Advertisement

ಖಾಸಗಿಯಿಂದ ಸರಕಾರಿ ಶಾಲೆಯತ್ತ 700ಕ್ಕೂ ಮಿಕ್ಕಿ ವಿದ್ಯಾರ್ಥಿಗಳು 

08:03 PM Aug 26, 2021 | Team Udayavani |

ಕುಂದಾಪುರ: ಸರಕಾರಿ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸಲು, ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಸರಕಾರ, ಶಿಕ್ಷಣ ಇಲಾಖೆ ಜಾರಿಗೊಳಿಸಿದ ಹಲವಾರು ಉಪಕ್ರಮಗಳು, ಕೋವಿಡ್‌, ಆರ್ಥಿಕ ಹಿಂಜರಿತ ಇನ್ನಿತರ ಕಾರಣಗಳಿಂದ ಈ ಬಾರಿ ಎಲ್ಲ ಕಡೆಗಳಲ್ಲಿ ಸರಕಾರಿ ಶಾಲೆಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ದಾಖಲಾತಿಯಾಗಿದೆ. ಬೈಂದೂರು ತಾ| ಪ್ರಾಥಮಿಕ ಶಾಲೆಗಳಲ್ಲಿ 700 ಕ್ಕೂ ಮಿಕ್ಕಿ ಮಂದಿ ವಿದ್ಯಾರ್ಥಿಗಳು ಕಳೆದ ಬಾರಿಗಿಂತ ಈ ಬಾರಿ ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ.

Advertisement

ಈ ದಾಖಲೆಯ ದಾಖಲಾತಿಯು ಬೈಂದೂರು ವಲಯದ ಇತಿಹಾಸದಲ್ಲಿಯೇ ಕಳೆದ 4-5 ವರ್ಷ ಗಳಲ್ಲಿಯೇ ಅತ್ಯಧಿಕವಾಗಿದೆ ಎನ್ನುವುದು ವಿಶೇಷ.

ಬೈಂದೂರಿನಲ್ಲಿ 87 ಹಿ.ಪ್ರಾ. ಹಾಗೂ 96 ಕಿ.ಪ್ರಾ. ಶಾಲೆಗಳು ಸೇರಿ ಒಟ್ಟು 183 ಸರಕಾರಿ ಶಾಲೆಗಳಿವೆ. ಒಟ್ಟಾರೆ ವಿದ್ಯಾರ್ಥಿಗಳ ಸಂಖ್ಯೆ ಕಳೆದ ಬಾರಿ 15,018 ಮಕ್ಕಳಿದ್ದರೆ, ಈ ಬಾರಿ ಆ. 25ರ ವರೆಗೆ 15,704ಕ್ಕೆ ಏರಿಕೆಯಾಗಿದೆ. ಅಂದರೆ ಈ ವರ್ಷ ಸರಕಾರಿ ಶಾಲೆಗೆ 1ರಿಂದ 7ನೇ ತರಗತಿಯವರೆಗೆ ಒಟ್ಟು 686 ಮಕ್ಕಳು ದಾಖಲಾತಿ ಮಾಡಿಕೊಂಡಿದ್ದಾರೆ. ಆಗಸ್ಟ್‌ ಕೊನೆಯವರೆಗೂ ದಾಖಲಾತಿ ನಡೆಯುತ್ತಿರುವುದರಿಂದ ಇನ್ನಷ್ಟು ಹೆಚ್ಚುವ ಸಾಧ್ಯತೆಯಿದೆ.

ಗರಿಷ್ಠ ದಾಖಲಾತಿ ಶಾಲೆಗಳು:

ಉಪ್ಪುಂದ ಮಾದರಿ ಸರಕಾರಿ ಹಿ.ಪ್ರಾ. ಶಾಲೆಗೆ 1ನೇ ತರಗತಿಗೆ 108 ಮಕ್ಕಳ ದಾಖಲಾತಿಯಾಗಿದ್ದರೆ, ಒಟ್ಟು 156 ಮಕ್ಕಳು ಹೊಸದಾಗಿ ಸೇರಿದ್ದು, ಗುಜ್ಜಾಡಿ ಹಿ.ಪ್ರಾ. ಶಾಲೆಗೆ 102, ಶಿರೂರು ಮಾದರಿ ಹಿ.ಪ್ರಾ. ಶಾಲೆಗೆ 108, ನಾವುಂದ ಸರಕಾರಿ ಶಾಲೆಗೆ 90 ಮಂದಿ ವಿದ್ಯಾರ್ಥಿಗಳು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಗ್ರಾಮೀಣ ಭಾಗವಾದ ಸೆಳ್ಕೊàಡು ಹಿ.ಪ್ರಾ. ಶಾಲೆಯಲ್ಲಿ 4 ವರ್ಷದ ಹಿಂದೆ 60 ಆಸುಪಾಸಿನಲ್ಲಿದ್ದ ಮಕ್ಕಳ ಸಂಖ್ಯೆ ಈಗ 124ಕ್ಕೆ ಏರಿದೆ. ಕೊಡ್ಲಾಡಿ ಶಾಲೆಯಲ್ಲಿಯೂ ಕಳೆದ 3 ವರ್ಷಗಳಲ್ಲಿ ಉತ್ತಮ ದಾಖಲಾತಿಯಾಗಿದ್ದು, ಮಕ್ಕಳ ಸಂಖ್ಯೆ 18 ಇದ್ದದ್ದು ಈಗ ನೂರಕ್ಕೇರಿದೆ. ಕಿ.ಪ್ರಾ. ಶಾಲೆಗಳ ಪೈಕಿ ಆಂಗ್ಲ ಮಾಧ್ಯಮ ಶಾಲೆಗಳ ಪೈಪೋಟಿ ನಡುವೆಯೂ ಕೊಡಪಾಡಿ ಕಿ.ಪ್ರಾ. ಶಾಲೆಯಲ್ಲಿ 66 ಮಕ್ಕಳಿದ್ದು, ಈ ಬಾರಿಯೂ ಉತ್ತಮ ದಾಖಲಾತಿ ಮೂಲಕ ನಿರೀಕ್ಷೆಗೂ ಮೀರಿದ ಸಾಧನೆಯನ್ನೇ ಮಾಡಿದೆ ಎನ್ನುವುದಾಗಿ ವಲಯದ ಬಿಆರ್‌ಪಿ ಕರುಣಾಕರ ಶೆಟ್ಟಿ ಹೇಳಿದ್ದಾರೆ.

Advertisement

ನಾಲ್ಕರಲ್ಲಿ ತ್ರಿಶತಕ..! :

ಬೈಂದೂರು ತಾಲೂಕಿನಲ್ಲಿ ಉಪ್ಪುಂದ ಸರಕಾರಿ ಮಾದರಿ ಹಿ.ಪ್ರಾ. ಶಾಲೆಯ ಗರಿಷ್ಠ ಮಕ್ಕಳನ್ನು ಹೊಂದಿರುವ ದಾಖಲೆಯನ್ನು ಸಂಪಾದಿಸಿದ್ದು, ಇಲ್ಲಿ 473 ಮಕ್ಕಳಿದ್ದಾರೆ. ಶ್ರೀ ಧ.ಮ. ಅನುದಾನಿತ ಹಿ.ಪ್ರಾ. ಶಾಲೆ ಮಯ್ನಾಡಿಯಲ್ಲಿ 404 ಮಕ್ಕಳಿದ್ದಾರೆ. ಇನ್ನು ವಲಯ ವ್ಯಾಪ್ತಿಯಲ್ಲಿ 300 ಕ್ಕಿಂತ ಅಧಿಕ ಮಕ್ಕಳಿರುವ ಶಾಲೆಗಳು 4. ಅವುಗಳೆಂದರೆ ಉಪ್ಪುಂದ ಶಾಲೆ, ಶಿರೂರು ಮಾದರಿ ಹಿ.ಪ್ರಾ. ಶಾಲೆ, ಗುಜ್ಜಾಡಿ ಸರಕಾರಿ ಹಿ.ಪ್ರಾ. ಶಾಲೆ ಹಾಗೂ ವಂಡ್ಸೆ ಪಬ್ಲಿಕ್‌ ಶಾಲೆ.

ಖಾಸಗಿ ಇಳಿಮುಖ :

ಬೈಂದೂರಿನ ಖಾಸಗಿ ಶಾಲೆಗಳಿಂದ ಪಾಸಾಗಿ ಹೋದವರು, ಸರಕಾರಿ ಶಾಲೆಗೆ ದಾಖಲಾತಿ ಮಾಡಿಕೊಂಡ ವರು, ಹೊರ ಜಿಲ್ಲೆಗಳಿಗೆ ವಲಸೆ ಸೇರಿದಂತೆ ಬೇರೆ ಬೇರೆ ಕಾರಣಕ್ಕೆ ಕಳೆದ ಬಾರಿಗಿಂತ ಈ ಬಾರಿ 1,052 ಮಕ್ಕಳು ಕಡಿಮೆಯಾಗಿದ್ದಾರೆ. ಕಳೆದ ಬಾರಿ ಖಾಸಗಿ ಶಾಲೆಗಳಲ್ಲಿ ಒಟ್ಟು 9,454 ಮಕ್ಕಳಿದ್ದರೆ, ಈ ಬಾರಿ ಇದು 8,402 ಕ್ಕೆ ಕುಸಿದಿದೆ. ಅನುದಾನಿತದಲ್ಲೂ ಕಳೆದ ಬಾರಿ 1,697 ಮಕ್ಕಳಿದ್ದರೆ, ಈ ಬಾರಿ 1,638 ಕ್ಕೆ ಇಳಿದಿದೆ.

ಹಿಂದಿನೆಲ್ಲ ವರ್ಷಗಳಿಗಿಂತ ಈ ಬಾರಿ ಸರಕಾರಿ ಶಾಲೆಗಳಲ್ಲಿ ಉತ್ತಮ ದಾಖಲಾತಿಯಾಗಿರುವುದು ಖುಷಿ ತಂದಿದೆ. ಟಿಸಿ ಇಲ್ಲದೆಯೂ ಸರಕಾರಿ ಶಾಲೆಗೆ ಸೇರಬಹುದು. ಆ ಖಾಸಗಿ ಶಾಲೆಗೆ ಆರಂಭದಲ್ಲಿ ನೋಟಿಸ್‌ ನೀಡುತ್ತೇವೆ. ಇಲ್ಲದಿದ್ದರೆ ನಾವೇ ಇಲಾಖೆಯ ಮೂಲಕ ಟಿಸಿ ತರಿಸಿಕೊಳ್ಳಲಾಗುವುದು. ಜಿ.ಎಂ. ಮುಂದಿನಮನಿ, ಕ್ಷೇತ್ರ ಶಿಕ್ಷಣಾಧಿಕಾರಿ, ಬೈಂದೂರು

 

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next