Advertisement

ಕಸಾಪ ಲೆಕ್ಕ ಪತ್ರ ಸಭೆಯಲ್ಲಿ ವಾಕ್ಸಮರ

04:27 PM Mar 24, 2019 | Team Udayavani |

ಬ್ಯಾಡಗಿ: ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದ ಜಿಲ್ಲಾ ಕನ್ನಡ ಸಮ್ಮೇಳನದ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಲೆಕ್ಕ ಪತ್ರ ಒಪ್ಪಿಸುವ ಕುರಿತು ಕರೆಯಲಾಗಿದ್ದ ಸಭೆಯಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು, ಗೊಂದಲದ ಗೂಡಾಗಿ ಪರಿಣಮಿಸಿತು. ಇದರಿಂದ ಯಾವುದೇ ನಿರ್ಣಯಕ್ಕೆ ಬರದೇ ಸಭೆಯನ್ನು ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ ಮುಂದೂಡಿದರು.

Advertisement

ಕನ್ನಡ ಸಾಹಿತ್ಯ ಪರಿಷತ್‌ ಘಟಕದಿಂದ 5 ಲಕ್ಷ ರೂ. ಅನುದಾನ ಮತ್ತು ಸಾರ್ವಜನಿಕ ವಂತಿಗೆ ಸೇರಿದಂತೆ ಒಟ್ಟು 15.67 ಲಕ್ಷ ರೂ.ಜಮೆ ಆಗಿವೆ. ಇದರಲ್ಲಿ 12.67ಲಕ್ಷ ರೂ. ಸಮ್ಮೇಳನ ಆಯೋಜನೆಗೆ ವ್ಯಯಿಸಿದ್ದು ಒಟ್ಟು 3 ಲಕ್ಷ ರೂ. ಉಳಿದಿರುವುದಾಗಿ ತಾಲೂಕು ಕಸಾಪ ಅಧ್ಯಕ್ಷ ಬಿ.ಎಂ.ಜಗಾಪೂರ ಹೇಳಿದರು.

ಅವ್ಯವಹಾರ ಆರೋಪ: ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮಾಜಿ ಸೈನಿಕ ಮಲ್ಲೇಶ ಚಿಕ್ಕಣ್ಣನವರ, ತಾವು ನೀಡುತ್ತಿರುವುದು ಲೆಕ್ಕದ ಮುಖ್ಯಾಂಶಗಳಷ್ಟೇ, ಇದಕ್ಕೆ ಸಂಬಂಧಿಸಿದ ವಿವರವಾದ ಲೆಕ್ಕಪತ್ರಗಳನ್ನು ಸಭೆಗೆ ನೀಡುವಂತೆ ಆಗ್ರಹಿಸಿದ ಅವರು, ಸಾರ್ವಜನಿಕರು ನೀಡಿದ ಹಣಕ್ಕೆ ತಾವು ಕೊಡುತ್ತಿರುವ ಲೆಕ್ಕದ ವಿವರ ಸಮಂಜಸವಾಗಿಲ್ಲ. ಇದರಿಂದ ಮೇಲ್ನೋಟಕ್ಕೆ ಲೆಕ್ಕಪತ್ರದಲ್ಲಿ ಅವ್ಯವಹಾರ ನಡೆದಿರುವುದು ಸ್ಪಷ್ಟವಾಗುತ್ತಿದೆ ಎಂದು ಆರೋಪಿಸಿದರು.

ರಾಜಕೀಯ ಸಮ್ಮೇಳನವೇ ?: ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಬಂದ ಹಿರಿಯ ಸಾಹಿತಿಗಳಿಗೆ ಹಾಗೂ ಅತಿಥಿಗಳಿಗೆ ವೇದಿಕೆಯಲ್ಲಿ ಕುಳಿತುಕೊಳ್ಳಲು ಸ್ಥಳಾವಕಾಶವೇ ಇರಲಿಲ್ಲ, ಕಾರ್ಯಕ್ರಮ ನಡೆದಾಗ ಅವರೆಲ್ಲ ನಿಂತುಕೊಂಡೇ ಇದ್ದರು. ವೇದಿಕೆಯಲ್ಲಿದ್ದರಿಂದಲೂ ಸಹಕಾರ, ಗೌರವ ಸಿಗಲಿಲ್ಲ. ಯಾವ ಕಾರಣಕ್ಕೆ ಅತಿಥಿಗಳನ್ನು ಅವಮಾನಿಸುತ್ತೀರಿ? ವೇದಿಕೆಯಲ್ಲಿ ರಾಜಕೀಯ ಪಕ್ಷದವರೇ ಹೆಚ್ಚಾಗಿದ್ದು ಸಾಹಿತಿಗಳು ತೊಂದರೆ ಅನುಭವಿಸುವಂತಾಯಿತು ಎಂದರು.

ಈ ಮಾತುಗಳಿಂದ ಅಸಮಾಧಾನಗೊಂಡ ಕೆಲ ಪಕ್ಷದ ಮುಖಂಡರು ಆಕ್ಷೇಪಣೆ ವ್ಯಕ್ತಪಡಿಸಿದರು. ರಾಜಕೀಯ ಪಕ್ಷದ ಸಹಕಾರವಿಲ್ಲದೇ ಕೇವಲ ಸಾಹಿತಿಗಳಿಂದ ಸಮ್ಮೇಳನಗಳು ಯಶಸ್ವಿಯಾಗುವುದಿಲ್ಲ, ವೇದಿಕೆಯಲ್ಲಿದ್ದ ಸಾಹಿತಿಗಳು ಜನಪ್ರತಿನಿಧಿ ಗಳನ್ನು ಅವಮಾನಿಸಲೆಂದೇ ವೇದಿಕೆ ಏರಿರಲಿಲ್ಲ. ಇದರಲ್ಲಿ ಆಯೋಜಕರ ವೈಫಲ್ಯವಿದೆ. ಶಿಷ್ಟಾಚಾರ ನೋಡಬೇಕಾದವರ ತಪ್ಪಿದೆ ಹೊರತು, ವೇದಿಕೆ ಮೇಲೆ ಕುಳಿತವರದ್ದಲ್ಲ ಎಂದರು.

Advertisement

ಸಮ್ಮೇಳನ ಯಶಸ್ವಿಯಾಗಿಲ್ಲ: ನ್ಯಾಯವಾದಿ ಬುಡ್ಡನಗೌಡ್ರ ಮಾತನಾಡಿ, 13 ಲಕ್ಷ ಹಣ ಖರ್ಚು ಮಾಡಿದರೂ ಸಮ್ಮೇಳನ ಯಶಸ್ವಿಯಾಗಲಿಲ್ಲ. ಖುರ್ಚಿಗಳು ಖಾಲಿ ಉಳಿದು ಸಮ್ಮೇಳನ ವಿಫಲವಾಗಿದೆ. ಈ ಕುರಿತು ಕೆಲ ಪತ್ರಿಕೆಗಳು ವರದಿ ಮಾಡಿದ್ದೂ ಕೂಡ ಇದೆ. ಕಸಾಪದ ತಾಲೂಕಿನ ಎಲ್ಲ ಆಜೀವ ಸದಸ್ಯರಿಗೆ ಆಮಂತ್ರಣ ಏಕೆ ಕಳುಹಿಸಲಿಲ್ಲ ಎಂದು ಪ್ರಶ್ನಿಸಿದರು.

ಮನೆಯಲ್ಲೇ ಉಳಿದ ಬ್ಯಾಗು: ಕನ್ನಡಪರ ಹೋರಾಟಗಾರ ಚಂದ್ರು ಛತ್ರದ ಮಾತನಾಡಿ, ಸಮ್ಮೇಳನಕ್ಕೆ ಒಂದು ಸಾವಿರ ಬ್ಯಾಗಗಳನ್ನು ಮಾಡಿಸಲಾಗಿದೆ. ಆದರೆ, ಬ್ಯಾಗುಗಳು ಮಾತ್ರ ಸರಿಯಾಗಿ ವಿತರಣೆಯಾಗಿಲ್ಲ, ಅಧ್ಯಕ್ಷರ ಮನೆಯಲ್ಲೇ ಬ್ಯಾಗಗಳು ಉಳಿದುಕೊಂಡಿವೆ. ಹಣ ವ್ಯಯಿಸಿ ಅವುಗಳನ್ನು ಯಾವ ಉದ್ದೇಶಕ್ಕೆ ಮಾಡಿಸಲಾಗಿದೆಯೋ ಅದು ಈಡೇರಲಿಲ್ಲ ಎಂದು ಆರೋಪಿಸಿದರು. ಈ ಸಂದರ್ಭದಲ್ಲಿ ಬ್ಯಾಗುಗಳನ್ನು ತಂದು ಸಭೆಯಲ್ಲಿದ್ದವರಿಗೆ ವಿತರಿಸಿದ ಘಟನೆಯೂ ಸಹ ನಡೆಯಿತು.

ಸಭೆಯಲ್ಲಿ ಕಸಾಪ ಕೋಶಾಧ್ಯಕ್ಷ ಎಸ್‌.ಎನ್‌ .ಯಮನಕ್ಕನವರ, ಉಪಾಧ್ಯಕ್ಷ ವಿರೇಂದ್ರ ಶೆಟ್ಟರ, ಕನ್ನಡಪರ ಹೋರಾಟಗಾರ ಚನ್ನಬಸಪ್ಪ ಶೆಟ್ಟರ, ಪುರಸಭೆ ಸದಸ್ಯ ಮಂಜುನಾಥ ಭೋವಿ, ನಿವೃತ್ತ ಪ್ರಾಚಾರ್ಯ ಎಸ್‌.ಬಿ. ತವರದ, ನಾಗರಾಜ ಬಾರ್ಕಿ, ಸುರೇಶ ಉದ್ಯೋಗಣ್ಣನವರ, ಎಂ.ಎಂ.ಪಠಾಣ, ವಿ.ವಿ.ಮಾತನವರ, ರಾಜಣ್ಣ ಹೊಸಳ್ಳಿ ಸೇರಿದಂತೆ ಶಿಕ್ಷಕರು ಹಾಗೂ ಆಜೀವ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next