Advertisement

ಬೈಂದೂರು ಗ್ರಾಮೀಣ ಸಾರಿಗೆ ಸ್ಥಗಿತ:  ಜೂ. 19ರಂದು ವಿಚಾರಣೆ

06:00 AM Jun 10, 2018 | |

ಬೈಂದೂರು: ನಾಲ್ಕೈದು ದಿನಗಳಿಂದ ತಾಲೂಕು ವ್ಯಾಪ್ತಿಯಲ್ಲಿ ನರ್ಮ್ ಬಸ್ಸುಗಳ ಸಂಚಾರ ಹಠಾತ್‌ ನಿಲುಗಡೆಯಿಂದ ವಿದ್ಯಾರ್ಥಿಗಳು ಇಕ್ಕಟ್ಟಿಗೆ ಸಿಲುಕಿದ್ದು, ಬಸ್ಸುಗಳ ಆರಂಭದ‌ ಕುರಿತು ಜೂ. 19 ರಂದು ನಿರ್ಧಾರವಾಗುವ ಸಂಭವವಿದೆ. ಲೋಕಾಯುಕ್ತ ಕೋರ್ಟ್‌ನಲ್ಲಿ ಅಂದು ಪ್ರಕರಣದ ವಿಚಾರಣೆ ನಡೆಯಲಿದ್ದು, ಜನರೂ ಅದರ ನಿರೀಕ್ಷೆಯಲ್ಲಿದ್ದಾರೆ. 

Advertisement

ಲೋಕಾಯುಕ್ತ ಕೋರ್ಟ್‌ಗೆ ಹೋಗಿದ್ದೇಕೆ?
ಹಿಂದಿನ ಶಾಸಕರಾದ ಗೋಪಾಲ ಪೂಜಾರಿಯವರ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಗ್ರಾಮೀಣ ಭಾಗ ಸೇರಿದಂತೆ ವಿವಿಧ ಊರುಗಳಿಗೆ ಸರಕಾರಿ ಬಸ್‌ಗಳ ಸಂಚಾರ ಆರಂಭಿಸಲಾಗಿತ್ತು. ಕೆ.ಎಸ್‌.ಆರ್‌.ಟಿ.ಸಿ. ನಿಗಮ ಹಾಗೂ ಉಸ್ತುವಾರಿ ಸಚಿವರ ಆದೇಶದ ಪ್ರಕಾರ ಬಸ್‌ ಸಂಚಾರ ಆರಂಭವಾಗಿತ್ತು. ಆದರೆ, ಕೆಎಸ್‌ಆರ್‌ಟಿಸಿಯವರು ಆರ್‌ಟಿಒದಿಂದ ಅಧಿಕೃತ ಪರವಾನಿಗೆ ಪಡೆದಿರಲಿಲ್ಲ. ಸರಾಸರಿ 1ರಿಂದ 3 ನಿಮಿಷಗಳ ಅಂತರದಲ್ಲಿ ಖಾಸಗಿ ಬಸ್ಸುಗಳು ಇರುವಾಗ ಇದರ ಮಧ್ಯೆ ನಿಗದಿತ ವೇಳಾಪಟ್ಟಿ ಇಲ್ಲದೇ ಸರಕಾರಿ ಬಸ್‌ ಸಂಚಾರ ಪ್ರಾರಂಭಿಸಲಾಗಿದ್ದು ಸಮಸ್ಯೆಯಾಗಿದೆ. ಸಾರಿಗೆ ಇಲಾಖೆ, ಜಿಲ್ಲಾಧಿಕಾರಿಗಳು ಮತ್ತು ಪೋಲಿಸ್‌ ವರಿಷ್ಠಾಧಿಕಾರಿಗಳು ಅನುಮತಿ ನೀಡುವ ಮೊದಲು ಖಾಸಗಿಯವರ ಅಭಿಪ್ರಾಯ ಕೇಳಿರಲಿಲ್ಲ ಎನ್ನಲಾಗಿತ್ತು. 

ಈ ಸಂದರ್ಭದಲ್ಲಿ ಖಾಸಗಿ ಬಸ್‌ಗಳ ಪ್ರವರ್ತಕರು ಹೈಕೋರ್ಟ್‌ ಮೊರೆ ಹೋದರು. ಪ್ರಕರಣವನ್ನು ವಿಚಾರಿಸಿದ ಹೈಕೋರ್ಟ್‌, ಸೂಕ್ತ ಪರವಾನಿಗೆ ಪಡೆದು ಸಂಚಾರ ಪ್ರಾರಂಭಿಸುವಂತೆ ಕೆ.ಎಸ್‌.ಆರ್‌.ಟಿ.ಸಿ. ಯವರಿಗೆ ಆದೇಶಿಸಿತ್ತು. ಆದರೆ ಏಳು ತಿಂಗಳು ಕಳೆದರೂ ಪರವಾನಿಗೆ ಪಡೆಯದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿಯವರು ಹೈಕೋರ್ಟ್‌ ಆದೇಶ ಪಾಲಿಸಿಲ್ಲ ಎಂದು ಖಾಸಗಿಯವರು ಲೋಕಾಯುಕ್ತ ಕೋರ್ಟ್‌ಗೆ ಹೋಗಿದ್ದರು.

ಹಳ್ಳಿ ಸಂಚಾರಕ್ಕೆ ಅಭ್ಯಂತರವಿಲ್ಲ
ಗ್ರಾಮೀಣ ಭಾಗಗಳಲ್ಲಿ ಸಂಚರಿಸುವ ಸರಕಾರಿ ಬಸ್‌ ಸೇವೆ ನಿಲ್ಲಿಸಲು ನಮ್ಮ ಒತ್ತಡವಿಲ್ಲ. ಆದರೆ ಕುಂದಾಪುರ -ಬೈಂದೂರು ರಾ. ಹೆ.ಯಲ್ಲಿ ಪರವಾನಿಗೆ ಪಡೆಯದೆ ಸಂಚರಿಸುವ ಸರಕಾರಿ ಬಸ್‌ಗಳ ವಿರುದ್ಧ ನಾವು ಕೋರ್ಟ್‌ ಮೊರೆ ಹೋಗಿದ್ದೇವೆ ಎನ್ನುತ್ತಾರೆ ಖಾಸಗಿ ಬಸ್‌ ಮಾಲಕರು. ಆದರೆ ಹಳ್ಳಿಗಳಿಗೆ ತೆರಳಬೇಕಾದರೆ ಕುಂದಾಪುರದಿಂದ ಬೈಂದೂರಿನವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲೇಬೇಕು. ಅದರಂತೆ ಬಸ್‌ಗಳು ಸಂಚರಿಸುತ್ತವೆ. ಜತೆಗೆ ನಿತ್ಯವೂ ಪ್ರತಿ ಬಸ್‌ಗಳಿಗೂ ಇಂತಿಷ್ಟು ಕಿ.ಮೀ. ಓಡಬೇಕಿದೆ. ಅದರಂತೆ ಕ್ರಮ ಕೈಗೊಳ್ಳಲಾಗಿದೆ ಎಂಬುದು ಕೆ.ಎಸ್‌.ಆರ್‌.ಟಿ.ಸಿ. ಅಧಿಕಾರಿಗಳ ಅಭಿಪ್ರಾಯ.

ದಮನ ನೀತಿ : ಟೀಕೆ
ಬಸ್‌ ಸಂಚಾರ ಸ್ಥಗಿತ ಕುರಿತ ಸುದ್ದಿಗೆ ಪ್ರತಿಕ್ರಿಯಿಸಿರುವ ಕುಂದಾಪುರ-ಬೈಂದೂರು ಮಾರ್ಗದ ಕೆಲವು ಖಾಸಗಿ ಬಸ್‌ ಪ್ರವರ್ತಕರು, ಪರವಾನಿಗೆ ಇಲ್ಲದೆ ಕೆಎಸ್‌ಆರ್‌ಟಿಸಿ ಬಸ್‌ ಓಡಿಸುವುದು ಸರಿಯಲ್ಲ. ಕೆ.ಎಸ್‌.ಟಿ.ಎ.ಟಿ. ನ್ಯಾಯಾಲಯ ನೀಡಿರುವ ಸೂಚನೆಯನ್ನೂ ಪಾಲಿಸದೇ ಬಸ್ಸುಗಳನ್ನು ಓಡಿಸುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆಗಳಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ನವೆಂಬರ್‌ನಲ್ಲಿ ಲೋಕಾಯುಕ್ತರಿಗೆ ದೂರು ನೀಡಲಾಗಿತ್ತು ಎಂದಿ ದ್ದಾರೆ. ಗ್ರಾಮೀಣ ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸು ದಿನಕ್ಕೊಂದು ಬಾರಿ ಸಂಚರಿಸುತ್ತಿದ್ದು, ಉಳಿದಂತೆ ಬೈಂದೂರು- ಕುಂದಾಪುರ ನಡುವೆ ಸಂಚರಿಸುತ್ತದೆ. ವಿದ್ಯಾರ್ಥಿಗಳಿಗಾಗಿ ಖಾಸಗಿ ಬಸ್‌ಗಳನ್ನೂ ಓಡಿಸುತ್ತಿದ್ದು, ರಿಯಾಯಿತಿ ನೀಡುತ್ತಿದ್ದೇವೆ ಎಂದಿರುವ ಅವರು, ಕುಂದಾಪುರ- ಬೈಂದೂರು ಮಾರ್ಗದ ಧಾರಣಾ ಶಕ್ತಿಗೂ ಮೀರಿ ಬಸ್‌ಗಳನ್ನು ಓಡಿಸುತ್ತಿರುವುದರಿಂದ‌ ನಷ್ಟವಾಗುತ್ತಿದೆ. ಇದು ಖಾಸಗಿಯವರನ್ನು ದಮನಿಸುವ ನೀತಿ ಎಂದು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next