Advertisement

ನನಸಾಯ್ತು ಬೈಂದೂರು ತಾಲೂಕು ರಚನೆಯ ಕನಸು

02:47 PM Mar 16, 2017 | Team Udayavani |

ಬೈಂದೂರು: ರಾಜ್ಯ ಬಜೆಟ್‌ನಲ್ಲಿ ಬೈಂದೂರು ತಾಲೂಕು ರಚನೆ ಅಧಿಕೃತ ಘೋಷಣೆಯಾಗುವ ಮೂಲಕ ಬೈಂದೂರು ಜನತೆಯ ಬಹುವರ್ಷದ ಕನಸು ನನಸಾಗಿದೆ. ಬೈಂದೂರಿನ ವಿವಿಧ ಭಾಗಗಳಲ್ಲಿ ಪಟಾಕಿ ಸಿಡಿಸಿ ಸಿಹಿ ವಿತರಿಸಿ ಸಂಭ್ರಮ ಆಚರಿಸಲಾಯಿತು.

Advertisement

ನಾಲ್ಕು ದಶಕದ ಹೋರಾಟ ಬೈಂದೂರು ತಾಲೂಕು ರಚನೆಯ ಹೋರಾಟ ಇಂದು ನಿನ್ನೆಯದಲ್ಲ. ನಿರಂತರವಾಗಿ ನಲವತ್ತು ವರ್ಷಗಳಿಗೂ ಅಧಿಕ ಸಮಯದಿಂದ ಇಲ್ಲಿನ ಜನತೆ ಹೋರಾಟ ನಡೆಸುತ್ತಿದ್ದಾರೆ. ನಿವೃತ್ತ ಅರಣ್ಯಾಧಿಕಾರಿ ಜಗನ್ನಾಥ ಶೆಟ್ಟಿಯವರ ನೇತೃತ್ವದಲ್ಲಿ ಬೈಂದೂರು ತಾಲೂಕು ರಚನೆ ಮತ್ತು ಅಭಿವೃದ್ಧಿ ಸಮಿತಿ ಈಗಾಗಲೇ ರಾಜ್ಯದ ಹಲವು ಮುಖ್ಯಮಂತ್ರಿಗಳಿಗೆ  ಹಾಗೂ ವಿವಿಧ ಜನಪ್ರತಿನಿಧಿಗಳಿಗೆ ಮನವಿ ನೀಡಿದೆ ಮತ್ತು ನಿರಂತರ ಪ್ರಯತ್ನ ನಡೆಸುತ್ತಿದೆ. ಜಿಲ್ಲೆಯ ಸಾಂಸ್ಕೃತಿಕ, ರಾಜಕೀಯ, ಶೈಕ್ಷಣಿಕ  ಸೇರಿದಂತೆ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹೆಗ್ಗಳಿಕೆ ಬೈಂದೂರಿನದ್ದಾಗಿದೆ. 

1984ರಿಂದ ಬೈಂದೂರು ತಾಲೂಕು ಹೋರಾಟ ಸಮಿತಿ ತಾಲೂಕು ರಚನೆಯ ಮನವಿ ನೀಡುತ್ತಿದೆ. 1987ರಲ್ಲಿ ಉಡುಪಿ ಜಿಲ್ಲೆಯ ಪುನರ್‌ ವಿಂಗಡನೆಯ ಸಂದರ್ಭ ಬೈಂದೂರು, ಬ್ರಹ್ಮಾವರ, ಮೂಡಬಿದಿರೆ ತಾಲೂಕು ಪ್ರಸ್ತಾವ ನಿರ್ಧರಿಸಲಾಗಿತ್ತು. ಸರಕಾರದ ಪರವಾಗಿ ತಾಲೂಕು ಸಮೀಕ್ಷೆಗೆ ನೇಮಿಸಿದ ಹುಂಡೇಕರ್‌ ಆಯೋಗ, ಗದ್ದಿಗೌಡರ ಆಯೋಗ ಬೈಂದೂರು ತಾಲೂಕು ರಚನೆಗೆ ಶಿಫಾರಸು ನೀಡಿದ್ದವು. ಇದರ ಪ್ರಕಾರ ಬೈಂದೂರು ಹೋಬಳಿಯಲ್ಲಿ 26 ಗ್ರಾಮ ಹಾಗೂ ವಂಡ್ಸೆ ಹೋಬಳಿಯಲ್ಲಿ 30 ಗ್ರಾಮಗಳಂತೆ ಪ್ರತ್ಯೇಕಿಸಲಾಗಿದೆ. 2012-13ರ ಬಜೆಟ್‌ನಲ್ಲಿ 43 ಹೊಸ ತಾಲೂಕು ಘೋಷಣೆ ಮಾಡಿ ಮೂಲ ಸೌಕರ್ಯ ಒದಗಿಸಲು ಭರವಸೆ ನೀಡಿದರೂ ಸಹ ಅನುಷ್ಠಾನಗೊಂಡಿರಲಿಲ್ಲ. ಹೀಗಾಗಿ ಈ ಬಾರಿ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗದೆ ಪೂರ್ಣ ಅನುದಾನ ಬಿಡುಗಡೆಗೊಳಿಸಿ ತಾಲೂಕು ರಚನೆಗೆ ಆವಶ್ಯಕವಾಗಿರುವ ಕಾಮಗಾರಿಗಳಿಗೆ ಚಾಲನೆ ದೊರಕಿಸಿಕೊಡುವ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ.

ಶಾಸಕರ ನಿರಂತರ ಪ್ರಯತ್ನ
ಬೈಂದೂರು ತಾಲೂಕು ರಚನೆಗಾಗಿ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ನಿರಂತರ ಪ್ರಯತ್ನ ನಡೆಸಿದ್ದಾರೆ. ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ತಾಲೂಕು ರಚನೆಯ ವಾಸ್ತವತೆ ಬಗ್ಗೆ ನಿರಂತರ ಮಾತುಕತೆ ನಡೆಸಿರುವ ಜತೆಗೆ ಬಜೆಟ್‌ನಲ್ಲಿ ಅಧಿಕೃತ ಘೋಷಣೆ ಮಾಡುವ ಭರವಸೆ ನೀಡಿದ್ದರು. 

ಈಗಾಗಲೇ  ತಾಲೂಕು ಕೇಂದ್ರಕ್ಕೆ ಅವಶ್ಯವಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ವಿಶೇಷ ತಹಶೀಲ್ದಾರರ ಕಚೇರಿ, ಅಗ್ನಿಶಾಮಕ ದಳ, ಪಶು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ವಲಯ ಅರಣ್ಯಾಧಿಕಾರಿಗಳ ಕಚೇರಿ ಸೇರಿದಂತೆ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಸ್ಥಳವನ್ನು ಮೀಸಲಿರಿಸಲಾಗಿದೆ. ಉದಯವಾಣಿ ತಾಲೂಕು ರಚನೆ ಕುರಿತು ಹಲವು ಬಾರಿ ವರದಿ ಪ್ರಕಟಿಸಿರುವುದನ್ನು ನೆನಪಿಸಿ ಕೊಳ್ಳಬಹುದಾಗಿದೆ.

Advertisement

– ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next