Advertisement

ವೃಷಭರೂಪಿ ಮೂಕಪ್ಪ ಸ್ವಾಮಿಗಳ ಪುನರ್ಜನ್ಮ!

11:18 AM Jan 28, 2019 | |

ಬ್ಯಾಡಗಿ: ತಾಲೂಕಿನ ಗುಡ್ಡದಮಲ್ಲಾಪುರದ ಹಿರಿಯ ಮೂಕಪ್ಪ ಶ್ರೀಗಳು (ವೃಷಭರೂಪಿ) ಧೂಳಿಕೊಪ್ಪ ಗ್ರಾಮದ ಬಸವಣ್ಣೆಪ್ಪ ಶಂಕ್ರಪ್ಪ ಭೂಮಕ್ಕನವರ ಅವರ ಮನೆಯಲ್ಲಿ ಪುನರ್‌ ಜನ್ಮ ತಾಳಿದ್ದಾಗಿ ಶ್ರೀಮಠದ ಮೂಲಗಳು ದೃಢಪಡಿಸಿವೆ. 7 ತಿಂಗಳಿಂದ ಆಂತಕದಲ್ಲಿದ್ದ ಶ್ರೀಮಠದ ಸದ್ಭಕ್ತರಲ್ಲಿ ಸಂತಸ ಮನೆಮಾಡಿದ್ದು, ಗುರುಪರಂಪರೆ ಮುಂದುವರಿದಂತಾಗಿದೆ.

Advertisement

ಮರಿಕಲ್ಯಾಣಭಾಗದ ಗುರುಪರಂಪರೆ ಹೊಂದಿರುವ ಈ ಮಠದಲ್ಲಿ ಪುನರ್ಜನ್ಮ ಪಡೆಯುವ ಶ್ರೀಗಳು, ಪಟ್ಟಕ್ಕೆ ಏರುವುದು ಕಳೆದ ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಪರಂಪರೆಯಾಗಿದೆ. ಸದಾ ಕಾಲ ಇಬ್ಬರು ಶ್ರೀಗಳು ಇಲ್ಲಿ ಆಡಳಿತ ನಡೆಸಿಕೊಂಡು ಬರುತ್ತಾರೆ. ಆದರೆ, 2018ರ ಏ.20ರಂದು ಶ್ರೀಮಠದ ಆವರಣದಲ್ಲಿ ಹಿರಿಯ ಶ್ರೀಗಳು(ವೃಷಭರೂಪಿ) ಲಿಂಗೈಕ್ಯರಾಗಿದ್ದು, ಇದೀಗ ಅವರ ಪುನರ್ಜನ್ಮವಾಗಿದೆ. ತಮ್ಮಲ್ಲಿದ್ದ ಎರಡು ಎತ್ತುಗಳನ್ನೇರಿ ಸುತ್ತಲಿನ ಗ್ರಾಮಗಳಲ್ಲಿ ಸಂಚರಿಸಿ ಮುಂದೆ ಹುಚ್ಚೇಶ್ವರ ಶಿವಯೋಗಿಗಳಾಗಿ ಜೀವಂತ ಸಮಾಧಿಯಾಗುವ ಪೂರ್ವದಲ್ಲಿ ತಮ್ಮ ಜೊತೆಯಲ್ಲಿದ್ದ ಕಂಟಲೆ ಬಸವಣ್ಣನಿಗೆ ಕರ್ಣದಲ್ಲಿ ಷಟಸ್ಥಲ ಬ್ರಹ್ಮೋಪದೇಶ ಹಾಗೂ ದೀಕ್ಷಾ ಸಂಸ್ಕಾರ ನೀಡುವ ಮೂಲಕ ತಮ್ಮ ಉತ್ತರಾಧಿಕಾರ ಧರ್ಮ ದಂಡವನ್ನು ನೀಡಿದರು ಎನ್ನುವುದು ಇಂದಿಗೂ ಪ್ರತೀತಿ.

ವೃಷಭರೂಪಿ (ಎತ್ತುಗಳು) ಶ್ರೀಗಳು, ಸಮಾಜದಲ್ಲಿ ಧಾರ್ಮಿಕ ಕಾರ್ಯ ನಡೆಸುತ್ತಿವೆ ಎನ್ನುವುದು ನೋಡುಗರ ಕಣ್ಣಿಗೆ ಸೋಜಿಗವೆನಸಿದರೂ; ಗುಡ್ಡದಮಲ್ಲಾಪುರ ಗ್ರಾಮದಲ್ಲಿ ಶ್ರೀ ಗುರು ಹುಚ್ಚೇಶ್ವರರು ಶ್ರೀ ಮೂಕಪ್ಪ ಶಿವಯೋಗಿಗಳಲ್ಲಿ ಪರಕಾಯ ಪ್ರವೇಶ ಮಾಡಿ, ಮಹಾಸಂಸ್ಥಾನ ದಾಸೋಹಮಠ ಸ್ಥಾಪಿಸುವ ಮೂಲಕ ಈ ಭಾಗದಲ್ಲಿ ಇಂದಿಗೂ ಧಾರ್ಮಿಕ ಪರಂಪರೆ ಉಳಿಸಿಕೊಂಡು ಬಂದಿರುವುದು ಪವಾಡ ಸದೃಶವೇ ಸರಿ. ಕ್ಷೇತ್ರದಲ್ಲಿರುವ ವೃಷಭರೂಪಿ ಶ್ರೀಗಳ ಪಾದಸ್ಪರ್ಶ ಮಾಡಿದಲ್ಲಿ ತಮ್ಮೆಲ್ಲಾ ಸಂಕಷ್ಟಗಳಿಗೆ ಪರಿಹಾರ ಸಿಗಲಿದೆ ಎಂಬುದು ಇಂದಿಗೂ ಭಕ್ತರಲ್ಲಿರುವ ಅಚಲವಾದ ನಂಬಿಕೆ.

ಏನಿದು ಪುನರ್‌ಜನ್ಮ?: ಗುಡ್ಡದಮಲ್ಲಾಪುರ ಮೂಕಪ್ಪ ಶ್ರೀಗಳು ಲಿಂಗೈಕ್ಯರಾದ ಬಳಿಕ ಶ್ರೀಮಠದ ಸುತ್ತಲಿನ ಯಾವುದಾದರೊಂದು ಊರಿನ ಗೋ ಗರ್ಭದಲ್ಲಿ ಮತ್ತೆ ಭೂಮಿಗೆ ಅವತರಿಸುತ್ತಾರೆ. ಈ ರೀತಿ ಹುಟ್ಟಿದ ಆಕಳ ಕರುವಾಗಿ ಜನಿಸುವ ಶ್ರೀಗಳು, ಆಕಳಿನ ಮೊಲೆ ಹಾಲು ಕುಡಿಯದೇ, ಶ್ರೀಮಠದ (ಗುಡ್ಡದ ಮಲ್ಲಾಪುರ)ದಿಕ್ಕಿಗೆ ಮುಖ ಮಾಡಿ ಮಲಗುತ್ತದೆ ಆಗ ಇದೇ ಕರುವನ್ನು ಮೂಕಪ್ಪ ಶ್ರೀಗಳೆಂದು ಗುರುತಿಸಲಾಗುತ್ತದೆ.

ಪತ್ತೆ ಹಚ್ಚು ಕಾರ್ಯ: ಧೂಳಿಕೊಪ್ಪ ಗ್ರಾಮದ ಬಸವಣ್ಣೆಪ್ಪ ಶಂಕ್ರಪ್ಪ ಭೂಮಕ್ಕನವರ ಅವರ ಮನೆಯಲ್ಲಿನ ನವಜಾತ ಆಕಳ ಕರುವೊಂದು ಕಳೆದ 3 ದಿನಗಳಿಂದ ಹಾಲು ಸೇವಿಸದೆ ಶ್ರೀಮಠದ ದಿಕ್ಕಿಗೆ ಮುಖ ಮಾಡಿ ಮಲಗಿದೆ. (ವಿವಿಧ ಸಜ್ಞೆಗಳ ಮೂಲಕ ಮೂಕಪ್ಪ ಶ್ರೀಗಳೆಂದು ತಿಳಿಸಲು ಯತ್ನಿಸಿದೆ) ಈ ಸುದ್ದಿ ಶ್ರೀಮಠಕ್ಕೆ ತಲುಪುತ್ತಿದ್ದಂತೆ ಧರ್ಮಾಧಿಕಾರಿಗಳು ಹಾಗೂ ಗ್ರಾಮದ ಹಿರಿಯರು ಜನಿಸಿದ ಕರುವು ಮೂಕಪ್ಪ ಶ್ರೀಗಳೇ ಎಂದು ಪತ್ತೆ ಹಚ್ಚುವ ಕಾರ್ಯಕ್ಕೆ ಮುಂದಾದರು. ಷ.ಬ್ರ. ಹುಚ್ಚೇಶ್ವರ ಮಠದ ಕರ್ತೃ ಗದ್ದುಗೆಯಲ್ಲಿನ ಶಿವಾಚಾರ್ಯರ ತೀರ್ಥಪ್ರಸಾದ (ಗುರುದೀಕ್ಷೆ) ನೀಡಿದ ಬಳಿಕವೇ ಎಲ್ಲರ ಸಮ್ಮುಖದಲ್ಲಿ ನವಜಾತ ಕರುವು ಹಾಲು ಸೇವಿಸಲಾರಂಭಿಸಿತು. ಲಿಂಗೈಕ್ಯ ಶ್ರೀಗಳಿಗೆ ಧರಿಸಿದ ಲಿಂಗಮುಖ ಮುದ್ರೆ ಸೇರಿದಂತೆ ಹಿರಿಯ ಶ್ರೀಗಳ ರುದ್ರಾಕ್ಷಿಮಾಲೆ ಹಿಡಿದು ಕುಳಿತಿದ್ದ ಧರ್ಮಾಧಿಕಾರಿಗಳ ಬಳಿ ನವಜಾತ ಕರುವು ತೆರಳಿದೆ. ನೆರೆದಿದ್ದ ಭಕ್ತರು ಹರ್ಷೋದ್ಘಾರ ಹಾಕಲು ಆರಂಭಿಸಿದರು.

Advertisement

ಜ.28ರಂದು ಲಿಂಗಧಾರಣೆ
ಈ ವರೆಗೂ ಬೇರೆ ತಾಲೂಕುಗಳಲ್ಲಿ ಜನಿಸುತ್ತಿದ್ದ ಶ್ರೀಗಳು, ಇದೇ ಮೊದಲ ಬಾರಿಗೆ ಬ್ಯಾಡಗಿ ತಾಲೂಕಿನ ಧೂಳಿಕೊಪ್ಪದ ಭಕ್ತರ ಮನೆಯಲ್ಲಿ ಜನಿಸಿದ್ದಾರೆ. ಮುಸ್ಲಿಂ ಸೇರಿದಂತೆ ಅನ್ಯಧರ್ಮೀಯರ ಮನೆಯಲ್ಲಿ ಜನಿಸುವ ಮೂಲಕ ಶ್ರೀಗಳು ಜಾತ್ಯತೀತ ಮನೋಭಾವನೆ ತೋರಿಸಿದ್ದಾರೆ. ಗುರುಪರಂಪರೆಯಂತೆ ಶ್ರೀಗಳಿಗೆ ಹುಟ್ಟಿದ 5 ದಿನದಲ್ಲಿ ಲಿಂಗಧಾರಣೆ ಮಾಡಬೇಕಾಗುತ್ತದೆ. ಜ.28ರಂದು ಮೂಕಪ್ಪ ಶ್ರೀಗಳಿಗೆ ಮಠಾಧೀಶರ ನೇತೃತ್ವದಲ್ಲಿ ಲಿಂಗಧಾರಣೆ ಸೇರಿದಂತೆ ಅನ್ನಸಂತರ್ಪಣೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಧರ್ಮಾಧಿಕಾರಿ ವೇ| ಮೃತ್ಯುಂಜಯ ಸ್ವಾಮಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next