Advertisement
ಕೆಲವರಂತೂ ಬ್ಯಾಚುಲರ್‌ಗೆ ಅಂತಾನೇ ಒಂದಿಷ್ಟು ರೂಮ್‌ಗಳು ಅಂತ ಮಾಡಿರ್ತಾರೆ (ಬ್ಯಾಚುಲರ್ ಮನೆಯನ್ನು ಮನೆ ಅನ್ನಬಾರದಂತೆ) ಗೂಡಿನಂತಹ, ಬೆಂಕಿಪಟ್ಟಿಗೆಯಂತಹವು! ಒಂದು ಚಿಕ್ಕ ಕಿಟಕಿ, ಅಲ್ಲೇ ಮೂಲೆಯಲ್ಲೊಂದು ಸಣ್ಣದಾದ ರೂಮ್‌ನಲ್ಲಿ ಟಾಯ್ಲೆಟ್. ಹಾಲ್ ಮತ್ತು ಅಡುಗೆ ಮನೆ ಒಂದೇ ಜಾಗದಲ್ಲಿ! ಇದೇ ಬ್ಯಾಚುಲರ್‌ಗೆ ಸಿಗುವ ಅರಮನೆ. ಅದರಲ್ಲೂ ಓನರ್ ಎಂಬ ಕಿರಿಕ್ ಪಾರ್ಟಿ ಆಗಾಗ ಬಂದು ಆತ ನೀಡಿರುವುದು ಅಂಬಾನಿಯ ಅರಮನೆಯೇನೋ ಅನ್ನುವಂತೆ ತಪಾಸಣೆಗೆ ತೊಡಗುತ್ತಾನೆ. ನಮಗೆ ಯಾವ ಕಡೆಯಿಂದ ನಗಬೇಕೋ ತಿಳಿಯಲೊಲ್ಲದು! ನಮ್ ಲೈಫ್… ಅದೊಂದು ಅನಾಥ ಜೀವನ. ನಮಗೆ ನಾವೇ! ರೂಮ್ ಮೇಟ್‌ಗಳೇ ನಮ್ಮ ಬಂಧುಗಳು. ಹಬ್ಬ, ರಜೆ ಬಂದಾಗ ಮಾತ್ರ ನಮಗೆ ಊರಿನ ನೆನಪು. ದುಡ್ಡು ಖಾಲಿಯಾದಾಗ ಅಪ್ಪನ ನೆನಪು, ಆಗಾಗ ಅಮ್ಮನ ಫೋನ್. ಕರುಳಿನ ಮಾತು ಕೇಳಿಸಿಕೊಂಡು ಭಾವನೆಗಳು ಉಕ್ಕಿಬಿಡುತ್ತವೆ. ಒಂದರೆಡು ಗಂಟೆಗಳಲ್ಲಿ ಮತ್ತೆ ಮೈ ಕೊಡವಿಕೊಳ್ಳುತ್ತೇವೆ.
Related Articles
Advertisement
ದುಡಿಯುವ ಬ್ಯಾಚುಲರ್ದು ಇನ್ನೊಂದು ರೀತಿ. ಅದರಲ್ಲೂ ಎರಡು ರೀತಿಯವರು ಇದ್ದಾರೆ. ಕೆಲಸ ಮಾಡುತ್ತಿದ್ದವರೂ ಕೂಡ ಓದುವ ಹುಡುಗರಿಗಿಂತ ಹೆಚ್ಚು ಎಂಜಾಯ್ ಮಾಡುವವರು. ಇನ್ನು ಕೆಲವರು ನಮ್ಮ ಬ್ಯಾಚುಲರ್ ವ್ಯಾಲಿಡಿಟಿ ಮುಗಿದೇ ಹೋಗಿದೆ ಅನ್ನುವಂತೆ ಪೈಸೆಗೆ ಪೈಸೆ ಲೆಕ್ಕ ಹಾಕಿ, ನಾಳೆ ಮದುವೆಯಾದ ಮೇಲೆ ಇಲ್ಲಿಯೇ ಮನೆ, ಅಲ್ಲಿ ಸೆಟ್ಲಾಗಬೇಕು, ಇಷ್ಟು ಮಕ್ಕಳು ಸಾಕು ಅಂತ ಸದಾ ಪ್ಲಾನಿಂಗ್ ಶೀಟ್ ಹಿಡಿದುಕೊಂಡು ಅದರಲ್ಲೇ ಮುಳುಗಿ ಹೋಗುವವರು.
ಓದು ಮುಗಿಯುತ್ತಲೇ, ಎಲ್ಲಾ ಆಟಗಳಿಗೂ ಒಂದು ಬ್ರೇಕ್ ಬೀಳುತ್ತದೆ. ರೂಮ್, ಹಾಸ್ಟೆಲ್ ಬಿಟ್ಟು ಹೊರಟಾಗಲಂತೂ ಹುಡುಗರು ಅತ್ತು ಬಿಡುತ್ತಾರೆ. ಅವು ಲೈಫ್ನ ಪರ್ಮನೆಂಟ್ ಮೆಮೊರಿಗಳು. ಕೆಲವರು ಮೊಗೆ ಮೊಗೆದು ಕುಡಿದರೆ, ಇನ್ನು ಕೆಲವರು ಕೈಚೆಲ್ಲಿ ಕುಳಿತುಬಿಡುತ್ತಾರೆ.
ಬದುಕಿನಲ್ಲಿ ಎಲ್ಲಕ್ಕಿಂತ ಕ್ಷಣಿಕ ಅಂದ್ರೆ ಈ ಬ್ಯಾಚುಲರ್ ಲೈಫ್. ಮನೆಯವರಂತೂ ಹಗ್ಗ ಹಿಡಿದು ಕಾದಿರುತ್ತಾರೆ. ಸಿಂಗಲ್ ಆಗಿರುವವರಿಗೆ ಮದುವೆ ಮಾಡಿಸಿ, ಸಂಸಾರದ ಬಾವಿಗೆ ತಳ್ಳಲು ಸಿದ್ದತೆಯನ್ನವರು ನಡೆಸಿಬಿಡುತ್ತಾರೆ. ನಮಗೂ ಕುತೂಹಲವಿದ್ದರೂ ಈ ಚಂದದ ಬ್ಯಾಚುಲರ್ ಲೈಫನ್ನು ಕಳೆದುಕೊಳ್ಳಲು ಇಷ್ಟ ಪಡದೇ ಇಷ್ಟು ಬೇಗ ಮದುವೆ ಬೇಡವೆಂದು (ಮನಸ್ಸಿನಲ್ಲಿ ಇಷ್ಟವಿದ್ದರೂ ಕೂಡ) ಹೇಳಿದರೂ ಹಾಗೂ ಹೀಗೂ ಏನೇನೋ ಹೇಳಿ ನಮ್ಮನ್ನು ಅವಳ ಎದುರಿಗೆ ನಿಲ್ಲಿಸಿ ದಾರ ಬಿಗಿಸಿ ಎಲ್ಲರೂ ಚಪ್ಪಾಳೆ ತಟ್ಟಿ, ಹೋಗಿ ಬಿಡುತ್ತಾರೆ.
ಬ್ಯಾಚುಲರ್ ಪದವಿ ಕಳೆದುಕೊಂಡ ನಾವು ಮದುವೆ ಪದವಿ ಧರಿಸಬೇಕು. ಅಲ್ಲಿ “ನನ್ನದು’ ಇಲ್ಲವಂತೆ! “ನಮ್ಮದು’ ಅಂತೆ, ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕಂತೆ. ನನ್ನನ್ನು ನಾನೇ ನೋಡಿಕೊಳ್ಳದ ಆ ಬ್ಯಾಚುಲರ್ ಜೀವನವೆಲ್ಲಿ? ಈ ಜೀವನವೆಲ್ಲಿ?
ಸದಾಶಿವ್ ಸೊರಟೂರು, ದೊಡ್ಡಬೊಮ್ಮನಹಳ್ಳಿ