ ಬಹಳಷ್ಟು ಗೊಂದಲಗಳಿವೆ. ವ್ಯಾಪ್ತಿ ವಿಸ್ತಾರವಾದ ಕಾರಣ ಸವಲತ್ತು ನೀಡಲಾಗುತ್ತಿಲ್ಲ. ಗಡಿ ಭಾಗದ ಜನರಿಂದ ತೆರಿಗೆ ವಸೂಲಿ ಕೂಡ ಸ್ಪಂದನೆ ಸಿಗುತ್ತಿಲ್ಲ. ಹೀಗಾಗಿ ಈ ಬಗ್ಗೆ ಪುನರ್‌ ಪರಿಶೀಲನೆ ಮಾಡಿ ಜನರಿಗೆ ಅನುಕೂಲವಾಗುವ ನಿರ್ಧಾರ ಕೈಗೊಳ್ಳಬೇಕಿದೆ.

ಅಧಿಕಾರಿಗಳ ಜತೆ ಚರ್ಚೆ
ಬೈಂದೂರು ಪ.ಪಂ.ಮೇಲ್ದರ್ಜೆಗೇರಿದ ಬಳಿಕ ಗ್ರಾಮೀಣ ಭಾಗದ ಜನರಿಗೆ ಆಗುತ್ತಿರುವ ಆಡಳಿತಾತ್ಮಕ ಸಮಸ್ಯೆ ಕುರಿತು ಸ್ಥಳೀಯರು ಗಮನಕ್ಕೆ ತಂದಿ¨ªಾರೆ. ಪ.ಪಂ.ನಿಂದಾಗಿ ಕೃಷಿಕರಿಗೆ ಸಮಸ್ಯೆ ಆಗಿರುವ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸುತ್ತೇನೆ. ಈಗಾಗಲೇ ಸರಕಾರದ ಅಂತಿಮ ಅನುಮೋದನೆ ದೊರೆತಿ ರುವ ಕಾರಣ ಸರಕಾರದ ಮಟ್ಟದಲ್ಲಿ ಚರ್ಚಿಸ ಬೇಕಿದೆ. ಹೀಗಾಗಿ ಸಂಸದರ ಗಮನಕ್ಕೆ ತಂದು ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರ್ಣಯ ಕೈಗೊಳ್ಳುವ ಭರವಸೆ ನೀಡುತ್ತೇನೆ.
-ಬಿ.ಎಂ. ಸುಕುಮಾರ್‌ ಶೆಟ್ಟಿ ,
ಶಾಸಕರು, ಬೈಂದೂರು

ಅಧಿಕಾರಿಗಳಿಗೆ ಮಾಹಿತಿ
ಬೈಂದೂರು ಪ.ಪಂ. ಅತಿ ದೊಡ್ಡ ವ್ಯಾಪ್ತಿ ಹೊಂದಿದೆ. ಹೀಗಾಗಿ ಗಡಿ ಭಾಗದಲ್ಲಿ ಸಮರ್ಪಕ ಸವಲತ್ತು ನೀಡಲು ಸಾಧ್ಯವಾಗುತ್ತಿಲ್ಲ ಮತ್ತು ಅನೇಕ ಗೊಂದಲಗಳು ಜನಸಾಮಾನ್ಯರನ್ನು ಹಾಗೂ ಅಧಿಕಾರಿಗಳನ್ನು ಕಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ಸರಕಾರದ ಮಟ್ಟದಲ್ಲಿ ಸಮರ್ಪಕ ನಿರ್ಣಯ ಕೈಗೊಳ್ಳಬೇಕಿದೆ.
– ನವೀನ್‌, ಪ.ಪಂ. ಮುಖ್ಯಾಧಿಕಾರಿ

– ಅರುಣ್‌ ಕುಮಾರ್‌ ಶಿರೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next