ಹುಬ್ಬಳ್ಳಿ: ಬ್ಯಾಡಗಿ ಮೆಣಸಿನಕಾಯಿ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಕಳಪೆ ಬೀಜ ಮಾರಾಟ ಹೆಚ್ಚಾಗಿದ್ದು, ರೈತರು ಎಚ್ಚರ ವಹಿಸಬೇಕು. ನಿಜವಾದ ಬ್ಯಾಡಗಿ ತಳಿ ಉಳಿಸಿ ಬೆಳೆಸಬೇಕು ಎಂದು ಇಲ್ಲಿನ ಎಪಿಎಂಸಿ ವರ್ತಕರ ಸಂಘದ ಮಾಜಿ ಅಧ್ಯಕ್ಷ ಜಗದೀಶಗೌಡ ಪಾಟೀಲ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಸರಕಾರದ ಅನುಮತಿ ಪಡೆಯದೆ ಯಾವುದೇ ಬ್ರ್ಯಾಂಡ್ ಇಲ್ಲದೆ ಪ್ಯಾಕಿಂಗ್‌ನಲ್ಲಿ ಬ್ಯಾಡಗಿ ಮೆಣಸಿನಕಾಯಿ ಹೆಸರಿನಲ್ಲಿ ಕಳಪೆ ಬೀಜಗಳನ್ನು ಮಾರಾಟ ಮಾಡಿ ರೈತರನ್ನು ವಂಚಿಸುತ್ತಿದ್ದಾರೆ. ಇದರಿಂದ ರೈತರು ಸಮರ್ಪಕ ಇಳುವರಿ ಬಾರದೆ ನಷ್ಟ ಹೊಂದುತ್ತಿದ್ದಾರೆ. ಬ್ಯಾಡಗಿ ಮೆಣಸಿನಕಾಯಿ ಡಬ್ಬಿ ಮತ್ತು ಕಡ್ಡಿ ತಳಿಯು ಕುಂಠಿತವಾಗುತ್ತಿದೆ. ಬ್ಯಾಡಗಿ ತಳಿ ಬೀಜ ಖರೀದಿಸುವ ರೈತರಿಗೆ ಹುಬ್ಬಳ್ಳಿ ಮತ್ತು ಬ್ಯಾಡಗಿಯ ವ್ಯಾಪಾರಸ್ಥರ ಸಂಘದ ಕಚೇರಿಯಲ್ಲಿ ಮುಂದಿನ ವರ್ಷದಿಂದ ರಿಯಾಯ್ತಿ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗುವುದು ಎಂದರು.
ನಿಜವಾದ ಬ್ಯಾಡಗಿ ಮೆಣಸಿಕಾಯಿ ತಳಿ ಉಪಯೋಗಿಸಿ ಬೆಳೆದವರಿಗೆ ಪ್ರತಿ ಎಕರೆಗೆ 20 ಕ್ವಿಂಟಲ್ ಫಸಲು ಬಂದಿದೆ. ಕ್ವಿಂಟಲ್‌ಗೆ 28ರಿಂದ 35 ಸಾವಿರ ರೂ. ದರ ದೊರೆತಿದೆ. ಆದರೆ, ಕಳೆದ 3-4 ವರ್ಷಗಳಿಂದ ರೋಣ ತಾಲೂಕಿನ ಮಲ್ಲಾಪುರ, ಬೆಳವಣಿಕಿ, ಸೂಡಿ, ಯಾವಗಲ್ಲ, ಬಳಗಾನೂರು ಇನ್ನಿತರೆ ಕೆಲ ಗ್ರಾಮಗಳಲ್ಲಿ ಬ್ಯಾಡಗಿ ಮೆಣಸಿನಕಾಯಿ ಎಂದುಕೊಂಡು ಬಿತ್ತಿದ ರೈತರಿಗೆ ಎಕರೆಗೆ 2-3 ಕ್ವಿಂಟಲ್ ಮಾತ್ರ ಬೆಳೆ ಬಂದಿದೆ. ಕ್ವಿಂಟಲ್‌ಗೆ 5ರಿಂದ 8 ಸಾವಿರ ರೂ.ಗೆ ಮಾರಾಟವಾಗಿದೆ ಎಂದು ತಿಳಿಸಿದರು.
ಬ್ಯಾಡಗಿ ಮೆಣಸಿನಕಾಯಿಯ ಗುಣಮಟ್ಟ ಕಂಡು ಓಲೀಯೋರೀಸನ್ ಕಂಪನಿ 30 ವರ್ಷಗಳಿಂದ ಮೆಣಸಿನಕಾಯಿಯಲ್ಲಿನ ಗಾಢವಾದ ಬಣ್ಣ ಹಾಗೂ ಖಾರ ಬೇರ್ಪಡಿಸುವ ಉದ್ಯಮ ಆರಂಭಿಸಿತು. ವಿಶ್ವಾದ್ಯಂತ ಇದರ ಬೇಡಿಕೆಯು 40 ಟನ್ ಇದ್ದದ್ದು, ಈಗ ಸುಮಾರು 6000 ಟನ್‌ಗೆ ತಲುಪಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಬ್ಯಾಡಗಿ ಮೆಣಸಿನಕಾಯಿ ತಳಿ ಬೆಳೆ ಕಡಿಮೆಯಾಗಿದೆ. ಈಗ ಚೀನಾದವರು ಈ ಬೆಳೆ ಬೆಳೆಯಲು ಪ್ರಾರಂಭಿಸಿದ್ದಾರೆ.
ಕಾರಣ ಜಿಐ (ಜಿಯೋ ಇಂಡಿಕೇಟರ್) ಲಿಸ್ಟ್‌ನಲ್ಲಿರುವ ಬ್ಯಾಡಗಿ ಡಬ್ಬಿ ಮತ್ತು ಕಡ್ಡಿ ತಳಿ ಮೆಣಸಿನಕಾಯಿಯನ್ನು ಬೆಳೆದು ಮೊದಲಿನ ಸ್ಥಾನಕ್ಕೆ ಬರಲು ಪ್ರಯತ್ನಿಸೋಣ ಎಂದರು.
ಇದನ್ನೂ ಓದಿ :ಜನಪದಕ್ಕೆ ಸ್ಕೂಲಿಂಗ್ ಆಗಬೇಕು, ಇದು ಶಾಸ್ತ್ರವಾಗದ ಹೊರತು ಶಾಶ್ವತವಾಗದು: ಹಂಸಲೇಖ
ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ, ಗೌರವ ಕಾರ್ಯದರ್ಶಿ ಪ್ರಭುಲಿಂಗಪ್ಪ ಅಂಕಲಕೋಟಿ, ಸಲಹಾ ಸಮಿತಿ ಅಧ್ಯಕ್ಷ ಮೋಹನ ಸೋಳಂಕಿ ಮೊದಲಾದವರಿದ್ದರು.