Advertisement

ಬೈಲಹೊಂಗಲ: ಸಮಗ್ರ ಕೃಷಿಯಲ್ಲಿ ಯಶಸ್ಸು ಕಂಡ ರೈತ ನೇಮಿನಾಥ್‌

06:18 PM May 22, 2023 | Team Udayavani |

ಬೈಲಹೊಂಗಲ: ಕೃಷಿಯು ಖರ್ಚಿನ ಮೂಲವಾಗುತ್ತಿರುವುದರಿಂದ ಹೆಚ್ಚಿನ ರೈತರು  ದೂರ ಸರಿಯುತ್ತಿರುವ ಸಂದರ್ಭದಲ್ಲಿ ಅದಕ್ಕೆ ವೈರುಧ್ಯವೆಂಬಂತೆ ತಾಲೂಕಿನ ಹಣಬರಹಟ್ಟಿ ಗ್ರಾಮದಲ್ಲಿ 8 ಎಕರೆ ಜಮೀನು ಹೊಂದಿರುವ ಪ್ರಗತಿಪರ ರೈತ ನೇಮಿನಾಥ್‌ ಬಸಪ್ಪ ಬಿಲ್‌ ಸಮಗ್ರ ಕೃಷಿ ಕೈಗೊಳ್ಳುವುದರ ಮೂಲಕ ಇಂದಿನ ರೈತರಿಗೆ ಮಾದರಿಯಾಗಿದ್ದಾರೆ.

Advertisement

ನೇಮಿನಾಥ ಅವರು ಎಸ್‌ಎಸ್‌ಎಲ್‌ಸಿವರೆಗೆ ಓದಿದ್ದಾರೆ. ತಮ್ಮ 20ನೇ ವಯಸ್ಸಿನಲ್ಲಿ ನೀರಾವರಿ ಸೌಲಭ್ಯ ಪಡೆದು ಸಮಗ್ರ ಕೃಷಿ ಕೈಗೊಂಡಿದ್ದು ಅವರ 8 ಎಕರೆ ಭೂಮಿ ಹಸಿರಿನಿಂದ ಕಂಗೊಳಿಸುತ್ತಿದೆ.ಕೃಷಿಯಿಂದ ಸಾಕಷ್ಟು ಆದಾಯ ಸಾಧ್ಯವಿದೆ.

ಆದರೆ ಆಳಾಗಿ ದುಡಿದಾಗ ಅದರ ಸಾರ್ಥಕತೆ ಬರುತ್ತದೆ. ನನಗೆ ನಿತ್ಯ ಕೆಲಸ ಮಾಡಿದಾಗಲೇ ಋಷಿ. ಯುವಕರು ಆಧುನಿಕ ತಂತ್ರಜ್ಞಾನ ಬಳಸಿ ಕೃಷಿಯತ್ತ ಒಲವು ತೋರಿಸಬೇಕು. ಹೊಲದಲ್ಲಿ, ಬದುವಿನಲ್ಲಿ ಬೆಂಡೆ, ಚೆಂಡೂ ಹೂ ಬೆಳೆಸಿದರೆ ಕೀಟಗಳು ಇದರತ್ತ ಆಕರ್ಷಿತವಾಗಿ ಇತರ ಮುಖ್ಯ ಬೆಳೆಗೆ ಕೀಟ ತಗುಲದಂತೆ ತಡೆಯಬಹುದು ಎನ್ನುತ್ತಾರೆ ರೈತ ನೇಮಿನಾಥ ಬಿಲ್‌.

ವಿವಿಧ ಬೆಳೆ: 2022ರಲ್ಲಿ 1 ಎಕರೆಯಲ್ಲಿ ಮೆಣಸಿನಕಾಯಿ ಬೆಳೆಗೆ 10 ಸಾವಿರ ರೂ. ಖರ್ಚು ಮಾಡಿ ಬೆಳೆಸಿದ್ದಾರೆ. ಇದರಿಂದ 1 ಲಕ್ಷ 50 ರೂ. ವರೆಗೆ ಲಾಭ ಪಡೆದಿದ್ದಾರೆ. 1 ಎಕರೆ ಹೊಲದಲ್ಲಿ  ಕಬ್ಬು ಬೆಳೆಸಿದ್ದು ಯಾವುದೇ ಕೀಟನಾಶಕ ಬಳಕೆ ಮಾಡದೆ ಬೆಳೆದಿದ್ದಾರೆ. ಇದರಿಂದಲೂ ಲಕ್ಷಾಂತರ ರೂ. ಆದಾಯ ತೆಗೆದು ತೋರಿಸಿದ್ದಾರೆ. 10 ಗುಂಟೆ ಭೂಮಿಯಲ್ಲಿ ಬದನೆ ಗಿಡ ಬೆಳೆಸಿದ್ದಾರೆ.

ಅದರಿಂದ ಸುಮಾರು 40 ಸಾವಿರ ರೂ. ಆದಾಯ ಗಳಿಸಿದ್ದಾರೆ. 2022ರಲ್ಲಿ ಮುಂಗಾರು ಹಂಗಾಮಿನಲ್ಲಿ 10 ಗುಂಟೆ ಹೆಸರು, 2 ಏಕರೆಯಲ್ಲಿ ಸೋಯಾಬಿನ್‌, 2 ಏಕರೆಯಲ್ಲಿ ಹತ್ತಿಯನ್ನು ಬೆಳೆದಿದ್ದಾರೆ. ಗುಡ್ಡದ ಕಲ್ಲನ್ನು ತರಿಸಿ ಹೊಲದಲ್ಲಿ ಬದುವಿಗೆ ಒಡ್ಡು ಹಾಕಿದ್ದಾರೆ. ಇದರಿಂದ ಭೂಮಿ ಸಮತಟ್ಟಾಗುತ್ತದೆಯಲ್ಲದೆ ಅಲ್ಲಿಯ ನೀರು ಬೇರೆ ಕಡೆ ಹರಿದು ಹೋಗದಂತಾಗಿದೆ ಎನ್ನುತ್ತಾರೆ
ಅವರು. ತಿಪ್ಪೆ ಬಳಿಸಿ ಗೋಬರ್‌ ಗ್ಯಾಸ್‌ ಅಳವಡಿಕೆ ಮಾಡಿದ್ದು ಅದನ್ನು ಮನೆಯ ಅಡುಗೆ ತಯಾರಿಗೆ ಬಳಸುತ್ತಾರೆ. ಸೋಲಾರ್‌ ಅಳವಡಿಸಿ ಮನೆಯ ಮತ್ತು ಪಂಪಸೆಟ್‌ ಬಳಕೆಗೆ ಉಪಯೋಗಿಸುತ್ತಾರೆ.

Advertisement

ಎರೆಹುಳು ಮೂಲಕ ಸಾವಯವ ಗೊಬ್ಬರ ತಯಾರಿಸಿ ಸಾವಯವ ಕೃಷಿ ಮಾಡುತ್ತಾರೆ. ಹೊಲದಲ್ಲಿ ಮಾವಿನಗಿಡ, ಪೇರಲ, ಸೀತಾಫಲ, ಪಪ್ಪಾಯಿ, ನಿಂಬೆ, ಟೆಂಗಿನಕಾಯಿ, ಚಿಕ್ಕು ಮರ ಬೆಳೆಸಿದ್ದಾರೆ. 2 ಗೀರ್‌ ಆಕಳು, ಎಚ್‌ಎಫ್‌ 2 ಆಕಳು, 1 ಜರ್ಸಿಆಕಳು, 1 ಜವಾರಿ ಆಕಳು, 2 ಎತ್ತುಗಳು, 10 ಆಡುಗಳನ್ನು ಸಾಕಿದ್ದಾರೆ. ಇವೆಲ್ಲ ವರಮಾನ ಹೆಚ್ಚಿಸುವಲ್ಲಿ ಸಹಕಾರಿಯಾಗಿವೆ. ಇವೆಲ್ಲಕ್ಕೂ ಇರುವ ಭೂಮಿಯ ಒಂದು ಮೂಲೆಯಲ್ಲೇ ಹುಲ್ಲು ಬೆಳೆಯುತ್ತಿದ್ದಾರೆ. ಆಕಳಿನಿಂದ ಮೂರು ದಿನಕ್ಕೊಮ್ಮೆ 25 ಲೀಟರ್‌
ಹಾಲಿನಲ್ಲಿ 1 ಕೆಜಿ ಬೆಣ್ಣೆ ತೆಗೆಯುತ್ತಾರೆ. ಹಾಲು ಮತ್ತು ಬೆಣ್ಣೆ ಮಾರಾಟದಿಂದ 2500 ರೂ. ಹಣ ಬರುತ್ತದೆ.

ಹೊಲದಲ್ಲಿ ಒಂದು ಬಾವಿ ಕೊರೆಸಿ ನೀರಾವರಿ ಮೂಲಕ ಕೃಷಿ ಮಾಡುತ್ತಿದ್ದಾರೆ. ಟ್ರ್ಯಾಕ್ಟರ್‌ ಮೂಲಕ ಬಿತ್ತನೆ, ಎಡೆ ಹೊಡೆಯುತ್ತಾರೆ. ನೇಗಿಲು, ರೂಟರ್‌, ಚಾಪ್‌ ಕಟರ್‌ (ಹುಲ್ಲು ಕತ್ತರಿಸುವ ಯಂತ್ರ) ಇವನ್ನೆಲ್ಲ ಕೃಷಿ ಇಲಾಖೆಯ
ಸಹಾಯಧನದಲ್ಲಿ ತೆಗೆದುಕೊಂಡಿದ್ದಾರೆ. ಶ್ರೇಷ್ಠ ಕೃಷಿಕ ಪ್ರಶಸ್ತಿ: 2018 ರಲ್ಲಿ ಕೃಷಿ ಇಲಾಖೆ ಆತ್ಮಾ ಯೋಜನೆಯಡಿ ತಾಲೂಕು ಮಟ್ಟದ ಪ್ರಶಸ್ತಿ, 2004 ರಲ್ಲಿ ಹೆ„ಬ್ರಿಡ್‌ ಜೋಳ ಉತ್ತಮವಾಗಿ ಬೆಳೆದಿರುವದಕ್ಕೆ ಕೃಷಿ ಇಲಾಖೆಯಿಂದ ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ. ಇವರ ಸಂಪರ್ಕ ಸಂಖ್ಯೆ-8105701008.

*ಸಿ.ವಾಯ್‌. ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next