ಬ್ಯಾಡಗಿ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸಂಬಂಧಿಸಿದ ಮಾತೃ ಇಲಾಖೆ ಕೆಲಸವನ್ನು ಹೊರತುಪಡಿಸಿ, ಇನ್ನಿತರ ಇಲಾಖೆಗಳ ಕೆಲಸಕ್ಕೆ ನಿಯೋಜಿಸದಂತೆ ಆಗ್ರಹಿಸಿ ತಹಶೀಲ್ದಾರ್ ಶರಣಮ್ಮ ಕಾರಿ ಅವರಿಗೆ ಮನವಿ ಸಲ್ಲಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ಮುಖ್ಯಸ್ಥೆ ಹೇಮಾ ಅಸಾದಿ ಮಾತನಾಡಿ, ಸಂಬಂಧಿ ಸಿದ ಇಲಾಖೆಗಳ ಕೆಲಸಗಳನ್ನೇ ನಿಭಾಯಿಸಲು ಸಾಧ್ಯವಾಗದಷ್ಟು ಕಾರ್ಯಕರ್ತೆಯರಿಗೆ ಕೆಲಸದ ಹೊರೆಯಾಗುತ್ತಿದೆ ಹೀಗಿದ್ದರೂ ಸಹ ಇನ್ನಿತರ ಕೆಲಸಗಳಿಗೆ ನಿಯೋಜಿಸುತ್ತಿರುವುದು ವಿಪರ್ಯಾಸ. ಇದರಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದೆ ಎಂದರು.
ತಹಶೀಲ್ದಾರ್ ಕಾರ್ಯಾಲಯದಿಂದ ಬಿಎಲ್‌ಒ ಕೆಲಸಕ್ಕೆ ಕಾರ್ಯಕರ್ತೆಯರನ್ನು ನಿಯೋಜಿಸಿ ಕೊಳ್ಳಲಾಗುತ್ತಿದೆ, ಅಷ್ಟಕ್ಕೂ ಇತ್ತೀಚೆಗೆ ಮತದಾರರ ಗುರ್ತಿನ ಚೀಟಿ ಪರಿಶೀಲನೆಗೆ ತೊಡಗಿಸಿರುವುದರಿಂದ ಅಂಗನವಾಡಿ ಗಳಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕಾರ್ಯಕರ್ತೆಯರೆಲ್ಲರೂ ಮಹಿಳೆಯರು ಆಗಿದ್ದರಿಂದ ಕುಟುಂಬದ ಜವಾಬ್ದಾರಿ ಅವರ ಮೇಲಿರುತ್ತದೆ. ಕಾರಣ ಮಾನವೀಯ ದೃಷ್ಟಿಕೋನದಿಂದ ಅವಲೋಕಿಸಿ ಕೂಡಲೇ ಬಿಎಲ್‌ಒ ಜವಾಬ್ದಾರಿಯಿಂದ ತೆರೆವುಗೊಳಿಸುವಂತೆ ಆದೇಶಿಸಲು ಮನವಿ ಮಾಡಿದರು.
ಛಾಯಾ ದೇಸೂರ ಮಾತನಾಡಿ, ಮಾತೃ ಇಲಾಖೆಯ ಕೆಲಸ ಹೊರತುಪಡಿಸಿ ಬೇರೊಂದು ಇಲಾಖೆಯಲ್ಲಿ ಜವಾಬ್ದಾರಿ ನಿಭಾಯಿಸುವಂತಿಲ್ಲ. ಈ ಕುರಿತು ರಾಜ್ಯ ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಸಹ ಇಂದಿಗೂ ಅದು ಪಾಲನೆಯಾಗುತ್ತಿಲ್ಲ. ಕೇಂದ್ರ ಸರ್ಕಾರವೂ ಸಹ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಸಿಕೊಳ್ಳದಂತೆ ಸೂಚನೆ ನೀಡಿದೆ. ಆದಾಗ್ಯೂ ಸಹ ನಮ್ಮನ್ನು ಎಲ್ಲೆಂದರಲ್ಲಿ ನಿಯೋಜನೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ತಹಶೀಲ್ದಾರ್ ಶರಣಮ್ಮ ಕಾರಿ ಮೇಲಾಧಿಕಾರಿಗಳ ಗಮನಕ್ಕೆ ತರವುದಾಗಿ ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆಯರಾದ ಸುಧಾ ಅಂಗಡಿ, ಮಂಜುಳಾ ಪಾಟೀಲ, ಅನಿತಾ ಮೋಟೆಬೆನ್ನೂರ, ಕುಸುಮಾ ತೆವರಿ, ಚನ್ನಮ್ಮ ಹಿರೇಮಠ, ಹನುಮವ್ವ ಬಾಣಾಪುರ, ನಿರ್ಮಾಲ ಕರ್ಮೂಡಿ, ಶಿಲ್ಪಾ ಬನ್ನಿಹಟ್ಟಿ, ಹನುಮಕ್ಕ ಗುರೇಮಟ್ಟಿ, ಫಾತೀಮಾ ಹುಬ್ಬಳ್ಳಿ, ಬಸವಣ್ಣೆವ್ವ ಮುಳಗುಂದ, ರೇಣುಕಾ ದೀಪದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.