Advertisement

ಮಳೆಗಾಲದಲ್ಲಿ ಮರದ ಸಂಕ; ಬಾಕಿ ದಿನ ಹೊಳೆಯಲ್ಲೇ ನಡಿಗೆ 

08:05 PM Sep 23, 2021 | Team Udayavani |

ಬೈಂದೂರು: ಈ ಊರಿನ ಜನರ ಬದುಕು ಅಕ್ಷರಶಃ  ನರಕ ಯಾತನೆಯಂತಿದೆ. ಆಸ್ಪತ್ರೆಗೆ ಹೋಗಬೇಕಾದರೆ ನಾಲ್ಕೈದು ಕಿ.ಮೀ. ಹೊತ್ತುಕೊಂಡು ಹೋಗಬೇಕು. ಕಲ್ಲು, ಮಣ್ಣಿನ ದುರ್ಗಮ ದಾರಿಯಲ್ಲಿ 15 ಕಿ.ಮೀ. ನಡೆದರೆ ಡಾಮರು ಹಾಸಿದ ರಸ್ತೆಯನ್ನು ಕಾಣಬಹುದಾಗಿದೆ. ಮೊಬೈಲ್‌ ನೆಟ್‌ವರ್ಕ್‌ ಇಲ್ಲದೆ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾದರೆ ಮನೆಗಳಿಗೆ ದಾರಿ ಇಲ್ಲದ ಕಾರಣ ಇಲ್ಲಿನ ಯುವತಿಯರಿಗೆ ನೆಂಟಸ್ತಿಕೆಯೇ ಬರುತ್ತಿಲ್ಲವಂತೆ!

Advertisement

ಬೈಂದೂರು ತಾಲೂಕು ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವ ಯಡ್ತರೆ ಗ್ರಾ.ಪಂ. ವ್ಯಾಪ್ತಿಯ ಊದೂರು ಸಮೀಪದ ಕರ್ನ ಗದ್ದೆಯೇ ಈ ಕುಗ್ರಾಮ.

ಕಾಲ್ನಡಿಗೆಯೇ ಗತಿ:

ಇಲ್ಲಿ ಬಹು ವರ್ಷಗಳಿಂದ ರಸ್ತೆ ಇಲ್ಲ, ಸೇತುವೆ ಆಗಿಲ್ಲ. ಕರ್ನಗದ್ದೆಯಲ್ಲಿ 70ಕ್ಕೂ ಹೆಚ್ಚು ಕುಟುಂಬಗಳು ನೆಲೆಸಿವೆ. ಶಿರೂರು ಮಾರ್ಗವಾಗಿ ಊದೂರು ಸಮೀಪದ ಬಲಭಾಗದಿಂದ ಹತ್ತು ಕಿ.ಮೀ. ಮಣ್ಣಿನ ರಸ್ತೆ ಕಾಡಿನ ಮಧ್ಯೆ ಸಾಗುತ್ತದೆ. ಬಳಿಕ ಮಸಿಬೆಟ್ಟು ಹೊಳೆ ಹರಿಯುತ್ತದೆ. ಯಾವುದೇ ವಾಹನ ಬಂದರೂ ಸಹ ಈ ನದಿ ದಂಡೆಯವರೆಗೆ ಮಾತ್ರ. ಆ ಮೇಲೆ ಕಾಲ್ನಡಿಗೆಯೇ ಗತಿ. ಸೇತುವೆ ಇಲ್ಲದ ಕಾರಣ ನೀರಿಗಿಳಿದೇ ದಾಟಬೇಕು. ಸೇತುವೆಯಾಗಿ ಮರದ ದಿಮ್ಮಿಯನ್ನು ಊರವರು ಹಾಕುತ್ತಿದ್ದು, ಮಳೆಗಾಲದಲ್ಲಿ ಅದರ ಮೇಲೆಯೇ ನಡೆದು ಸಾಗಬೇಕು. ಕಾಲು ಜಾರಿದರೆ ಪ್ರವಾಹಕ್ಕೆ ಬೀಳುವುದು ನಿಶ್ಚಿತ.

ಕೃಷಿ, ಶಾಲೆ, ಆಸ್ಪತ್ರೆ, ನಿತ್ಯ ವ್ಯವಹಾರ ಎಲ್ಲಿಗೆ ಹೋಗಬೇಕಿದ್ದರೂ ಇಲ್ಲಿನ ಜನರು ನದಿ ದಾಟಿಯೇ ಹೋಗಬೇಕಿರುವುದರಿಂದ ಗ್ರಾಮೀಣ ಭಾಗದ ಜನರ ಬದುಕು ಅತಂತ್ರವಾಗಿದೆ. ದೂರದಲ್ಲಿರುವ ಸಂಬಂಧಿಕರು ಕೂಡ ಇಲ್ಲಿನ ಮನೆಗಳಿಗೆ ಬರುವುದೆಂದರೆ ಹಿಂದೆ ಮುಂದೆ ನೋಡುತ್ತಾರೆ.

Advertisement

ಸುಮಾರು 60 ವರ್ಷಗಳಿಂದ ಈ ಊರಿಗೆ ಯಾವುದೇ ಸರಕಾರಿ ಯೋಜನೆ ಬಂದಿಲ್ಲ. ಸೇತುವೆ, ಡಾಮರು ರಸ್ತೆ ಚುನಾವಣೆ ಸಮಯದ ಭರವಸೆಯಾಗಿ ಉಳಿದು ಬಿಟ್ಟಿದೆ. ಆದ್ದರಿಂದ ಸ್ಥಳೀಯರು ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ.

ಸೇತುವೆ ನಿರ್ಮಿಸಿ:

ಈ ಭಾಗದಲ್ಲಿ ಸುಮಾರು 25 ಅಂಗವಿಕಲರಿದ್ದು ಅವರನ್ನು ಹೊತ್ತುಕೊಂಡೇ ನದಿ ದಾಟಬೇಕಾಗಿದೆ. ಹೀಗಾಗಿ ಕನಿಷ್ಠ ಪಕ್ಷ ಇಲ್ಲಿನ ಮಸಿಬೆಟ್ಟು ಹೊಳೆಗೆ ಸೇತುವೆ ನಿರ್ಮಾಣವಾದರೆ ಸುಮಾರು ಸಮಸ್ಯೆ ಗಳಿಗೆ ಮುಕ್ತಿ ಸಿಗುತ್ತದೆ. ಆದುದರಿಂದ ಸರಕಾರ ಕರ್ನಗದ್ದೆ ಗೊಂದು ಸೇತುವೆ ಮಂಜೂರು ಮಾಡಬೇಕು ಎನ್ನುವುದು ಸಾರ್ವತ್ರಿಕ ಬೇಡಿಕೆಯಾಗಿದೆ.

ನೂರಾರು ಕೋಟಿ ರೂ. ಅನುದಾನ, ಸಾವಿರಾರು ಕೋಟಿ ಪ್ರಗತಿಯ ಘೋಷಣೆಗಳ ನಡುವೆ ಕತ್ತಲಲ್ಲಿ ಜೀವನ ಸಾಗಿಸುವ ಈ ಗ್ರಾಮದ ಬಗ್ಗೆ ಇಲಾಖೆ, ಸರಕಾರ, ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ. ಜನರ ಸಂಕಷ್ಟಗಳಿಗೆ ಶೀಘ್ರ ಸ್ಪಂದಿಸಬೇಕಿದೆ.

ಕರ್ನಗದ್ದೆಯಲ್ಲಿ ಕಳೆದ 18 ವರ್ಷಗಳಿಂದ ವಾಸವಾಗಿದ್ದೇನೆ. ಪ್ರತೀ ದಿನ ಕೆಲಸ ಮುಗಿಸಿ ರಾತ್ರಿ ಕಾಡಿನಲ್ಲಿ ಸಾಗಬೇಕು. ವಾಹನ ಇದ್ದರೂ ಮನೆಯ ವರೆಗೆ ಕೊಂಡೊಯ್ಯಲಾಗುತ್ತಿಲ್ಲ. ಇಲ್ಲಿನ ಯುವ ಸಮುದಾಯ, ವಿದ್ಯಾರ್ಥಿಗಳು ನಮ್ಮಲ್ಲಿ ಇನ್ನೂ ಮೂಲಸೌಲಭ್ಯಗಳೇ ಇಲ್ಲ ಎಂದು ಹೇಳಿಕೊಳ್ಳಲು ಮುಜುಗರ ಅನುಭವಿಸುತ್ತಿದ್ದಾರೆ. ಹತ್ತಾರು ಬಾರಿ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಜಿಲ್ಲಾಡಳಿತ, ಶಾಸಕರು, ಸಂಸದರು ಕನಿಷ್ಠ ಒಂದು ಸೇತುವೆ ಮಂಜೂರು ಮಾಡಿದರೆ ಬಹಳಷ್ಟು ಅನುಕೂಲವಾಗುತ್ತಿತ್ತು.ಚಂದ್ರಶೇಖರ ಶೆಟ್ಟಿ, ಸ್ಥಳೀಯರು

ಬೈಂದೂರು ತಹಶೀಲ್ದಾರ್‌ ಆಗಿ ಅಧಿಕಾರ ವಹಿಸಿಕೊಂಡು ಸ್ವಲ್ಪ ಸಮಯವಾಗಿದ್ದ ಕಾರಣ ಸಂಪೂರ್ಣ ತಾಲೂಕು ಭೇಟಿ ಸಾಧ್ಯವಾಗಿಲ್ಲ . ಕರ್ನಗದ್ದೆ ಸಮಸ್ಯೆ ಕುರಿತು ಮಾಹಿತಿ ಸದ್ಯದಲ್ಲೇ ಸ್ಥಳಕ್ಕೆ ಭೇಟಿ ನೀಡುತ್ತೇನೆ ಮತ್ತು ಅಲ್ಲಿನ ಸಮಸ್ಯೆ ಆಲಿಸಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುತ್ತೇನೆ.ಶೋಭಾಲಕ್ಷ್ಮೀ , ತಹಶೀಲ್ದಾರರು, ಬೈಂದೂರು

-ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next