Advertisement

ಮತದಾನ ಹೆಚ್ಚಳ : ಸಂಘಟಿತ ಪ್ರಯತ್ನದ ಫಲ

06:35 AM May 18, 2018 | Team Udayavani |

ಕುಂದಾಪುರ:  ಹದಿನೆಂಟು ವರ್ಷ ಸೇವಾನುಭವ ಹೊಂದಿರುವ ಉಡುಪಿ ಜಿಲ್ಲಾ ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕ ಪಿ. ಶ್ರೀನಿವಾಸ್‌ ಅವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿಯಾಗಿ ಇದು 2ನೇ ಅನುಭವ. 2008 ರಲ್ಲಿಯೂ ಅವರಿಗೆ ಬೈಂದೂರು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿತ್ತು. ಜಿಲ್ಲೆಯ ಅತಿ ದೊಡ್ಡ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಚುನಾವಣೆ ನಡೆಸಿಕೊಟ್ಟ ಅವರೊಂದಿಗೆ “ಉದಯವಾಣಿ’ ನಡೆಸಿದ ಮಾತುಕತೆಯ ವಿವರ ಇಲ್ಲಿದೆ. 
 
ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೇಗಿತ್ತು?
      ಕಾರ್ಯವನ್ನು ಉತ್ತಮ ಹಾಗೂ ಅಷ್ಟೇ ವ್ಯವಸ್ಥಿತವಾಗಿ ನಿರ್ವಹಿಸಿದ ಬಗ್ಗೆ ತೃಪ್ತಿಯಿದೆ. ಉಡುಪಿ ಜಿಲ್ಲೆಯಲ್ಲಿಯೇ ದೊಡ್ಡ ಕ್ಷೇತ್ರ ಇದಾಗಿದ್ದು, 246 ಮತಗಟ್ಟೆಗಳಿದ್ದವು. ಇದು ಸವಾಲಿನ ಸಂಗತಿಯಾದರೂ, ಎಲ್ಲರ ಸಹಕಾರ ಹಾಗೂ ಸಂಘಟಿತ ಪ್ರಯತ್ನದಿಂದ ಯಾವುದೇ ಗೊಂದಲ, ತೊಂದರೆಗಳಾಗದೆ ಯಶಸ್ವಿ ಚುನಾವಣೆ ನಡೆಸುವಂತಾಯಿತು. 

Advertisement

ಸಿಬಂದಿ ಸಹಕಾರ ಹೇಗಿತ್ತು? 
      ಒಳ್ಳೆಯ ರೀತಿಯಲ್ಲಿ ಸಿಬಂದಿ ಸಹಕರಿಸಿದ್ದಾರೆ. ಬೈಂದೂರು ಇತ್ತೀಚೆಗಷ್ಟೇ ತಾಲೂಕಾಗಿದ್ದು, ಇಲ್ಲಿ ನಾಮಪತ್ರ ಸ್ವೀಕರಿಸುವ ಪ್ರಕ್ರಿಯೆ ಮಾತ್ರ ನಡೆಯುತ್ತಿತ್ತು. ಬಾಕಿ ಉಳಿದ ಎಲ್ಲ ಚುನಾವಣಾ ಪ್ರಕ್ರಿಯೆ ಕುಂದಾಪುರದಲ್ಲೇ ನಡೆಯಿತು. ಮುಂದಿನ ದಿನಗಳಲ್ಲಿ ಬೈಂದೂರಲೇ ಎಲ್ಲ ಕಾರ್ಯವೂ ನಡೆದರೆ ಉತ್ತಮ. ಇಲ್ಲಿ ಸಿಬಂದಿ ಕೊರತೆಯಿದ್ದರೂ, ಇದ್ದುದ್ದರಲ್ಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದೇವೆ. 

ವಿಶೇಷ ಮತಗಟ್ಟೆ ಕಲ್ಪನೆ ಫಲಪ್ರದವಾಗಿದೆಯೇ?
       ಹೌದು. ಈ ಬಾರಿ ಬೈಂದೂರಿನ ಶಿರೂರಿನಲ್ಲಿ ಪಿಂಕ್‌ ಮತಗಟ್ಟೆ ಮಾಡಲಾಗಿದ್ದು, ಇಲ್ಲಿ ಶೇ. 81ರಷ್ಟು ಮತದಾನವಾಗಿದೆ. ರಾಗಿಹಕ್ಲು ಬುಡಕಟ್ಟು ಮತಗಟ್ಟೆಯಾಗಿದ್ದು, ಇಲ್ಲಿಯೂ ಒಳ್ಳೆಯ ಸ್ಪಂದನೆ ವ್ಯಕ್ತವಾಗಿದೆ.  

ರಾಜಕೀಯ ಪಕ್ಷಗಳು, ಸಾರ್ವಜನಿಕರ ಸಹಕಾರ ಹೇಗಿತ್ತು? 
       ಯಾವುದೇ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿಲ್ಲ. ಮತದಾರರು ಕೂಡ ಒಳ್ಳೆಯ ರೀತಿಯಲ್ಲಿ ಸಹಕರಿಸಿದ್ದಾರೆ. 

ಮೇಲಧಿಕಾರಿಗಳ ನಿರ್ದೇಶನದ ಬಗ್ಗೆ ಹೇಳಿ
            ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಉತ್ತಮವಾಗಿ ಸಹಕರಿಸಿದ್ದಾರೆ. ಅದರಲ್ಲೂ ಜಿಲ್ಲಾಧಿಕಾರಿಯವರು ಸ್ವತಃ ಎಲ್ಲ ಕ್ಷೇತ್ರದ ಕುರಿತು ಪ್ರತ್ಯೇಕವಾಗಿ ಮುತುವರ್ಜಿ ವಹಿಸುತ್ತಿದ್ದರು. ಕುಂದಾಪುರದ ಸಹಾಯಕ ಆಯುಕ್ತರು ಕಾನೂನು ಹಾಗೂ ಭದ್ರತೆಯ ಜವಾಬ್ದಾರಿ ವಹಿಸಿದ್ದರು. ಪೊಲೀಸ್‌ ಇಲಾಖೆಯು ತಂಡವಾಗಿ ಸಹಕರಿಸಿತು. 

Advertisement

ಮತದಾನ ದಿನ ಹಾಗೂ ಎಣಿಕೆಯ ದಿನದ ಅನುಭವ ಹೇಗಿತ್ತು ?
       ಆ ದಿನಗಳಲ್ಲಿ ಹೆಚ್ಚಿನ ಜವಾಬ್ದಾರಿಯಿತ್ತು. ಎಲ್ಲಿಯೂ ಮತಯಂತ್ರಗಳು ಕೈಕೊಡಲಿಲ್ಲ. 39 ಕಡೆ ವೆಬ್‌ ಕಾಸ್ಟಿಂಗ್‌ ಅಳವಡಿಸುವ ಯೋಜನೆಯಿತ್ತು. ಆದರೆ ಮತದಾನದ ಮುಂಚಿನ ದಿನ ಮಳೆ, ಗುಡುಗು ಇದ್ದುದರಿಂದ ಅದು ಆಫ್‌ಲೈನ್‌ನಲ್ಲಿತ್ತು. ಇದರಿಂದ 7-8 ಕಡೆ ಮಾತ್ರ ಅಳವಡಿಸಲಾಯಿತು. ಆದರೂ ಭದ್ರತೆಗೇನು ಕೊರತೆಯಾಗಿಲ್ಲ. 

ಮತದಾನ ಹೆಚ್ಚಳ ನಿರೀಕ್ಷೆಯಿತ್ತೇ?
       ಈ ಬಾರಿ ಬೈಂದೂರಲ್ಲಿ ಹಿಂದಿನ ಬಾರಿಗಿಂತ ಹೆಚ್ಚಿನ ಅಂದರೆ ಶೇ. 78.93 ಪ್ರತಿಶತ ಮತದಾನವಾಗಿದೆ. ಇದು ಸ್ವೀಪ್‌ ಸಮಿತಿ, ಅಧಿಕಾರಿಗಳು, ಎಲ್ಲ ಬೂತ್‌ ಮಟ್ಟದ ಸಿಬಂದಿಯ ಸಂಘಟಿತ ಪ್ರಯತ್ನದಿಂದ ಸಾಧ್ಯವಾಗಿದೆ. ಜನರಲ್ಲಿಯೂ ಈ ಬಗ್ಗೆ ಅರಿವು ಮೂಡಿಸಲಾಗಿತ್ತು. ಕೇವಲ 7 ಕಡೆಗಳಲ್ಲಿ ಮಾತ್ರ ಶೇ.64 ಕ್ಕಿಂತ ಕಡಿಮೆ ಮತದಾನವಾಗಿದೆ. ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿಯೂ ಶೇ.70ಕ್ಕಿಂತ ಹೆಚ್ಚಿನ ಮತದಾನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next